ಲೈಂಗಿಕ ಅಲ್ಪಸಂಖ್ಯಾತರಿಗೆ ತೃತೀಯ ಲಿಂಗದ ಮಾನ್ಯತೆ
ಲೈಂಗಿಕ ಅಲ್ಪಸಂಖ್ಯಾತರಿಗೆ ತೃತೀಯ ಲಿಂಗವೆಂದು ಮಾನ್ಯತೆ ನೀಡಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಅಲ್ಪಸಂಖ್ಯಾತರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಲೈಂಗಿಕ ಅಲ್ಪಸಂಖ್ಯಾತರಿಗೆ ತೃತೀಯ ಲಿಂಗವೆಂದು ಮಾನ್ಯತೆ ನೀಡಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಆ ಸಮುದಾಯವನ್ನು ಸಮಾನವಾಗಿ ಪರಿಗಣಿಸಿ ಅಲ್ಪಸಂಖ್ಯಾತರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ನ್ಯಾ.ಕೆ.ಎಸ್. ರಾಧಾಕೃಷ್ಣನ್ ಮತ್ತು ನ್ಯಾ.ಎ.ಕೆ. ಸಿಕ್ರಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ತೃತೀಯ ಲಿಂಗವೆಂದು ಗುರುತಿಸಿ ಮಾನ್ಯತೆ ನೀಡಲು ಎಲ್ಲ ಅಗತ್ಯ ಕ್ರಮಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಇದು ಮಾನವ ಹಕ್ಕಿನ ವಿಚಾರ: ಲೈಂಗಿಕ ಅಲ್ಪಸಂಖ್ಯಾತರನ್ನು ತೃತೀಯ ಲಿಂಗವೆಂದು ಮಾನ್ಯತೆ ನೀಡುವುದು ಸಾಮಾಜಿಕ ಅಥವಾ ಆರೋಗ್ಯದ ವಿಷಯವಲ್ಲ, ಇದು ಮಾನವಹಕ್ಕುಗಳ ವಿಷಯ. ಲೈಂಗಿಕ ಅಲ್ಪಸಂಖ್ಯಾತರೂ ಭಾರತದ ನಾಗರಿಕರು. ಸಂವಿಧಾನ ಜಾತಿ, ಧರ್ಮ, ಲಿಂಗ ಭೇದ ಮೀರಿ ಎಲ್ಲರಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ನೀಡಿದೆ. ಸರ್ಕಾರಗಳು, ಈ ಸಮುದಾಯಕ್ಕೆ ಉದ್ಯೋಗ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲದರಲ್ಲೂ ಸಮಾನ ಅವಕಾಶ ನೀಡಬೇಕು ಎಂದು ಹೇಳಿದೆ.
ಸಮಾಜವು ಈ ಸಮುದಾಯವನ್ನು ತಾರತಮ್ಯ ಮಾಡಿ ಶೋಷಿಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪೀಠವು , ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಲು ನೀತಿಗಳನ್ನು ರೂಪಿಸಿ ಜಾರಿಗೊಳಿಸಬೇಕು. ಸಮಾಜದ ಅವಿಭಾಜ್ಯ ಅಂಗವಾಗಿರವ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.
ದುರ್ಬಳಕೆಗೆ ಆಕ್ಷೇಪ: ಪೊಲೀಸರು ಮತ್ತು ಅಧಿಕಾರಿಗಳು ಭಾರತೀಯ ದಂಡ ಸಂಹಿತೆ 377 ಕಲಂ ಅನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕ ಅಲ್ಪಸಂಖ್ಯಾತರನ್ನು ಶೋಷಿಸುತ್ತಿರುವ ಬಗ್ಗೆಯೂ ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಆದೇಶ ಲೈಂಗಿಕ ಅಲ್ಪಸಂಖ್ಯಾತರಿಗೆ ಸೀಮಿತವಾಗಿ ನೀಡಲಾಗಿದೆ. ಸಲಿಂಗಕಾಮಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ ನಮಗೆ ನಮ್ಮ ಹಕ್ಕನ್ನು ನೀಡಿರುವುದರಿಂದ ನಾನು ಮತ್ತು ನನ್ನ ಸಹೋದರಿಯರು ತುಂಬಾ ಸಂತೋಷಗೊಂಡಿದ್ದೇವೆ. ನಾವು ನಿಜವಾದ ಭಾರತೀಯರೆಂಬ ಹೆಮ್ಮೆಯ ಭಾವನೆ ಮೂಡಿದೆ.
-ಲಕ್ಷ್ಮೀನಾರಾಯಣ ತ್ರಿಪಾಠಿ