ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗೌಡ್ರು ಗುಜರಾತಿಗೇ ಬರ್ಲಿ ಚೆನ್ನಾಗಿ ನೋಡ್ಕೋತೇವೆ..!

'ನಾನು ಪ್ರಧಾನಿಯಾದ್ರೆ ಕರ್ನಾಟಕ ತೊರೆಯುವುದಾಗಿ ದೇವೇಗೌಡರು ಹೇಳಿದ್ದಾರೆ. ಗೌಡರು ಗುಜರಾತ್‌ಗೆ ಬರಲಿ. ಹಿರಿಮಗನಂತೆ ನೋಡಿಕೊಳ್ಳುತ್ತೇನೆ..

Srinivasa Murthy VN
Updated On : 14 Apr 2014, 9:31 am

ಹಾವೇರಿ/ಚಿಕ್ಕಮಗಳೂರು/ಚಿಕ್ಕಬಳ್ಳಾಪುರ: 'ನಾನು ಪ್ರಧಾನಿಯಾದ್ರೆ ಕರ್ನಾಟಕ ತೊರೆಯುವುದಾಗಿ ದೇವೇಗೌಡರು ಹೇಳಿದ್ದಾರೆ. ಗೌಡರು ಗುಜರಾತ್‌ಗೆ ಬರಲಿ. ಹಿರಿಮಗನಂತೆ ನೋಡಿಕೊಳ್ಳುತ್ತೇನೆ. ಬೇಡವೆಂದರೆ ವೃದ್ಧಾಶ್ರಮಕ್ಕಾದರೂ ಸೇರಿಸುತ್ತೇನೆ...!
'ಮೋದಿ ಪ್ರಧಾನಿಯಾದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ' ಎನ್ನುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿಕೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾನುವಾರ ತೀಕ್ಷ್ಮ ಉತ್ತರ ನೀಡಿದ್ದಾರೆ. ಕರ್ನಾಟಕದಲ್ಲಿ ಮತ್ತೊಂದು ಸುತ್ತಿನ 'ಭಾರತ ಗೆಲ್ಲಿಸಿ'ರ್ಯಾಲಿ ನಡೆಸಿದ ಅವರು ಹಾವೇರಿ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಭಾನುವಾರ ಎಚ್.ಡಿ. ದೇವೇಗೌಡರ ಹೇಳಿಕೆಗೆ ನೇರ ಟಾಂಗ್ ನೀಡಿದ್ದಾರೆ.

ಹಾವೇರಿಯಲ್ಲಿ...
-ಡಾ. ಮನಮೋಹನ ಸಿಂಗ್‌ರಂಥ ಆ್ಯಕ್ಸಿಡೆಂಟಲ್(ಆಕಸ್ಮಿಕ) ಪ್ರಧಾನಿಯಿಂದ ದೇಶಕ್ಕೇ ಅಪಾಯ. ವಾಹನವೊಂದು ಆ್ಯಕ್ಸಿಡೆಂಟ್ ಆದರೆ ನಾಲ್ಕಾರು ಜನ ಸಾಯಬಹುದು. ಆದರೆ, ಈ ಆ್ಯಕ್ಸಿಡೆಂಟಲ್ ಪ್ರಧಾನಿಯಿಂದ 120 ಕೋಟಿ ಜನ ಸಾಯ್ತಾರೆ...!
-ಇಂಥ ರಿಮೋಟ್ ಕಂಟ್ರೋಲ್ ಪ್ರಧಾನಿ ಹಾಗೂ ಸರ್ಕಾರ ದೇಶಕ್ಕೆ ಅಗತ್ಯವಿಲ್ಲ. ಸೋನಿಯಾ ಪ್ರಧಾನಿ ಹುದ್ದೆ ತ್ಯಾಗ ಮಾಡಿರುವುದಾಗಿ ಕಾಂಗ್ರೆಸ್ ಬೊಗಳೆ ಬಿಡುತ್ತಿದೆ.
-ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಯುಪಿಎ ಸರ್ಕಾರದ 15 ಅಂಶಗಳ ಕಾರ್ಯಕ್ರಮ ಏನಾಯ್ತು? ಮುಸ್ಲಿಮರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದೆಯೇ ಹೊರತು ಅಭಿವೃದ್ಧಿ ಮಾಡಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಡವರ ಬಗ್ಗೆ ಕಾಳಜಿಯೇ ಇಲ್ಲ.

