ನರೇಗಾ ಅನುದಾನ ಬಳಕೆ ಯಾವಾಗ?
2008-09ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಬೆಳಗಾವಿ ಜಿಲ್ಲೆ ಈ ಬಾರಿ 10ನೇ ಸ್ಥಾನಕ್ಕೆ ಕುಸಿದಿದೆ.
2540 ಕೋಟಿ
2091 ಕೋಟಿ
2008-09ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಬೆಳಗಾವಿ ಜಿಲ್ಲೆ ಈ ಬಾರಿ 10ನೇ ಸ್ಥಾನಕ್ಕೆ ಕುಸಿದಿದೆ. 2013-14 ನೇ ಸಾಲಿನಲ್ಲಿ ಮಳೆ ಅಭಾವದಿಂದಾಗಿ ರಾಜ್ಯ ಸರ್ಕಾರ ಜಿಲ್ಲೆಯ 9 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದ ಘೋಷಿಸಿದೆ. ಇಂತಹ ಬರ ಪರಸ್ಥಿತಿಯಲ್ಲೂ ಜಿಲ್ಲೆಯಲ್ಲಿ ನರೇಗಾ ಯೋಜನೆ ಅನುಷ್ಠಾನದಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ.
-ಸದಾನಂದ ಮಜತಿ
ಬೆಳಗಾವಿ: ರಾಜ್ಯದಲ್ಲಿ ಒಂದೆಡೆ ಬರಗಾಲ, ಮತ್ತೊಂದೆಡೆ ಗುಳೆ ಸಮಸ್ಯೆ, ಹೀಗಿದ್ದಾಗ್ಯೂ ಈ ಸಮಸ್ಯೆಯ ಪರಿಹಾರಕ್ಕಾಗಿಯೇ ಕೇಂದ್ರ ಸರ್ಕಾರ ರೂಪಿಸಿರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ವಿಫಲವಾಗಿದೆ.
2013ನೇ ಸಾಲಿಗಾಗಿ ಕೇಂದ್ರ ಸರ್ಕಾರ ಎನ್ಆರ್ಜಿಎ ಅಡಿ ರಾಜ್ಯಕ್ಕೆ ರು. 2700 ಕೋಟಿ ಅನುದಾನ ನಿಗದಿಪಡಿಸಿತ್ತು. ಆದರೆ, ರಾಜ್ಯ ಸರ್ಕಾರ ಕೇವಲ 2091 ಕೋಟಿ ಮಾತ್ರ ಬಳಕೆ ಮಾಡಿಕೊಂಡಿದೆ. 2008-09 ಅವಧಿಯಲ್ಲಿ ಮಳೆ ಬೆಳೆ ಉತ್ತಮ ಸ್ಥಿತಿಯಲ್ಲಿದ್ದಾಗ ರಾಜ್ಯ ರು. 2500 ಕೋಟಿಗೂ ಹೆಚ್ಚು ಅನುದಾನ ಬಳಸಿಕೊಳ್ಳುವ ಮೂಲಕ ಕೇಂದ್ರದಿಂದ ಶಹಬ್ಬಾಶ್ಗಿರಿ ಪಡೆದಿತ್ತು. ಆದರೆ, ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗದೇ ರಾಜ್ಯದ ಸುಮಾರು 20 ಜಿಲ್ಲೆಗಳ 84 ತಾಲೂಕುಗಳು ಬರಕ್ಕೆ ತುತ್ತಾದವು. ಮಾಡಲು ಕೆಲಸವಿಲ್ಲದೇ ಈ ಜಿಲ್ಲೆಗಳ ಜನ ಕೆಲಸ ಅರಸಿ ನೆರೆ ರಾಜ್ಯಗಳಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾದರೂ ಕುಟುಂಬವೊಂದಕ್ಕೆ 100 ದಿನಗಳ ಉದ್ಯೋಗ ಖಾತ್ರಿ ಒದಗಿಸುವ ನರೇಗಾ ಯೋಜನೆ ಮಾತ್ರ ಕುಂಟುತ್ತ ಸಾಗಿದೆ!
ದಾವಣಗೆರೆ ಫಸ್ಟ್, ಬೆಂಗಳೂರು ನಗರ ಲಾಸ್ಟ್: ಉದ್ಯೋಗ ಖಾತ್ರಿ ಅನುದಾನ ಬಳಕೆಯಲ್ಲಿ ಈ ಬಾರಿ ದಾವಣಗೆರೆ ಜಿಲ್ಲೆ ಗಮನಾರ್ಹ ಪ್ರಗತಿ ಸಾಧಿಸಿದೆ. ರು. 197.53 ಕೋಟಿ ಅನುದಾನ ಬಳಸಿಕೊಳ್ಳುವ ಮೂಲಕ ಅನುದಾನ ಬಳಕೆಯಲ್ಲಿ ರಾಜ್ಯಕ್ಕೆ ನಂಬರ್ ಒನ್ ಸ್ಥಾನ ಪಡೆದಿದೆ.
185.65 ಕೋಟಿ ಅನುದಾನ ಬಳಸಿಕೊಂಡಿರುವ ಚಿತ್ರದುರ್ಗ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದರೆ, ತುಮಕೂರು ಜಿಲ್ಲೆ ರು. 171.29 ಕೋಟಿ ಬಳಸಿಕೊಂಡು ಮೂರನೇ ಸ್ಥಾನದಲ್ಲಿದೆ. ರು. 144.39 ಕೋಟಿ ಅನುದಾನ ಬಳಸಿಕೊಂಡಿರುವ ಗುಲ್ಬರ್ಗ ಜಿಲ್ಲೆ ನಾಲ್ಕನೇ ಸ್ಥಾನ, ರು. 101.05 ಕೋಟಿ ಅನುದಾನ ಬಳಸಿಕೊಂಡಿರುವ ಬಿಜಾಪುರ ಐದನೇ ಸ್ಥಾನದಲ್ಲಿದೆ. 2008-09ರಲ್ಲಿ ನಂಬರ್ ಒನ್ ಸ್ಥಾನ ಪಡೆದು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಬೆಳಗಾವಿ ಜಿಲ್ಲೆ ( ರು. 89.34 ಕೋಟಿ) 10ನೇ ಸ್ಥಾನಕ್ಕೆ ಕುಸಿದಿದೆ. ಬೆಂಗಳೂರು ನಗರ ( 3.17 ಕೋಟಿ), ಉಡಪಿ ( 4.34 ಕೋಟಿ) ಕೊನೆಯ ಸಾಲಿನಲ್ಲಿವೆ.
ರಾಜ್ಯಕ್ಕೆ 7ನೇ ಸ್ಥಾನ: 2008-09 ಹಾಗೂ 2009-10ರ ಸಾಲಿನಲ್ಲಿ ಅನುದಾನ ಬಳಕೆಯಲ್ಲಿ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದ್ದ ಕರ್ನಾಟಕ ರಾಜ್ಯ ಈ ಬಾರಿ 7ನೇ ಸ್ಥಾನಕ್ಕೆ ಕುಸಿದಿದೆ. ರು. 5109 ಕೋಟಿ ಅನುದಾನ ಬಳಸಿಕೊಂಡಿರುವ ಆಂಧ್ರಪ್ರದೇಶ ಅನುದಾನ ಬಳಕೆಯಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದ್ದರೆ, ತಮಿಳುನಾಡು ರು. 3714 ಕೋಟಿ ಅನುದಾನ ಬಳಸಿಕೊಂಡು ದ್ವಿತೀಯ ಸ್ಥಾನ ಹಾಗೂ ರು. 3539 ಕೋಟಿ ಅನುದಾನ ಬಳಸಿರುವ ಪಶ್ಚಿಮ ಬಂಗಾಳ ತೃತೀಯ ಸ್ಥಾನದಲ್ಲಿದೆ.
ಉತ್ತರ ಪ್ರದೇಶ ( 3302 ಕೋಟಿ), ರಾಜಸ್ಥಾನ ( 2562 ಕೋಟಿ) ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ.
ರು. 422 ಕೋಟಿ ಬಾಕಿ: ಚುನಾವಣೆ ಮತ್ತಿತರ ಕಾರಣಗಳಿಂದಾಗಿ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಬಾರದೇ ಇರುವ ಕಾರಣದಿಂದಾಗಿ ರಾಜ್ಯದಲ್ಲಿ ರು. 422 ಕೋಟಿ ಪಾವತಿ ಮಾಡುವುದು ಬಾಕಿ ಉಳಿದಿದೆ. ಗುತ್ತಿಗೆದಾರರು, ಕುಶಲ ಕೂಲಿಕಾರರ ಕೂಲಿ, ತೆರಿಗೆ ಸೇರಿ ಸುಮಾರು ರು. 422 ಕೋಟಿ ಪಾವತಿಸಬೇಕಾಗಿದೆ.
ಜಿಲ್ಲೆಗಳು ಅನುದಾನ ಬಳಕೆ
(ಕೋಟಿ ರುಪಾಯಿಗಳಲ್ಲಿ)
ದಾವಣಗೆರೆ 197.53
ಚಿತ್ರದುರ್ಗ 185.65
ತುಮಕೂರು 171.29
ಗುಲ್ಬರ್ಗ 144.39
ಬಿಜಾಪುರ 101.05
ಯಾದಗಿರಿ 93.42
ಕೋಲಾರ 92.67
ರಾಯಚೂರು 92.31
ಬೆಳಗಾವಿ 89.34
ಬಾಗಲಕೋಟೆ 82.56
ಧಾರವಾಡ 72.94
ಹಾವೇರಿ 71.77
ಕೊಪ್ಪಳ 66.39
ಹಾಸನ 65.08
ಶಿವಮೊಗ್ಗ 61.93
ಬೀದರ 61.01
ರಾಮನಗರ 60.02
ಮಂಡ್ಯ 46.96
ಚಾಮರಾಜನಗರ 44.66
ಬಳ್ಳಾರಿ 41.23
ಗದಗ 40.23
ಬೆಂಗಳೂರು (ಗ್ರಾ) 38.59
ಚಿಕ್ಕಮಗಳೂರು 30.11
ಉತ್ತರಕನ್ನಡ 26.23
ದಕ್ಷಿಣಕನ್ನಡ 18.36
ಕೊಡಗು 14.75
ಉಡುಪಿ 4.34
ಬೆಂಗಳೂರು (ನಗರ) 3.17 ಕೋಟಿ