ಪ್ರಧಾನ ಸುದ್ದಿ

ಬೆಳಗಾವಿ ಅಧಿವೇಶನ: ಸದನದ ಹೊರಗೂ, ಒಳಗೂ ಬಿಜೆಪಿ ಪ್ರತಿಭಟನೆ

Lingaraj Badiger

ಬೆಳಗಾವಿ: ಬೆಳಗಾವಿಯಲ್ಲಿ ಇಂದಿನಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಪ್ರತಿಪಕ್ಷ ಬಿಜೆಪಿ ಸದನದ ಹೊರಗೂ ಮತ್ತು ಒಳಗೂ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.

ಇಂದು ಸದನ ಆರಂಭವಾಗುತ್ತಿದ್ದಂತೆ, ಕಬ್ಬಿಗೆ ಬೆಂಬಲ ಬೆಲ ನಿಗದಿ ಮಾಡಬೇಕು ಮತ್ತು 2650 ಕೋಟಿ ರುಪಾಯಿ ಬಾಕಿ ಹಣ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ ಸದನದಲ್ಲಿ ತೀವ್ರ ಕೋಲಾಹಲ ಉಂಟಾಗಿದ್ದರಿಂದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಕಲಾಪ ಪುನಾರಂಭವಾದ ನಂತರವೂ ಬಿಜೆಪಿ ಪ್ರತಿಭಟನೆ ಮುಂದೂವರೆಸಿದ್ದರಿಂದ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದಾರೆ.

ಇನ್ನು ಸುವರ್ಣಸೌಧದ ಹೊರಗಡೆ ಬಿಜೆಪಿ ನಾಯಕ ಮುರಳಿಧರ್ ರಾವ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ.

ಈ ಮಧ್ಯೆ ಬೆಂಗಳೂರಿನಿಂದ ಬೆಳಗಾವಿಗೆ ಹೊರಡಬೇಕಾಗಿದ್ದ ಸಚಿವರಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ವಿಮಾನ ತಡವಾಗಿ ಬೆಳಗಾವಿಗೆ ತಲುಪುತ್ತಿದ್ದು, ಆಡಳಿತ ಪಕ್ಷದ ಸದಸ್ಯರ ಕೊರತೆ ಎದ್ದು ಕಾಣುತ್ತಿದೆ.

ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಸಂಘದ ಸದಸ್ಯರು ಸುವರ್ಣ ಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿರುವುದರಿಂದ ಸುವರ್ಣ ಸೌಧದ ಸುತ್ತಮುತ್ತ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ 6 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

SCROLL FOR NEXT