ಕರುನಾಡು ಮತನೀಡು
ದೇಶದ ಭವಿಷ್ಯ ನಿರ್ಧಾರದಲ್ಲಿ ಈ ಸುತ್ತಿನ ಮತದಾನದ ಪಾತ್ರವೇ ಪ್ರಮುಖ, ಮೊದಲ 3 ಹಂತದಲ್ಲಿ ಸರಾಸರಿ ಮತ ಪ್ರಮಾಣ ಶೇ.70ಕ್ಕೂ ಅಧಿಕ, ಅದನ್ನ ಹಿಂದಿಕ್ಕೋಣ..
ದೇಶದ ಭವಿಷ್ಯ ನಿರ್ಧಾರದಲ್ಲಿ ಈ ಸುತ್ತಿನ ಮತದಾನದ ಪಾತ್ರವೇ ಪ್ರಮುಖ, ಮೊದಲ 3 ಹಂತದಲ್ಲಿ ಸರಾಸರಿ ಮತ ಪ್ರಮಾಣ ಶೇ.70ಕ್ಕೂ ಅಧಿಕ, ಅದನ್ನ ಹಿಂದಿಕ್ಕೋಣ, ಈ ಹಿಂದಿನ ಚುನಾವಣೆಗಳಲ್ಲಿ ಮತದಾನ ಸರಾಸರಿ ಶೇ. 50-65, ಈ ಬಾರಿ ಅದನ್ನು ದಾಟಿ ಶೇ. 80 ಪ್ರಮಾಣ ದಾಖಲಿಸೋಣ
ಕನ್ನಡಪ್ರಭ ವಾರ್ತೆ ಬೆಂಗಳೂರು ಏ.16
ಕರ್ನಾಟಕದವರು ನಾವು ಬುದ್ದಿವಂತರು, ಶಾಂತಿ ಪ್ರಿಯರು, ಪ್ರಜಾತಂತ್ರ ಪ್ರೇಮಿಗಳು, ಐಟಿ ಕ್ಷೇತ್ರದ ದಿಗ್ಗಜರು ಎಂಬೆಲ್ಲ ವಿಶೇಷಣದಿಂದ ನಮ್ಮನ್ನು ನಾವೇ ಅದೆಷ್ಟೋ ಬಾರಿ ಹೊಗಳಿಕೊಳ್ಳುತ್ತೇವೆ. ಇದನ್ನು ನಿಜ ಮಾಡಬೇಕಿದ್ದಲ್ಲಿ ಇಂದು ಮತ ಹಾಕಲೇಬೇಕು.
ಮೊದಲ 4 ಹಂತಗಳ ಚುನಾವಣೆಯಲ್ಲಿ ನಾನಾ ರಾಜ್ಯಗಳ ಮತದಾನ ಪ್ರಮಾಣಕ್ಕೆ ನಾವು ಸೆಡ್ಡು ಹೊಡೆದು ದಾಖಲೆ ಮತದಾನ ಮಾಡಬೇಕು. ನಮ್ಮ ರಾಜ್ಯವನ್ನು ಮತದಾನದಲ್ಲೂ ಮುಂಚೂಣಿಯಲ್ಲಿ ನಿಲ್ಲಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
ಮೊದಲ 4 ಹಂತದಲ್ಲಿ 19 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಚುನಾವಣೆಯಲ್ಲಿ ಶೇ.53ರಿಂದ ಶೇ.82ರವರೆಗೂ ಮತದಾನವಾಗಿದೆ. ಮತಗಟ್ಟೆಗೆ ಹೋಗಲು ಆಲಸ್ಯ ಮಾಡಿದರೆ ಬಿಹಾರಕ್ಕಿಂತ ನಿಕೃಷ್ಟ ಎಂದಾಗುತ್ತೇವೆ, ಉತ್ಸಾಹ ತೋರಿ ಶೇ.80ರ ಗಡಿ ದಾಟಿದರೆ ಈಶಾನ್ಯ ಭಾರತದ ಮುಗ್ದ ಬಡ ಜನರ ಮತದಾನ ಆಸಕ್ತಿಗೆ ಗೌರವ ತೋರಿಸಿದಂತಾಗುತ್ತದೆ.
ರಾಜ್ಯದಲ್ಲಿ ಶೇ.50ರಿಂದ 65ರ ಆಸುಪಾಸಿನಲ್ಲಿ ಮತದಾನ ಮಾಡುವ ಪರಂಪರೆಯಿದೆ. ಆದರೆ ಇದನ್ನೇ ಮುಂದುವರಿಸಿದರೆ ದೇಶದ ಇತರ ರಾಜ್ಯದ ಜನತೆಯ ಎದುರಿಗೆ ತಲೆತಗ್ಗಿಸಬೇಕಾಗುತ್ತದೆ. ಕಡಿಮೆ ಮತದಾನವಾದ ಪಟ್ಟಿಗಳಿಗೆ ಕರ್ನಾಟಕದ ಹೆಸರು ಸೇರುತ್ತದೆ. ಆಗ ಬೇರೆ ಕ್ಷೇತ್ರದಲ್ಲಿ ಮುಂದಿದ್ದೂ ಪ್ರಯೋಜನವಾಗುವುದಿಲ್ಲ.
ಹಿಂದಿನ ದಾಖಲೆಗಳನ್ನು ಮುರಿದು ಮತದಾನದಲ್ಲಿಯೂ ದೇಶದ ಉಳಿದ ರಾಜ್ಯಗಳಿಗಿಂತ ನಾವು ಮುಂದು ಹಾಗೂ ದೇಶದ ಪ್ರಜಾಪ್ರಭುತ್ವ ಕುರಿತ ಕಾಳಜಿಯಲ್ಲಿ ನಾವು ಇತರರಿಗೆ ಮಾದರಿ ಎಂದು ಸಾಬೀತು ಮಾಡಲು ಕರ್ನಾಟಕದ 4,62,11,844 ಮತದಾರರು ಮುಂದಾಗಬೇಕಿದೆ.
ದೇಶದ ಸಾಕ್ಷರರ ಪ್ರಮಾಣ ಶೇ.74 ರಷ್ಟಿದೆ. ನಮ್ಮ ರಾಜ್ಯದಲ್ಲಿ ಶೇ.75.60ರಷ್ಟಿದೆ. ಇದರರ್ಥ ದೇಶದ ಸರಾಸರಿ ಶೇಕಡಾವಾರು ಮತದಾನಕ್ಕಿಂತ ರಾಜ್ಯದ ಜನತೆ ಹೆಚ್ಚು ಮಾಡಿ ಸಾಕ್ಷರತೆಯ ನೈಜ ಉದ್ದೇಶವನ್ನು ಸಾರಬೇಕಿದೆ. ಹೆಚ್ಚು ಮತ ಹಾಕಿದ ಕೆಲವು ರಾಜ್ಯಗಳಲ್ಲಿ ಸಾಕ್ಷರರ ಪ್ರಮಾಣ ನಮ್ಮ ರಾಜ್ಯಕ್ಕಿಂತ ಕಡಿಮೆ ಇದೆ.
ನೈಜ ಬುದ್ದಿವಂತನಾಗುವುದು ಮತಗಟ್ಟೆಗೆ ಹೋಗಿ ಮತದಾನದ ಹಕ್ಕು ಚಲಾಯಿಸಿದಾಗ ಮಾತ್ರ ಎನ್ನುವುದನ್ನು ಮರೆಯದಿರಿ.
ಮುಕ್ತ ಹಾಗೂ ನಿರ್ಭೀತ ಮತದಾನಕ್ಕೆ ಎಲ್ಲಾ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ನಾಗರಿಕರು ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಹಕ್ಕು ಚಲಾಯಿಸುವಂತೆ ವಿನಂತಿಸುವೆ.
-ಅನಿಲ್ಕುಮಾರ್ ಝಾ, ಮುಖ್ಯ ಚುನಾವಣಾ ಅಧಿಕಾರಿ
ಮತದಾನ ಪ್ರಮಾಣ
2004ರಲ್ಲಿ 65.14
2009ರಲ್ಲಿ
58.81
ಸಾಕ್ಷರತೆ ಪ್ರಮಾಣ
ದೇಶದಲ್ಲಿ 74.00
ರಾಜ್ಯದಲ್ಲಿ 75.60
ರಾಜ್ಯದ ಒಟ್ಟು ಜನಸಂಖ್ಯೆ ಶೇ.72 ಹೆಸರು ಮತಪಟ್ಟಿಯಲ್ಲಿ ದಾಖಲು
25 ಲಕ್ಷ ಈ ವರ್ಷ ಹೊಸ ಮತದಾರರು