ಗೆದ್ದರೆ ಕರ್ನಾಟಕ ಟೂರ್!
ಐಪಿಎಲ್ ಜೊತೆಗೆ ಚುನಾವಣೆಯಲ್ಲಿ ಸೋಲು ಗೆಲುವು ಸಾಧಿಸುವ ಅಭ್ಯರ್ಥಿಗಳ ವಿಷಯದಲ್ಲೂ ಮೌಲ್ಯವುಳ್ಳ ವಸ್ತುಗಳನ್ನು, ಜೊತೆಗೆ ಲಕ್ಷಾಂತರ ರುಪಾಯಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
-ಎನ್.ವೆಂಕಟೇಶ್
ಚಿಕ್ಕಬಳ್ಳಾಪುರ: ಐಪಿಎಲ್ ಜೊತೆಗೆ ಚುನಾವಣೆಯಲ್ಲಿ ಸೋಲು ಗೆಲುವು ಸಾಧಿಸುವ ಅಭ್ಯರ್ಥಿಗಳ ವಿಷಯದಲ್ಲೂ ಮೌಲ್ಯವುಳ್ಳ ವಸ್ತುಗಳನ್ನು, ಜೊತೆಗೆ ಲಕ್ಷಾಂತರ ರುಪಾಯಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಈ ಬಾರಿ ಚುನಾವಣೆ, ತೀವ್ರ ಪೈಪೋಟಿಯ ಮೂಲಕ ಗಮನ ಸೆಳೆದಿದ್ದು, ಬಿಜೆಪಿಯ ಬಿ.ಎನ್.ಬಚ್ಚೇಗೌಡ, ಕಾಂಗ್ರೆಸ್‌ನ ಎಂ.ವೀರಪ್ಪ ಮೊಯ್ಲಿ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ ಎನ್ನುವುದು ಬೆಟ್ಟಿಂಗ್ ಹೆಚ್ಚಾಗಲು ಕಾರಣ. ತಾಲೂಕಿನ ಪೆರೇಂದ್ರದಲ್ಲಿ ಮಹಮದ್ ಖಾಲಿದ್ ಮತ್ತು ಮುನಿರಾಜು ತಮ್ಮ ಗೆಳೆಯರ ಸಮ್ಮುಖ ಅಲಿಖಿತ ಒಪ್ಪಂದದಲ್ಲಿ 50 ಸಾವಿರ ಕಟ್ಟಿದ್ದರೆ, ಬಾಗೇಪಲ್ಲಿ ಪಟ್ಟಣದಲ್ಲಿ ಚಾಲಕ ಶ್ರೀನಿವಾಸ್ ದ್ವಿಚಕ್ರ ವಾಹನವನ್ನು ಪಣಕ್ಕಿಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ನಾಗರಾಜು ಮತ್ತು ಜೆಡಿಎಸ್‌ನ ಹರೀಶ್ ತಮ್ಮ ಚೀಟಿ ಹಣವನ್ನು ಬಾಜಿಗೆ ಕಟ್ಟಿದ್ದಾರೆ.
ಕರ್ನಾಟಕ ಟೂರ್: ಶೇಖರ್ ಮತ್ತು ಮುರಳಿ ನಡುವೆ ಸೋಲುವವರು ತಮ್ಮ ಸ್ವಂತ ಖರ್ಚಿನಲ್ಲಿ ಕರ್ನಾಟಕ ಪ್ರವಾಸ ಕರೆದುಕೊಂಡು ಹೋಗುವ ಮಾತುಕತೆಯಾಗಿದೆ! ಜಾತವಾರದಲ್ಲಿ 10 ಕುರಿಗಳನ್ನು ಪಣಕ್ಕೆ ಇಡಲಾಗಿದೆ. ಇವು ಜಸ್ಟ್ ಸ್ಯಾಂಪಲ್ಸ್, ಮುಂದಿನ ದಿನಗಳಲ್ಲಿ ಬೆಟ್ಟಿಂಗ್ ಪ್ರಮಾಣ ಕೋಟ್ಯಂತರ ರುಪಾಯಿ ಮೀರುವ ಸಾಧ್ಯತೆ ಇದೆ ಎನ್ನುತ್ತಾರೆ ಚಿಕ್ಕಬಳ್ಳಾಪುರ ನಿವಾಸಿ ವೇಣು.
ತಮ್ಮ ಅಂಗಡಿ ಬಳಿಗೆ ಬಂದು ಮಾತನಾಡುವವರಲ್ಲಿ ಚುನಾವಣೆಯ ವಿಷಯವೇ ಹೆಚ್ಚಾಗಿರುತ್ತದೆ. ಈಗಾಗಲೇ ನಾಲ್ಕೈದು ಕಡೆ ಬೆಟ್ಟಿಂಗ್ ಕಟ್ಟಿಕೊಳ್ಳುತ್ತಿರುವುದನ್ನು ನಾನು ಕಂಡಿದ್ದೇನೆ. ಅಲ್ಲದೇ ನನ್ನನ್ನು ಸಹ ಬೆಟ್ಟಿಂಗ್ ಕಟ್ಟುತ್ತೀಯಾ ಎಂದು ಅನೇಕರು ಕೇಳಿದ್ದಾರೆ.
-ಗಂಗಾಧರ್, ಟೀ ಅಂಗಡಿ ವ್ಯಾಪಾರಿ, ಚಿಕ್ಕಬಳ್ಳಾಪುರ