ಅಬ್ಬರ ತಗ್ಗಿದರೂ 4 ಬಲಿ ಪಡೆದ ಮಳೆ
ರಾಜ್ಯದಲ್ಲಿ ಭಾನುವಾರ ಮಳೆಯ ಅಬ್ಬರ ಕೊಂಚ ತಗ್ಗಿತ್ತು. ಆದರೆ ಹುಬ್ಬಳ್ಳಿಯಲ್ಲಿ ಒಬ್ಬರು...
ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಮಳೆಯ ಅಬ್ಬರ ಕೊಂಚ ತಗ್ಗಿತ್ತು. ಆದರೆ ಹುಬ್ಬಳ್ಳಿಯಲ್ಲಿ ಒಬ್ಬರು ಹಾಗೂ ಉಡುಪಿಯಲ್ಲಿ ಮೂವರು ಮಳೆ ಸಂಬಂಧಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾದ್ದರಿಂದ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿತ್ತು. ದ.ಕ.ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಹಲವಡೆ ಭೂಕುಸಿತ ಉಂಟಾಗಿದೆ.
ಜನರು ನಿರಾಳ: ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾದ್ದರಿಂದ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಪ್ರವಾಹ ಭೀತಿ ದೂರವಾಗಿದೆ. ದೂಧಗಂಗಾ ಮತ್ತು ಕೃಷ್ಣಾ ನದಿ ನೀರು ಕ್ರಮವಾಗಿ 3 ಮತ್ತು 2 ಅಡಿಯಷ್ಟು ತಗ್ಗಿದೆ. ಬೆಳಗಾವಿಯಲ್ಲಿ ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಪಂಚಗಂಗಾ, ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಇಳಿಕೆಯಾಗಿದೆ. ರಾಜ್ಯಾಪುರ ಬ್ಯಾರೇಜ್ ಮೂಲಕ 1,60,602 ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಆಲಮಟ್ಟಿ ಜಲಾಶಯದಿಂದ 1.58 ಲಕ್ಷ ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ನದಿ ನೀರಿನಲ್ಲಿ ಮುಳುಗಿರುವ ಎಂಟು ಸೇತುವೆಗಳ ಪೈಕಿ ಒಂದು ಸಂಚಾರಕ್ಕೆ ಮುಕ್ತವಾಗಿದೆ.
ಮಹಿಳೆ ಸಾವು: ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಗೋಡೆ ಕುಸಿದು ಜಕೀರಾ ಖಾತನಬಿ (35) ಎಂಬ ಮಹಿಳೆ ಅಸುನೀಗಿದ್ದಾರೆ. ಇಲ್ಲಿನ ಮಕಾನ್‌ದಾರ್ ಗಲ್ಲಿಯಲ್ಲಿ ಬೆಳಗ್ಗೆ 4.30ಕ್ಕೆ ಮಲಗಿದ್ದವರ ಮೇಲೆ ಗೋಡೆ ಕುಸಿದು ಈ ದುರಂತ ಸಂಭವಿಸಿದೆ.
ಮುಳುಗಡೆ: ತುಂಗಭದ್ರಾ ಜಲಾಶಯದಿಂದ 33 ಕ್ರಸ್ಟ್ ಗೇಟ್‌ಗಳ ಮೂಲಕ 1.91 ಲಕ್ಷ ಕ್ಯುಸೆಕ್ ನೀರು ನದಿಗೆ ನೀರು ಬಿಡಲಾಗಿದೆ. ಹಂಪಿಯ ಪುರಂದರದಾಸರ ಮಂಟಪ, ಇತರೆ ಕೆಲ ಮಂಟಪ, ಸ್ಮಾರಕಗಳು ಸಂಪೂರ್ಣ ಮುಳುಗಿವೆ. ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮದಲಗಟ್ಟಿ ಆಂಜನೇಯ ಸ್ವಾಮಿ ದೇವಸ್ಥಾನವೂ ಜಲಾವೃತ್ತಗೊಂಡಿದೆ. ಹಾವೇರಿ ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಮಲೆನಾಡಿನಲ್ಲಿ ಸತತ ವರ್ಷಾಧಾರೆ ಕಾರಣಕ್ಕಾಗಿ ವರದಾ ಹಾಗೂ ತುಂಗಭದ್ರಾ ನದಿಗಳ ಪ್ರವಾಹ ಏರುತ್ತಿದೆ. ಾವಿರಾರು ಎಕರೆ ಬೆಳೆ ನಾಶವಾಗಿದೆ. ಕರ್ಜಗಿ, ಹಾಲಗಿ- ಮರೋಳ, ಕೋಳೂರು, ಕಲಕೋಟಿ ಮುಂತಾದ ಸೇತುವೆ ಮುಳುಗಡೆಯಾಗಿದೆ.
ದ.ಕ.ಜಿಲ್ಲೆಯಲ್ಲಿ: ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಮತ್ತು ಘಟ್ಟದ ಮೇಲೆ ಮಳೆ ಮುಂದುವರಿದಿದೆ. ಪಂಜ ಸಮೀಪ ಭೂಕುಸಿತ ಉಂಟಾಗಿದೆ. ಹೀಗಾಗಿ ಮನೆಯೊಂದು ಅಪಾಯದ ಸ್ಥಿತಿಯಲ್ಲಿದೆ. ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ 3 ಮಂದಿ ನೀರುಪಾಲಾಗಿದ್ದಾರೆ
1.60 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಬಸವಸಾಗರ ಜಲಾಶಯದಿಂದ 1.60 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ. ಜಲಾಶಯಕ್ಕೆ 1.58 ಲಕ್ಷ ಕ್ಯುಸೆಕ್ ಒಳಹರಿವು ಇದೆ. ಹೀಗಾಗಿ 24 ಕ್ರಸ್ಟ್‌ಗೇಟ್‌ಗಳಿಂದ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ಸುರಪುರ ತಾಲೂಕಿನ ಭಗವತಿ ದೇಗುಲ ಮುಳುಗುವ ಭೀತಿ ಎದುರಿಸುತ್ತಿದೆ. ತೀರ ಪ್ರದೇಶದ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ.
ಕೋಸಿಯಲ್ಲಿ ಪ್ರವಾಹ
ಭಾರಿ ಭೂಕುಸಿತದಿಂದಾಗಿ ನೇಪಾಳದ ಭೋಟೆ ಕೋಸಿ ನದಿಯ ಹರಿವಿಗೆ ತಡೆಯಾಗಿದೆ. ಹೀಗಾಗಿ ಬಿಹಾರದಲ್ಲಿ ಹಠಾತ್ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಿಹಾರದ ಉತ್ತರದ ಜಿಲ್ಲೆಗಳಲ್ಲಿ ಪ್ರವಾಹ ಎಚ್ಚರಿಕೆ ಘೋಷಿಸಿದ್ದು, ಭಾನುವಾರದಿಂದ ಸುಮಾರು ಒಂದು ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ.