ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮತ್ತೆ ಶಿವಸೇನೆಯ ಉದ್ಧಟತನ; ಕನ್ನಡ ಬಾವುಟಕ್ಕೆ ಬೆಂಕಿ; ಬೆಳಗಾವಿ ಉದ್ವಿಗ್ನ

ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಶಿವಸೇನೆ ಮತ್ತೆ ಉದ್ಧಟತನ ಪ್ರದರ್ಶಿಸಿವೆ. ಕನ್ನಡಾಂಬೆಯ ಅಣಕು ಶವಯಾತ್ರೆ ನಡೆಸಿ, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದರಿಂದ ಬೆಳಗಾವಿ ಮತ್ತೆ ಉದ್ವಿಗ್ನಗೊಂಡಿದೆ.

Srinivasa Murthy VN
Updated On : 2 Aug 2014, 11:23 am

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಶಿವಸೇನೆ ಮತ್ತೆ ಉದ್ಧಟತನ ಪ್ರದರ್ಶಿಸಿವೆ. ಕನ್ನಡಾಂಬೆಯ ಅಣಕು ಶವಯಾತ್ರೆ ನಡೆಸಿ, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದರಿಂದ ಬೆಳಗಾವಿ ಮತ್ತೆ ಉದ್ವಿಗ್ನಗೊಂಡಿದೆ. ಬೆಳಗಾವಿಯಿಂದ 10 ಕಿ.ಮೀ. ಅಂತರವಿರುವ ಮಹಾರಾಷ್ಟ್ರದ ಗಡಿಗ್ರಾಮ ಶಿನೋಳಿಯಲ್ಲಿ ಶುಕ್ರವಾರ ಈ ಕಿಡಿಗೇಡಿ ನಡೆದಿದೆ. ಏತನ್ಮಧ್ಯೆ ಯಳ್ಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದ, ಕನ್ನಡ ಚಳವಳಿಗಾರರಾದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು, ಕುಮಾರ ಮುಂತಾದವರನ್ನು ಬಂಧಿಸಲಾಗಿದೆ.

ಶಿವಸೇನೆ ಅಟ್ಟಹಾಸ: ಯಳ್ಳೂರಿನ 'ಮಹಾರಾಷ್ಟ್ರ ರಾಜ್ಯ' ನಾಮಫಲಕ ತೆರವುಗೊಳಿಸಿರುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ಪ್ರತಿಯಾಗಿ ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಕೊನೆ ಹಳ್ಳಿ ಶಿನೋಳಿಯಲ್ಲಿ ಬೃಹತ್  ಮೆರವಣಿಗೆ ನಡೆಸಿತು. ಯಳ್ಳೂರು ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಆ. 10ರವರೆಗೆ ನಿಷೇಧಾಜ್ಞೆ ಇರುವುದರಿಂದ ಕರ್ನಾಟಕ ಸರ್ಕಾರದ ವಿರುದ್ಧ ಶಿನೋಳಿಯಲ್ಲಿ ಶಿವಸೇನೆ ಈ ಕ್ರಮಕ್ಕೆ ಮುಂದಾಗಿದೆ.

ಶಿವಸೇನೆ ಸಭೆ: ಶಿನೋಳಿಯ ಹೋಟೆಲೊಂದರಲ್ಲಿ ಶಿವಸೇನೆಯ ಶಾಸಕ ದಿವಾಕರ ರಾವಳ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ನಂತರ ಬೆಳಗಾವಿಗೂ ಆಗಮಿಸಿದ ಇವರು ಸಭೆ ನಡೆಸಲು ಮುಂದಾಗಿದರು. ಆದರೆ ಪೊಲೀಸರು ಅವಕಾಶ ನೀಡದೇ ಐವರು ಶಿವಸೇನೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಶಾಸಕ ರಾವಳಗೆ ಎಚ್ಚರಿಕೆ ನೀಡಿ ವಾಪಸು ಕಳುಹಿಸಿದ್ದಾರೆ.

ಐಜಿಪಿ ಸ್ಪಷ್ಟನೆ: ಶಿವಸೇನೆ ಕಾರ್ಯಕರ್ತರು ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಾಂಬೆ ಅಣಕುಶವಯಾತ್ರೆ ನಡೆಸಿ, ಬೆಂಕಿ ಹಚ್ಚಿಲ್ಲ. ಇದು ಮಹಾರಾಷ್ಟ್ರದಲ್ಲಾದ ಘಟನೆ ಎಂದು ಉತ್ತರ ವಲಯ ಐಜಿಪಿ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟಪಡಿಸಿದ್ದಾರೆ.

ವಾಟಾಳ್ ಬಂಧನ, ಬಿಡುಗಡೆ

ಇದೇ ವೇಳೆ, ಯಳ್ಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದ, ಕನ್ನಡ ಚಳವಳಿಗಾರರಾದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು, ಕುಮಾರ ಮುಂತಾದವರನ್ನು ಬಂಧಿಸಲಾಗಿದೆ. ಶುಕ್ರವಾರ ಮುಂಜಾನೆ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸುತ್ತಿದ್ದಂತೆ ಅವರನ್ನು ಬಂಧಿಸಿ, ಧಾರವಾಡದಲ್ಲಿ ಬಿಡುಗಡೆ ಮಾಡಲಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಜಾಥಾ ತಡೆಯಲಾಗಿದೆ.

ಪೊಲೀಸ್ ವಾಹನ ಪಲ್ಟಿ
ಶಿವಸೇನೆ ಕಾರ್ಯಕರ್ತರು ಬೆಳಗಾವಿಯಲ್ಲಿ ಸಂಚರಿಸುತ್ತಿರುವ ಮಾಹಿತಿ ಪಡೆದ ಪೊಲೀಸರು ಅವರ ವಾಹನ ಹಿಂಬಾಲಿಸಿದ್ದರು. ಈ ವೇಳೆ ಶಿವಸೇನೆ ಶಾಸಕರ ವಾಹನವನ್ನು ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಹಿಂದೆಯೇ ಬರುತ್ತಿದ್ದ ಪೊಲೀಸರ ವಾಹನ ನಿಯಂತ್ರಣ ತಪ್ಪಿ ಚರಂಡಿಯಲ್ಲಿ ಬಿದ್ದಿದ್ದೆ. ಮೂವರು ಸಿಬ್ಬಂದಿಗೆ ಸಣ್ಣ ಗಾಯಗಳಾಗಿದ್ದು, ಪ್ರಾಣಾಪಾಯವಾಗಿಲ್ಲ.

ಕನ್ನಡ ಶಾಲೆ ಮುಚ್ಚಿಟದ ಮಹಾ ಸರ್ಕಾರಕ್ಕೆ ಸುಪ್ರೀಂ ನೋಟಿಸ್
-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಕನ್ನಡ ಭಾಷಿಗರು ಶೇ.70ಕ್ಕಿಂತಲೂ ಹೆಚ್ಚಿರುವ ಪ್ರದೇಶದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿ ಮರಾಠಿ ಶಾಲೆ ತೆರೆಯುತ್ತಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಆರ್. ಎಂ. ಲೋಧ ನ್ಯಾಯಪೀಠ, ಈ ಬಗ್ಗೆ 6 ವಾರಗಳಲ್ಲಿ ಉತ್ತರಿಸುವಂತೆ ಮಹಾರಾಷ್ಟ್ರಕ್ಕೆ ಸೂಚಿಸಿದೆ.
ಗಡಿ ವಿವಾದದ ವಿಚಾರಣೆ ನಡೆಯುತ್ತಿರುವುದರಿಂದ ಮಧ್ಯಂತರ ಅರ್ಜಿವಾಪಸ್ ಪಡೆಯಬೇಕೆಂಬ ಮನವಿಯನ್ನು ಕರ್ನಾಟಕ ವಕೀಲರು ಪುರಸ್ಕರಿಸಲಿಲ್ಲ.  ಶೇ.70ಕ್ಕಿಂತ ಹೆಚ್ಚು ಕನ್ನಡಿಗರು ಇರುವ ಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಿ ಮರಾಠಿ ಶಾಲೆಗಳನ್ನು ತೆರೆಯುತ್ತಿದೆ. ಇದರಿಂದ ಕನ್ನಡ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಕಷ್ಟದಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಭಾಷಾ ಮಾಧ್ಯಮ ಆಯ್ಕೆ ಪೋಷಕರ ಮತ್ತು ವಿದ್ಯಾರ್ಥಿಗಳ ಮೂಲಭೂತ ಹಕ್ಕು. ಆದ್ದರಿಂದ ಶೇ.70ಕ್ಕಿಂತ ಹೆಚ್ಚು ಕನ್ನಡಿಗರರಿರುವ ಪ್ರದೇಶದಲ್ಲಿ ಮರಾಠಿ ಶಾಲೆ ತೆರೆಯುತ್ತಿರುವ ಮಹಾರಾಷ್ಟ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ವಕೀಲರಾದ ಉದಯ್ ಹೊಳ್ಳ ಮನವಿ ಮಾಡಿದರು.
ಅವರ ಮನವಿ ಪುರಸ್ಕರಿಸಿದ ನ್ಯಾಯಪೀಠವು ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಆರು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿತು.

ಕಿವಿ ಹಿಂಡಿದ ಸುಪ್ರೀಂ: ಮಧ್ಯಂತರ ಅರ್ಜಿ ವಿಚಾರಣೆ ವೇಳೆ ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಹರೀಶ್ ಸಾಳ್ವೆ, ಯಳ್ಳೂರಿನಲ್ಲಿ ಮರಾಠಿಗರ ಮೇಲೆ ನಡೆದ ಲಾಠಿ ಪ್ರಹಾರದ ಛಾಯಾಚಿತ್ರಗಳನ್ನು ಪ್ರದರ್ಶಿಸಿ, ವಿವಾದ ನ್ಯಾಯಾಲಯದಲ್ಲಿದ್ದರೂ ಕರ್ನಾಟಕ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ದೂರಿದರು.
ಇದಕ್ಕೆ ಆಕ್ಷೇಪಿಸಿದ ಕರ್ನಾಟಕ ಪರ ವಕೀಲರು, ಯಳ್ಳೂರಿನಲ್ಲಿ ಲಾಠಿ ಪ್ರಹಾರ ನಡೆಸಲು ಸಕಾರಣವಿತ್ತು ಎಂದು ಸಮರ್ಥಿಸಿದರು. ಆದರೆ, ಉಭಯ ರಾಜ್ಯಗಳ ದೂರು- ಸಮಜಾಯಿಷಿಯಿಂದ ಅಸಂತುಷ್ಟರಾಗಿದ್ದ ಮುಖ್ಯ ನ್ಯಾಯಮೂರ್ತಿ ಪ್ರಕರಣ ಕುರಿತು ಉಭಯ ಸರ್ಕಾರಗಳ ನಡವಳಿಕೆಗೆ ಅಸಮಾಧನ ವ್ಯಕ್ತಪಡಿಸಿದರು.
ವ್ಯಾಜ್ಯ ಇತ್ಯರ್ಥಕ್ಕಾಗಿ ಇನ್ನೂ ನ್ಯಾಯಾಲಯದಲ್ಲಿರುವಾಗಲೇ ರಾಜ್ಯಗಳೇ ಕಾನೂನು ಕೈಗೆತ್ತಿಕೊಳ್ಳುತ್ತಿವೆ. ಅದರ ಸಮರ್ಥನೆಗೆ ಎಲ್ಲ ತಂತ್ರಗಳನ್ನು ಅನುಸರಿಸುತ್ತಿವೆ. ಇದು ಸರ್ವಥಾ ಸರಿಯಲ್ಲ.
ವ್ಯಾಜ್ಯ ಇತ್ಯರ್ಥಕ್ಕೆ ನ್ಯಾಯಾಲಯದ ಮೆಟ್ಟಿಲು ಏರಿದ ಮೇಲೆ, ಅರ್ಜಿದಾರರ ನಡವಳಿಕೆ ಹೇಗಿರಬೇಕು ಎಂಬ ಮಾದರಿ ಸ್ವರೂಪದಲ್ಲಿ ಉಭಯ ರಾಜ್ಯಗಳು ನಡೆದುಕೊಳ್ಳಬೇಕು, ಅದನ್ನು ಬೇರೆ ಅರ್ಜಿದಾರರು ಅನುಸುರಿಸುವಂತಿರಬೇಕು ಎನ್ನುವ ಮೂಲಕ ಉಭಯ ರಾಜ್ಯಗಳಿಗೆ ಕಿವಿ ಮಾತು ಹೇಳಿದರು. ಅವರ ಮಾತಿನ ಒಟ್ಟಾರೆ ಭಾವಾರ್ಥ ಉಭಯ ರಾಜ್ಯಗಳ ಕಿವಿ ಹಿಂಡಿದಂತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement