ಸಚಿವ ಮುನಿಯಪ್ಪ ಮೂಢಾಚರಣೆ
ಜೋತಿಷ್ಯ, ಮೂಢನಂಬಿಕೆ ನಿಷೇಧ ಕಾಯಿದೆ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತಿಸುತ್ತಿದ್ದರೆ..
ಕೋಲಾರ: ಜೋತಿಷ್ಯ, ಮೂಢನಂಬಿಕೆ ನಿಷೇಧ ಕಾಯಿದೆ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತಿಸುತ್ತಿದ್ದರೆ, ಇತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಮತಯಂತ್ರವನ್ನೇ ತಿರುಗಿಸಿದ ಘಟನೆ ಗುರುವಾರ ನಡೆಯಿತು. ಮತಗಟ್ಟೆಯಲ್ಲಿದ್ದ ಮತಯಂತ್ರವಿದ್ದ ಟೇಬಲ್ ಉತ್ತರ ದಿಕ್ಕಿನಲ್ಲಿರುವುದನ್ನು ಗಮನಿಸಿದ ಮುನಿಯಪ್ಪ, ಜತೆಯಲ್ಲಿದ್ದ ಮುಖಂಡ ಹೊಳಲಿ ಪ್ರಕಾಶ್ ಅವರಿಗೆ ದಿಕ್ಕು ಸರಿ ಇದೆಯೇ ಎಂದು ಕೇಳಿದರು. ಟೇಬಲ್ ಬಳಿ ಹೋದ ಪ್ರಕಾಶ್, 'ಈ ದಿಕ್ಕು ನಿಮಗೆ ಸೂಕ್ತವಲ್ಲ. ಪೂರ್ವ ದಿಕ್ಕಿನಲ್ಲಿ ನಿಂತು ಮತ ಹಾಕಿ' ಎಂದು ಸಲಹೆ ನೀಡಿದರು. ತಕ್ಷಣವೇ ಹೊಳಲಿ ಪ್ರಕಾಶ್ ಟೇಬಲ್ ಅನ್ನು ಪೂರ್ವ ದಿಕ್ಕಿಗೆ ತಿರುಗಿಸಲು ಮುಂದಾದರು. ಮೊದಲಿಗೆ ಒಪ್ಪದಿದ್ದರೂ, ಅಧಿಕಾರಿಗಳ ಮನವೊಲಿಸಿ ಟೇಬಲ್ ತಿರುಗಿಸಿ ಮತ ಹಾಕಿದರು.
ಮತದ ಹೊತ್ತಲ್ಲಿ 10 ಸ್ವಾರಸ್ಯ
ಕಾಲು ಬೆರಳಿಗೆ ಶಾಯಿ!
ಮಂಗಳೂರಿನ ಬೆಳ್ತಂಗಡಿಯಲ್ಲಿ ಮಹಿಳೆಯೊಬ್ಬರಿಗೆ ಕೈ ಇಲ್ಲದ ಕಾರಣ ಕಾಲು ಬೆರಳಿಗೆ ಶಾಯಿ ಹಾಕಲಾಯಿತು. ಸಬಿತಾ ಮೋನಿಸ್ ಅವರಿಗೆ ಕೈ ಇಲ್ಲದಿದ್ದರೂ ಮತ ಹಾಕಿ ಹಕ್ಕು ಮೆರೆದರು.
ಕೊನೆಯ ಮತ
ಪ್ರತಿ ಚುನಾವಣೆಯಲ್ಲೂ ತಪ್ಪದೇ ಮತ ಚಲಾಯಿಸುತ್ತಿದ್ದ ಮೂಡುಶೆಡ್ಡೆಯ ವೃದ್ಧೆಯೊಬ್ಬರು ಈ ಬಾರಿ ಮತ ಚಲಾಯಿಸಿ ಹೊರಗೆ ಬಂದು ಮೃತಪಟ್ಟಿದ್ದಾರೆ. ಗಂಗಮ್ಮ (80) ಮೃತ ವೃದ್ಧೆ.
ಸ್ವಾಗತ-ಸುಸ್ವಾಗತ
ಮೂಡುಬಿದಿರೆ ಪುರಸಭೆಯ 59ನೇ ಮತಗಟ್ಟೆಯಲ್ಲಿ ಮತದಾರನಿಗೆ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿದೆ. ಜತೆಗೆ 'ಮಾದರಿ ಮತಗಟ್ಟೆಗೆ ಬರುವ ಮತದಾರನಿಗೆ ಸ್ವಾಗತ' ಎಂಬ ಫ್ಲೆಕ್ಸ್ ಎದುರಾಗಿದೆ.
