ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗ್ಯಾಂಗ್ ರೇಪ್: ಜೆಡಿಎಸ್ ಮುಖಂಡನ ಮಗ ಸೇರಿ ಮೂವರ ಬಂಧನ

ಬಿಹಾರ ಮೂಲದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ..

Srinivasa Murthy VN
Updated On : 22 Aug 2014, 12:13 pm

ರಾಮನಗರ: ಬಿಹಾರ ಮೂಲದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಮೂಲ್ ನಿರ್ದೇಶಕ ಹಾಗೂ ಜೆಡಿಎಸ್ ಮುಖಂಡ ನರಸಿಂಹಮೂರ್ತಿ ಪುತ್ರ ಅರುಣ್ ಕುಮಾರ್ ಗೌಡ ಸೇರಿದಂತೆ ಮೂವರು ಕಾಮುಕರನ್ನು ಮಾಗಡಿ ತಾಲೂಕಿನ ತಾವರೆಕೆರೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮಾಗಡಿ ತಾಲೂಕು ಪೂಜಾರಿಪಾಳ್ಯದ ಅರುಣ್ ಕುಮಾರ್ ಗೌಡ ಅಲಿಯಾಸ್ ಗೂಳಿ (25), ದೋಣನಕುಪ್ಪೆಯ ಕೆಂಪನರಸಯ್ಯ ಅಲಿಯಾಸ್ ಕೆಂಪ (30), ಫಾರಂ ಹೌಸ್ ಕೆಲಗಾರ ಮಹದೇವ (40) ಬಂಧಿತರು. ಅವರ ವಿರುದ್ಧ ಅಕ್ರಮ ಬಂಧನ, ದೈಹಿಕ ಹಲ್ಲೆ, ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿವೆ. ಅರುಣ್ ಕುಮಾರ್ ಅವಿವಾಹಿತರಾಗಿದ್ದು, ಉಳಿದಿಬ್ಬರು ಆರೋಪಿಗಳಾದ ಕೆಂಪನರಸಯ್ಯ ಮತ್ತು ಮಹದೇವ ವಿವಾಹಿತರು. ಮೂವರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳು ಬುಧವಾರ ರಾತ್ರಿ ಡ್ರಾಪ್ ನೀಡುವ ನೆಪದಲ್ಲಿ ಬೆಂಗಳೂರಿನಲ್ಲಿ ನನ್ನನ್ನು ಕಾರಿಗೆ ಹತ್ತಿಸಿಕೊಂಡು, ತಿಪ್ಪಗೊಂಡನಹಳ್ಳಿ ಜಲಾಶಯ ಬಳಿಯ ಚಿಕ್ಕಮಾರನ ಹಳ್ಳಿ ಫಾರಂಹೌಸ್‌ಗೆ ಕರೆದೋಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು 23 ವರ್ಷದ ಬಿಹಾರಿ ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.

ದೂರಿನ ವಿವರ:
ಬೆಂಗಳೂರಿನ ಮೆಜೆಸ್ಟಿಕ್ ಬಳಿ ರಾತ್ರಿ 8ಕ್ಕೆ ನಾನು ಆಟೋಗಾಗಿ ಕಾಯುತ್ತಿದ್ದೆ. ಆಗ ಮೂವರು ಆರೋಪಿಗಳು ಡ್ರಾಪ್ ಕೊಡುತ್ತೇವೆ ಎಂದು ಕಾರುಹತ್ತಿಸಿಕೊಂಡರು. ನಂತರ ನನ್ನನ್ನು ಮಾಗಡಿ ರಸ್ತೆ ಮಾರ್ಗವಾಗಿ ಚಿಕ್ಕಮಾರನ ಹಳ್ಳಿ ಫಾರಂಗೆ ಕರೆದೊಯ್ದರು. ಫಾರಂಹೌಸ್‌ನಲ್ಲಿ ನನ್ನನ್ನು ಕೂಡಿ ಹಾಕಿದ ಆರೋಪಿಗಳು ಅಲ್ಲೇ ಮಧ್ಯ ಸೇವಿಸಿದರು. ಬಳಿಕ ನನ್ನನ್ನು ವಿವಸ್ತ್ರಗೊಳಿಸಿ ದೈಹಿಕ ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡಿದರು. ನಂತರ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದರು ಎಂದು ಯುವತಿ ದೂರಿದ್ದಾಳೆ.

ಹಿಂಸೆ ತಾಳದೆ ನಾನು ಮಧ್ಯರಾತ್ರಿ 2ರಲ್ಲಿ ನಗ್ನಸ್ಥಿತಿಯಲ್ಲೇ ಫಾರಂಹೌಸ್‌ನಿಂದ ತಪ್ಪಿಸಿಕೊಂಡೆ. ಹೆದ್ದಾರಿ ಪಕ್ಕದ ಸೇತುವೆ ಬಳಿ ಬಂದು ಕುಳಿತಿದ್ದಾಗ ನನ್ನನ್ನು ಗಮನಿಸಿ ಆದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಒಂದು ಕುಟುಂಬದವರು ಕಾರು ನಿಲ್ಲಿಸಿದರು. ನನಗೆ ಬಟ್ಟೆ ನೀಡಿ, ಪೊಲೀಸ್ ಠಾಣೆಗೆ ಕರೆತಂದು ಬಿಟ್ಟರು ಎಂದು ಆಕೆ ಹೇಳಿದ್ದಾಳೆ.

ಬೆನ್ನತ್ತಿದ ಪೊಲೀಸರು:
ಯುವತಿಯಿಂದ ದೂರು ಸ್ವೀಕರಿಸಿದ ಪೊಲೀಸರು ಆಕೆ ನೀಡಿದ ಸುಳಿವನ್ನಾಧರಿಸಿ ನಸುಕಿನಲ್ಲೇ ತಿಪ್ಪಗೊಂಡನಹಳ್ಳಿ ಜಲಾಶಯ ಆಸುಪಾಸಿನ ಫಾರಂಹೌಸ್‌ಗಳತ್ತ ತೆರಳಿ ಹುಡುಕಾಟ ನಡೆಸಲಾರಂಭಿಸಿದರು. ಅದೇ ವೇಳೆ ಮೂವರು ಆರೋಪಿಗಳು ತಮ್ಮಿಂದ ತಪ್ಪಿಸಿಕೊಂಡ ಯುವತಿಗಾಗಿ ಹುಡುಕಾಟದಲ್ಲಿ ತೊಡಗಿದ್ದರು. ಅನುಮಾನದ ಮೇಲೆ ಅವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದಾಗ ಅತ್ಯಾಚಾರಕ್ಕೆ ಒಳಗಾದ ಯುವತಿ ಆರೋಪಿಗಳನ್ನು ಗುರ್ತಿಸಿದಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾಲ್ ಮುಂಜಾನೆಯೇ ತಾವರೆಕೆರೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಅತ್ಯಾಚಾರಕ್ಕೆ ಒಳಗಾದ ಯುವತಿ ಮತ್ತು ಆರೋಪಿಗಳ ವಿಚಾರಣೆ ನಡೆಸಿದರು. ನಂತರ ಪ್ರಕರಣ ದಾಖಲಿಸಿಕೊಳ್ಳಲಾಯಿತು.

ಬಳಿಕ ಬುಧವಾರ ಸಂಜೆ ಮೂವರು ಆರೋಪಿಗಳನ್ನು ಮಾಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement