ರೆಡ್ಡಿ ಅಕ್ರಮಗಳ ತನಿಖೆ ಚುರುಕು
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮೇಲಿನ ಸುಮಾರು 22ಕ್ಕೂ ಹೆಚ್ಚು ವಿವಿಧ ಪ್ರಕರಣಗಳ ಕುರಿತು ಸಿಬಿಐ ಅಧಿಕಾರಿಗಳು ದೋಷಾರೋಪಣ ಪಟ್ಟಿ ಸಲ್ಲಿಸಿದ್ದು..
ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲಿನ 22ಕ್ಕೂ ಹೆಚ್ಚು ಪ್ರಕರಣಗಳು
ಸಿಬಿಐ ಅಧಿಕಾರಿಗಳಿಂದ ಮೂಲ ದಾಖಲೆ ಸಂಗ್ರಹ ಕಾರ್ಯ ಶುರು
-ಶಶಿಧರ ಮೇಟಿ
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮೇಲಿನ ಸುಮಾರು 22ಕ್ಕೂ ಹೆಚ್ಚು ವಿವಿಧ ಪ್ರಕರಣಗಳ ಕುರಿತು ಸಿಬಿಐ ಅಧಿಕಾರಿಗಳು ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಮೂಲ ದಾಖಲಾತಿಗಳನ್ನು ಸಂಗ್ರಹಿಸುವ ಹಾಗೂ ಸಾಕ್ಷಿಗಳ ಹೇಳಿಕೆ ಪಡೆಯುವ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ರೆಡ್ಡಿ ಮೇಲಿನ ತನಿಖೆಯನ್ನು ಕೂಡಲೇ ಪೂರ್ಣಗೊಳಿಸಬೇಕೆಂದು ಸುಪ್ರೀಂ ಸೂಚಿಸಿರುವ ಬೆನ್ನಲ್ಲೇ ಸಿಬಿಐ ದಾಖಲೆ ಸಂಗ್ರಹಿಸುತ್ತಿದೆ.
ಗಣಿಗಾರಿಕೆಗೆ ಸಂಬಂಧಿಸಿದಂತೆ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ, ಮೂಲ ದಾಖಲಾತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಒಎಂಸಿಯ ಗಡಿ ಧ್ವಂಸಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಕಾರ್ಯ ನಡೆಸಿರುವ ಸಿಬಿಐ ಅಧಿಕಾರಿಗಳು, ಮೂಲ ದಾಖಲೆ, ಸಾಕ್ಷಿಗಳ ಹೇಳಿಕೆ ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದಾರೆ.
ಅರಣ್ಯ ಇಲಾಖೆಗೆ ಭೇಟಿ: ಆಂಧ್ರಪ್ರದೇಶದ ಸಿಬಿಐನ ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ಮೂರು ಜನರ ಸಿಬಿಐ ತಂಡವು ಬಳ್ಳಾರಿಯ ಅರಣ್ಯ ಇಲಾಖೆಗೆ ಗುರುವಾರ ಭೇಟಿ ನೀಡಿದ್ದು, ಒಎಂಸಿ ಕರ್ನಾಟಕದ ಗಡಿಯನ್ನು ಧ್ವಂಸ ಮಾಡಿದೆ ಎಂದು ಹಿಂಡ್ ಟ್ರೇಡರ್ಸ್ ಮತ್ತು ತುಮಟಿ ಕಂಪನಿಯವರು ದೂರು ನೀಡಿದ್ದಾರೆ. ಈ ಕುರಿತು ಜನಾರ್ದನ ರೆಡ್ಡಿ, ರಾಮಚಂದ್ರ ರೆಡ್ಡಿ, ಶ್ರೀನಿವಾಸ ರೆಡ್ಡಿ ಸೇರಿದಂತೆ ಆರೇಳು ಜನರ ಮೇಲೆ ಎಫ್ಒಸಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸಿಬಿಐ ಅಧಿಕಾರಿಗಳು ಮೂಲ ದಾಖಲಾತಿ ಹಾಗೂ ಸಾಕ್ಷಿಗಳ ಹೇಳಿಕೆ ಸಂಗ್ರಹ ಕಾರ್ಯ ಮಾಡುತ್ತಿದ್ದಾರೆ.
ಸಾರ್ವಜನಿಕರಂತೆ ಬರುವ ಅಧಿಕಾರಿಗಳು: ತನಿಖೆಯಲ್ಲಿನ ಮಾಹಿತಿಗೂ ಹಾಗೂ ದಾಖಲಾತಿಗಳ ಮಾಹಿತಿಯಲ್ಲಿ ವ್ಯತ್ಯಾಸ, ಸುಳ್ಳು ದಾಖಲೆ ಸೃಷ್ಟಿಸಿ ಸಾಗಾಣಿಕೆ ಮಾಡಿರುವುದು ಸೇರಿದಂತೆ ಇತರೆ ಮಾಹಿತಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಸಲ್ಲಿಸಿ, ತನ್ನ ತನಿಖೆಯನ್ನು ಪೂರ್ಣಗೊಳಿಸುವ ಪ್ರಕ್ರಿಯೆಗೆ ಮುಂದಾಗಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸಿಬಿಐ ಅಧಿಕಾರಿಗಳು ಸಾರ್ವಜನಿಕರಂತೆ ಸ್ಥಳೀಯವಾಗಿ ಕಾರುಗಳನ್ನು ಬಾಡಿಗೆ ಪಡೆದು ದಾಖಲೆಗಳ ಸಂಗ್ರಹದಲ್ಲಿ ತೊಡಗಿದ್ದಾರೆ. ಬೇಲೆಕೇರಿ ಬಂದರು ಮೂಲಕ 50 ಸಾವಿರ ಮೆಟ್ರಿಕ್ ಟನ್ಗಿಂತ ಹೆಚ್ಚಿನ ಅದಿರನ್ನು ರಫ್ತು ಮಾಡಿರುವ ಕಂಪನಿಗಳ ಮೇಲೆ ಮುಂಬೈ ಸಿಬಿಐನ ಆರ್ಥಿಕ ಅಪರಾಧ ದಳದ ಅಧಿಕಾರಿಗಳ ತಂಡ ರಫ್ತು ಕಂಪನಿಗಳ ಕಚೇರಿಗಳಿಗೆ ಭೇಟಿ ನೀಡಿ, ದಾಖಲೆ ಪರಿಶೀಲನೆ ಕಾರ್ಯ ನಡೆಸುತ್ತಿದ್ದರೆ, ಮತ್ತೊಂದು ಕಡೆ ಪ್ರಕರಣಗಳ ಕುರಿತು ಮೂಲ ದಾಖಲಾತಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಸಿಬಿಐ ಅಧಿಕಾರಿಗಳು ಮಾಡುತ್ತಿದ್ದಾರೆ. ಆದಷ್ಟು ಬೇಗ ಸಿಬಿಐ ತನ್ನ ತನಿಖೆ ಪೂರ್ಣಗೊಳಿಸುವ ಧಾವಂತದಲ್ಲಿದೆ.