ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅನಂತ ಕಾವಲಲ್ಲೇ ಒಳಗಳ್ಳರ ಕರಾಮತ್ತು

ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ಚಿನ್ನಕ್ಕೆ 'ಭಾರಿ' ಒಳಗಳ್ಳರ ಕಾಟ ಶುರುವಾಗಿದೆ...

Srinivasa Murthy VN
Updated On : 20 Apr 2014, 7:08 am

ಪಿಟಿಐ ನವದೆಹಲಿ/ತಿರುವನಂತಪುರ ಏ.19
ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ಚಿನ್ನಕ್ಕೆ 'ಭಾರಿ' ಒಳಗಳ್ಳರ ಕಾಟ ಶುರುವಾಗಿದೆ. ಆಡಳಿತ ಮಂಡಳಿಯವರೇ ನೇರವಾಗಿ ಚಿನ್ನ ಕಳವಿನಲ್ಲಿ ಭಾಗಿಯಾಗಿದ್ದಾರೆ. ಹೀಗೆಂದು ಬೇರಾರೂ ಹೇಳಿದ್ದಲ್ಲ. ಸುಪ್ರೀಂಕೋರ್ಟ್ ನೇಮಿಸಿದ ಅಮಿಕಸ್ ಕ್ಯೂರಿ ಗೋಪಾಲ ಸುಬ್ರಹ್ಮಣ್ಯಂ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ರಾಜಮನೆತನದ ಹಿಡಿತದಿಂದ ದೇಗುಲದ ಆಡಳಿತವನ್ನು ಮುಕ್ತಗೊಳಿಸಿ ಸ್ವತಂತ್ರ ಆಡಳಿತ ಮಂಡಳಿ ರಚಿಸಬೇಕೆಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

 ವರದಿಯಲ್ಲಿ ಏನಿದೆ?
-ದೇಗುಲದ ನೆಲಮಹಡಿಯಿಂದ ಭಾರಿ ಪ್ರಮಾಣದ ಚಿನ್ನ ಕಳವಾಗಿದೆ. ಇದರಲ್ಲಿ ಆಡಳಿತ ಮಂಡಳಿಯ ಪ್ರಭಾವಿಗಳ ಕೈವಾಡ ಇರುವ ಶಂಕೆ
-ದೇಗುಲದಲ್ಲಿ ಕೆಲಸ ಮಾಡಿಕೊಂಡಿದ್ದ ತಂಜಾವೂರಿನ ಚಿನ್ನದ ಆಭರಣ ಕೆಲಸಗಾರರು ಮಣ್ಣಿನಲ್ಲಿ ಚಿನ್ನವನ್ನು ಬೆರೆಸಿ ಸಾಗಿಸಿದ್ದಾರೆ.
- ಅಪಾರ ಪ್ರಮಾಣದ ಚಿನ್ನ, ಬೆಳ್ಳಿಯ ಆಭರಣಗಳು ಮತ್ತು ಪಾತ್ರೆಗಳನ್ನು ದುರಸ್ತಿ ಮಾಡಿದ್ದಕ್ಕೆ ಕುರುಹುಗಳಿವೆ. ಇಲ್ಲಿ ಚಿನ್ನಲೇಪನ ಮಾಡುವ ಯಂತ್ರಗಳು ಪತ್ತೆಯಾಗಿವೆ.
-ಈ ಬಗ್ಗೆ ಸಂಬಂಧಿಸಿದ ಕೆಲ ದಾಖಲೆ ಪುಸ್ತಕಗಳನ್ನೂ ವಶ
-ಈ ಹಿಂದೆ ನಡೆದಿದ್ದ ಅಷ್ಟಮಂಗಲ ಪ್ರಶ್ನೆಯೇ ಒಂದು ನಾಟಕ. ಅದರ ಪ್ರಕಾರ 'ಬಿ' ಕೋಣೆ ತೆರೆಯಬಾರದು ಎಂದು ಕಂಡುಬಂದಿದೆ. ಅದನ್ನು ಒಪ್ಪಲು ಸಾಧ್ಯವಿಲ್ಲ. ಆ ಕೋಣೆಯನ್ನು ತೆರೆದು ಅದರಲ್ಲಿ ಇರಬಹುದಾದ ಸಂಪತ್ತಿನ ಮೌಲ್ಯಮಾಪನ ನಡೆಸಬೇಕು.
-ಸದ್ಯ ದೇಗುಲಕ್ಕೆ ತಿರುವಾಂಕೂರು ರಾಜಮನೆತನದವರ ಆಡಳಿತ ಇದೆ. ಅವರನ್ನು ಸಂಪೂರ್ಣವಾಗಿ ಹೊರಗಿಟ್ಟು ಹೊಸದಾಗಿ ಆಡಳಿತ ಮಂಡಳಿ ರಚಿಸಬೇಕು.
-ನಿವೃತ್ತ ಮಹಾಲೇಖಪಾಲ ವಿನೋದ್ ರಾಯ್ ಅಂಥವರನ್ನು ಒಳಗೊಂಡ ಸಮಿತಿ ರಚಿಸಿ ಪ್ರತ್ಯೇಕ ಆಡಿಟ್ ನಡೆಸಬೇಕು.
-ರಾಜಮನೆತನ ದೇಗುಲದ ಆಸ್ತಿಯನ್ನು ವೈಯಕ್ತಿಕ ಆಸ್ತಿಯಂತೆ ಬಳಕೆ ಮಾಡಿಕೊಂಡಿದೆ.
-ದೇಗುಲದ ಖರ್ಚುವೆಚ್ಚಗಳಿಗೆ ಸಂಬಂಧಿಸಿದಂತೆ ಸರಿಯಾದ ಲೆಕ್ಕಪತ್ರ ಇಡಲಾಗಿಲ್ಲ. ದೇಗುಲದ ಖಾತೆಯನ್ನು ಹೊಂದಿರುವ ಖಾಸಗಿ ಬ್ಯಾಂಕ್ ಹುಂಡಿಯಲ್ಲಿ ಸಂಗ್ರಹವಾದ ನಾಣ್ಯಗಳನ್ನು ಲೆಕ್ಕಹಾಕುವ ಕೆಲಸವನ್ನು ಸಂಸ್ಥೆಯೊಂದಕ್ಕೆ ವಹಿಸಿದೆ.
-ಬ್ಯಾಂಕ್ ಖಾತೆಯಲ್ಲಿ ಹುಂಡಿಯಲ್ಲಿ ಸಂಗ್ರಹವಾಗಿರುವ ಕಾಣಿಕೆಯ ಬಗ್ಗೆ ವಿವರಗಳು ಇಲ್ಲ.
-ಅನಂತಪದ್ಮನಾಭ ದೇಗುಲಕ್ಕೆ ಉನ್ನತ ಮಟ್ಟದ ಭದ್ರತೆ ಒದಗಿಸಬೇಕು ಎಂಬ ಬಗ್ಗೆ ಶಿಫಾರಸು ಮಾಡಲಾಗಿತ್ತು. ಆದರೆ ಈ ಬಗ್ಗೆ ಕೇರಳ ಸರ್ಕಾರ ಪ್ರಯತ್ನ ನಡೆಸಿಲ್ಲ.
- ಉನ್ನತ ಮಟ್ಟದ ಸಮಿತಿಯ ಸದಸ್ಯರು ದೇಗುಲದ ಆಡಳಿತ ಮಂಡಳಿ ಜತೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ.  
- ಸುಪ್ರೀಂಕೋರ್ಟ್ ನಿರ್ದೇಶನವುಳ್ಳ ಫಲಕಗಳನ್ನು ನಾಶಗೊಳಿಸಿದ್ದರ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡದ ಸಮಿತಿ ಮುಖ್ಯಸ್ಥ ಎಂ.ವಿ.ನಾಯರ್ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಂ.ಎನ್.ಕೃಷ್ಣನ್ ಕ್ರಮದ ಬಗ್ಗೆ ಆಕ್ಷೇಪ.

2011ರಲ್ಲಿ ಪತ್ತೆಯಾಗಿತ್ತು
ಪ್ರಾಚೀನ ಕಾಲದ ದೇಗುಲದಲ್ಲಿ ಭಾರಿ ಪ್ರಮಾಣದ ಚಿನ್ನ ಮತ್ತು ಇತರ ವೈಭವೋಪೇತ ಆಭರಣಗಳು 2011ರ ಜುಲೈನಲ್ಲಿ ಪತ್ತೆಯಾಗಿತ್ತು. ಚಿನ್ನದ ನಾಣ್ಯಗಳು, ಉಂಗುರ, ಚಿನ್ನದ ಗಟ್ಟಿಗಳು, ವ್ರಜದ ಉಂಗುರಗಳು, ಅಪರೂಪದ ಹರಳುಗಳು ಪತ್ತೆಯಾಗಿದ್ದವು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳ ಒಟ್ಟು ಮೌಲ್ಯ 1 ಲಕ್ಷ ಕೋಟಿ ಎಂದು ಅಂದಾಜಿಸಲಾಗಿತ್ತು.

 500 ಪುಟಗಳು
ಅಮಿಕಸ್ ಕ್ಯೂರಿ ಗೋಪಾಲ ಸುಬ್ರಹ್ಮಣ್ಯಂ ಒಟ್ಟು 500 ಪುಟಗಳ ವರದಿ ಸಲ್ಲಿಸಿದ್ದಾರೆ.  35 ದಿನಗಳ ಕಾಲ ದೇಗುಲದ ಪರಿಸರಕ್ಕೆ ಭೇಟಿ ಮತ್ತು ಹಲವು ವ್ಯಕ್ತಿಗಳ ಜತೆ ಚರ್ಚೆ ನಡೆಸಿ ಈ ವರದಿ ಸಿದ್ಧಪಡಿಸಿದ್ದಾರೆ.

 ಏ.23ಕ್ಕೆ ಮುಂದಿನ ವಿಚಾರಣೆ

ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ನ್ಯಾ.ಆರ್.ಎಂ.ಲೋಧಾ ಮತ್ತು ನ್ಯಾ.ಎ.ಕೆ.ಪಟ್ನಾಯಕ್ ನೇತೃತ್ವದ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ದಿಲ್ಲಿಗೆ ಕೇರಳ ಪ್ರತಿನಿಧಿ ದೌಡು: ಅಮಿಕಸ್ ಕ್ಯೂರಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ (ದೇಸ್ವಂ ಬೋರ್ಡ್) ಕಾರ್ಯದರ್ಶಿ  ಕೆ.ಆರ್.ಜ್ಯೋತಿಲಾಲ್ ಭಾನುವಾರ ನವದೆಹಲಿಗೆ ತೆರಳಲಿದ್ದಾರೆ. ಅಲ್ಲಿ ವಕೀಲರ ಜತೆ ಅವರು ವರದಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ವರದಿ ಬಗ್ಗೆ ಮಾತನಾಡಿದ ಅವರು 'ವರದಿಯನ್ನು ಅಧ್ಯಯನ ನಡೆಸಿದ ಬಳಿಕ ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ಭಾನುವಾರ ನವದೆಹಲಿಗೆ ತೆರಳಿ ವಕೀಲರ ಜತೆ ಚರ್ಚಿಸುವೆ. ಸುಪ್ರೀಂಕೋರ್ಟ್‌ಗೆ ಸರ್ಕಾರದ ಉತ್ತರ ನೀಡುತ್ತೇವೆ' ಎಂದು ತಿಳಿಸಿದ್ದಾರೆ.
ಕೇರಳ ಸರ್ಕಾರದ ವಿರುದ್ಧ ವರದಿಯಲ್ಲಿ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟ ನಡೆಸಲು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ವಿ.ವಿಶ್ವನಾಥನ್ ನೆರವು ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ವರದಿ ಅಧ್ಯಯನ ಮಾಡುತ್ತೇವೆ: ರಾಜಮನೆತನ ವರದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ದೇಗುಲದ ಆಡಳಿತ ಮಂಡಳಿಯ ನೇತೃತ್ವ ಹೊಂದಿರುವ ತಿರುವಾಂಕೂರು ರಾಜಮನೆತನ ತಕ್ಷಣಕ್ಕೆ ನಿರಾಕರಿಸಿದೆ. ಸುಪ್ರೀಂಕೋರ್ಟ್‌ನಲ್ಲಿ ರಾಜಮನೆತನವನ್ನು ಪ್ರಕರಣದಲ್ಲಿ ಪ್ರತಿನಿಧಿಸುತ್ತಿರುವ ಖ್ಯಾತ ವಕೀಲ ಕೆ.ಕೆ.ವೇಣುಗೋಪಾಲ್ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಕೂಡ ಭಾನುವಾರ ನವದೆಹಲಿಗೆ ಆಗಮಿಸಲಿದ್ದಾರೆ. ರಾಜಮನೆತನದ ಮೂಲಗಳ ಪ್ರಕಾರ ಅಮಿಕಸ್ ಕ್ಯೂರಿ ರಾಜಮನೆತನದ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದಾರೆ. ಅದನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಉತ್ತರಿಸಲು ಹೆಚ್ಚಿನ ಸಮಯ ಬೇಕಾಗಿದೆ. ಹೀಗಾಗಿ, ವೇಣುಗೋಪಾಲ್ ಜತೆ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಎರಡು ವರ್ಷಗಳ ಹಿಂದೆ ನೇಮಕ: ದೇಗುಲದ ಸಂಪತ್ತಿನ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ 2012ರ ಆ.24ರಂದು ಅಮಿಕಸ್ ಕ್ಯೂರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಗೋಪಾಲ ಸುಬ್ರಹ್ಮಣ್ಯಂ ಅವರಿಗೆ ಬಹುಕೋಟಿ ಮೌಲ್ಯದ ಸಂಪತ್ತಿನ ರಕ್ಷಣೆ, ವಿಲೇವಾರಿ ಮತ್ತು ಇತರ ವಿಚಾರಗಳಲ್ಲಿ ಉನ್ನತ ಸಮಿತಿಗೆ ಸಲಹೆ ನೀಡುವಂತೆ ಸುಪ್ರೀಂಕೋರ್ಟ್ ಸಲಹೆ ನೀಡಿತ್ತು.

ದೇಗುಲದಲ್ಲಿ ಇರುವ ಆಭರಣಗಳನ್ನು ಲಪಟಾಯಿಸುವ ಮತ್ತು ಅದನ್ನು ಬೇರೆಡೆ ವರ್ಗಾಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದೆ. ಅದೇ ಅಂಶವನ್ನು ಅಮಿಕಸ್ ಕ್ಯೂರಿ ವರದಿಯಲ್ಲಿ ದೃಢೀಕರಿಸಲಾಗಿದೆ. ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಧಾರ್ಮಿಕ ದತ್ತಿ ಸಚಿವ ವಿ.ಎಸ್.ಶಿವಕುಮಾರ್ ಈ ಬಗ್ಗೆ ಸ್ಪಷ್ಟನೆ ಕೊಡಲಿ.
-ವಿ.ಎಸ್.ಅಚ್ಯುತಾನಂದನ್, ಕೇರಳ ಪ್ರತಿಪಕ್ಷ ನಾಯಕ

ಏ.23ಕ್ಕೆ ಮುಂದಿನ ವಿಚಾರಣೆ

ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ನ್ಯಾ.ಆರ್.ಎಂ.ಲೋಧಾ ಮತ್ತು ನ್ಯಾ.ಎ.ಕೆ.ಪಟ್ನಾಯಕ್ ನೇತೃತ್ವದ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement