ಗುರುಗಳಿಗೆ ಅನಂತ ಪತ್ರ
ರಾಮರಾಯರ ಜನ್ಮಶತ ಮಾನೋತ್ಸವಕ್ಕೆ ನೆನಪಿನೋಲೆ ಬರೆದಿದ್ದ ಅನಂತರ ಪತ್ರದ ಸಾರ
ಸಾಹಿತಿ ಡಾ.ಅನಂತಮೂರ್ತಿ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದಲು ಬಂದಾಗ ಅವರಿಗೆ ಇಂಗ್ಲಿಷ್ ಪಾಠ ಮಾಡಿದ್ದು ದಿ.ಪ್ರೊ.ಎಂ.ರಾಮರಾಯರು. 2013, ಆ.18 ರಂದು ನಡೆದ ರಾಮರಾಯರ ಜನ್ಮಶತ ಮಾನೋತ್ಸವಕ್ಕೆ ನೆನಪಿನೋಲೆ ಬರೆದಿದ್ದ ಯು.ಆರ್.ಎರ ಪತ್ರದ ಸಾರ........
ನನ್ನ ಪ್ರಿಯ ಅಧ್ಯಾಪಕ ರಾಮರಾಯರು,
ರಾಮರಾಯರು ನನ್ನ ಪ್ರಿಯ ಅಧ್ಯಾಪಕರಲ್ಲಿ ಒಬ್ಬರು. ನಾನು ಮಹಾರಾಜಾ ಕಾಲೇಜಿನಲ್ಲಿ ಓದುತ್ತಿದ್ದಾಗ ನನಗೆ ಸ್ಪಷ್ಟವಾಗಿರುವ ಕೆಲವು ನೆನಪುಗಳನ್ನು ಇಲ್ಲಿ ದಾಖಲಿಸುತ್ತೇನೆ.
ಮೇಷ್ಟರಾದ ರಾಮರಾಯರನ್ನು ಏನಾದರೂ ಕೇಳಲು ಹೋದಾಗ ಅವರ ಗಂಟಲಿನ ಸ್ವರ ಪಿಸುಮಾತಿನದಾಗಿರುತ್ತಿತ್ತು. ಅಂದರೆ ತುಂಬ ಎಚ್ಚರಿಕೆಯಿಂದ ನಾವು ಅವರ ಮಾತನ್ನು ಕೇಳಿಸಿಕೊಳ್ಳಬೇಕಾಗಿ ಬರುತ್ತಿತ್ತು. ಆದರೆ ಅವರು ಒಂದು ಕ್ಲಾಸ್ನಲ್ಲಿ ವೇದಿಕೆಯ ಮೇಲೆ ಕೂತಾಗ ಮಾತ್ರ ವಿದ್ಯಾರ್ಥಿಗಳು ಇಬ್ಬರೇ ಇದ್ದರೂ, ಗಟ್ಟಿಯಾಗಿ ಒಂದು ದೊಡ್ಡ ಕ್ಲಾಸ್ಗೆ ಮಾತನಾಡುವ ಹಾಗೆ ಮಾತಾಡುತ್ತಿದ್ದರು. ಆ ದಿನಗಳಲ್ಲಿ ನಾವು ವಿದ್ಯಾರ್ಥಿಗಳು ಇಬ್ಬರೇ ಆದರೂ, ನಾವು 200 ಜನ ಇದ್ದೇವೇನೋ ಅನ್ನು ಭಾವನೆ ನಮಗೆ ಬರುತ್ತಿತ್ತು.
ನಾನು ಎಂ.ಎ. ಮುಗಿಸುತ್ತಿದ್ದಂತೆ, ನಾನೂ ಮತ್ತು ರಾಮರಾಯರೂ ಮದ್ರಾಸ್ನಲ್ಲಿ ಬ್ರಿಟಿಷ್ ಕೌನ್ಸಿಲ್ ನಡೆಸುತ್ತಿದ್ದ ಒಂದು ಸೆಮಿನಾರಿಗೆ ಹೋದೆವು. ವಾರ ಕಾಲ ನಾವು ಒಟ್ಟಿಗೆ ಇದ್ದೆವು. ಹಲವಾರು ವಿಷಯಗಳನ್ನು ಚರ್ಚಿಸುತ್ತಿದ್ದೆವು, ಒಟ್ಟಿಗೆ ಇಬ್ಬರೂ ಸಮುದ್ರದ ದಡಕ್ಕೆ ಹೋಗಿ ಸುತ್ತಾಡುತ್ತಿದ್ದೆವು. ಸಮುದ್ರದ ತೆರೆಗಳು ಅಬ್ಬರಿಸುತ್ತ ದೂರದಿಂದ ನಾಗಾಲೋಟದಿಂದ ಬರುವಂತೆ ಬಂದು ಅಪ್ಪಳಿಸುತ್ತಿದ್ದ ದೃಶ್ಯ ರಾಮರಾಯರನ್ನು ಮಂತ್ತರಮುಗ್ಧರನ್ನಾಗಿ ಮಾಡಿತ್ತು. ಆ ಸಮಯದಲ್ಲಿ ಅವರು ನನ್ನನ್ನು ಬರಸೆಳೆದು ನೋಡು, ಅಸ್ಕೆಲಿಸ್ ಇದನ್ನೇ ವರ್ಣಿಸುವುದು, ಸಮುದ್ರದ ಅಲೆಗಳು ಬಿಳಿಯ ಕುದುರೆಗಳಂತೆ ಧಾವಿಸಿ ಬರುತ್ತಿದ್ದಾವೆ ಎನ್ನುವುದು ನಮ್ಮ ಕಣ್ಣಿಗೆ ಸ್ಪಷ್ಟವಾಗುತ್ತದೆ ಅಲ್ಲವೆ? ಸಮುದ್ರದ ತುಂತುರಾದ ಅಲೆಗಳು ಕುದುರೆಯ ಬಿಳಿಯ ತಲೆಗಳಂತೆಯೇ ಕಾಣುತ್ತಿದ್ದವು ಎಂದು ಹೇಳುತ್ತಿದ್ದರು .
ರಾಮರಾಯರು ಘನ ಗಂಭೀರರೀದ, ಯಾರನ್ನೂ ಹೀಯಾಳಿಸದ, ಹೆಚ್ಚು ಮಾತಾಡದ ಮನುಷ್ಯ. ಆದರೆ ಮಕ್ಕಳ ಗುಣ ಅವರಲ್ಲಿತ್ತು. ಸಮುದ್ರದ ದಡದಲ್ಲಿ ಅವರು, ಅವರಿಗಿಂತ ತುಂಬ ಕಿರಿಯನಾದ ನನ್ನ ಜೊತೆ ಕಪ್ಪೆಚಿಪ್ಪುಗಳನ್ನು ಆರಿಸುತ್ತ ಓಡಾಡಿದರು. ಇವೆಲ್ಲ ಯಾರಿಗೆ ಎಂದು ಕೇಳಿದೆ. ನಸುನಗುತ್ತ ಮಕ್ಕಳಿಗೆ ಎಂದರು. ಇದು ನನ್ನ ಅನುಭವಕ್ಕೆ ಬಂದದ್ದು ಇವರ ಮಗಳೇ ನನ್ನ ವಿದ್ಯಾರ್ಥಿನಿಯಾದಾಗ, ರಾಮರಾಯರು ಬರೆದ ಮುಖ್ಯ ಬರಹಗಳನ್ನು ಯಾರಾದರೂ ಒಟ್ಟಾಗಿ ಸಂಪಾದಿಸಿ ತರಬೇಕೆಂಬುದು ನನ್ನ ಆಸೆ.
-ಯು.ಆರ್. ಅನಂತಮೂರ್ತಿ