ಆಂಧ್ರ-ಕರ್ನಾಟಕದ ಗಡಿ ಗುರುತು ಕಾರ್ಯಾರಂಭ
ಸುಪ್ರೀಂ ಕೋರ್ಟ್ ನಿರ್ದೇನದಂತೆ ಆಂಧ್ರಪ್ರದೇಶ-ಕರ್ನಾಟಕ ಗಡಿ ಗುರುತಿಸುವ ಕಾರ್ಯಕ್ಕೆ ಸರ್ವೆ ಆಫ್ ಇಂಡಿಯಾ ಶನಿವಾರ ಚಾಲನೆ ನೀಡಿದೆ.
ಬಳ್ಳಾರಿ: ಅಕ್ರಮ ಗಣಇಗಾರಿಕೆ ನಡೆಸಿ ಗಡಿ ನಾಶಪಡಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇನದಂತೆ ಆಂಧ್ರಪ್ರದೇಶ-ಕರ್ನಾಟಕ ಗಡಿ ಗುರುತಿಸುವ ಕಾರ್ಯಕ್ಕೆ ಸರ್ವೆ ಆಫ್ ಇಂಡಿಯಾ ಶನಿವಾರ ಚಾಲನೆ ನೀಡಿದೆ.
ಉಭಯ ರಾಜ್ಯಗಳ ಕಂದಾಯ, ಗಣಿ ಮತ್ತು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಗಡಿ ಗುರುತಿಸುವ ಕಾರ್ಯ ಆರಂಭವಾಗಿದೆ. ಡೆಹರಾಡೂನ್ನಿಂದ ಆಗಮಿಸಿರುವ ಸರ್ವೆ ಆಫ್ ಇಂಡಿಯಾದ ಸರ್ವೆಯರ್ ಜನರಲ್ ಸ್ವರ್ಣ ಸುಬ್ಬರಾವ್ ನೇತೃತ್ವದ ತಂಡ ವಿಠಲಾಪುರ, ಮಲ್ಲಪನಗುಡಿಯಿಂದ ಗಡಿ ಗುರುತಿಸುವಿಕೆ ಕಾರ್ಯಕ್ಕೆ ಚಾಲನೆ ನೀಡಿದೆ.
ಈ ಹಿಂದೆ ಧ್ವಂಸವಾಗಿರುವ ಎರಡೂ ರಾಜ್ಯಗಳ ಗಡಿ ಕುರಿತಾಗಿ ಎ.ಕೆ. ಪಾದ, ದೀಪಕ್ ಶರ್ಮಾ ನೇತೃತ್ವದ ಸಮಿತಿಗಳು ಗಡಿ ಗುರುತು ಪರಿಶೀಲಿಸಿ ವರದಿಗಳನ್ನು ಸಲ್ಲಿಸಿದ್ದವು. ಆ ವರದಿಗಳಿಗೆ ಕೆಲ ಗಣಿ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈಗ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಸರ್ವೇಗೆ ಸರ್ವೇ ಆಫ್ ಇಂಡಿಯಾ ಮುಂದಾಗಿದೆ. ಆಂಧ್ರಪ್ರದೇಶದ ಗಡಿಯಲ್ಲಿರುವ ಕೆಲ ಗಣಿ ಕಂಪನಿಗಳು ರಾಜ್ಯದ ಗಡಿ ಧ್ವಂಸ ಮಾಡಿ ಗಣಿಗಾರಿಕೆ ಮಾಡಿವೆ ಎಂದು ಆರೋಪಿಸಿ ಗಣಿ ಉದ್ಯಮಿ ಟಪಾಲ್ ಗಣೇಶ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಕ್ರಮ ಗಣಿಗಾರಿಕೆ ತಡೆಯುವಂತೆ ಸುಪ್ರೀಂಕೋರ್ಟ್ನಲ್ಲಿ ಎಸ್.ಆರ್. ಹಿರೇಮಠ್ ಅರ್ಜಿ ಸಲ್ಲಿಸಿದ್ದರು. ಈ ಕುರಿತಾಗಿ ಸುಪ್ರೀಂ ಕೋರ್ಟ್ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಮೂಲಕ ತನಿಖೆ ನಡೆಸಿತ್ತು. ಅಕ್ರಮ ಗಣಿಗಾರಿಕೆ ಮಾಡಿರುವ ಕಂಪನಿಗಳು ಗಡಿ ಬದಲು ಮಾಡಿವೆ ಎಂದು ಸಿಇಸಿ ಸುಪ್ರೀಂಕೋರ್ಟ್ಗೆ ವರದಿ ನೀಡಿತ್ತು. ಸಿಇಸಿ ಶಿಫಾರಸಿನ ಮೇಲೆ ಗಡಿ ಗುರುತು ಮಾಡುವಂತೆ ಸರ್ವೆ ಆಫ್ ಇಂಡಿಯಾಕ್ಕೆ ಅ. 28, 2013 ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಗಡಿ ಸರ್ವೆ ಆರಂಭವಾಗಿದೆ.
ಮೇ ಅಂತ್ಯಕ್ಕೆ ಸುಪ್ರೀಂಗೆ ವರದಿ
ಎರಡು ದಿನ ಸರ್ವೆ ಮಾಡಿ ಅನಂತರ ಬಂದು ಸರ್ವೇ ಕಾರ್ಯ ಮಾಡಲಾಗುತ್ತದೆ. ಇಂದು ಎರಡು ಗ್ರಾಮಗಳಲ್ಲಿ ಸರ್ವೇ ಮಾಡಿದ್ದೇವೆ. ಒಟ್ಟು 8 ಗ್ರಾಮಗಳಲ್ಲಿ ಸರ್ವೇ ಮಾಡಲಾಗುತ್ತದೆ. ಮೇ ಅಂತ್ಯಕ್ಕೆ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಲಾಗುತ್ತದೆ.
- ಸ್ವರ್ಣ ಸುಬ್ಬರಾವ್/ ಸರ್ವೆಯರ್ ಜನರಲ್, ಸರ್ವೆ ಆಫ್ ಇಂಡಿಯಾ
ಗಡಿ, ಅಪರಾಧಿ ಪತ್ತೆಗೆ ಸಹಕಾರಿ
ಸರ್ವೆ ಆಫ್ ಇಂಡಿಯಾದವರು ಗಡಿ ಗುರುತು ಪತ್ತೆ ಹಚ್ಚಿ, ಗುರುತುಗಳನ್ನು ನಿಗದಿ ಮಾಡಲು ಮುಂದಾಗಿದ್ದು, ಯಾರು ಗಡಿ ಗುರುತುಗಳನ್ನು ಧ್ವಂಸ ಮಾಡಿ, ಗಣಿಗಾರಿಕೆ ಮಾಡಿದ್ದಾರೆ ಎಂಬ ಸತ್ಯ ಇದರಿಂದಾಗಿ ಬಯಲಾಗುತ್ತದೆ. ಎಲ್ಲಿ ಒತ್ತುವರಿಯಾಗಿದೆ ಎಂಬ ಮಾಹಿತಿಯೂ ಸಿಗುತ್ತದೆ. ತಪ್ಪಿತಸ್ಥರು ಯಾರೆಂಬುದು ಗೊತ್ತಾಗುತ್ತದೆ.
- ಟಪಾಲ್ ಗಣೇಶ್, ಗಣಿ ಉದ್ಯಮಿ