ಗೀತರಚನಕಾರ ಗುಲ್ಜಾರ್ಗೆ ದಾದಾ ಸಾಹೇಬ್ ಫಾಲ್ಕೆ
ಖ್ಯಾತ ಗೀತರಚನಕಾರ, ನಿರ್ದೇಶಕ ಗುಲ್ಜಾರ್ 2013ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್..
ನವದೆಹಲಿ: ಖ್ಯಾತ ಗೀತರಚನಕಾರ, ನಿರ್ದೇಶಕ ಗುಲ್ಜಾರ್ 2013ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗುಲ್ಜಾರ್ ಅವರನ್ನು ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶನಿವಾರ ಘೋಷಿಸಿದೆ. ಈ ಮೂಲಕ 45ನೇ ಫಾಲ್ಕೆ ಪ್ರಶಸ್ತಿ ಗುಲ್ಜಾರ್ ಪಾಲಾಗಿದೆ. ಭಾರತೀಯ ಸಿನಿಮಾದ ಏಳ್ಗೆ ಹಾಗೂ ಅಭಿವೃದ್ಧಿಗೆ ಗುಲ್ಜಾರ್ ನೀಡಿದ ಅಪ್ರತಿಮ ಕೊಡುಗೆಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಸಚಿವಾಲಯ ತಿಳಿಸಿದೆ.
ಗೀತರಚನಕಾರ, ನಿರ್ದೇಶಕ, ನಿರ್ಮಾಪಕ ಹಾಗೂ ಕವಿಯಾಗಿರುವ ಗುಲ್ಜಾರ್ ಅವರದ್ದು ಬಹುಮುಖ ಪ್ರತಿಭೆ. ಕಳೆದ 50 ವರ್ಷಗಳಿಂದಲೂ ಅವರು ಬಾಲಿವುಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಡ್ಯಾನಿ ಬಾಯ್ಲ್ ಅವರ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರಕ್ಕೆ ಗುಲ್ಜಾರ್ ಅವರು ಬರೆದ 'ಜೈ ಹೋ' ಹಾಡು ಆಸ್ಕರ್ ಪ್ರಶಸ್ತಿಯನ್ನೂ ಗಳಿಸಿತ್ತು. ಅದೇ ವರ್ಷ 'ಜೈ ಹೋ' ಗ್ರ್ಯಾಮಿ ಪ್ರಶಸ್ತಿಗೂ ಭಾಜನವಾಗಿತ್ತು. ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಯನ್ನೂ ಗುಲ್ಜಾರ್ ಗಳಿಸಿದ್ದಾರೆ. 'ಮೇರೆ ಅಪ್ನೆ', 'ಪರಿಚಯ್', 'ಕೋಶಿಷ್', 'ಅಂಧಿ' ಮತ್ತಿತರ ಚಿತ್ರಗಳನ್ನೂ ನಿರ್ದೇಶಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.