ದಶಕ ಕಳೆದಿದೆ,ದೇಶಕ್ಕೆ ಸಮರ್ಥ ನಾಯಕತ್ವ ಅವಶ್ಯ
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಇತ್ತೀಚೆಗಷ್ಟೇ ಎನ್ಡಿಎ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ತಮ್ಮ ಬೆಂಬಲ ಘೋಷಿಸಿದ್ದರು.
ಬೆಂಗಳೂರು: ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಇತ್ತೀಚೆಗಷ್ಟೇ ಎನ್ಡಿಎ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ತಮ್ಮ ಬೆಂಬಲ ಘೋಷಿಸಿದ್ದರು. 2012ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಮೇಲ್ಮನೆ ಸದಸ್ಯರಾಗಿದ್ದರೂ ಕೂಡ ಜನಪರ ಕಾಳಜಿಗಾಗಿ ಅವರು ಯಾವತ್ತೂ ಸಂಸತ್ನಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ತಮ್ಮ ಧ್ವನಿ ಎತ್ತುತ್ತಾರೆ. ಇತ್ತೀಚೆಗೆ ಯಾಹೂ ಡಾಟ್ ಕಾಂಗೆ ನೀಡಿದ ಸಂದರ್ಶನದಲ್ಲಿ ಪ್ರಸಕ್ತ ಸಾಲಿನ ಚುನಾವಣೆ, ಮೋದಿಯವರಿಗೆ ತಾವು ಬೆಂಬಲ ನೀಡಿದ್ದು, ರಾಜಕೀಯ ನಾಯಕರ ಆದ್ಯತೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.
-ಎಲ್ಲಾ ಕ್ಷೇತ್ರದ ಜನ ರಾಜಕೀಯಕ್ಕೆ ಬರಬೇಕು, ಆದರೆ ಗುರಿ ಮಾತ್ರ ಜನರ ಸೇವೆಯಾಗಿರಬೇಕು.
-ಉದ್ಯಮ ಕ್ಷೇತ್ರಗಳಿಂದಲೂ ಜನ ಬಂದಿದ್ದಾರೆ, ಅವರೂ ಚೆನ್ನಾಗಿಯೇ ಕೆಲಸ ಮಾಡಿದ್ದಾರೆ.
-ಗ್ರಾಮೀಣ ಮತ್ತು ನಗರ ಪ್ರದೇಶದ ಅಂತರ ತಗ್ಗಿಸಲು ರಾಜಕಾರಣಿಗಳು ನಿಸ್ವಾರ್ಥದಿಂದ ಕೆಲಸ ಮಾಡಬೇಕು.
-ವೈಚಾರಿಕ ವಿಚಾರಗಳ ಆಧಾರದಲ್ಲಿ ಮೋದಿಗೆ ಬೆಂಬಲ.
-10 ವರ್ಷಗಳಲ್ಲಿ ದೇಶ ಕಠಿಣ ಪರಿಸ್ಥಿತಿ ಎದುರಿಸಿದೆ. ಇದಕ್ಕಾಗಿಯೇ ಉತ್ತಮ ನಾಯಕನ ಅಗತ್ಯ ಕಾಣುತ್ತಿದೆ.
-ನರೇಂದ್ರ ಮೋದಿಗೆ ದೇಶದ ಪರಿಸ್ಥಿತಿ ಅರ್ಥ ಮಾಡಿಕೊಂಡು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಾಮರ್ಥ್ಯವಿದೆ.
-ಕಾಲಕ್ಕೆ ತಕ್ಕಂತೆ ಬದಲಾಗುವ ಛಾತಿ ಮೋದಿಗೆ ಇದೆ, ಅವರು ಸರ್ಕಾರವನ್ನು ಚೆನ್ನಾಗಿಯೇ ಮುನ್ನಡೆಸುತ್ತಾರೆ.
-ಆಡಳಿತ ವ್ಯವಸ್ಥೆ ವೈಫಲ್ಯ, ಭ್ರಷ್ಟಾಚಾರ, ಸ್ವಹಿತಾಸಕ್ತಿಯಂಥ ವಿಚಾರಗಳು ಈ ಚುನಾವಣೆಯ ವಿಚಾರವಾಗಬೇಕಿತ್ತು. ಆದರೆ ಆಗಿಲ್ಲ.
ಹತ್ತು ವರ್ಷದಲ್ಲಿ ದೇಶ ಕಳೆದು ಹೋಗಿದೆ, ಸಮರ್ಥ ನಾಯಕತ್ವ ಬೇಕಾಗಿದೆ
-ರಾಜಕೀಯ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಉದ್ಯಮಿಗಳು, ಕಾರ್ಪೊರೇಟ್ ಕ್ಷೇತ್ರಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಏನಂತೀರಿ?
-ದೇಶದ ರಾಜಕೀಯ ಕ್ಷೇತ್ರ ಯಾವುದೇ ಕ್ಷೇತ್ರದ ಜನರನ್ನು ಸ್ವಾಗತಿಸಬೇಕು. ಆದರೆ ಅವರ ಉದ್ದೇಶ ಪ್ರಮುಖವಾಗಿ ಏನಿರಬೇಕೆಂದರೆ ಜನರ ಸೇವೆ ಹೊರತಾಗಿ ಅಧಿಕಾರವೇ ಮುಖ್ಯ ಉದ್ದೇಶವಾಗಿರಬಾರದು. ಉದ್ದಿಮೆ ಕ್ಷೇತ್ರಗಳಿಂದಲೂ ಹಲವು ಮಂದಿ ಈ ಕ್ಷೇತ್ರಕ್ಕೆ ಬಂದಿದ್ದಾರೆ. ಅವರೂ ಕೂಡ ಉತ್ತಮವಾಗಿಯೇ ಕಾರ್ಯನಿರ್ವಹಿಸಿದ್ದಾರೆ. ಆದರೆ ಅವರಲ್ಲಿ ಕೆಲವರು ತಮ್ಮ ಸ್ವಾರ್ಥ ಸಾಧನೆಯನ್ನೂ ಮಾಡಿದ್ದಾರೆ. ಹೀಗಾಗಿ ಮತದಾರರೂ ಅಭ್ಯರ್ಥಿಗಳ ಭರವಸೆಗಳನ್ನು ಕಣ್ಣಿಟ್ಟು ಪರಿಶೀಲಿಸಬೇಕು.
-ಕಳೆದ 2 ದಶಕಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಅಂತರ ಹೆಚ್ಚುತ್ತಿದೆ. ರಾಜಕೀಯ ಕ್ಷೇತ್ರಕ್ಕೆ ಬರುತ್ತಿರುವ ಹೊಸಬರು ಈ ಅಂತರವನ್ನು ಯಾವ ರೀತಿ ತಗ್ಗಿಸಬಹುದು?
- ಈ ನಿಟ್ಟಿನಲ್ಲಿ ರಾಜಕಾರಣಿಗಳು ನಿಸ್ವಾರ್ಥತೆಯಿಂದ ಕೆಲಸ ಮಾಡಬೇಕು. ಜನರು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ನಿವಾರಿಸಲು ಪಕ್ಷಭೇದ ಮರೆತು ಶ್ರಮಿಸಬೇಕು. ಇದಕ್ಕಾಗಿ ಹೆಚ್ಚಿನ ಪ್ರಚಾರವನ್ನು ಅವರು ಬಯಸಬಾರದು. ಇಂಥ ಯೋಜನೆಗಳಲ್ಲೆಲ್ಲ ಇಮೇಜ್ ವೃದ್ಧಿಸಬೇಕು ಎಂಬ ವಿಚಾರವೇ ಬರಬಾರದು.
-ಮೋದಿ ದೇಶದ ಪ್ರಧಾನಿಯಾಗಬೇಕೆಂದು ಬಯಸಿ ನೀವು ಅವರಿಗೆ ಇತ್ತೀಚೆಗೆ ಬೆಂಬಲ ನೀಡಿದ್ದೀರಿ. ದೇಶದ ಅಭಿವೃದ್ಧಿ ಕೆಲಸಗಳನ್ನು ಅವರು ಯಾವ ರೀತಿ ಕೈಗೊಳ್ಳಬೇಕೆಂದು ನಿಮ್ಮ ಸಲಹೆ?
ವಿಚಾರಗಳ ಆಧಾರದಲ್ಲಿ ನಾನು ನರೇಂದ್ರ ಮೋದಿಯವರಿಗೆ ಬೆಂಬಲ ನೀಡಿದ್ದೇನೆ. ನಮ್ಮ ದೇಶ ಮತ್ತು ಜನರು ಹಲವು ವರ್ಷಗಳಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಹೀಗಾಗಿ ನಮಗೆ ಉತ್ತಮ ನಾಯಕನ ಅಗತ್ಯವಿದೆ. ನರೇಂದ್ರ ಮೋದಿ ಅವರಿಗೆ ದೇಶದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅದನ್ನು ಮತ್ತೆ ಹಳಿಗೆ ತರುವ ಎಲ್ಲ ಸಾಮರ್ಥ್ಯವೂ ಇದೆ. ಮಾತ್ರಲ್ಲದೆ ಸರ್ಕಾರವನ್ನೂ ಕಾಲಕ್ಕೆ ತಕ್ಕಂತೆ ಕೊಂಡೊಯ್ಯುವ ನಾಯಕತ್ವದ ಛಾತಿಯೂ ಇದೆ. ಎಲ್ಲ ನಾಗರಿಕರಿಗೆ ಸಮಾನ ಅವಕಾಶ ನೀಡುವ ಮೂಲಕ ಉತ್ತಮ ಸರ್ಕಾರ, ರಕ್ಷಣೆ ನೀಡುವ ಬದ್ಧತೆಯನ್ನು ಅವರು ಹೊಂದಿದ್ದಾರೆ. ಇದಕ್ಕಾಗಿ ಅವರು ಸವಾಲನ್ನೂ ಸ್ವೀಕರಿಸಿದ್ದಾರೆ. ಹೀಗಾಗಿ ನರೇಂದ್ರ ಮೋದಿಯವರಿಗೆ ದೇಶ ಸದ್ಯ ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯವಿದೆ ಎಂದು ನಾನು ನಂಬಿದ್ದೇನೆ.
-ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಅದರದ್ದೇ ಆದ ಪ್ರಣಾಳಿಕೆ ಇದೆ. ಆಮ್ ಆದ್ಮಿ ಪಕ್ಷ ಪಾರದರ್ಶಕ ಸರ್ಕಾರ, ಬಿಜೆಪಿ ಉತ್ತಮ ಅಭಿವೃದ್ಧಿ ಮತ್ತು ಕಾಂಗ್ರೆಸ್ ಮಿಶ್ರ ವಿಚಾರಗಳ ಬಗ್ಗೆ ಮಾತನಾಡುತ್ತಿದೆ. ದೇಶ ಯಾವ ಅಂಶವನ್ನು ಬೆಂಬಲಿಸಬೇಕು?
ದೇಶವನ್ನು ಪ್ರಮುಖವಾಗಿ ಬಾಧಿಸುತ್ತಿರುವ ಸಮಸ್ಯೆಯೇನೆಂದರೆ ಆಡಳಿತ ವ್ಯವಸ್ಥೆಯ ವೈಫಲ್ಯ, ಭ್ರಷ್ಟಾಚಾರ ಮತ್ತು ಸ್ವಹಿತಾಸಕ್ತಿ. ಸರ್ಕಾರದ ಎಲ್ಲ ವಿಭಾಗಗಳ ಮೇಲೆ ಭ್ರಷ್ಟಾಚಾರದ ಕರಿನೆರಳು ಬಿದ್ದಿದೆ. ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವುದೇ ಹೊಸ ಸರ್ಕಾರದ ಮುಂದೆ ಇರುವ ದೊಡ್ಡ ಸವಾಲು. ಇದರ ಜತೆಗೆ ಎಲ್ಲರಿಗೆ ಅಗತ್ಯವಾಗಿರುವ ಉದ್ಯೋಗ, ಸಮಾನ ಅವಕಾಶ ಆದ್ಯತೆಯಾಗಿರಬೇಕು. ದುರಂತವೇನೆಂದರೆ ನೈಜ ವಿಚಾರಗಳ ಬಗ್ಗೆ ಮಾತನಾಡಬೇಕಾಗಿರುವ ನಮ್ಮ ನಾಯಕರು ಬುದ್ಧಿವೈಕಲ್ಯತೆ, ಭಯಹುಟ್ಟಿಸುವ ವಿಚಾರ ಮತ್ತು ಮಹಾತ್ಮಾ ಗಾಂಧಿಯವರ ಹತ್ಯೆ ಮುಂತಾದ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಪಾರದರ್ಶಕತೆ, ಉದ್ಯೋಗ ಸೃಷ್ಟಿ, ಅಭಿವೃದ್ಧಿ, ಉತ್ತರದಾಯಿತ್ವ ಬಗ್ಗೆ ಚರ್ಚೆಯಾಗಬೇಕಿತ್ತು. ಸಂಜಯ ಬಾರು ಮತ್ತು ಪಿ.ಸಿ.ಪಾರಖ್ ಅವರ ಪುಸ್ತಕಗಳಲ್ಲಿನ ಅಂಶಗಳು ಬಹಿರಂಗವಾದ ಬಳಿಕ ದೇಶಕ್ಕೆ ರಿಮೋಟ್ ಕಂಟ್ರೋಲ್ ಪ್ರಧಾನಿಯ ಬದಲಾಗಿ ಜನರಿಗೆ ಉತ್ತರ ನೀಡುವ ಜವಾಬ್ದಾರಿ ಹೊಂದಿರುವ ವ್ಯಕ್ತಿ ಪ್ರಧಾನಿಯಾಗಬೇಕಿದೆ.
