ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಒಂದು ಕಿಮೀಗೆ ಬೇಕು ಒಂದು ಗಂಟೆ!

ಒಂದು ಕಿ.ಮೀ. ದೂರದ ನಿಲ್ದಾಣ ತಲುಪಲು ರೈಲಿಗೆ ಎಷ್ಟು ಸಮಯ ಬೇಕು? ಹೆಚ್ಚೆಂದರೆ ಹತ್ತು ನಿಮಿಷ.

Srinivasa Murthy VN
Updated On : 20 Apr 2014, 11:10 am

-ಆತ್ಮಭೂಷಣ್
ಮಂಗಳೂರು:
ಒಂದು ಕಿ.ಮೀ. ದೂರದ ನಿಲ್ದಾಣ ತಲುಪಲು ರೈಲಿಗೆ ಎಷ್ಟು ಸಮಯ ಬೇಕು? ಹೆಚ್ಚೆಂದರೆ ಹತ್ತು ನಿಮಿಷ. ನಂಬಿ, ಮಂಗಳೂರಿನಲ್ಲಿ ಇಷ್ಟು ದೂರ ಕ್ರಮಿಸಲು ಒಂದು ಗಂಟೆ ಸಮಯ ಬೇಕು!
ಮಂಗಳೂರು ಜಂಕ್ಷನ್ (ಕಂಕನಾಡಿ) ಮತ್ತು ಸೆಂಟ್ರಲ್ ನಡುವೆ ಸೂಟರ್‌ಪೇಟೆಯಿಂದ ಕೇವಲ ಒಂದು ಕಿ.ಮೀ. ದೂರ ಇರುವ ಸಿಂಗಲ್ ಹಳಿ ಇಷ್ಟೆಲ್ಲ ಸಮಸ್ಯೆ ತಂದೊಡ್ಡಿದೆ. ಇಲ್ಲಿ ಜೋಡಿ ಹಳಿ ಇಲ್ಲ. ಕೊಂಕಣ ಅಥವಾ ಕೇರಳ ಮಾರ್ಗದಿಂದ ಆಗಮಿಸುವ ರೈಲಿಗೆ ಸೆಂಟ್ರಲ್ ಪ್ರವೇಶಿಸುವಲ್ಲಿ ಸಿಗ್ನಲ್‌ಗೆ ಕಾಯುವುದು ನಿತ್ಯದ ಕೆಲಸ. ಇದರಿಂದ ಪ್ರಯಾಣಿಕರಿಗೆ ದಿನವೂ ಕಿರಿಕಿರಿ ತಪ್ಪಿದ್ದಲ್ಲ.
ಜೋಡಿಹಳಿ ಪ್ರಸ್ತಾಪ ಇಲ್ಲ: ಮಂಗಳೂರು ಜಂಕ್ಷನ್ (ಕಂಕನಾಡಿ)ನಿಂದ ಸೆಂಟ್ರಲ್‌ವರೆಗಿನ ಪ್ರದೇಶ ದಕ್ಷಿಣ ರೇಲ್ವೆಯ ಕೇರಳ ಫಾಲ್ಘಾಟ್ ವಿಭಾಗಕ್ಕೆ ಸೇರುತ್ತದೆ. ಇಲ್ಲಿ ಕಂಕನಾಡಿಯಿಂದ ಸೂಟರ್‌ಪೇಟೆವರೆಗೆ ಜೋಡಿಹಳಿ ಕಾಮಗಾರಿ ನಡೆಸಿದೆ. ಆದರೆ ಸೂಟರ್‌ಪೇಟೆಯಿಂದ ಸೆಂಟ್ರಲ್‌ವರೆಗೆ ಸಿಂಗಲ್ ಹಳಿ ಇದೆ. ಇದುವೇ ಸಮಸ್ಯೆಗೆ ಕಾರಣ. ಈ ಮಾರ್ಗವನ್ನು ಜೋಡಿಹಳಿಗೆ ಪರಿವರ್ತಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಎರ್ನಾಕುಲಂನಲ್ಲಿರುವ ರೇಲ್ವೆ ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ರೇಲ್ವೆ ಸಂಘಟನೆಗಳಿಗೆ ತಿಳಿಸಿದ್ದಾರೆ. ಇದು ಫಾಲ್ಘಾಟ್ ರೇಲ್ವೆ ವಿಭಾಗ ವ್ಯಾಪ್ತಿಗೆ ಒಳಪಡುವುದರಿಂದ ಕರ್ನಾಟಕಕ್ಕೆ ಅನ್ಯಾಯ.
ಸಿಗ್ನಲ್‌ಗೆ ಕಾಯೋದೇ ಕೆಲ್ಸ: ಪುತ್ತೂರು- ಮಂಗಳೂರು ಸೆಂಟ್ರಲ್, ಬೆಂಗಳೂರು- ಮಂಗಳೂರು ರಾತ್ರಿ ರೈಲು, ಕಾರವಾರ ಹಗಲು ರೈಲು, ಭಟ್ಕಳ ಪ್ಯಾಸೆಂಜರ್, ಮಡಗಾಂವ್ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣಿಕರು ಸೆಂಟ್ರಲ್‌ನಲ್ಲಿ ಇಳಿಯುವುದು ಕಡಿಮೆ.

ಏಕೆಂದರೆ ಜಂಕ್ಷನ್‌ಗೆ ಬರುವ ರೈಲು ಸೆಂಟ್ರಲ್‌ಗೆ ಬರಲು ಸಿಗ್ನಲ್‌ಗೆ ಕಾಯಬೇಕು, ಇದು ನಿತ್ಯ ಬೆಳಗ್ಗೆ ಮತ್ತು ಸಂಜೆ ತಪ್ಪದ ಬವಣೆ.
ಇದರಿಂದ ಕೊಂಕಣ ಮಾರ್ಗದಲ್ಲಿ ಮಂಗಳೂರಿಗೆ ಬರುವ ಪ್ರಯಾಣಿಕರು ಸುರತ್ಕಲ್‌ನಲ್ಲೇ ಇಳಿಯುತ್ತಾರೆ. ಅವರು ಬಸ್‌ನಲ್ಲಿ ಮಂಗಳೂರು ತಲುಪಿದರೂ ರೈಲು ಮಂಗಳೂರು ಜಂಕ್ಷನ್‌ನಲ್ಲಿ ಸಿಗ್ನಲ್‌ಗೆ ಕಾದಿರುತ್ತದೆ. 'ರೈಲು ನಿಲ್ದಾಣಕ್ಕೆ ಬರುವುದು ವಿಳಂಬವಾದರೆ ಬೇರೆ ಕಡೆ ಸಂಚರಿಸುವ ಪ್ರಯಾಣಿಕರಿಗೂ ತೊಂದರೆ. ಇಲ್ಲದಿದ್ದರೆ ಮಂಗಳೂರಿನಿಂದ ರಾತ್ರಿ ಊರಿಗೆ ಪ್ರಯಾಣಿಸಲು ಕಷ್ಟವಾಗುತ್ತಿತ್ತು. ವೃಥಾ ಎರಡೆರಡು ಖರ್ಚು' ಎನ್ನುತ್ತಾರೆ ಪುತ್ತೂರಿನ ಉಪನ್ಯಾಸಕ ವಿ.ಜಿ.ಭಟ್. ಇದು ಇವರೊಬ್ಬರ ಕಷ್ಟ ಅಲ್ಲ, ಪುತ್ತೂರು ಕಡೆಯಿಂದ ಹಾಗೂ ಕೊಂಕಣ ಮಾರ್ಗದಿಂದ ಆಗಮಿಸುವ ಬಹುತೇಕ ಮಂದಿ ರೇಲ್ವೆ ಪ್ರಯಾಣಿಕರ ತಾಪತ್ರಯ. ಇದನ್ನು ಸರಿಪಡಿಸುವ ಗೋಜಿಗೆ ರೈಲ್ವೆ ಇಲಾಖೆ ಮುಂದಾಗಿಲ್ಲ.
ಕೇವಲ ಒಂದು ಕಿ.ಮೀ.ಗಾಗಿ: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸುವ ಪ್ರಸ್ತಾಪ ಕಳೆದ ನಾಲ್ಕು ವರ್ಷದಿಂದ ಕೇಳಿಬರುತ್ತಿದೆ. ರೇಲ್ವೆ ಬಜೆಟ್‌ನಲ್ಲೂ ಇದಕ್ಕೆ ನೂರು ಕೋಟಿ ಮೊತ್ತ ಕಾದಿರಿಸಿದ್ದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ನಿಲ್ದಾಣ ಸಂಪರ್ಕಿಸುವಲ್ಲಿ ಕನಿಷ್ಠ ಒಂದು ಕಿ.ಮೀ. ಹಳಿಯನ್ನು ಜೋಡಿಹಳಿಗೆ ಪರಿವರ್ತಿಸಲು ರೈಲ್ವೆ ಇಲಾಖೆ ಮುಂದಾಗದಿರುವ ಕಾರಣ ನಿಗೂಢ.
ಕೊಂಕಣ ಮಾರ್ಗದಲ್ಲಿ ಸಂಚರಿಸುವ ಮುಂಬೈ ಸಿಎಸ್‌ಟಿ ಎಕ್ಸ್‌ಪ್ರೆಸ್, ಬೆಂಗಳೂರು ಹಗಲು ರೈಲು ಸಿಗ್ನಲ್ ಕಾರಣಕ್ಕೆ ಸೆಂಟ್ರಲ್ ಪ್ರವೇಶಿಸುತ್ತಿಲ್ಲ. ಇನ್ನು ಶ್ರವಣಬೆಳಗೊಳ ಮಾರ್ಗ ಪೂರ್ತಿಯಾಗಿ ಇನ್ನಷ್ಟು ರೈಲು ಸಂಚಾರ ಪ್ರಾರಂಭವಾದರೆ ಮತ್ತಷ್ಟು ರೈಲು ಸಿಗ್ನಲ್‌ಗೆ ಇನ್ನೆಷ್ಟು ಹೊತ್ತು ಕಾಯಬೇಕೋ? ಇಷ್ಟೆಲ್ಲ ತೊಂದರೆ ಎದುರಾಗಿರುವುದು ಕೇವಲ ಒಂದು ಕಿ.ಮೀ. ಜೋಡಿಹಳಿಗಾಗಿ!

600 ಪ್ರಯಾಣಿಕರಿಗೆ ಪೈಲಟ್ ಜೀವದಾನ!
ಬೆಳಗಾವಿ:
ಮೀರಜ್‌ನಿಂದ ಬೆಳಗಾವಿ ಕಡೆಗೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಬರುತ್ತಿದ್ದುದನ್ನ್ನು ಗಮನಿಸಿದ ಲೊಕೊ ಪೈಲಟ್ ತಕ್ಷಣ ಎಚ್ಚೆತ್ತುಕೊಂಡು ಪ್ರಯಾಣಿಕರನ್ನು ಕೆಳಗಿಳಿಸಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಪಾಶ್ಚಾಪುರ ರೈಲು ನಿಲ್ದಾಣದ ಬಳಿ ಸಂಭವಿಸಿದೆ.
ರೈಲಿನಲ್ಲಿ 600ಕ್ಕೂ ಅಧಿಕ ಪ್ರಯಾಣಿಕರಿದ್ದರು. 51461 ಸಂಖ್ಯೆಯ ರೈಲು ಮೀರಜ್‌ನಿಂದ ಬೆಳಗಾವಿ ಕಡೆಗೆ ಬರುತ್ತಿತ್ತು. ಪಾಶ್ಚಾಪುರ ರೈಲು ನಿಲ್ದಾಣ ಸಮೀಪ ಆಗಮಿಸಿದ ಸಂದರ್ಭದಲ್ಲಿ ಲೊಕೊ ಪೈಲಟ್ ಬ್ರೇಕ್ ಹಾಕಿದಾಗ ಬ್ರೇಕ್‌ಲೈನರ್ ಸ್ಥಗಿತಕೊಂಡು ಬೆಂಕಿ ಹೊತ್ತಿ ದಟ್ಟವಾದ ಹೊಗೆ ಕಾಣಿಸಿಕೊಳ್ಳಲಾರಂಭಿಸಿತು. ಎಚ್ಚೆತ್ತ ಚಾಲಕ ಪ್ರಯಾಣಕರನ್ನು ಕೆಳಗೆ ಇಳಿಸಿದ್ದಾನೆ.

ಮಂಗಳೂರು ಜಂಕ್ಷನ್-ಸೆಂಟ್ರಲ್ ಮಧ್ಯೆ ಒಂದು ಕಿ.ಮೀ. ರೈಲು ಹಳಿ ಪರಿವರ್ತನೆಯಾಗಿಲ್ಲ. ಇದರಿಂದ ಸೆಂಟ್ರಲ್ ಪ್ರವೇಶಿಸಲು ಸಿಗ್ನಲ್‌ಗೆ ರೈಲು ಕಾಯಬೇಕಾದ ಪರಿಸ್ಥಿತಿ. ಉಳ್ಳಾಲ ನೇತ್ರಾವತಿ ಸೇತುವೆಯಿಂದ-ಸೆಂಟ್ರಲ್‌ವರೆಗೆ ಜೋಡಿ ಹಳಿ ಮಾಡಿಲ್ಲ. ಇದನ್ನು ಮಾಡುವ ಇಚ್ಛಾಶಕ್ತಿ ರೇಲ್ವೆ ಇಲಾಖೆಗೆ ಇಲ್ಲ.
-ದಿನೇಶ್ ಭಟ್ ಪುತ್ತೂರು, ರೈಲ್ವೆ ಸಂಘಟನೆಗಳ ಸಲಹೆಗಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement