ಅನಂತ ಸಂಸ್ಕಾರ
ಸಕಲ ಸರ್ಕಾರಿ ಗೌರವ ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಂತಮೂರ್ತಿ ಅವರ ಅಂತ್ಯ ಸಂಸ್ಕಾರ ಕಲಾಗ್ರಾಮದಲ್ಲಿ ನೆರವೇರಿತು.
ಬೆಂಗಳೂರು: ಮಂತ್ರಘೋಷ, ಅಭಿಮಾನದ ಮಹಾಪೂರ, ಕುಟುಂಬದವರಿಗೆ ಗಣ್ಯರ ಸಾಂತ್ವನದ ಮಧ್ಯೆ ಸಕಲ ಸರ್ಕಾರಿ ಗೌರವ ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಂತಮೂರ್ತಿ ಅವರ ಅಂತ್ಯ ಸಂಸ್ಕಾರ ಶನಿವಾರ ಸಂಜೆ ಬೆಂಗಳೂರು ವಿಶ್ವವಿದ್ಯಾಲಯ ಬಳೆ ಇರುವ ಕಲಾಗ್ರಾಮದಲ್ಲಿ ನೆರವೇರಿತು.
ಶನಿವಾರ ಬೆಳಗ್ಗೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಜ್ಞಾನಭಾರತಿ ಆವರಣದಲ್ಲಿನ ಕಲಾಗ್ರಾಮಕ್ಕೆ ಕೊಂಡೊಯ್ಯಲಾಯಿತು. ಕಲಾಗ್ರಾಮಕ್ಕೆ ಪಾರ್ಥೀವ ಶರೀರ ತರುತ್ತಿದ್ದಂತೆಯೇ ಪೊಲೀಸ್ ಬ್ಯಾಂಡ್ ಸೆಟ್ವಾದ್ಯಗಳಿಂದ ಗೌರವ ಸೂಚಿಸಿ ಕುಶಾಲತೋಪು ಹಾರಿಸಲಾಯಿತು.
ದೂರದೂರುಗಳಿಂದ ಬಂದಿದ್ದ ಸಾವಿರಕ್ಕೂ ಅಧಿಕ ಸಾಹಿತ್ಯಾಭಿಮಾನಿಗಳು, ರಾಜಕಾರಣಿಗಳು, ವಿದ್ಯಾರ್ಥಿಗಳು ಅಂತಿಮ ದರ್ಶನ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯ ಆವರಣದಿಂದ ದೂರಕ್ಕೆ ಸಾಗಬೇಕಿದ್ದರೂ, ಅಗ್ನಿಸ್ಪರ್ಶದವರೆಗೂ ಸಾರ್ವಜನಿಕರು ಬರುತ್ತಿದ್ದರು. ಸಾಹಿತಿಗಳು ರಾಜಕಾರಣಿಗಳು ಹಾಗೂ ಕುಟುಂಬ ವರ್ಗಕ್ಕೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೂರ್ಯನಾರಾಯಣ ಶಾಸ್ತ್ರಿ ಅವರು 14 ಪುರೋಹಿತರ ತಂಡದೊಂದಿಗೆ ಪುತ್ರ ಶರತ್ ಮೂಲಕ ಅಂತ್ಯಸಂಸ್ಕಾರದ ವಿಧಿಗಳನ್ನು ನೆರವೇರಿಸಿದರು. ಪತ್ನಿ ಎಸ್ತರ್ ಮೂರ್ತಿ, ಮಗಳು ಅನುರಾಧಾ ಸೇರಿದಂತೆ ಕುಟುಂಬ ಸದಸ್ಯರು ವಿಧಿಗಳಲ್ಲಿ ಪಾಲ್ಗೊಂಡರು. 1 ಗಂಟೆ ಕಾಲ ಧಾರ್ಮಿಕ ವಿಧಿ ನೆರವೇರಿದ ಬಳಿಕ ಶರೀರವನ್ನು ಚಿತೆಗೆ ಕೊಂಡೊಯ್ಯಲಾಯಿತು.
ಸಂಜೆ 4.15ಕ್ಕೆ ಪುತ್ರ ಶರತ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. 75ಕೆಜಿ ತುಪ್ಪ, 1.5ಟನ್ ಕಟ್ಟಿಗೆ, 50ಕೆಜಿ ಶ್ರೀಗಂಧ, ಮೂರು ಚೀಲ ಬೆರಣಿ, 20 ಕೆಜಿ ಕೊಬ್ಬರಿ, 5 ಕೆಜಿ ಕರ್ಪೂರಗಳನ್ನು ಅಂತ್ಯ ಸಂಸ್ಕಾರಕ್ಕೆ ಬಳಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಸಚಿವರು ಉಪಸ್ಥಿತರಿದ್ದರು.
ಸಾರ್ವಜನಿಕ ದರ್ಶನ: ಅಂತ್ಯ ಸಂಸ್ಕಾರಕ್ಕೂ ಮುನ್ನ ಪಾರ್ಥೀವ ಶರೀರವನ್ನು ಬೆಳಗ್ಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಹೂವಿನಿಂದ ಅಲಂಕೃತವಾದ ವಾಹನದಲ್ಲಿ ಪಾರ್ಥೀವ ಶರೀರವನ್ನು ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ ಸುರಗಿಯಿಂದ ಮೆರವಣಿ ಮೂಲಕ ತರಲಾಯಿತು. ಡಾಲರ್ಸ್ ಕಾಲೋನಿ. ರಾಮಯ್ಯ ರಸ್ತೆ, ಸದಾಶಿವನಗರ, ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಕೆ.ಆರ್.ವೃತ್ತ ಹಡ್ಸನ್ ವೃತ್ತದ ಮೂಲಕ ಕಲಾಕ್ಷೇತ್ರದ ಆವರಣಕ್ಕೆ ತಂದನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಯಿತು.
ಭಾರಿ ಸಂಖ್ಯೆಯಲ್ಲಿ ಜನರು ಸೇರಲಿರುವ ಮುನ್ಸೂಚನೆಯಿದಿದ್ದರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ತಾತ್ಕಾಲಿಕ ಬೇಲಿ ನಿರ್ಮಿಸುವ ಮೂಲಕ ಜನರು ಸರದಿಯಲ್ಲಿ ಸಾಗಿಯೇ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ, ಸಚಿವರು ಸೇರಿದಂತೆ ರಾಜಕೀಯ, ಸಾಹಿತ್ಯ, ಕಲೆ, ಸಿನಿಮಾ ಕ್ಷೇತ್ರದ ಗಣ್ಯಾತಿಗಣ್ಯರಿಗೆ ಪುರಭವನ ಗೇಟ್ನಲ್ಲಿ ಪ್ರತ್ಯೇಕ ಪ್ರವೇಶದ ವ್ಯವಸ್ಥೆ ಇತ್ತು. ಸಾರ್ವಜನಿಕರು ರವೀಂದ್ರ ಕಲಾಕ್ಷೇತ್ರದ ಮುಖ್ಯದ್ವಾರದ ಮೂಲಕ, ಸರದಿಯಲ್ಲಿ ಬಂದು ಪಾರ್ಥೀವ ಶರೀರದ ದರ್ಶನ ಪಡೆದರು. ಮೂರ್ತಿ ಅವರ ತವರು ಶಿವಮೊಗ್ಗ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದಲೂ ಅಭಿಮಾನಿಗಳು ಆಗಮಿಸಿ ಅಂತಿಮ ದರ್ಶನಪಡೆದರು.
ವಿಶೇಷವಾಗಿ 25ಕ್ಕೂ ಹೆಚ್ಚು ಮಂದಿ ರಕ್ಷಣಾ ವೇದಿಕೆ ಕಾರ್ಯಕರ್ತರು, ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿಯೇ ಕುಳಿತು ಗೌರವ ಸಲ್ಲಿಸಿದರು. 10.40ರಿಂದಲೇ ಶುರುವಾದ ಅಂತಿಮ ದರ್ಶನ ಮಧ್ಯಾಹ್ನ 1.30ರವರೆಗೂ ಸಾಗಿತು. ನಂತರ ಅಲ್ಲಿಂದ ಪಾರ್ಥೀವ ಶರೀರವನ್ನು ಹೂವಿನಿಂದ ಅಲಂಕೃತವಾದ ವಾಹನದಲ್ಲಿ ಮಾರ್ಕೆಟ್, ಮೈಸೂರು ರಸ್ತೆ ಮೂಲಕ ಕಲಾಗ್ರಾಮಕ್ಕೆ ಕೊಂಡೊಯ್ಯಲಾಯಿತು. ಸಾಹಿತಿಗೆ ಅಂತಿಮ ನಮನ ಸಲ್ಲಿಸಲು ಬೆಳಗ್ಗೆಯಿಂದಲೇ ಅವರ ನಿವಾಸಕ್ಕೂ ಅಭಿಮಾನಿಗಳು ಆಗಮಿಸಿದ್ದರು.
ಕಲಾಗ್ರಾಮದಲ್ಲಿದ್ದರು
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಚಿವರಾದ ಕಿಮ್ಮನೆ ರತ್ನಾಕರ, ಅಂಬರೀಶ್, ಮಹಾದೇವ ಪ್ರಸಾದ್, ಎಚ್.ಸಿ.ಮಹದೇವಪ್ಪ. ಯುಟಿ ಖಾದರ್, ಉಮಾಶ್ರೀ, ಶಾಸಕರಾದ ಡಿಕೆ ಸುರೇಶ್. ಮುನಿರತ್ನ, ನರೇಂದ್ರಬಾಬು, ಸಾಹಿತಿಗಳಾದ ವೈದೇಹಿ, ಮರುಳಸಿದ್ದಪ್ಪ, ಡಾ.ಸಿದ್ದಲಿಂಗಯ್ಯ, ವೀಣಾ ಬನ್ನಂಜೆ, ಜಿಕೆ.ಗೋವಿಂದರಾವ್, ಹೋರಾಟಗಾರರಾದ ಟಿಎ ನಾರಾಯಣಗೌಡ, ಸಾಲುಮರದ ತಿಮಕ್ಕ, ವಾಟಾಳ್ ನಾಗರಾಜ್
255 ಪೊಲೀಸ್ ಸಿಬ್ಬಂದಿ
ಅಂತ್ಯ ಸಂಸ್ಕಾರ ವೇಳೆ ವಿಶೇಷ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಓರ್ವ ಡಿಸಿಪಿ, 3 ಎಸಿಪಿ, 8 ಇನ್ಸ್ಪೆಕ್ಟರ್, 35 ಪಿಎಸ್ಐಗಳು, 23 ಎಸ್ಐ, 38 ಎಎಸ್ಐ, 57 ಹೆಡ್ ಕಾನ್ಸ್ಟೇಬಲ್ಗಳು, 14 ಮಹಿಳಾ ಕಾನ್ಸ್ಟೇಬಲ್, 23 ಸಬ್ ಇನ್ಸ್ಪೆಕ್ಟರ್ ಸೇರಿದಂತೆ 255 ಪೊಲೀಸ್ ಸಿಬ್ಬಂದಿ ನೇಮಿಸಲಾಗಿತ್ತು. 4 ಹ್ಯಾಂಡಿಕ್ಯಾಮೆರಾಗಳನ್ನು ಬಳಸಲಾಗಿತ್ತು.
ಜಿಎಸ್ಎಸ್ ಸಮಾಧಿ ಬಳಿ
ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಸಮಾಧಿಗೆ ಸಮೀಪದಲ್ಲಿಯೇ ಅನಂತಮೂರ್ತಿ ಅವರ ಅಂತ್ಯಸಂಸ್ಕಾರ ನಡೆಯಿತು. ಶೀಟು ಹಾಗೂ ಕಂಬಿಗಳಿಂದ ನಿರ್ಮಿಸಿದ್ದ ಚಾವಣಿಯಡಿ ಪಾರ್ಥೀವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.