ನವದೆಹಲಿ: ಕಲ್ಲಿದ್ದಲು ಘಟಕ ಹಂಚಿಕೆಯ ಮೊದಲ ಸುತ್ತಿನ ಹರಾಜಿನಲ್ಲಿ 101 ಘಟಕಗಳ ಹಂಚಿಕೆ ನಡೆಸಲು ಕಲ್ಲಿದ್ದಲು ಸಚಿವಾಲಯ ತೀರ್ಮಾನಿಸಿದೆ.
ಈ ಮೊದಲು 92 ಘಟಕಗಳ ಹಂಚಿಕೆ ನಡೆಸುವುದಾಗಿ ಹೇಳಲಾಗಿದ್ದರೂ ಘಟಕಗಳ ಸಂಖ್ಯೆಯನ್ನೀಗ ಏರಿಸಲಾಗಿದೆ.
ಆರಂಭದಲ್ಲಿ ನಾವೀಗ 74 ಘಟಕಗಳ ಹಂಚಿಕೆ ಮಾಡುವುದಾಗಿ ತೀರ್ಮಾನಿಸಿದ್ದೆವು. ನಂತರ ಅವಶ್ಯಕತೆಗಳನ್ನು ಪರಿಗಣಿಸಿ ಶೆಡ್ಯೂಲ್-1 ನಲ್ಲಿ ಹೆಚ್ಚುವರಿ 27 ಘಟಕಗಳ ಹಂಚಿಕೆ ಬಗ್ಗೆ ನಿರ್ಧರಿಸಿದೆವು. ಈ 101 ಬ್ಲಾಕ್‌ಗಳಲ್ಲಿ 65ನ್ನು ನಿಯಂತ್ರಿತ ವಿಭಾಗ (ವಿದ್ಯುತ್) ಮತ್ತು ಇನ್ನುಳಿದವುಗಳನ್ನು ನಿಯಂತ್ರಿತವಲ್ಲದ ವಿಭಾಗ ( ಕಬ್ಬಿಣ ಮತ್ತು ಸ್ಟೀಲ್, ಸಿಮೆಂಟ್ ಮೊದಲಾದವುಗಳಿಗೆ) ಹಂಚಲಾಗುವುದು ಎಂದು ಕಲ್ಲಿದ್ದಲು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಅದೇ ವೇಳೆ ಇಷ್ಟು ಘಟಕಗಳು ಹರಾಜಿನ ಸಮಯಕ್ಕೆ ಎಲ್ಲರಿಗೂ ಸಿಗುವಂತಾಗಲು ಅನುಮತಿ ಪಡೆಯುವುದಕ್ಕೆ ನಾವು ಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.