ಸಹ್ಯಾದ್ರಿ ಪ್ರಾಧಿಕಾರದ ಹಣದಲ್ಲಿ ಕಾವಾ ಕಟ್ಟಡ
ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಐತಿಹಾಸಿಕ, ಪಾರಂಪರಿಕ, ಜಾನಪದೀಯ ಮೌಲ್ಯಗಳನ್ನು ಉಳಿಸಿ, ಬೆಳಸಲು ಖರ್ಚಾಗಬೇಕಿದ್ದ ಹಣ..
-ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಐತಿಹಾಸಿಕ, ಪಾರಂಪರಿಕ, ಜಾನಪದೀಯ ಮೌಲ್ಯಗಳನ್ನು ಉಳಿಸಿ, ಬೆಳಸಲು ಖರ್ಚಾಗಬೇಕಿದ್ದ ಹಣ ಹಣಕಾಸು ಇಲಾಖೆ ಎಡವಟ್ಟಿನಿಂದಾಗಿ ಮೈಸೂರಿನಲ್ಲಿ ಕಟ್ಟಡ ಕಟ್ಟುವುದಕ್ಕೆ ಬಳಕೆಯಾಗಿದೆ!
ತಮಾಷೆ ನೋಡಿ. ಪ್ರಾಧಿಕಾರದ ವ್ಯಾಪ್ತಿ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳು ಮಾತ್ರ. ಮಾತ್ರವಲ್ಲ, ಪ್ರಾಧಿಕಾರ ರಚನೆಯಾಗುವುದಕ್ಕೆ ಮುಂಚೆಯೇ ಹಣ ಬಿಡುಗಡೆಯಾಗಿ ಬಳಕೆಯೂ ಆಗಿದೆ. 'ಕನ್ನಡಪ್ರಭ'ಕ್ಕೆ ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿದೆ.
ಏನಾಗಿದೆ?
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತ್ರಿವಳಿ ಜಿಲ್ಲೆಗಳ ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳ ಅಭಿವೃದ್ಧಿಗೆಂದು ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರವನ್ನು ಬಜೆಟ್‌ನಲ್ಲಿ ಘೋಷಿಸಿದರು. ಇದಕ್ಕೂ ಮುನ್ನ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಅವರು ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರವಾಸ ನಡೆಸಿ, ತಜ್ಞರೊಂದಿಗೆ ಸಮಾಲೋಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ನಂತರ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಪ್ರಾಧಿಕಾರ ರಚನೆ ನನೆಗುದಿಗೆ ಬಿದ್ದಿತ್ತು. ವಾಸ್ತವವಾಗಿ ಬಜೆಟ್‌ನಲ್ಲಿ ಮೀಸಲಾಗಿಟ್ಟಿದ್ದ 20 ಕೋಟಿ ರು.ಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಬಿಡುಗಡೆ ಮಾಡಬೇಕಿತ್ತು. ಆದರೆ ಹೆಸರಿನಲ್ಲೇ ಪರಂಪರೆ ಎಂದಿದ್ದ ಕಾರಣ ಹಣಕಾಸು ಇಲಾಖೆಯು ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ 10 ಕೋಟಿ ರು. ಅನುದಾನ ಬಿಡುಗಡೆ ಮಾಡಿತು. 2013ರಲ್ಲಿ ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜು (ಕಾವಾ) ನೂತನ ಕಟ್ಟಡ ನಿರ್ಮಾಣಕ್ಕೆ ಇದರಲ್ಲಿನ 1 ಕೋಟಿ ರು. ವ್ಯಯ ಆಗಿದೆ. ಇಷ್ಟೆಲ್ಲಾ ಆದ ಮೇಲೆ ಸರ್ಕಾರವು ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಜೆ. ಅನುರಾಧ ಅವರನ್ನು ನೇಮಕ ಮಾಡಿದೆ.
ಯಾವಾಗ ಏನಾಯ್ತು?
2010ರ ಮಾ.5ರಂದು ಯಡಿಯೂರಪ್ಪ ಬಜೆಟ್‌ನಲ್ಲಿ ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ ಘೋಷಿಸಿ 20 ಕೋಟಿ ರು. ಅನುದಾನ ಮೀಸಲಿಟ್ಟರು.
2011ರ ಏ.4ರಂದು 10 ಕೋಟಿ ರು. ಅನುದಾನವನ್ನು ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಹಣಕಾಸು ಇಲಾಖೆ ಬಿಡುಗಡೆ ಮಾಡಿತು.
2011ರ ಡಿಸೆಂಬರ್‌ನಲ್ಲಿ ಪ್ರಾಧಿಕಾರ ನಿಯಮಾವಳಿ ಕರಡು ಸಿದ್ಧವಾಯಿತು.
2012ರಲ್ಲಿ ವಿಧಾನ ಮಂಡಲ ಈ ಕರಡು ಮಸೂದೆಗೆ ಒಪ್ಪಿಗೆ ನೀಡಿತು.
2013ರಲ್ಲಿ 1 ಕೋಟಿ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜು ಕಟ್ಟಡಕ್ಕೆ ವೆಚ್ಚ.
2014ರ ಆ.3ರಂದು ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಜೆ. ಅನುರಾಧ ನೇಮಕವಾದರು.
ಪ್ರಾಧಿಕಾರಕ್ಕೆಂದು ಮೀಸಲಿಟ್ಟ ಹಣ ಅದೇ ಉದ್ದೇಶಕ್ಕೆ ಬಳಕೆಯಾಗಬೇಕು. ಉಳಿದ ಹಣವಾದರೂ ನಿಗದಿತ ಉದ್ದೇಶಕ್ಕೆ ಬಳಕೆಯಾಗಲಿ. ಸರ್ಕಾರ ಕೂಡಲೇ ಪ್ರಾಧಿಕಾರ ಸಮಿತಿಯನ್ನು ರಚಿಸಬೇಕು.
-ಜಯದೇವಪ್ಪ ಜೈನಕೇರಿ, ಇತಿಹಾಸ ತಜ್ಞ