ಮೃತ್ಯುವನ್ನು ಜಯಿಸಿ ಮೇಲೆದ್ದು ಬಾ ತಿಮ್ಮಣ್ಣ
'ತಿಮ್ಮಣ್ಣ ಬದುಕಿ ಬಾ' ಇದು ಇಡೀ ರಾಜ್ಯದ ಜನರ ಒಂದು ಸಾಲಿನ ಪ್ರಾರ್ಥನೆ. ಇದರ ನಡುವೆಯೇ ಬದಾಮಿ ತಾಲೂಕಿನ ಸೂಳೀಕೇರಿ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿರುವ ತಿಮ್ಮಣ್ಣನ ರಕ್ಷಣಾ..
ಕೊಳವೆಬಾವಿಗೆ ಬಿದ್ದ ಬಾಲಕನ ರಕ್ಷಣೆಗೆ ರಾಜ್ಯಾದ್ಯಂತ ಮೊರೆ
ಮುಂದುವರಿದ ಕಾರ್ಯಾಚರಣೆ, ಅಡಿಗಡಿಗೆ ವಿಘ್ನ, ಕೇಳದಾದ ಧ್ವನಿ
ಬಾಗಲಕೋಟೆ: 'ತಿಮ್ಮಣ್ಣ ಬದುಕಿ ಬಾ'
ಇದು ಇಡೀ ರಾಜ್ಯದ ಜನರ ಒಂದು ಸಾಲಿನ ಪ್ರಾರ್ಥನೆ. ಇದರ ನಡುವೆಯೇ ಬದಾಮಿ ತಾಲೂಕಿನ ಸೂಳೀಕೇರಿ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿರುವ ತಿಮ್ಮಣ್ಣನ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ಆದರೆ, ಭಾನುವಾರ ತಡರಾತ್ರಿವರೆಗೂ ಕಾರ್ಯಾಚರಣೆಗೆ ಸ್ಪಂದಿಸುತ್ತಿದ್ದ ಬಾಲಕನ ಧ್ವನಿ ನಂತರ ಕೇಳಿಸದಾಗಿರುವುದು ಆತಂಕ ತಂದಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಯಚೂರು ಹಟ್ಟಿ ಚಿನ್ನದ ಗಣಿ ತಂಡ ಹಾಗೂ ಮಂಡ್ಯದಿಂದ ಆಗಮಿಸಿದ ರೋಬೋ ಮಂಜುನಾಥ್ ಸತತ 40 ಗಂಟೆಗಳಿಂದ ಬಾಲಕನನ್ನು ಹೊರ ತೆಗೆಯಲು ಪ್ರಯತ್ನ ನಡೆಸುತ್ತಲೇ ಇದ್ದಾರೆ. ರೋಬೋ ಮೂಲಕ ರಕ್ಷಿಸುವ ಕಾರ್ಯ ವಿಫಲವಾಗಿದ್ದು, ಕೊಳವೆ ಬಾವಿ ಪಕ್ಕದಲ್ಲಿಯೇ 160 ಅಡಿಯವರೆಗೆ ಗುಂಡಿ ತೋಡಿ ಬಾಲಕನನ್ನು ತಲುಪುವ ಕಾರ್ಯಾಚರಣೆ ನಡೆದಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕರ್ನಾಟಕ ಹಾಗೂ ಮಹರಾಷ್ಟ್ರ ಮುಖ್ಯಸ್ಥ ಬಸವರಾಜ ಹಿರೇಮಠ ಭಾನುವಾರ ರಾತ್ರಿ ಕೊಳವೆ ಬಾವಿಯೊಳಗೆ ಕ್ಯಾಮೆರಾ ಇಳಿಬಿಟ್ಟು ಬಾಲಕನ ಪರಿಸ್ಥಿತಿ ಅವಲೋಕಿಸಿದರು. ನಂತರ ಕ್ಯಾಮೆರಾ ಸಹಾಯದಿಂದಲೇ ಹಗ್ಗ ಇಳಿಬಿಟ್ಟು ಬಾಲಕನ ಕೈ ಲಾಕ್ ಮಾಡಿದರು. ಒಂದು ಕೈಗೆ ಹಗ್ಗ ಕಟ್ಟಿದ್ದರಿಂದ ಬಾಲಕ ಇನಷ್ಟು ಆಳಕ್ಕೆ ಜಾರಿ ಹೋಗಲು ಸಾಧ್ಯವಾಗಿಲ್ಲ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬಾಲಕನ ಕೈ ಲಾಕ್ ಮಾಡುವ ಪ್ರಕ್ರಿಯೆ ಮುಗಿದ ನಂತರ ಕಾರ್ಯಾಚರಣೆ ಬೇರಾವುದೇ ರೀತಿಯ ಯಶಸ್ಸು ಕಂಡಿಲ್ಲ. ಕೇವಲ ಕ್ಯಾಮೆರಾ ಮಾತ್ರ ಚಿತ್ರಗಳ ರವಾನೆ ಮಾಡುತ್ತಿದೆ.
ಹಲವು ಅಡೆತಡೆ
ರಕ್ಷಣಾ ಕಾರ್ಯಾಚರಣೆಗೆ ಹಲವು ಅಡೆತಡೆಗಳು ಎದುರಾಗಿವೆ. ಮಂಡ್ಯದಿಂದ ಆಗಮಿಸಿದ ರೋಬೋ ಮಂಜೇಗೌಡ 145 ಅಡಿ ಆಳದವರೆಗೆ ರೋಬೋ ಇಳಿಬಿಟ್ಟರು. ಅಲ್ಲಿ ಚೂಪಾದ ಕಲ್ಲುಗಳು ಅಡ್ಡ ಬಂದಿರುವುದರಿಂದ ರೋಬೋವನು ಮೇಲೆತ್ತಲಾಯಿತು. ಏತನ್ಮಧ್ಯೆ ಹೊರ ಭಾಗದಲ್ಲಿ ಆಳವಾಗಿ ಗುಂಡಿ ತೋಡುವ ಕಾರ್ಯ ಶುರುವಾದ್ದರಿಂದ ಭೂಮಿ ಕಂಪಿಸಿ ಬಾಲಕನ ಮೇಲೆ ಮಣ್ಣು ಬಿದ್ದಿದೆ. ಇದೂ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ರೋಬೋ ಕೆಳಗೆ ಬಿಡುವುದು, ನಂತರ ಮೇಲೆತ್ತುವುದು ನಡೆದೇ ಇದೆ.
ಪೂಜೆ, ಪ್ರಾರ್ಥನೆ
ಬಾಲಕ ಸುರಕ್ಷಿತವಾಗಿ ಮೇಲೆ ಬರುವಂತೆ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನಾ ಮಂದಿರಗಳಲ್ಲಿ ಪ್ರಾರ್ಥನೆ ನಡೆದಿವೆ. ತಿಮ್ಮಣ್ಣನ ಶಾಲೆಯಲ್ಲಿ ವಿದ್ಯಾರ್ಥಿಗಳು ಮೇಣದ ದೀಪ ಹಚ್ಚಿ ಸಹಪಾಠಿ ಬದುಕಿ ಬರಲೆಂದು ಪ್ರಾರ್ಥಿಸಿದರು.
ಕ್ರಿಮಿನಲ್ ಮೊಕದ್ದಮೆ
ಕೊಳವೆ ಬಾವಿ ಕೊರೆದು ಮುಚ್ಚದೆ ನಿರ್ಲಕ್ಷಿಸಿದ ಏಜೆನ್ಸಿದಾರ, ಮೇಲ್ವಿಚಾರಣೆಯಲ್ಲಿ ಲೋಪವೆಸಗಿದ ಗ್ರಾಮ ಪಂಚಾಯಿತಿ ಪಿಡಿಓ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
-ಭಾಸ್ಕರರಾವ್, ಉತ್ತರ ವಲಯ ಐಜಿಪಿ
ಅಕ್ಷತಾ ತೆರೆದ ಬೋರ್ವೆಲ್ಗೆ ಬಿದ್ದಿದ್ದಾಗಲೇ (ಜೂನ್ 21) ರಾಜ್ಯಾದ್ಯಂತ ಇರುವ ಮೃತ್ಯಕೂಪಗಳ ಬಗ್ಗೆ ಪತ್ರಿಕೆ ಗಮನ ಸೆಳೆದಿತ್ತು. ಹೀಗಿದ್ದೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲದ್ದರ ಪರಿಣಾಮ ತಿಮ್ಮಣ್ಣನ ಸ್ವರೂಪದಲ್ಲಿ ಘಟನೆ ಮರುಕಳಿಸುವಂತಾಗಿದೆ.
3 ದಿನಗಳ ಕಾರ್ಯಾಚರಣೆ
ಮಗುವನ್ನು ತಲುಪಲು ಕನಿಷ್ಠ ಮೂರು ದಿನಗಳ ಕಾರ್ಯಾಚರಣೆ ನಡೆಸಬೇಕಾಗಬಹುದು ಎಂದಿದ್ದಾರೆ. ಹಟ್ಟಿ ಚಿನ್ನದ ಗಣಿಯ ಸುರಂಗ ತಜ್ಞ ಕೆ.ಮಡಿಯಲಗಳ. ಮಗು 150 ಅಡಿ ಆಳದಲ್ಲಿದ್ದು, ಅದರ ನಾಲ್ಕು ಪಟ್ಟು ಉದ್ದ ಸಾಗಿ ಅಂದರೆ 600 ಅಡಿ ಉದ್ದ ಸಾಗಿ ತರುವಾಯ ಎಲ್ ಆಕಾರದಲ್ಲಿ ಸುರಂಗ ತೋಡಬೇಕು. ಇದಕ್ಕೆ ಏನಿಲ್ಲವೆಂದರೂ ಮೂರು ದಿನ ಬೇಕು ಎನ್ನುತ್ತಾರೆ ಅವರು.
ಪರಿಹಾರವೇನು?
ಬಾವಿ ಮುಚ್ಚುವುದಕ್ಕೆ ಸರ್ಕಾರ ಸುಲಭ ಮಾರ್ಗ ಸೂಚಿಸಬೇಕು.
ಖಾಸಗಿ ಬೋರ್ಗಳ ಬಗ್ಗೆ ಸ್ಥಳೀಯ ಆಡಳಿತಗಳು ಹೆಚ್ಚು ನಿಗಾ ವಹಿಸಬೇಕು.
ಬೋರ್ಗೆ ಬ್ಯಾಂಕ್ಗಳು ಸಾಲ ಮಂಜೂರು ಮಾಡುವಾಗ ವಿಫಲವಾದರೆ ಬಾವಿ ಮುಚ್ಚಿ ಪ್ರಮಾಣಪತ್ರ ಸಲ್ಲಿಸುವಂತೆ ಷರತ್ತು ವಿಧಿಸಬೇಕು.
ಬಾವಿ ಮುಚ್ಚಿಸುವ ಬಗ್ಗೆ ಗ್ರಾಮಲೆಕ್ಕಿಗರು, ಶ್ಯಾನುಭೋಗರಿಗೆ ಕಠಿಣ ನಿಮಯ ಜಾರಿಗೊಳಿಸಬೇಕು.
ಆರಿವು ಕಾರ್ಯಕ್ರಮ ಸರ್ಕಾರ ಮತ್ತು ಮಾಧ್ಯಮಗಳ ಸಹಯೋಗದಲ್ಲಿ ಸ್ಥಳೀಯವಾಗಿ ನಡೆಯಬೇಕು.
ಈ ಬಗ್ಗೆ ಸರ್ಕಾರ ಒಂದು ಅಭಿಯಾನವನ್ನೇ ನಡೆಸಿ ಕಾಲಮಿತಿಯಲ್ಲಿ ಬಾವಿಗಳನ್ನು ಮುಚ್ಚಿಸಬೇಕು.
ಬಾವಿ ಕೊರೆಯುವ ಸಂಸ್ಥೆಗಳು ನಿಯಮದ ಪ್ರಕಾರ ಮಾಹಿತಿ ನೀಡದಿದ್ದರೆ ಶಿಕ್ಷೆ ವಿಧಿಸಬೇಕು. ಬೋರ್ ಲಾರಿಗಳಿಗೆ ಜಿಪಿಎಸ್ ಅಳವಡಿಸಿ, ನಿಯಂತ್ರಿಸಬೇಕು.
ಹೊಸ ಸುತ್ತೋಲೆ
ಬೆಂಗಳೂರು: ತೆರೆದ ಕೊಳವೆಬಾವಿಗಳ ಕುರಿತು ಸರ್ಕಾರ ಎಚ್ಚೆತ್ತುಕೊಳ್ಳಲು ಮತ್ತೊಂದು ಮಗು ಬೀಳಬೇಕಾಯಿತು. ಕೊನೆಗೂ ರಾಜ್ಯದಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕೊಳವೆಬಾವಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಹಿಂದಿನ ಸುತ್ತೋಲೆ, ಆದೇಶದ ಪಾಲನೆ ಆಗದಿದ್ದರೂ ಮತ್ತಷ್ಟು ಅಂಶಗಳ ಹೊಸ ಸುತ್ತೋಲೆ ಹೊರಡಿಸಲು ಸಜ್ಜಾಗಿದೆ. ಈಸಂಬಂಧ ಸರ್ಕಾರ ಜೂ.20ರಂದು ಸುತ್ತೋಲೆ ಹೊರಡಿಸಿತ್ತು. ಇದರ ಜತೆಗೆ, ಇನ್ನಷ್ಟು ಸದೃಢ ಹೆಜ್ಜೆ ಇರಿಸುವ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಅಂಶಗಳನ್ನೂ ಸೇರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 21 ಅಂಶಗಳ ಮಾರ್ಗಸೂಚಿಯನ್ನು ಒಂದೆರಡು ದಿನದಲ್ಲಿ ಹೊರಡಿಸಲಿದೆ.
ಮಾರ್ಗಸೂಚಿಯಲ್ಲೇನಿದೆ?
-ತೆರೆದ ಕೊಳವೆಬಾವಿಗಳನ್ನು ನಿಗದಿತ ಸಮಯದಲ್ಲಿ ಮುಚ್ಚಲು ಕ್ರಮ ಕೈಗೊಳ್ಳದಿದ್ದರೆ ಆಯಾ ಪ್ರದೇಶಕ್ಕೆ ಸಂಬಂಧಪಟ್ಟ ಪಿಡಿಒ, ಎಇಇ, ಉಪ ತಹಸೀಲ್ದಾರ್ ಮೇಲೆ ಕ್ರಮ
-15-20 ದಿನದಲ್ಲಿ ತಮ್ಮ ವ್ಯಾಪ್ತಿಯ ಎಲ್ಲ ಕೊಳವೆಬಾವಿಗಳ ಸರ್ವೆ ಕಮುಗಿಸಿ ಆ ಬಗ್ಗೆ ವರದಿ ನೀಡುವ ಜವಾಬ್ದಾರಿ ಈ ಅಧಿಕಾರಿಗಳಿಗೆ.
-ಈ ಹಿಂದೆ ಹೊರಡಿಸಿದ್ದ ಸುತ್ತೋಲೆ ಪ್ರಕಾರ ಎಲ್ಲ ಕೊಳವೆಬಾವಿಗಳ ಸಮೀಕ್ಷೆ ನಡೆಸಿ ಪ್ರತಿ ತಿಂಗಳ 30ರೊಳಗೆ ಇಲಾಖೆಗೆ ಇಮೇಲ್ ಕಳುಹಿಸಬೇಕು. ಹೊಸ ಅಂಶದಂತೆ ಈ ಸಂಬಂಧ ಅಧಿಕಾರಿಗಳೇ ಹೊಣೆ
-ಸರ್ಕಾರಿ ಕೊಳವೆಬಾವಿಗಳು ವಿಫಲವಾದರೆ ಅವುಗಳನ್ನು ಮುಚ್ಚಿದ ಛಾಯಾಚಿತ್ರ ಒದಗಿಸಿದ ನಂತರವಷ್ಟೇ ಬಿಲ್ ಪಾವತಿ.
-ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ, ಸಿಇಒ, ಎಸ್ಪಿ, ಡಿಎಸ್ಒ, ಇಇ, ತಹಸೀಲ್ದಾರ್, ಇಒ ಇದರ ಸದಸ್ಯರು.
-ತೆರೆದ ಬೊರ್ಗಳ ಮುಚ್ಚುವ ಕಾರ್ಯ ಈ ಸಮಿತಿ ಕೈಗೊಳ್ಳಬೇಕು.
-ಸರ್ವೆ ಕಾರ್ಯದ ನಂತರ, ತೆರೆದ ಕೊಳವೆಬಾವಿಗಳನ್ನು ಮುಚ್ಚುವ ಕಾರ್ಯದ ನಿರ್ವಹಣೆಯ ಮೇಲ್ವಿಚಾರಣೆ ನಡೆಸಬೇಕು.
-ಕೊಳವೆ ಬಾವಿಯನ್ನು ಕೊರೆಯಲು ಸಂಬಂಧಪಟ್ಟ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಯಿಂದ ಅನುಮತಿ ಕಡ್ಡಾಯ.
-ಗ್ರಾಮ ಮಟ್ಟದಲ್ಲಿ ಕೊಳವೆಬಾವಿ ಕೊರೆಯಲು ಮುಚ್ಚಳಿಕೆ ಪತ್ರವನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು.
-ಒಂದು ವೇಳೆ ಕೊಳವೆಬಾವಿ ವಿಫಲವಾದರೆ ಅದನ್ನು 48 ಗಂಟೆಗಳಲ್ಲಿ ಮುಚ್ಚಿಸುವುದಾಗಿ ಈ ಮುಚ್ಚಳಿಕೆಯಲ್ಲಿ ತಿಳಿಸಬೇಕು.
-ನೀರು ಬಂದರೆ ಕೊಳವೆಬಾವಿಗೆ ಸೂಕ್ತ ಕ್ಯಾಪ್ ಅಥವಾ ಸುತ್ತಲೂ ಫೆನ್ಸಿಂಗ್ ಅಳವಡಿಸುವುದಾಗಿ ಅರ್ಜಿದಾರರು ದೃಢೀಕರಿಸಬೇಕು.
-ನಿರಾಕ್ಷೇಪಣಾ ಪತ್ರ (ಎನ್ಒಸಿ) ದೊರೆತ ನಂತರವಷ್ಟೇ ಕೊಳವೆಬಾವಿ ಕೊರೆಯಬಹುದು.
ಖಾಸಗಿ ಜಮೀನಿನಲ್ಲಿ ವಿಫಲಕೊಳವೆಬಾವಿ ಮುಚ್ಚದವರಿಗೆ ಮೊದಲ ಹಂತದಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಡಿಸಿಗಳಿಗೆ ಸೂಚನೆ ನೀಡಿದ್ದೇನೆ. ಇಷ್ಟಾದರೂ ಮುಚ್ಚದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಈ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕ ಜವಾಬ್ದಾರಿಯೂ ಅಷ್ಟೇ ಮುಖ್ಯ.
-ಸಿದ್ದರಾಮಯ್ಯ, ಮುಖ್ಯಮಂತ್ರಿ