ಇಸ್ಲಾಮಾಬಾದ್: ಮುಂಬೈ ದಾಳಿ ಮಾಸ್ಟರ್ ಮೈಂಡ್ ಝಕೀವುರ್ ರೆಹಮಾನ್ ಲಖ್ವಿಯನ್ನು ಗಂಭೀರವಾಗಿ ಪರಿಗಣಿಸಿರುವ ಪಾಕಿಸ್ತಾನ ಸರ್ಕಾರ, ಉಗ್ರನ ಬಿಡುಗಡೆಗು ಮುನ್ನವೇ ಮತ್ತೊಂದು ಪ್ರಕರಣದಲ್ಲಿ ಮಂಗಳವಾರ ಬಂಧಿಸಿದೆ.
ಉಗ್ರ ನಿಗ್ರಹ ಕೋರ್ಟ್‌ನಿಂದ ಜಾಮೀನು ಪಡೆದಿದ್ದ ಲಖ್ವಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ನಿನ್ನೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶಿಸಿತ್ತು. ಆದರೆ ಇಂದು ಮತ್ತೊಂದು ಪ್ರಕರಣದಲ್ಲಿ ಲಖ್ವಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಆತನ ವಕೀಲರು ಹೇಳಿದ್ದಾರೆ.
ಇದೇ ಡಿಸೆಂಬರ್ 19ರಂದು ಪಾಕಿಸ್ತಾನ ಉಗ್ರ ನಿಗ್ರಹ ವಿಶೇಷ ನ್ಯಾಯಾಲಯ ಝಕೀವುರ್ ರೆಹಮಾನ್ ಲಖ್ವಿಗೆ ಜಾಮೀನು ಮಂಜೂರು ಮಾಡಿತ್ತು. ಅಲ್ಲದೆ ಜಾಮೀನಿಗಾಗಿ 5 ಲಕ್ಷ ರು. ಭದ್ರತಾ ಠೇವಣಿ ಇಟ್ಟು ಜಾಮೀನು ಪಡೆಯುವಂತೆ ಸೂಚಿಸಿತ್ತು. ಆದರೆ, ಇದರ ವಿರುದ್ಧ ಭಾರತ ಮಾತ್ರವಲ್ಲದೆ ಪಾಕ್‌ನೊಳಗೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪಾಕಿಸ್ತಾನ ಸರ್ಕಾರ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು(ಎಂಪಿಒ) ಲಖ್ವಿಯನ್ನು ಮತ್ತೆ ವಶಕ್ಕೆಪಡೆದಿತ್ತು.
ಪಾಕಿಸ್ತಾನ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದ ಉಗ್ರ ಲಖ್ವಿ, ಇಸ್ಲಾಮಾಬಾದ್ ಹೈಕೋರ್ಟ್ ಮೊರೆ ಹೋಗಿದ್ದ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಲಖ್ವಿಯ ಬಂಧನ ಆದೇಶವನ್ನು ರದ್ದುಗೊಳಿಸಿ, ಉಗ್ರನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.