ಚಿಕ್ಕಮಗಳೂರಲ್ಲಿ
-ನಿಮಗೆ ಲೂಲಿ ಲಂಗಡಿ (ಕುಂಟುವ) ಸರ್ಕಾರ ಬೇಕಾ, ರಿಮೋಟ್ ಕಂಟ್ರೋಲ್ ಸರ್ಕಾರ  ಬೇಕಾ, ವಿದೇಶಿ ಹಣದಿಂದ ನಡೆಯುವ ಸರ್ಕಾರ ಬೇಕಾ?
-ವಿದೇಶದಲ್ಲಿ ಓದಿರುವ ಕೇಂದ್ರದ ಸಚಿವರೊಬ್ಬರು, ಭಾರತ ಕೊಳಕು ರಾಷ್ಟ್ರ ಎಂದಿದ್ದಾರೆ. ಆ ವ್ಯಕ್ತಿ ಭಾರತಲ್ಲೇ  ಹುಟ್ಟಿ, ಇಲ್ಲಿಯೇ ಬೆಳೆದು, ಇಲ್ಲಿನ ಗಾಳಿಯಲ್ಲಿ ಉಸಿರಾಡಿ ಈ ದೇಶವನ್ನು ಕೊಚ್ಚೆಗೆ ಹೋಲಿಸಿದ್ದಾರೆ.
-ಪಂಡಿತರು ಫಲಿತಾಂಶದ ಬಗ್ಗೆ ಲೆಕ್ಕ ಮಾಡುತ್ತಿದ್ದಾರೆ. ಒಂದಕ್ಕೆ ಮತ್ತೊಂದು ಕೂಡಿಸಿದರೆ ಎರಡಾಗುತ್ತದೆ. ಇದು ಗಣಿತ ಲೆಕ್ಕ. ಇದು ದೇಶದ 125 ಕೋಟಿ ಜನಾಭಿಪ್ರಾಯದ ಚುನಾವಣೆ. ಒಂದಕ್ಕೆ ಮತ್ತೊಂದು ಕೂಡಿಸುವುದಲ್ಲ. ಒಂದರೊಂದಿಗೆ ಮತ್ತೊಂದು ಸೇರಿಸುವುದು. ಹೀಗೆ ಮಾಡಿದರೆ ಒಂದು ಹನ್ನೊಂದಾಗುತ್ತದೆ. ಇದು ಬಿಜೆಪಿಯ ಲೆಕ್ಕ.

ಚಿಕ್ಕಬಳ್ಳಾಪುರದಲ್ಲಿ...
-ಸಬ್ಸಿಡಿ ಸಿಲಿಂಡರ್ ಪ್ರತಿ ವರ್ಷ ಒಂಬತ್ತಾ, ಹನ್ನೆರಡಾ ಎನ್ನುವ ಆಟದಲ್ಲೇ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಕಾಲ ತಳ್ಳಿದರು. ಕೊನೆಗೆ ಸಿಲಿಂಡರ್ ಮಿತಿ 12ಕ್ಕೆ ನಿಗದಿಪಡಿಸುವಂತೆ ದೊಡ್ಡವರೇ (ರಾಹುಲ್ ಗಾಂಧಿ) ಸೂಚಿಸಬೇಕಾಯಿತು.
-ವೀರಪ್ಪಮೊಯ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದರೂ ರಾಜ್ಯಕ್ಕೆ ಏನೂ ಕೊಡುಗೆ ನೀಡಿಲ್ಲ. ಅವರು ಕನ್ನಡ ಭುವನೇಶ್ವರಿ ಮಾತೆಯ ಸೇವೆಗಿಂತ ದೆಹಲಿ ಸರ್ಕಾರದ ಮಹಿಳೆಯ ಸೇವೆ ಮಾಡುವುದೇ ದೊಡ್ಡ ಕೆಲಸ ಅಂದುಕೊಂಡರು.

ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 272 ಸ್ಥಾನ ಗಳಿಸಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎನ್ನುವ ಹೇಳಿಕೆಗೆ ಈಗಲೂ ಬದ್ಧ. ನನ್ನನ್ನುನೋಡಿಕೊಳ್ಳಲು ಮೋದಿ ಯಾರು? ಕುಟುಂಬದವರು, ರಾಜ್ಯದ ಜನತೆ ನೋಡಿಕೊಳ್ಳುತ್ತಾರೆ. ಗುಜರಾತ್‌ನಲ್ಲಿ ರೈತರು, ಅಲ್ಪಸಂಖ್ಯಾತರ ಹಿತ ಕಾಪಾಡಲು ಮುಂದಾಗದ ವ್ಯಕ್ತಿಯನ್ನು ಪ್ರಧಾನಿಯಾಗಿ ಒಪ್ಪಿಕೊಳ್ಳಲಾಗದು.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಮೋದಿ-ರಜನಿ ಭೇಟಿ
ಚೆನ್ನೈ:
ಬಿಜೆಪಿ ಪ್ರಧಾನಿ ಅಭ್ಯರ್ಥಿ- ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ಭಾನುವಾರ ಸಂಜೆ ಅವರ ನಿವಾಸದಲ್ಲಿ ಭೇಟಿಯಾದರು. ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಈ ಭೇಟಿಯಿಂದ ರಾಜಕೀಯವಾಗಿ ಹೆಚ್ಚಿನ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇದೊಂದು ವೈಯಕ್ತಿಕ ಭೇಟಿ. ತಮಿಳು ಹೊಸ ವರ್ಷದ ಪ್ರಯುಕ್ತ ಮೇರು ನಟನ ಭೇಟಿಯನ್ನು ನರೇಂದ್ರ ಮೋದಿ ಬಯಸಿದ್ದರು. ಅದರಂತೆ ಭೇಟಿ ನಡೆದಿದೆ. ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಜನಿ ಆಪ್ತರು ಪ್ರತಿಪಾದಿಸಿದ್ದಾರೆ. ಇದಾದ ಬಳಿಕ ನರೇಂದ್ರ ಮೋದಿ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಭಾಗವಹಿಸಿದರು. ಇತ್ತೀಚಿನ ದಿನಗಳಲ್ಲಿ ಮೋದಿಯವರದ್ದು ಚೆನ್ನೈನಲ್ಲಿ 2ನೇ ರ್ಯಾಲಿ ಇದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement