ಆನೆ ತುಳಿತ ರೈತನ ಸಾವು
ತುಮಕೂರು: ತುಮಕೂರು ಗ್ರಾಮಾಂತರ ತಾಲೂಕು ಹೆಬ್ಬೂರು ಹೋಬಳಿ ಗಳಿಗೇನಹಳ್ಳಿಯಲ್ಲಿ ಆನೆ ತುಳಿತಕ್ಕೆ ರೈತರೊಬ್ಬರು ಬಲಿಯಾಗಿರುವ ಘಟನೆ ಭಾನುವಾರ ನಸುಕಿನಲ್ಲಿ ನಡೆದಿದೆ.
ನರಸಿಂಹಮೂರ್ತಿ (52) ಬಲಿಯಾಗಿರುವ ದುರ್ದೈವಿ. ನರಸಿಂಹಮೂರ್ತಿ ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಬಹಿರ್ದೆಸೆಗೆಂದು ನರಸಿಂಹಮೂರ್ತಿ ತೆರಳಿದ್ದ ವೇಳೆ ಹೊಲದಲ್ಲಿದ್ದ ಆನೆ ಅಟ್ಟಿಸಿಕೊಂಡು ಹೋಗಿ ನರಸಿಂಹಮೂರ್ತಿಯವರನ್ನು ತುಳಿದು ಹಾಕಿದೆ ಎಂದು ಪ್ರತ್ಯಕ್ಷದರ್ಶಿ ಮಗ ಶಶಿಕುಮಾರ ತಿಳಿಸಿದ್ದಾನೆ.
ಈಗಾಗಲೇ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ಆನೆಗಳನ್ನು ಬೆಂಗಳೂರು ಗ್ರಾಮಾಂತರದ ಕಡೆಗೆ ಓಡಿಸಲಾಗುತ್ತಿತ್ತು. ಶನಿವಾರ ರಾತ್ರಿ ಗುಬ್ಬಿ ತಾಲೂಕು ನಿಟ್ಟೂರಿನಿಂದ ಆನೆಗಳನ್ನು ತುಮಕೂರು ಕಡೆಗೆ ಓಡಿಸಿಕೊಂಡು ಬರಲಾಗಿತ್ತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.