-ಆಮ್ ಆದ್ಮಿ ಪಕ್ಷ ಆರಂಭದಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ಹೊಸತನ, ಭ್ರಷ್ಟಾಚಾರ ಮುಕ್ತ, ಜೀವನ ವೆಚ್ಚ ತಗ್ಗುವ ಬಗ್ಗೆ ಆಶೆಯೊಡೆದಿತ್ತು. ಅಧಿಕಾರಕ್ಕೆ ಬಂದ 2 ತಿಂಗಳಲ್ಲಿ ಆ ಗುರಿಯನ್ನು ತ್ಯಜಿಸಿತು. ಆ ಪಕ್ಷಕ್ಕೆ ರಾಜಕೀಯ ಪ್ರೌಢಿಮೆ ಇಲ್ಲ ಎನ್ನುತ್ತೀರಾ?
- ದೇಶದ ರಾಜಕೀಯ ವ್ಯವಸ್ಥೆಗೆ ಸಂಬಂಧಿಸಿ ಆಮ್ ಆದ್ಮಿ ಪಕ್ಷದ ಅಗತ್ಯವಿದೆ. ಆದರೆ ಯಾವ ವಿಚಾರದ ಬಗ್ಗೆ ಹೋರಾಟ ನಡೆಸಬೇಕು, ಯಾವುದು ಆದ್ಯತೆಯ ವಿಚಾರವಾಗಬೇಕು ಎಂಬುದನ್ನು ಆ ಪಕ್ಷದ ನಾಯಕರು ನಿರ್ಧರಿಸಬೇಕು. ಅದನ್ನು ಅವರು ನಿರ್ಧರಿಸುವ ವರೆಗೆ ಆ ಪಕ್ಷ ಬದಲಿ ವ್ಯವಸ್ಥೆಯ ಪಕ್ಷ ಎಂದು ಪರಿಗಣನೆಗೆ ಬರುವುದೇ ಇಲ್ಲ. ಆಮ್ ಆದ್ಮಿ ಪಕ್ಷಕ್ಕೆ ಆರ್ಥಿಕವಾಗಿ ಮತ್ತು ಇತರ ವಿಚಾರಗಳಲ್ಲಿ ನಾನು ಬೆಂಬಲ ನೀಡಿದ್ದೆ. ಅವರ ಪ್ರಮುಖ ಉದ್ದೇಶವೇ ಭ್ರಷ್ಟಾಚಾರ ನಿರ್ಮೂಲನೆಯೇ ಆಗಿದೆ. ಅರ್ಥವ್ಯವಸ್ಥೆ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ, ಭಯೋತ್ಪಾದನೆ, ಗಡಿ ರಕ್ಷಣೆ ವಿಚಾರಗಳಲ್ಲಿ ಅವರ ಆದ್ಯತೆ ಏನು ಎಂಬುದೇ ಸ್ಪಷ್ಟವಾಗಿಲ್ಲ. ಆರ್ಥಿಕ ವಿಚಾರಗಳಲ್ಲಿ ಆ ಪಕ್ಷದ ನಿಲುವು ಎಡಪಂಥೀಯ ವಾದವನ್ನು ಬೆಂಬಲಿಸುತ್ತಿದೆ. ಇದು ಯುವ ಜನರಿಗೆ ಮೆಚ್ಚುಗೆಯಾಗುತ್ತದೆ ಎಂದು ನನಗೆ ಅನಿಸುವುದಿಲ್ಲ.
-ಬಿಜೆಪಿ ನರೇಂದ್ರ ಮೋದಿಯವರನ್ನೇ ಹೆಚ್ಚಾಗಿ ಬಿಂಬಿಸುತ್ತಿದೆ. ನಾವು ಹೊಂದಿರುವ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ ವ್ಯಕ್ತಿಯೊಬ್ಬನ ಮೇಲೆ ಅವಲಂಬಿತವಾಗಿರುವುದು ಎಷ್ಟು ಸರಿ?
ಈ ಚುನಾವಣೆಯಲ್ಲಿ ನಾವು ಗಮನಿಸಬೇಕಾದ ವಿಚಾರವೆಂದರೆ ನಾಯಕತ್ವದ್ದು. ಕಳೆದ ಹತ್ತು ವರ್ಷಗಳಲ್ಲಿ ನಾಯಕತ್ವದ ಪ್ರಶ್ನೆ ಕಾಡುತ್ತಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಯಾರು ನಾಯಕರು ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಎರಡು ಪುಸ್ತಕಗಳಲ್ಲಿಯೂ ನಾಯಕತ್ವದ ಮತ್ತು ಉತ್ತರದಾಯಿತ್ವದ ಕೊರತೆಯನ್ನು ಪ್ರಸ್ತಾಪಿಸಲಾಗಿದೆ. ಹೀಗಾಗಿ ರಾಜಕೀಯ ಪಕ್ಷವೊಂದಕ್ಕೆ ನಾಯಕನ್ನು ಬಿಂಬಿಸುವುದು ಅಗತ್ಯವಾಗಿದೆ.
-ಸರ್ಕಾರ ಸಾಧಿಸಿದ ಆರ್ಥಿಕ ಬೆಳವಣಿಗೆಗಳು ಹಗರಣಗಳ ಸಾಲಿನಲ್ಲಿ ಮುಚ್ಚಿ ಹೋಗಿವೆಯೇ ಅಥವಾ ಹಣಕಾಸು ವ್ಯವಸ್ಥೆಯ ನಿರ್ವಹಣೆ ಉತ್ತಮವಾಗಿರಲಿಲ್ಲವೇ?
ಹಗರಣಗಳು ಸರ್ಕಾರದ ಸಾಧನೆಗಳನ್ನು ಬಿಂಬಿಸುವ ನಿಟ್ಟಿನಲ್ಲಿ ಅಡ್ಡಿಯಾಗಲಿಲ್ಲ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಹಗರಣಗಳು ಇರುತ್ತವೆ. ಕೇಂದ್ರ ಸರ್ಕಾರ ವಿವಿಧ ಅಭಿವೃದ್ಧಿ ಯೋಜನೆಗೆ ಹಣ ವೆಚ್ಚ ಮಾಡಿಯೇ ಇಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಹೆಚ್ಚಿನ ಯೋಜನೆಗಳು ಯಾರಿಗೂ ಉಪಯೋಗವಿಲ್ಲದ್ದು ಮತ್ತು ಭ್ರಷ್ಟಾಚಾರದಿಂದ ತುಂಬಿವೆ. ಹೀಗಾಗಿ ಅವು ಜನರಿಗೆ ತಲಪುತ್ತಲೇ ಇಲ್ಲ. ಇಂಥ ಯೋಜನೆಗಳಿಂದಾಗಿಯೇ ಕೇಂದ್ರ ಸರ್ಕಾರ ಪ್ರತಿ ಗಂಟೆಗೆ 68 ಕೋಟಿ ಸಾಲ ಮಾಡುವಂತಾಗಿದೆ!
-ಮೈತ್ರಿಕೂಟಗಳ ಸರ್ಕಾರ ರಚನೆ ಸಾಮಾನ್ಯ ಎನ್ನುವಂತಾಗಿದೆ. ಆದರೆ ಮೈತ್ರಿ ಸರ್ಕಾರಗಳು ಅಭಿವೃದ್ಧಿಗೆ ಪೂರಕವಾಗಿಲ್ಲ ಎಂಬ ಮಾತಿದೆ. ಇದಕ್ಕೆ ನೀವೇನಂತೀರಿ?
ನಮ್ಮ ದೇಶಕ್ಕೆ ಈಗ ಅಗತ್ಯವಾಗಿ ಬೇಕಾಗಿರುವುದು ಸಮರ್ಥ ನಾಯಕತ್ವ. ನಾಯಕತ್ವ ಹೇಗಿರಬೇಕೆಂದರೆ ಆಡಳಿತ ನಿಯಮ ಉಲ್ಲಂಘಿಸದೆ ಅಭಿವೃದ್ಧಿ ಸಾಧಿಸುವಂತಾಗಬೇಕು. ಮೈತ್ರಿಕೂಟ ಸರ್ಕಾರ ಹೇಗೆ ಕೆಲಸ ಮಾಡಬೇಕು ಎನ್ನುವುದಕ್ಕೆ ವಾಜಪೇಯಿ ನೇತೃತ್ವದ ಎನ್ಡಿಎ ಕೆಲಸ ಮಾಡಿದ್ದು ಸಾಕ್ಷಿ. ಅಭಿವೃದ್ಧಿಗೆ ಮೈತ್ರಿ ಕೂಟ ಬಾಧಕ ಅಲ್ಲ. ಸಮಸ್ಯೆ ಮೈತ್ರಿಕೂಟಗಳು ಹೊಂದಿರುವ ಆದ್ಯತೆಯಲ್ಲಿದೆ. ಇದಕ್ಕಾಗಿಯೇ ನಾನು ಮೋದಿಯವರಿಗೆ ಬೆಂಬಲ ನೀಡಿದ ಸಂದರ್ಭದಲ್ಲಿ ಹೇಳಿದ್ದ ವಿಚಾರವೇನೆಂದರೆ ಸಮರ್ಥ ನಾಯಕತ್ವ ಬೇಕು. ನಾಯಕತ್ವ ಹೇಗೆ ಇರಬಾರದು ಎಂಬ ವಿಚಾರ ಯುಪಿಎ ಸರ್ಕಾರದ ಹತ್ತು ವರ್ಷದ ಆಡಳಿತದಲ್ಲಿ ವ್ಯಕ್ತವಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಪ್ರಮುಖವಾದ ವಿಚಾರವೇನೆಂದರೆ ದೇಶಕ್ಕೆ ಎಂಥ ನಾಯಕತ್ವ ಬೇಕು ಎನ್ನುವುದೇ ಆದ್ಯತೆಯಾಗಿದೆ.
-ದೇಶದ ಮುಂದಿನ ಭವಿಷ್ಯ ರೂಪಿಸುವಲ್ಲಿ ನಿಮ್ಮಂಥ ಪಕ್ಷೇತರ ರಾಜಕಾರಣಿಗಳ ಪಾತ್ರ?
ಎಲ್ಲ ರಾಜಕೀಯ ನಾಯಕರಂತೆ, ಸಾರ್ವಜನಿಕರಂತೆ ತಪ್ಪುಗಳ ವಿರುದ್ಧ ಮಾತನಾಡುತ್ತೇನೆ. ಉತ್ತಮ ಕೆಲಸ ಕಾರ್ಯಗಳಿಗೆ ಬೆಂಬಲ ನೀಡುತ್ತೇನೆ.
-ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದೆ. ಸಾಧನೆಯನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ?
ಉತ್ತಮ ಸರ್ಕಾರ ನೀಡುತ್ತೇವೆ ಎಂಬ ಭರವಸೆ ನೀಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ.
ಇನ್ನೂ ಹಲವು ತಿಂಗಳ ಕಾಲ ಕಾದು ನೋಡೋಣ. ಅವರ ಆಡಳಿತ ವೈಖರಿ ನೋಡಿಕೊಂಡು ಸರ್ಕಾರಕ್ಕೆ ಅಂಕಗಳನ್ನು ನೀಡೋಣ.
-ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ಹೇಳಿಕೊಳ್ಳುತ್ತಿದೆ. ಈ ವಾದವನ್ನು ನೀವು ಎಷ್ಟರ ಮಟ್ಟಿಗೆ ಒಪ್ಪುತ್ತೀರಿ?
ಕಾಂಗ್ರೆಸ್ ನೇತೃತ್ವದ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದೆ. ಅದಕ್ಕೆ ಸಂಬಂಧಿಸಿದ ಹಲವು ಅಂಕೆ- ಸಂಖ್ಯೆಗಳನ್ನು ನೀಡುತ್ತಿದೆ. ಆದರೆ ಅದರ ಆಚೆಗೆ ಇರುವ ಭ್ರಷ್ಟಾಚಾರ ಮತ್ತು ಕುಗ್ಗಿರುವ ಅರ್ಥ ವ್ಯವಸ್ಥೆಯ ಬಗ್ಗೆ ಅದು ಮೌನವಾಗಿದೆ. ನನ್ನ ಪ್ರಕಾರ ದೇಶಕ್ಕೆ ಮತ್ತು ಜನರಿಗೆ ಹತ್ತು ವರ್ಷಗಳು ಕಳೆದು ಹೋದ ದಶಕ.