ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೊನೆಯ ಸುತ್ತಿನ ನಾಯಕರ ಕಸರತ್ತು

ಕಾಲಬುಡದಲ್ಲೇ ಬಂದು ನಿಂತಿರುವ 'ಮಹಾಯುದ್ಧ'ಕ್ಕೆ ದಳಪತಿಗಳ ಅಂತಿಮ ಕಸರತ್ತು ಜೋರಾಗಿದೆ...

Srinivasa Murthy VN
Updated On : 13 Apr 2014, 10:58 am

ಬೆಂಗಳೂರು: ಕಾಲಬುಡದಲ್ಲೇ ಬಂದು ನಿಂತಿರುವ 'ಮಹಾಯುದ್ಧ'ಕ್ಕೆ ದಳಪತಿಗಳ ಅಂತಿಮ ಕಸರತ್ತು ಜೋರಾಗಿದೆ. ಮತ ಬೇಟೆಗೆ ತಂತ್ರ ರೂಪಿಸಲು ನಾಯಕರೆಲ್ಲರೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿದ್ದಾರೆ. ಮತದಾರನ ಮನೆ ಹಾಗೂ ಮನ ತಲುಪಲು 'ಕೈ' ಮೀರಿ ಯತ್ನಿಸುತ್ತಿದ್ದಾರೆ.
ಮಂಗಳವಾರ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ. ಭಾನುವಾರ ಹಾಗೂ ಸೋಮವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 'ಕಮಲ' ಅರಳಿಸಲು ಕೊನೆಯ ಸುತ್ತಿನ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರಮಟ್ಟದ ನಾಯಕರು ತಮ್ಮ ಮಾತಿನ ಮೋಡಿ ಮಾಡಿ ಹೋಗಿದ್ದಾರೆ. ಈಗೇನಿದ್ದರೂ ರಾಜ್ಯ ನಾಯಕರ ಹೊಣೆಗಾರಿಕೆ.
ಮತದಾನಕ್ಕೆ ಐದು ದಿನಗಳು ಬಾಕಿ ಇರುವುದರಿಂದ 'ಮಾಡು ಇಲ್ಲವೇ ಮಡಿ' ಹೋರಾಟಕ್ಕೆ ಸಜ್ಜಾಗಿದ್ದಾರೆ. ತಂತ್ರ, ಪ್ರತಿತಂತ್ರಗಳ, ಒಳಸುಳಿಗಳ ಹೊಡೆತಕ್ಕೆ ಸಿದ್ಧತೆ ನಡೆಸಿದ್ದಾರೆ. ಆಯೋಗದ 'ಮೂಗುದಾರ' ಬಿಗಿಯಾಗಿದ್ದರಿಂದ 'ಬಹಿರಂಗ ವ್ಯವಹಾರ' 'ಕೈ' ಬಿಟ್ಟು ತೆರೆಮರೆಯ ಕಸರತ್ತು ನಡೆಸುತ್ತಿದ್ದು, 'ಕಮಲ'ದ ಹೂವಿನ 'ದಳ'ದಂತೆ ನಾಜೂಕಾಗಿ ತಂತ್ರ ರೂಪಿಸುತ್ತಿದ್ದಾರೆ.
ಎರಡನೇ ಶನಿವಾರ, ಭಾನುವಾರದ ಜತೆಗೆ ಸೋಮವಾರ ಅಂಬೇಡ್ಕರ್ ಜಯಂತಿ ಇರುವುದರಿಂದ ಸಾಲು ಸಾಲು ರಜೆ ಇದೆ. ಇದೇ ಸುಸಮಯ ಎಂದು ಮತದಾರರನ್ನು ಖುದ್ದು ಭೇಟಿಯಾಗಲು ನಾಯಕರೆಲ್ಲರೂ ಮನೆ ಬಾಗಿಲು ತಟ್ಟುತ್ತಿದ್ದಾರೆ. ಮೂರು ದಿನಗಳ ಕಾಲ ರಜೆ ಇದ್ದುದರಿಂದ ಕೆಲವು ಮತದಾರರು 'ರಜಾ ಮಜಾ'ಗೆ ತೆರಳಿದ್ದರಿಂದ ಕಂಗಾಲಾಗಿದ್ದಾರೆ.
ಚುನಾವಣಾ ಆಯೋಗದ ಕಟ್ಟು ನಿಟ್ಟಿನ ನೀತಿಯಿಂದ ಬಹಿರಂಗ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಹಿಂದೇಟು ಹಾಕುತ್ತಿವೆ. ಪಾದಯಾತ್ರೆ, ಮನೆ ಮನೆ ಭೇಟಿಗೆ ಹೆಚ್ಚು ಒತ್ತು ನೀಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಸಣ್ಣ ಪುಟ್ಟ ಪ್ರಚಾರ ಸಭೆ ನಡೆಯುತ್ತಿದೆ.
ನಗರ ಪ್ರದೇಶಗಳಲ್ಲಿ ಯುವಕರು ಹಾಗೂ ಮಹಿಳೆಯರ ಮತ ಆಕರ್ಷಣೆಗೆ ಎಲ್ಲ ಅಭ್ಯರ್ಥಿಗಳು ತಮ್ಮ ಪತ್ನಿಯರನ್ನು ಕಳುಹಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಅಭ್ಯರ್ಥಿಗಳ ಪತ್ನಿಯರು ಮನೆ- ಮನೆಗೆ ಭೇಟಿ ಮಾಡುತ್ತಿದ್ದಾರೆ.

-ಬೆಳಗಾವಿಯಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಪರ ಬಾಲಿವುಡ್ ನಟ ಹಾಗೂ ವಿಲಾಸರಾವ್ ದೇಶಮುಖ ಅವರ ಪುತ್ರ ರಿತೇಶ್ ದೇಶಮುಖ ಮತಯಾಚನೆ ಮಾಡಿದ್ದಾರೆ. ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ರಿತೇಶ್ ಕೊನೆಯ ಕ್ಷಣದಲ್ಲಿ ಗ್ಲ್ಯಾಮರ್ ಟಚ್ ನೀಡಿ ಹೋಗಿದ್ದಾರೆ.
-ಇನ್ನು ಚುನಾವಣೆ ಕಣ ರಂಗೇರುತ್ತಿದ್ದಂತೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವ ಕಾಂಗ್ರೆಸ್ ಹಿರಿಯ ನಾಯಕ ಎಸ್.ಎಂ. ಕೃಷ್ಣ ಶನಿವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇದಲ್ಲದೇ ಮಂಡ್ಯ ಹಾಗೂ ಮೈಸೂರಿನಲ್ಲಿ ಮತಯಾಚನೆ ಮಾಡಿದ್ದಾರೆ.
-ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ 'ಚಾಲೆಂಜ್‌' ಎಂಬಂತೆ ಸುತ್ತಾಡುತ್ತಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್ ಉಮೇದುವಾರರ ಪರ ಮತಯಾಚಿಸಿದ್ದು ಶನಿವಾರ ಮಂಡ್ಯ ಹಾಗೂ ಮೈಸೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
-ಅನಾರೋಗ್ಯದಿಂದ ವಿದೇಶಕ್ಕೆ ಚಿಕಿತ್ಸೆ ಪಡೆಯಲು ತೆರಳಿದ್ದ ರೆಬೆಲ್ ಸ್ಟಾರ್ ಅಂಬರೀಷ್ ಶನಿವಾರ ರೀ ಎಂಟ್ರಿ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಅದ್ಧೂರಿ ಸ್ವಾಗತದ ಜತೆಗೆ ಕಾಂಗ್ರೆಸ್ ಗೆಲವಿಗೆ ಶ್ರಮ ವಹಿಸುವ ಹೊಣೆಗಾರಿಕೆ ಪ್ರದರ್ಶಿಸಿದ್ದಾರೆ.
-ಕಾಂಗ್ರೆಸ್‌ನ ಸಚಿವರೆಲ್ಲರೂ ಬೆಂಗಳೂರು ಬಿಟ್ಟು ತಮ್ಮ ಹುರಿಯಾಳುಗಳ ಗೆಲವಿಗೆ ತಂತ್ರ ರೂಪಿಸುತ್ತಿದ್ದಾರೆ. ಬಿಜೆಪಿ ರಾಜ್ಯ ನಾಯಕರು 'ಕೈ' ಹೊಸಕಿ ಹಾಕಲು ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಮೈಸೂರಿನಲ್ಲಿ ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಶನಿವಾರ ರೋಡ್ ಶೋ ನಡೆಸಿದ್ದಾರೆ.

ಕೊನೆಯ ಎರಡು ದಿನ ಏನು ಮಾಡುವುದು?

ಮತದಾನಕ್ಕೆ 48 ಗಂಟೆ ಮುಂಚೆ ಬಹಿರಂಗ ಪ್ರಚಾರ ಮಾಡುವಂತಿಲ್ಲ ಎಂದು ಚುನಾವಣೆ ಆಯೋಗ ಮೊದಲಿನಿಂದಲೂ ನಿಯಂತ್ರಣ ಹೇರುತ್ತಿದೆ. ಆದರೆ ಈ ಬಾರಿಯ ಚುನಾವಣೆಯ ಪ್ರಚಾರ ವೈಖರಿಯೇ ಬದಲಾಗಿದ್ದರಿಂದ ಆಯೋಗದ ಈ ನೀತಿ ಅರ್ಥ ಕಳೆದುಕೊಂಡಿದೆ. ಮೊದಲ ದಿನದಿಂದಲೇ ಎಲ್ಲ ಅಭ್ಯರ್ಥಿಗಳು ಮನೆ- ಮನೆ ಭೇಟಿ ಪ್ರಚಾರವನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಹೆಚ್ಚೆಂದರೆ ರೋಡ್ ಶೋ ಮಾತ್ರ ಕೊನೆಯ 2 ದಿನದಲ್ಲಿ ಇಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ಸುತ್ತಾಡಿದ ಕ್ಷೇತ್ರಗಳಲ್ಲಿಯೇ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮತ್ತೊಂದು ಹಂತದ ಮನೆ- ಮನೆ ಭೇಟಿ ಮಾಡಬೇಕಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement