ಪ್ರತ್ಯೇಕ ದುರ್ಘಟನೆ 13 ಮಂದಿ ದಾರುಣ ಸಾವು
ಬೆಳಗಾವಿ, ಹುಬ್ಬಳ್ಳಿ ಹಾಗೂ ಹಿರಿಯೂರಿನಲ್ಲಿ ಬುಧವಾರ ನಡೆದ ಪ್ರತ್ಯೇಕ ಅವಘಡದಲ್ಲಿ ಒಂದೇ ಕುಟುಂಬದ ಐವರು ಸೇರಿ 13 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಬೆಂಗಳೂರು: ಬೆಳಗಾವಿ, ಹುಬ್ಬಳ್ಳಿ ಹಾಗೂ ಹಿರಿಯೂರಿನಲ್ಲಿ ಬುಧವಾರ ನಡೆದ ಪ್ರತ್ಯೇಕ ಅವಘಡದಲ್ಲಿ ಒಂದೇ ಕುಟುಂಬದ ಐವರು ಸೇರಿ 13 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಹಿರಿಯೂರಿನ ಮೇಟಿಕುರ್ಕಿ ಬಳಿ ಖಾಸಗಿ ಬಸ್‌ಗೆ ಬೆಳಗಿನ ಜಾವ 2.15ಕ್ಕೆ ಬೆಂಕಿ ಹೊತ್ತಿ ಕೊಂಡು 6 ಮಂದಿ ಸಜೀವ ದಹನವಾಗಿದ್ದಾರೆ. ಬೈಲಹೊಂಗಲದ ಉಡಕೇರಿ ಬಳಿ ಕ್ರೂಸರ್ ಪಲ್ಟಿಯಾಗಿ ಹಲಸಿ ಗ್ರಾಮದ ಐವರು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯ ಸಾಯಿನಗರ ಬಳಿ ರೇಲ್ವೆ ಕ್ರಾಸಿಂಗ್‌ನಲ್ಲಿ ಬೊಲೇರೋಗೆ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಐವತ್ತು ಮಂದಿಗೆ ಗಾಯ
ಗುವಾಹಟಿ: ಅಸ್ಸಾಂನ ತೆಗ್ರಿಯಾ ದಲ್ಲಿ ಬುಧವಾರ ಬೆಳಗ್ಗೆ ರೈಲು ಹಳಿ ತಪ್ಪಿ 50 ಮಂದಿ ಗಾಯಗೊಂಡರು. ಈ ಪೈಕಿ 19 ಮಂದಿ ಸ್ಥಿತಿ ಗಂಭೀರವಾಗಿದ್ದು, ಗುವಾಹಟಿ ವೈದ್ಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಳುಗಿದ ಹಡಗು 300 ಜನ ನಾಪತ್ತೆ
ಸಿಯೋಲ್: ದಕ್ಷಿಣ ಕೊರಿಯಾದಲ್ಲಿ 470ಕ್ಕೂ ಅಧಿಕ ಮಂದಿಯನ್ನು ಹೊತ್ತೊಯ್ಯುತ್ತಿದ್ದ ಹಡಗೊಂದು ಬುಧವಾರ ಸಮುದ್ರಪಾಲಾಗಿದೆ. ನಾಲ್ವರು ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.