ಜನ ಲೋಕಪಾಲ ಮಂಡನೆ ಕೇಜ್ರಿ-ಗವರ್ನರ್ ಜಗಳ
ಜನ ಲೋಕಪಾಲ ಮಸೂದೆ ಜಾರಿಗೂ ಮುನ್ನ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು. ಕೇಂದ್ರದ ಒಪ್ಪಿಗೆ ಇಲ್ಲದೆ ಜಾರಿ ಮಾಡುವಂತಿಲ್ಲ...
ನವದೆಹಲಿ: ದೆಹಲಿಯಲ್ಲಿ ಈಗ ಜನ ಲೋಕಪಾಲ ಜಗಳ!
ಜನ ಲೋಕಪಾಲ ಮಸೂದೆ ಜಾರಿಗೂ ಮುನ್ನ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು. ಕೇಂದ್ರದ ಒಪ್ಪಿಗೆ ಇಲ್ಲದೆ ಜಾರಿ ಮಾಡುವಂತಿಲ್ಲ ಎಂಬ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ಅವರ ಅಭಿಪ್ರಾಯ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ಮಸೂದೆಗಳ ಜಾರಿಗೂ ಮುನ್ನ ಕೇಂದ್ರದ ಒಪ್ಪಿಗೆ ಪಡೆಯಬೇಕಿಲ್ಲ ಎಂದು ವಾದಿಸಿರುವ ಕೇಜ್ರಿವಾಲ್ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಕಿಡಿಕಾರಿದೆ.
ಗುರುವಾರ ಸಂಜೆಯಷ್ಟೇ ಲೆ.ಗವರ್ನರ್ಗೆ ಕರಡು ಮಸೂದೆ ಕಳುಹಿಸಿದ್ದ ಕೇಜ್ರಿವಾಲ್ ಸರ್ಕಾರಕ್ಕೆ ಶಾಕ್ ಕಾದಿತ್ತು. ರಾತ್ರಿ ವೇಳೆಗೆ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ , ಟಿವಿ ವಾಹಿನಿಗಳ ಜೊತೆ ಮಾತನಾಡಿ ಅವರ ಜನಲೋಕಪಾಲ ಮಸೂದೆ ಅಸಾಂವಿಧಾನಿಕ ಎಂದಿದ್ದರು. ಇದು ಶುಕ್ರವಾರ ಬೆಳಗ್ಗೆ ವಿವಾದಕ್ಕೆ ಕಾರಣವಾಗಿತ್ತು. ಸಂಜೆ ಕೊಟ್ಟಿರುವ ಮಸೂದೆ ಸಾಲಿಸಿಟರ್ ಜನರಲ್ಗೆ ಸಿಕ್ಕಿದ್ದು ಹೇಗೆ? ಅವರ ಅಭಿಪ್ರಾಯವನ್ನು ಏಕೆ ಮಾಧ್ಯಮಗಳಿಗೆ ಸೋರಿಕೆ ಮಾಡಬೇಕಿತ್ತು ಎಂದು ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಪ್ರಶ್ನಿಸಿದರು. ಆಮ್ ಆದ್ಮಿ ಪಕ್ಷದ ವಕ್ತಾರ ಅಶುತೋಷ್ ಅವರು ಲೆಫ್ಟಿನೆಂಟ್ ಗವರ್ನರ್ರನ್ನು ಕಾಂಗ್ರೆಸ್ ಏಜೆಂಟ್ ಎಂದರಲ್ಲದೆ, ಅವರ ಕಚೇರಿಯನ್ನು ಮಾಧ್ಯಮಗಳಿಗೆ ವಿಷಯ ಸೋರಿಕೆ ಮಾಡುವ ಸಂಸ್ಥೆ ಎಂದು ಟೀಕಿಸಿದರು. ಇದಲ್ಲದೆ ಗವರ್ನರ್ಗೆ ಪತ್ರ ಬರೆದಿದ್ದ ಕೇಜ್ರಿವಾಲ್ ತೀಕ್ಷ್ಣ ಮಾತುಗಳಿಂದ ಟೀಕಿಸಿದ್ದರು.
ಕಾನೂನು ತಜ್ಞರ ಸಲಹೆ: ಸಾಲಿಸಿಟರ್ ಜನರಲ್ ಅಭಿಪ್ರಾಯ ಗಮನಿಸಿದ ಕೇಜ್ರಿವಾಲ್ ನಿವೃತ್ತ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್ ವಕೀಲರ ಕಡೆಯಿಂದ ಕಾನೂನು ಸಲಹೆ ಪಡೆದರು. ವಕೀಲರ ಪ್ರಕಾರ, ಮೋಹನ್ ಪರಾಶರನ್ ಅವರ ಅಭಿಪ್ರಾಯ ತಪ್ಪು. ರಾಜ್ಯ ಸರ್ಕಾರಗಳು ಮಸೂದೆ ಜಾರಿಗೂ ಮುನ್ನ ಕೇಂದ್ರದ ಒಪ್ಪಿಗೆ ಪಡೆಯಬೇಕಿಲ್ಲ ಎಂದರು. ಇದೇ ವೇಳೆ ಕೇಜ್ರಿವಾಲ್ ಸರ್ಕಾರಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್, ಲೋಕಪಾಲ ಮಸೂದೆ ಜಾರಿಗೆ ಬಿಡುವುದಿಲ್ಲ ಎಂದು ಹೇಳಿದೆ.