ನಕ್ಸಲ್ ಶಂಕೆ ವ್ಯಕ್ತಿಗೆ ಗುಂಡು
ತನಿಕೋಡು ಅರಣ್ಯ ತನಿಖಾ ತಪಾಸಣಾ ಕೇಂದ್ರದ ಬಳಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟ ಘಟನೆ...
ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮಂಗಳೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 13 ರ ಕೆರೆಕಟ್ಟೆ ತನಿಕೋಡು ಅರಣ್ಯ ತನಿಖಾ ತಪಾಸಣಾ ಕೇಂದ್ರದ ಬಳಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.
ಮೃತ ವ್ಯಕ್ತಿ ಮಂಗಳೂರು ಮೂಲದ ಕಬೀರ್ (26) ಎನ್ನಲಾಗಿದೆ. ಶೃಂಗೇರಿ ಕಡೆಯಿಂದ ಮಂಗಳೂರು ಕಡೆಗೆ ಜಾನುವಾರುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಮಹೀಂದ್ರ ಪಿಕ್‌ಅಪ್ ವಾಹನ ನಸುಕಿನ ವೇಳೆ 3.30 ಕ್ಕೆ ಚೆಕ್ ಪೋಸ್ಟ್ ಬಳಿ ನಿಂತಿದೆ. ವಾಹನದಿಂದ ಕೆಳಗಿಳಿದ ಕಬೀರ್ ಪಾಸ್ ತೆಗೆದುಕೊಳ್ಳಲು ಕೆಳಗಿಳಿದ. ಇದೇ ವೇಳೆ ಅಲ್ಲಿದ್ದ ಎಎನ್‌ಎಫ್ ಸಿಬ್ಬಂದಿಯೊಬ್ಬನನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾನೆ.
ಗುಂಡಿಗೆ ಬಲಿ: ಆತ ನಕ್ಸಲ್ ಇರಬಹುದೆಂದು ಭಾವಿಸಿದ ಎಎನ್‌ಎಫ್ ಸಿಬ್ಬಂದಿ ಅನುಮಾನಗೊಂಡು ಗುಂಡು ಹಾರಿಸಿದರು. ಗುಂಡೇಟಿಗೆ ಕಬೀರ್ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಗುಂಡಿನ ಶಬ್ಬ ಕೇಳಿ ವಾಹನದಲ್ಲಿದ್ದ ಮೂವರು ಪರಾರಿಯಾಗಿದ್ದು, ಇನ್ನೊಬ್ಬ ಸೆರೆಸಿಕ್ಕಿದ್ದಾನೆ.