ಎಲ್ಲೆ ಮೀರಿದ ಆಕ್ರೋಶ
ಎಂಇಎಸ್ ಮತ್ತು ಶಿವಸೇನೆ ಪುಂಡಾಟಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ...
ಬೆಳಗಾವಿ: ಎಂಇಎಸ್ ಮತ್ತು ಶಿವಸೇನೆ ಪುಂಡಾಟಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಆಕ್ರೋಶ ಶನಿವಾರ ಕಟ್ಟೆಯೊಡೆದಿತ್ತು. ಶಿನೋಳಿಯಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡಾಂಬೆ ಶವಯಾತ್ರೆ ನಡೆಸಿ, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮರಾಠಿಗರ ಕಿಡಿಗೇಡಿತನ ಖಂಡಿಸಿ, ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ 'ಯಳ್ಳೂರ ಚಲೋ' ಕರೆ ನೀಡಿದ್ದರು. ಇದನ್ನು ಪೊಲೀಸರು ಅರ್ಧಕ್ಕೆ ತಡೆದು ವಿಫಲಗೊಳಿಸಿದರು. ಕಾರ್ಯಕರ್ತರೊಂದಿಗೆ 40 ವಾಹನಗಳಲ್ಲಿ ಯಳ್ಳೂರಿನತ್ತ ಹೊರಟಿದ್ದ ನಾರಾಯಣಗೌಡರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ವಶಕ್ಕೆ ತೆಗೆದುಕೊಂಡರು. ಬೆಳಗಾವಿಯಲ್ಲೂ ನಿಷೇಧಾಜ್ಞೆ ಉಲ್ಲಂಘಿಸಿ ಯಳ್ಳೂರಿಗೆ ತೆರಳಲು ಯತ್ನಿಸಿದ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ನಿಷೇಧಾಜ್ಞೆಯ ನಡುವೆಯೇ ಕಾರ್ಯಕರ್ತರು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಶಿವಸೇನೆ, ಎಂಇಎಸ್ ಪ್ರತಿಕೃತಿ ದಹಿಸಿ, ಶಿವಸೇನೆ ಧ್ವಜಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜಿ ಪಾಟೀಲರ ಕಚೇರಿ ಧ್ವಂಸಕ್ಕೂ ಯತ್ನಿಸಿದರು. ಮರಾಠಿಗರ ನಿಲುವು ಖಂಡಿಸಿ ಕನ್ನಡ ಹೋರಾಟಗಾರ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಜಿಲ್ಲೆಯಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ನಾಕಾ ಬಂದಿ ಮಾಡಲಾಗಿದೆ. ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ, ಹಿರೇಬಾಗೇವಾಡಿ ಸೇರಿ ಹಲವೆಡೆ ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಗುಲ್ಬರ್ಗದಲ್ಲಿ ಕಾರ್ಯಕರ್ತರು ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿರು. ಇಷ್ಟಾದರೂ ಸರ್ಕಾರ ಸುಮ್ಮನಿರುವುದನ್ನು ಖಂಡಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೀರೆ, ಬಳೆ ಕಳುಹಿಸಿದರು.
ನರೇಂದ್ರ ಮೋದಿ ಬಳಿ ಗಡಿ ವಿವಾದ
ನವದೆಹಲಿ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಈಗ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಬೆಳಗಾವಿ ವಿವಾದ ಹಾಗೂ ಯಳ್ಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಬಳಿ ನಿಯೋಗ ಕೊಂಡೊಯ್ಯುವುದಾಗಿ ಅವರು ತಿಳಿಸಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿ ಮೋದಿ ಅವರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಎಲ್ಲೆಲ್ಲೂ ಪೊಲೀಸರು
ಯಳ್ಳೂರು ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಜಿಲ್ಲೆಯಾದ್ಯಂತ 20 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಯಳ್ಳೂರಿಗೆ ತೆರಳುವ ಪ್ರತಿಯೊಬ್ಬರನ್ನೂ ವಿಚಾರಣೆ ಮಾಡಿಯೇ ಪ್ರವೇಶ ನೀಡಲಾಗುತ್ತಿದೆ.
ಹೋರಾಟ ಹತ್ತಿಕ್ಕುವ ಯತ್ನ
ಸರ್ಕಾರ ಮಾಡಬೇಕಾದ ಕೆಲಸವನ್ನು ಕರವೇ ಮಾಡುತ್ತಿದೆ. ನಮ್ಮ ಹೋರಾಟಕ್ಕೆ ಸರ್ಕಾರ ಬೆಂಬಲ ನೀಡುವುದನ್ನು ಬಿಟ್ಟು ಹತ್ತಿಕ್ಕುವ ಯತ್ನ ಮಾಡುತ್ತಿದೆ.
-ಟಿ.ಎ.ನಾರಾಯಣ ಗೌಡ
ಶಾಸಕತ್ವ ರದ್ದುಗೊಳಿಸಿ
ಎಂಇಎಸ್, ಶಿವಸೇನೆ ಪರ ಇರುವವರು ಕರ್ನಾಟಕದ ಶಾಸನ ಸಭೆಯಲ್ಲಿ ಇರಬಾರದು. ಅಂಥವರ ಸದಸ್ಯತ್ವ ರದ್ದುಗೊಳಿಸಿ ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಬೇಕು. ಅವರು ಮಹಾರಾಷ್ಟ್ರಕ್ಕೆ ತೆರಳಿದರೆ ಅಲ್ಲಿ ಭಿಕ್ಷುಕರಂತಾಗುತ್ತಾರೆ.
-ವಾಟಾಳ್ ನಾಗರಾಜ
ಯಳ್ಳೂರು ವಿವಾದ ರಾಜಕಾರಣಿಗಳ ಅಸ್ತ್ರ
ಬೆಳಗಾವಿಯ ಯಳ್ಳೂರಿನಲ್ಲಿ ನಡೆಯುತ್ತಿರುವ ವಿವಾದವನ್ನು ರಾಜಕಾರಣಿಗಳು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ ಎಂದು ಸಚಿವ ಅನಂತಕುಮಾರ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಳ್ಳೂರಿನಲ್ಲಿ ಉದ್ಭವಿಸಿರುವ ಸಮಸ್ಯೆಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಆದರೆ ಮಹಾರಾಷ್ಟ್ರದ ರಾಜಕಾರಣಿಗಳು ಈ ವಿವಾದವನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಯಳ್ಳೂರಿನಲ್ಲಿನ ನಾಮಫಲಕ ತೆಗೆಯಲು ಹೈಕೋರ್ಟ್ ನೀಡಿದ ಆದೇಶವೇ ಕಾರಣ. ಆದರೆ ಇದನ್ನು ಅರಿಯದೆ ಮರಾಠಿಗರು ವಿವಾದ ಸೃಷ್ಟಿಮಾಡುತ್ತಿದ್ದಾರೆ ಎಂದರು.