ಗುಂಡು ಪಾರ್ಟಿ
ಕುಂದಗೋಳದ ಗುರುವಿನಹಳ್ಳಿ ಮತಗಟ್ಟೆ ಕೇಂದ್ರದಿಂದ 50 ಮೀಟರ್ ದೂರದ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ 1 ಗಂಟೆಗೆ ಐದಾರು ಜನರು ಗುಂಡು ಪಾರ್ಟಿಯಲ್ಲಿ ತೊಡಗಿದ್ದರು. ಇದನ್ನು ಮಾಧ್ಯಮ ಛಾಯಾಗ್ರಾಹಕರು ಸೆರೆ ಹಿಡಿದರೆ 'ಲೈವ್ ಆಗಿ ತೋರಿಸಿ, ನಮಗೆ ಅಂಜಿಕೆಯಿಲ್ಲ' ಎಂದು ಹೇಳಿದರು.
ನಿಂಬೆ-ದಾರ ಸಿಕ್ತು
ಧಾರವಾಡ ಲೋಕಸಭಾ ಕ್ಷೇತ್ರದ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಅಂಕದಕಣ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಎದುರಿನ ಆವರಣದಲ್ಲಿ ನಿಂಬೆ, ದಾರ ಸಿಕ್ಕಿದ್ದು, ವಾಮಾಚಾರದ ಶಂಕೆ ವ್ಯಕ್ತವಾಗಿದೆ.
ಮತವನ್ನೂ ಕಿತ್ಕಂಡ್ರು
ನವಲಗುಂದದ ನಲವಡಿ ಗ್ರಾಪಂ ಕಚೇರಿ ಮತಗಟ್ಟೆಯಲ್ಲಿ ರೈತರೊಬ್ಬರು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಅವರು ಸುರೇಶ್ ನಿಂಗಪ್ಪ. ಸಹೋದರ ಮಹೇಶ್ ನಿಂಗಪ್ಪ ಹುಬ್ಬಳ್ಳಿ ವಾಯವ್ಯ ಘಟಕದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸುರೇಶ್ ಜತೆ ತಪ್ಪು ತಿಳಿವಳಿಕೆಯಿಂದ ಮಹೇಶ್ರನ್ನೂ ಕರ್ತವ್ಯಕ್ಕೆ ನೇಮಿಸಿಕೊಳ್ಳಲಾಗಿತ್ತು. ಕೊನೆಗೆ ಇವರಿಗೆ ಕರ್ತವ್ಯವೂ ಇಲ್ಲ. ಮತದಾನಕ್ಕೂ ಅವಕಾಶ ಕೊಟ್ಟಿಲ್ಲ.
ತಪ್ಪಿದ ಶ್ರೀಗಳು
ಈ ಬಾರಿ ಉಡುಪಿ ಪರ್ಯಾಯ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಮತದಾನದಿಂದ ವಂಚಿತರಾದರು. ಪ್ರತಿ ಸಲ ಮತದಾನ ಮಾಡುವ ಹೆಸರು ತಪ್ಪಿಹೋಗಿತ್ತು.
ಉಪ್ಪಿಟ್ಟು ತಿನ್ನಿಸಿದ್ರು
ಬಾಗಲಕೋಟೆ ಜಿಲ್ಲೆಯ ಖಜ್ಜಿಡೋಣಿ ಗ್ರಾಮದಲ್ಲಿ ವೋಟು ಹಾಕಿದವರಿಗೆಲ್ಲ ಪಕ್ಷವೊಂದರ ಪ್ರಮುಖರು ಉಪ್ಪಿಟ್ಟು, ಚುರುಮುರಿ ತಿನ್ನಿಸಿ ಕಳುಹಿಸುತ್ತಿದ್ದರು.
'ನೋಟ'ವೇ ಇರಲಿಲ್ಲ
ಬಾಗಲಕೋಟೆಯಲ್ಲಿ 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮಾದರಿ ಬ್ಯಾಲೆಟ್ ನಮೂನೆಯಲ್ಲಿ ಎಲ್ಲರ ಹೆಸರು ಇತ್ತಾದರೂ ನೋಟ ಆಯ್ಕೆ ನಮೂದಿಸಿರಲಿಲ್ಲ. ಹಲವು ಕಡೆ ಪೆನ್ನಿನಿಂದ ನೋಟ ಎಂದು ಬರೆಯಲಾಗಿತ್ತು. ಅನಕ್ಷರಸ್ಥರಿಗೆ ಇದು ಗೊಂದಲ ಮೂಡಿಸಿತ್ತು.
ಕಡ್ಡಿಯಾಡಿಸಿದ
ಚನ್ನರಾಯಪಟ್ಟಣದಲ್ಲಿ ಮತದಾರನೊಬ್ಬ ಕಡ್ಡಿಯಾಡಿಸಿ ಕೆಲವು ಗಂಟೆಗಳ ಕಾಲ ಮತದಾನವನ್ನೇ ನಿಲ್ಲಿಸಿಬಿಟ್ಟಿದ್ದ! ಈತ ತನ್ನ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಿ, ನಂತರ ಸಣ್ಣ ಕಡ್ಡಿಯನ್ನು ಕಟ್ಟಿ ಇಟ್ಟಿದ್ದಾನೆ. ಅಧಿಕಾರಿಗಳು ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ.