ಜ್ಞಾನಪೀಠ ಪ್ರಶಸ್ತಿ ಒಂದು ನಾನ್ಸೆನ್ಸ್ ಅದನ್ನು ಪಡೆದವರು ಮಾತ್ರ ಸಾಹಿತಿಗಳಲ್ಲ ಅನಂತಮೂರ್ತಿ, ಕಾರ್ನಾಡ್ ಅಪಾತ್ರರು
'ಜ್ಞಾನಪೀಠ ಪ್ರಶಸ್ತಿಗಿಂತ ನಾನ್ಸೆನ್ಸ್ ಪ್ರಶಸ್ತಿ ಮತ್ತೊಂದಿಲ್ಲ. ಕರ್ನಾಟಕದ ಸಾಹಿತಿಗಳು ಎಂದರೆ ಕೇವಲ ಈ ಪ್ರಶಸ್ತಿ ಪಡೆದ 8 ಜನರು ಎಂದು ಹೇಳುವುದು ತಪ್ಪು...
ಸಾರಸ್ವತ ಲೋಕದಲ್ಲಿ ಕಿಡಿ ಹೊತ್ತಿಸಿದ ಕುಂ.ವೀರಭದ್ರಪ್ಪ ಬಿರುನುಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ ಫೆ.8
'ಜ್ಞಾನಪೀಠ ಪ್ರಶಸ್ತಿಗಿಂತ ನಾನ್ಸೆನ್ಸ್ ಪ್ರಶಸ್ತಿ ಮತ್ತೊಂದಿಲ್ಲ. ಕರ್ನಾಟಕದ ಸಾಹಿತಿಗಳು ಎಂದರೆ ಕೇವಲ ಈ ಪ್ರಶಸ್ತಿ ಪಡೆದ 8 ಜನರು ಎಂದು ಹೇಳುವುದು ತಪ್ಪು. ಇದಕ್ಕಿಂತಲೂ ಶ್ರೇಷ್ಠ ಸಾಹಿತಿಗಳು ಕರ್ನಾಟಕದಲ್ಲಿದ್ದಾರೆ. ಅದು (ಜ್ಞಾನಪೀಠ) ಲಾಬಿ ಮಾಡಿದವರಿಗೆ ಲಭಿಸುವ ಪ್ರಶಸ್ತಿಯಾಗಿದೆ.'
- ಇದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕುಂ. ವೀರಭದ್ರಪ್ಪ ಅವರು ಜ್ಞಾನಪೀಠ ಪ್ರಶಸ್ತಿ ಕುರಿತು ಸಿಡಿಮಿಡಿಯಾದ ರೀತಿ.
ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಕಲ್ಯಾಣ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಭಾಗವಹಿಸಿದ್ದ ಅವರು, ಜ್ಞಾನಪೀಠ ಪ್ರಶಸ್ತಿ ಕುರಿತ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಕಾರ್ಯಕ್ರಮದಲ್ಲಿ ಪರಿಚಯ ಭಾಷಣ ಮಾಡಿದ ಡಾ.ವಿ.ಬಿ. ರಡ್ಡೇರ್ ಅವರು 'ಕುಂವೀ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗುವಂತಾಗಲಿ' ಎಂದು ಆಶಿಸಿದ್ದೇ ಕುಂವೀ ಅವರ ಜ್ಞಾನಪೀಠ ಕೋಪಕ್ಕೆ ಕಾರಣವಾಯಿತು.
'ತಮ್ಮನ್ನು ಪರಿಚಯಿಸಿದ ಡಾ.ವಿ.ಬಿ. ರಡ್ಡೇರ್ ಉತ್ತಮ ಮಾತುಗಳನ್ನೇ ಆಡಿದ್ದಾರೆ. ಇದರ ಜೊತೆಗೆ ಅವರು ನನಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಾಗಿತ್ತು ಎಂದು ಪ್ರಸ್ತಾಪಿಸಿದ್ದಾರೆ. ಆದರೆ, ಈ ಜ್ಞಾನಪೀಠ ಪ್ರಶಸ್ತಿಗಿಂತ ನಾನ್ಸೆನ್ಸ್ ಪ್ರಶಸ್ತಿ ಮತ್ತೊಂದಿಲ್ಲ. ರಾಜ್ಯಾದ್ಯಂತ ಸಾಹಿತಿಗಳು ಎಂದರೆ ಕೇವಲ ಈ ಜ್ಞಾನಪೀಠ ಪ್ರಶಸ್ತಿ ಪಡೆದ 8 ಜನರ ಭಾವಚಿತ್ರಗಳನ್ನು ಹಾಕಲಾಗುತ್ತದೆ. ಇದು ಸರಿಯಲ್ಲ. ಇದರಿಂದ ತಪ್ಪು ಮಾಹಿತಿ ಹೋಗುತ್ತದೆ. ಇವರಿಗಿಂತಲೂ ಶ್ರೇಷ್ಠ ಸಾಹಿತಿಗಳು ರಾಜ್ಯದಲ್ಲಿದ್ದಾರೆ. ಹೀಗಾಗಿ, ಅವರನ್ನು ಪರಿಚಯಿಸುವ ಕಾರ್ಯ ಆಗಬೇಕಾಗಿದೆ. ವಿಶೇಷವಾಗಿ ಶಾಲಾ ಮಕ್ಕಳಿಗೆ ತಪ್ಪು ತಿಳಿವಳಿಕೆ ಮೂಡಿಸುವಂತೆ ಆಗಬಾರದು. ಇನ್ಮುಂದೆ ಎಂಟೇ ಜನರ ಭಾವಚಿತ್ರ ಹಾಕುವುದನ್ನು ಬಿಡಬೇಕು' ಎಂಬ ಆಗ್ರಹವನ್ನೂ ಕುಂವೀ ಮುಂದಿಟ್ಟರು.
ಅಷ್ಟಕ್ಕೂ ಜ್ಞಾನಪೀಠ ಪ್ರಶಸ್ತಿ ಪಡೆಯಲು ಶ್ರಮ ಪಡುವ ಅಗತ್ಯವಿಲ್ಲ.
ಒಂದೆರಡು ಅನುವಾದ ಮಾಡಿ, ಒಂಚೂರು ಲಾಬಿ ಮಾಡಿದರೆ ಜ್ಞಾನಪೀಠ ಬಂದೇ ಬರುತ್ತದೆ. ಆದರೆ, ನಿಜವಾಗಿ ಮೌಲ್ಯಯುತವಾಗಿರುವುದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಾಗಿದೆ. ಅದರ ಕುರಿತು ತಿಳಿವಳಿಕೆ ಅಗತ್ಯವಾಗಿದೆ ಎಂದರು.
ಸರ್ಕಾರ ಗಡ ಗಡ: ಹೈ- ಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಕರೆಯುವುದು ಸೂಕ್ತ ಮತ್ತು ಅತ್ಯುತ್ತಮ ಹೆಸರು. ಇನ್ನು ಈ ಭಾಗದ ಆರು ಜಿಲ್ಲೆಯವರು ಒಂದಾದರೆ ಕರ್ನಾಟಕ ಸರ್ಕಾರವೇ ಗಡ ಗಡ ನಡುಗುತ್ತದೆ. ಆದರೆ, ಒಂದಾಗುವುದಿಲ್ಲ. ಈ ಭಾಗದ ಅಭಿವೃದ್ಧಿಗೆ ಪ್ರಸಕ್ತ ಬಾರಿಯ ಸರ್ಕಾರವಾದರೂ ಕನಿಷ್ಠ 5000 ಕೋಟಿ ನೀಡಬೇಕು. ಕೊಡದಿದ್ದರೆ ಈ ಭಾಗದ ವತಿಯಿಂದ ಒತ್ತಾಯ ಮಾಡಬೇಕು. ಈ ಸಾರಿ ಮಂಡಿಸುವ ಬಜೆಟ್ನಲ್ಲಿಯೇ ಈ ಬಗ್ಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಹಾಗೂ ಕನ್ನಡದ ಮಾನ, ಮರ್ಯಾದೆ ಎನ್ನುವುದು ಇದ್ದರೆ, ಅದು ಹೈ- ಕ ಪ್ರದೇಶದ ಸಾಹಿತ್ಯದಿಂದಲೇ. ಇಲ್ಲಿ ಪ್ರೇಮ ಕವಿತೆಗಿಂತ ಜೀವನ ಕವಿತೆ, ಜೀವನ ಸಾಹಿತ್ಯ, ನೋವು, ನಲಿವುಗಳ ಕುರಿತು ಇರುವ ಸಾಹಿತ್ಯವಾಗಿದೆ. ಅದು ಕವಿರಾಜಮಾರ್ಗದ ಕಾಲದಿಂದಲೂ ಹಾಗೇ ಇದೆ. ಇಲ್ಲಿರುವ ವ್ಯವಸ್ಥೆ, ಈ ಭಾಗದ ಮೇಲೆ ಆಗಿರುವ ದಾಳಿ ಈ ಭಾಗದವರನ್ನು ಗಟ್ಟಿ ಮಾಡಿ, ಅದರ ವಿರುದ್ಧ ಸಿಡಿದೆಳುವ ಸಾಹಿತ್ಯ ರಚನೆಯಾಗುವುದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ನಿಜಾಮರಿಗಿಂತ ಈಗಿನ ರಾಜಕಾರಣಿಗಳೇ ಅಪಾಯಕಾರಿ. ಈ ಭಾಗದಲ್ಲಿ ಒಂದು ಸೌಧ ಕಟ್ಟುವ, ಸಚಿವ ಸಂಪುಟ ಸಭೆ, ಅಧಿವೇಶನ ನಡೆಸುವ ಕಾರ್ಯವಾಗಬೇಕು. ಇದಕ್ಕಾಗಿ ಈ ಭಾಗದ ಎಲ್ಲ ಚುನಾಯಿತಿ ಪ್ರತಿನಿಧಿಗಳು ಒಂದಾಗಬೇಕು ಎಂದು ಕರೆ ನೀಡಿದರು.
ಆ ಪ್ರಶಸ್ತಿ ಬಂದರೆ ಬಿಪಿ, ಸಕ್ಕರೆ ಕಾಯಿಲೆ ಹೋಗಿಬಿಡಲ್ಲ!
-ಕೀರ್ತಿ ಕೋಲ್ಗಾರ್
ಬೆಂಗಳೂರು: ಮತ್ತೆ 'ಜ್ಞಾನಪೀಠ' ವಿವಾದದ ಗರಿಯಾಗಿದೆ. ಕೊಪ್ಪಳದ ಸಮಾರಂಭದಲ್ಲಿ ಕುಂ. ವೀರಭದ್ರಪ್ಪ ರಾಯಲಸೀಮೆಯ ಭಾಷೆಯಲ್ಲಿ ಜ್ಞಾನಪೀಠಿಗಳ ವಿರುದ್ಧ ಗುಡುಗಿದ್ದಾರೆ. ಅವರ ಪ್ರಕಾರ, 'ಜ್ಞಾನಪೀಠ ನಾನ್ಸೆನ್ಸ್ ಪ್ರಶಸ್ತಿ'. ಡಾ. ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್. ಇಬ್ಬರ ಹೆಸರನ್ನು ನೇರವಾಗಿ 'ಅನರ್ಹ'ರ ಪಟ್ಟಿಗೆ ಸೇರಿಸಿದ್ದಾರೆ. ಇಷ್ಟಾಗ್ಯೂ ಕುಂವೀ ಇನ್ನೂ ಹೇಳುವುದೇನೆಂದರೆ...
-ನಾಳೆಯೇ ನಿಮಗೆ ಜ್ಞಾನಪೀಠ ಪ್ರಶಸ್ತಿ ಬಂದ್ರೆ ಏನ್ ಮಾಡ್ತೀರಿ?
ಪ್ರಯತ್ನ ಮಾಡದೆ ಬಂದರೆ ಓಕೆ. ನನ್ನನ್ನು ನಾನು ದೊಡ್ಡ ಸಾಹಿತಿ ಅಂತ ಬಿಂಬಿಸಿಕೊಳ್ಳಲು ಹೋಗಲಾರೆ. ನನಗದರ ಅಗತ್ಯವೇ ಇಲ್ಲ. ಆದರೆ, ಈಗೀಗ ಜ್ಞಾನಪೀಠಗಳು ಪ್ರಯತ್ನದ ಫಲವಾಗಿಯೇ ಸಿಗುವಂಥದ್ದು. ಯಾವುದೇ ಸಾಹಿತಿಯ ಕೃತಿಗಳು ಇಂಗ್ಲಿಷಿಗೆ ಅನುವಾದಗೊಳ್ಳದೇ ಇದ್ದರೆ ಈ ಗೌರವ ಸಿಗುವುದೇ ಇಲ್ಲ.
-ಅನಂತಮೂರ್ತಿಯವರಿಗೆ, ಕಾರ್ನಾಡರಿಗೆ ಪ್ರಶಸ್ತಿ ಸಿಕ್ಕಿ ಹಲವು ವರ್ಷಗಳೇ ಆಗಿವೆ. ಈಗೇಕೆ ಈ ಹೇಳಿಕೆ?
ಹಾಗೇನೂ ಇಲ್ಲ. ಅನೇಕ ಸಂದರ್ಭಗಳಲ್ಲಿ, ಅವರಿಗೆ ಸಿಕ್ಕ ಕ್ಷಣದಿಂದ ನನ್ನಲ್ಲಿ ಈ ಹೇಳಿಕೆ ಇತ್ತು.'ಜ್ಞಾನಪೀಠ' ರೋಮಾಂಚಕ ಸಂಗತಿಯೇ ಅಲ್ಲ. ಅತ್ಯುಚ್ಚ ಮಟ್ಟದ ಗೌರವವೆನ್ನುವುದು ಸುಳ್ಳು. ಯಾರಿಗೆ ಬಂದರೂ ಬರದೇ ಇದ್ದರೂ ಐ ಡೋಂಟ್ ಕೇರ್. ಇಂಗ್ಲಿಷಿಗೆ ಅನುವಾದಗೊಳ್ಳಬೇಕು, ಅದರೊಂದಿಗೆ ಸ್ವಲ್ಪ ಲಾಬೀನೂ ಮಾಡ್ಬೇಕು. ರವೀಂದ್ರನಾಥ ಟಾಗೋರರ 'ಗೀತಾಂಜಲಿ' ಇಂಗ್ಲೀಷಿಕರಣಗೊಂಡಿದ್ದಕ್ಕೇ ಅವರಿಗೆ ನೋಬೆಲ್ ಬಂತು. ಆ ಇಂಗ್ಲಿಷಿನ ಗೀತಾಂಜಲಿಗೆ ಡಬ್ಲ್ಯು.ಬಿ. ಯೇಟ್ಸ್ ಮುನ್ನುಡಿ ಬರೆದಿದ್ದ. ಯೇಟ್ಸ್ ಆಗ ನೋಬೆಲ್ ಪ್ರಶಸ್ತಿ ಕಮಿಟಿಯಲ್ಲಿದ್ದ. ಯೇಟ್ಸ್ ಇಲ್ಲದಿದ್ದರೆ ಟಾಗೋರರಿಗೆ ನೋಬೆಲ್ ಬರುತ್ತಿರಲಿಲ್ಲ.
-ಜ್ಞಾನಪೀಠಿಗಳ ವರ್ತನೆ, ವ್ಯಕ್ತಿತ್ವಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೇಳಿಕೆ ಕೊಟ್ಟಿರಾ?
ಛೇ ಛೇ, ಇಲ್ಲ. ಜ್ಞಾನಪೀಠವೆನ್ನುವುದೇ ಒಂದು ಗಂಜಿಕೇಂದ್ರ. ಹೀಗಾಗಿ ರಾಜ್ಯೋತ್ಸವದ ವೇಳೆ, ಸ್ಕೂಲುಗಳಲ್ಲಿ ಈ 8 ಮಂದಿಯ ಭಾವಚಿತ್ರವನ್ನು ಹಾಕುವುದಿದೆಯಲ್ಲ ಅದು ತಪ್ಪು. ಜ್ಞಾನಪೀಠ ಸಿಗದೇ ಇರುವ ಅತ್ಯುತ್ತಮ ಲೇಖಕರೂ ನಮ್ಮಲ್ಲಿದ್ದಾರೆ. ಬೇಂದ್ರೆ, ಕುವೆಂಪು, ಮಾಸ್ತಿ, ಚಂದ್ರಶೇಖರ ಕಂಬಾರ ಇವರು ನನಗೆ ಅತಿ ಪ್ರೀತಿಯ ಜ್ಞಾನಪೀಠಿಗಳು. ಸ್ವಲ್ಪ ಪ್ರಮಾಣದಲ್ಲಿ ವಿ.ಕೃ. ಗೋಕಾಕ್ ಅವರು ಕೂಡ. ಆದರೆ ಅನಂತಮೂರ್ತಿ, ಗಿರೀಶ್ ಕಾರ್ನಾಡರಂಥವರ ಫೋಟೋಗಳನ್ನು ಡಿಸ್ಪ್ಲೇ ಮಾಡುವಂಥ ಅಗತ್ಯವಿಲ್ಲ. ಎಸ್.ಎಲ್. ಭೈರಪ್ಪರಂಥ ಲೇಖಕರನ್ನೂ ನಾವು ಪರಿಗಣಿಸಬೇಕು.
- ಜ್ಞಾನಪೀಠ, ಪದ್ಮಶ್ರೀ ಬೇಕೆಂದರೆ ಆಗಾಗ್ಗೆ ದಿಲ್ಲಿಯ ವಿಮಾನವೇರಬೇಕು. ಅಂದರೆ, ಪ್ರಶಸ್ತಿಗಳೂ ಶಕ್ತರ ಸ್ವತ್ತೇ?
ಪದ್ಮಶ್ರೀಯನ್ನು ಅಂಟಿಸಿಕೊಂಡ ತಕ್ಷಣ ಬೋಳು ನೆತ್ತಿ ಮೇಲೆ ಕೂದಲು ಹುಟ್ಟೋದಿಲ್ಲ. ಜ್ಞಾನಪೀಠ ಬಂದುಬಿಟ್ಟರೆ ಬಿಪಿ, ಸಕ್ಕರೆ ಕಾಯಿಲೆ ಹೋಗಿಬಿಡಲ್ಲ. ನಾವು ಚೆನ್ನಾಗಿ ಬರೆಯುವವರೆಗೂ ನಮಗೆ ಜ್ಞಾನಪೀಠ ಇದ್ದೇ ಇರುತ್ತೆ. ಪ್ರಶಸ್ತಿಗಳನ್ನು ಶಕ್ತರ ಸ್ವತ್ತಾಗಲು ಬಿಡಬಾರದು.
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕಮಿಟಿಯ ಸದಸ್ಯರಾಗಿದ್ದ ಕಾರಣಕ್ಕೆ 'ಅಕಾಡೆಮಿಯ ಗೌರವ ಶ್ರೇಷ್ಠ' ಎಂದು ಸಮರ್ಥಿಸಿಕೊಂಡಿರಾ?
ಇದು ಸಮರ್ಥನೆಯಲ್ಲ, ಸತ್ಯ. ನಾನು ಎರಡು ಮೂರು ಸಲ ಈ ಕಮಿಟಿಯ ಸದಸ್ಯನಾಗಿದ್ದೀನಿ. ಖಂಡಿತಾ ಅಲ್ಲಿ ಪರಿಶುದ್ಧ ಆಯ್ಕೆ ನಡೆಯುತ್ತೆ. ಅಲ್ಲಿ ನಾವು ಮೂರ್ನಾಲ್ಕು ತೀರ್ಪುಗಾರರಿರುತ್ತೇವೆ. ಪರಸ್ಪರ ನಮಗೇ ಗೊತ್ತಿರುವುದಿಲ್ಲ. ಛೇಂಬರೊಳಗೆ ಹೋದಾಗಲಷ್ಟೇ ಗೊತ್ತಾಗುತ್ತೆ. ನೀವೇ ನೋಡಿ, ಶ್ರೀನಿವಾಸ ವೈದ್ಯರಂಥ ಬ್ರಾಹ್ಮಣ ಕಮ್ಯುನಿಟಿಗೆ ಸೇರಿದ ವ್ಯಕ್ತಿಯ 'ಹಳ್ಳ ಬಂತು ಹಳ್ಳ' ಕಾದಂಬರಿಯನ್ನು ಆಯ್ಕೆ ಮಾಡಿದ್ದೀವಿ. ಆಯ್ಕೆಮಾಡಿರುವ ನಾವು ಶೂದ್ರರು; ನಾನು, ಬಸವರಾಜ ಕಲ್ಗುಡಿ, ಲಿಂಗದೇವರು ಹಳೆಮನೆ. ಇಲ್ಲಿ ಜಾತಿ ಲಾಬಿ, ಹಣದ ಲಾಬಿ ಸುಳ್ಳು. ಇಲ್ಲಿ ತೀರ್ಪುಗಾರರೇ ಅತಿಗೋಪ್ಯ.
- ಮತ್ತೆ ತೇಜಸ್ವಿಯೂ ಒಮ್ಮೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರದ ಕೊನೇ ಸುತ್ತಿಗೆ ತೀರ್ಪುಗಾರರಾಗಿದ್ದರು. ಹೀಗೆ ತೀರ್ಪುಗಾರರಾದ ಮರುದಿನವೇ 'ಕಂಗ್ರ್ಯಾಟ್ಸ್' ಅಂತ ಫೋನುಗಳು ಬಂದಿದ್ದವು. ಇದು ಹೇಗೆ ಅತಿಗೋಪ್ಯ?
ಇಲ್ಲ, ಹಾಗಾಗುವುದಕ್ಕೆ ಸಾಧ್ಯವೇ ಇಲ್ಲ. ತೀರ್ಪುಗಾರರು ಏನಾದರೂ ಅರ್ಧ ಬಿಯರು ಕುಡಿದು ಯಾರ ಬಳಿಯಾದರೂ ಹೇಳಿಕೊಂಡರೆ ಫೋನುಗಳು ಬರಬಹುದು. ತೇಜಸ್ವಿ ಈಗ ನಮ್ಮೆದುರಿಲ್ಲ. ಆ ಕಾಲದ ಬಗ್ಗೆ ಮಾತಾಡುವುದು ತಪ್ಪು.
-ಈಗೀಗ ಬೆಂಗಳೂರೇತರ ಸಾಹಿತಿಗಳಿಗೆ ಜ್ಞಾನಪೀಠ ಸಿಗುತ್ತಿಲ್ಲ ಎಂಬ ಆಕ್ರೋಶ ನಿಮ್ಮ ಹೇಳಿಕೆಯ ಹಿಂದಿದೆಯಾ?
ಖಂಡಿತ ಆ ಹೊಟ್ಟೆಕಿಚ್ಚು ನನಗಿಲ್ಲ. ಅಷ್ಟಕ್ಕೂ 'ಜ್ಞಾನಪೀಠ' ಸಾಹಿತಿಯ ಎತ್ತರವನ್ನು ನಿರ್ಧರಿಸುವುದಿಲ್ಲ. ಜ್ಞಾನಪೀಠಿಗಳ ಕೃತಿಗಳು ಲಕ್ಷಾಂತರ ಮಾರಾಟವಾಗುವುದಿಲ್ಲ. ಜ್ಞಾನಪೀಠ ಅಂತಿಮ ಗೌರವ ಅಲ್ಲವೇ ಅಲ್ಲ.
ಅದಕ್ಕಿಂತ ಮೀರಿದ್ದಿದೆ. ಜ್ಞಾನಪೀಠದ ಮೂಲಕ ಇವರು ಲೇಖಕರೂಂತ ಗುರುತಿಸುವ ಪ್ರವೃತ್ತಿ ನಿಲ್ಲಬೇಕು. ಆತ್ಮಸಾಕ್ಷಿಗಿಂತ ಮಿಗಿಲಾದ ಪ್ರಶಸ್ತಿ ಯಾವುದೂ ಇಲ್ಲ.
- ವಿವಾದಾತ್ಮಕ ಹೇಳಿಕೆಗಳ ಸಾಹಿತಿ ನೀವಾಗಿರಲಿಲ್ಲ. ಈ ಪರಂಪರೆಯ ಪಟ್ಟಿಗೆ ಕನ್ನಡಿಗ ನಿಮ್ಮನ್ನೂ ಸೇರಿಸಿದರೆ?
ಯಾರೋ ಭಾಷಣದ ಅತ್ಯುತ್ಸಾಹದಲ್ಲಿ 'ಕುಂವೀ ಅವರಿಗೆ ಜ್ಞಾನಪೀಠ ಸಿಗ್ಬೇಕಿತ್ತು' ಅಂತಂದರು. ಅದಕ್ಕೆ ನಾನು ಜ್ಞಾನಪೀಠದ ಮೌಲ್ಯವನ್ನು ಕನ್ನಡಿಗರಿಗೆ ತಿಳಿಸಿಕೊಟ್ಟೆಯಷ್ಟೇ. ಜ್ಞಾನಪೀಠ ನಾನ್ಸೆನ್ಸ್ ಅಂದೆ. ನನಗೆ ಅನಂತಮೂರ್ತಿ ಪ್ರೀತಿಯ ಲೇಖಕರು. ಅವರ 'ಸೂರ್ಯನ ಕುದುರೆ'ಯನ್ನು ಹತ್ತಾರು ಸಲ ಓದಿದ್ದೀನಿ. ಕಾರ್ನಾಡರ ನಾಟಕಗಳು ನನಗೆ ಇಷ್ಟ ಆಗಲ್ಲ. ಅದರಲ್ಲಿ ಕನ್ನಡತನವಿಲ್ಲ, ಏನೂ ಇಲ್ಲ. ಅವರನ್ನು ಎಲ್ಲರೂ ಅಟ್ಟಕ್ಕೇರಿಸಿ ಕೂರಿಸಿದ್ದಾರೆ. ಅದೇ ನನಗೆ ಅರ್ಥವಾಗುವುದಿಲ್ಲ.
- ಜ್ಞಾನಪೀಠ ಬಿಡಿ, ನಮ್ಮಲ್ಲೂ ಕೆಲವೊಂದು ಪ್ರಶಸ್ತಿಗಳಿಗೆ ಪಾದಪೂಜೆ ನಡೆಸಲೇಬೇಕು. ಜ್ಞಾನಪೀಠದಂತೆ ಇನ್ನ್ಯಾವ ಪ್ರಶಸ್ತಿಗಳು ಅನರ್ಹರ ಪಾಲಾಗುತ್ತಿವೆ?
ಅನೇಕ ಪ್ರಶಸ್ತಿಗಳು ಆಗುತ್ತಿವೆ. ಆಗಲಿ ಬಿಡಿ. ಈ ಪ್ರಶಸ್ತಿಗಳಿಂದ ಕನ್ನಡದ ಉದ್ಧಾರ ಸಾಧ್ಯವಿಲ್ಲ. ಈಗಿನ ಯುವಕರು ಚೆನ್ನಾಗಿ ಬರೀತಿದ್ದಾರೆ. ಅವರಿಗೇನು ಜ್ಞಾನಪೀಠ ಬರ್ಲಿಲ್ಲ ಎಂಬ ಬೇಸರ ಇದೆಯಾ? ಇಲ್ಲ. ಅವರೆಲ್ಲ ಕನ್ನಡಕ್ಕೆ 8 ಜ್ಞಾನಪೀಠ ಬಂದಿದೆ ಅಂತ ಬರೆಯುತ್ತಿಲ್ಲ. ಯುವ ಲೇಖಕರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಅದನ್ನು ಬಿಟ್ಟು ಇವರನ್ನು ಹೊಗಳಿ, ಭಜಿಸುವುದೇಕೆ?
-ಆರೋಗ್ಯ ಸರಿಯಿರುವ ಜ್ಞಾನಪೀಠಿಗಳೂ ಸಮ್ಮೇಳನಗಳಿಗೆ ಬರುವುದಿಲ್ಲ. ಭತ್ಯೆ, ಹೈಫೈ ಸೌಲಭ್ಯಗಳ ಬೇಡಿಕೆ ಮುಂದಿಡುತ್ತಾರೆ. ಹೀಗೇಕೆ?
ಇಲ್ಲ, ಅವೆಲ್ಲ ಅವರವರ ವೈಯಕ್ತಿಕ. ಮೊನ್ನೆ ಮಡಿಕೇರಿಗೆ ನಾನೇ ಹೋಗೋಕ್ಕಾಗ್ಲಿಲ್ಲ. ನನ್ನ ತಾಯಿಗೆ ಆರೋಗ್ಯ ಸರಿ ಇರಲಿಲ್ಲ. ಹೀಗೆ ಅವರಿಗೂ ಏನೇನೋ ಸಮಸ್ಯೆಗಳು ಇತ್ತೇನೋ.
-ಇನ್ನು ಯಾರಿಗೆ ಜ್ಞಾನಪೀಠ ಬಂದರೂ ಅನುಮಾನದ ದೃಷ್ಟಿ ಬೀಳುತ್ತದೆ. ಹಾಗಾದರೆ, '6 ಮಂದಿಯಷ್ಟೇ ಅರ್ಹ ಜ್ಞಾನಪೀಠಿ' ಎಂದು ಒಪ್ಪಿಕೊಳ್ಳೋಣವೇ?
ಹಾಗೆಲ್ಲ ಬೇಡ. 'ಇವರಿಗೆ ಬರಲೇಬಾರದಿತ್ತು' ಎಂಬ ನಿರ್ಣಯ ನನ್ನದಲ್ಲ. ಇವರಿಗಿಂತ ಮುಂಚೆ ಜಿಎಸ್ಸೆಸ್, ತೇಜಸ್ವಿ, ಲಂಕೇಶ್, ಕಣವಿ, ಎಸ್.ಎಲ್. ಭೈರಪ್ಪ ಇದ್ದರು. 10, 11ನೇ ಸ್ಥಾನದಲ್ಲಿ ಇವರಿಬ್ಬರು ಇರಬೇಕಿತ್ತು. ಅದೇ ತಪ್ಪಾಗಿಹೋಗಿದೆ. ಏನು ಮಾಡೋಣ?್ಙ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಣ್ಯರಿಗೆ ಬಂದಿರುವ ಹಾಗೆಯೇ ಜ್ಞಾನಪೀಠ ಪ್ರಶಸ್ತಿ ಕೂಡ ಪ್ರತಿಷ್ಠಿತರಿಗೆ ಬಂದಿದೆ. ಇವೆರಡೂ ಸಮಾನಾಂತರ ಪ್ರಶಸ್ತಿಗಳಿಗೆ ಪ್ರತ್ಯೇಕ ನಿಯಮಾವಳಿ-ಅಳತೆಗೋಲು ಮಾತ್ರವಲ್ಲ ಘನತೆಯೂ ಇದೆ. ಹಾಗಾಗಿ ಒಂದು ರಾಷ್ಟ್ರೀಯ ಪ್ರಶಸ್ತಿಯನ್ನು ಲಘುವಾಗಿ ಟೀಕಿಸುವುದು ಉಚಿತವಲ್ಲ.
-ಹಂಪ ನಾಗರಾಜಯ್ಯ, ಸಾಹಿತಿ
ರಾದ್ಧಾಂತಕ್ಕೆ ಕಾರಣರಾದ ಡಾ.ವಿ.ಬಿ. ರಡ್ಡೇರ್ ಪರಿಚಯ!
ಸಮಾರಂಭದಲ್ಲಿ ಸಾಹಿತಿ ಕುಂವೀ ಅವರ ಅಸಮಾಧಾನಕ್ಕೆ ಕಾರಣವಾಗಿದ್ದು ಡಾ.ವಿ.ಬಿ. ರಡ್ಡೇರ್ ಅವರ ಪರಿಚಯ ಭಾಷಣ. ರಡ್ಡೇರ್ ಅವರು ಸಾಹಿತಿ ಕುಂವೀ ಅವರ ಜೀವನ ಪರಿಚಯ, ಸಾಹಿತ್ಯದ ಕುರಿತು ಎಳೆ ಎಳೆಯಾಗಿ ತಮ್ಮ ಪರಿಚಯ ಭಾಷಣದಲ್ಲಿ ಹೇಳಿದ ನಂತರ 'ಕುಂ.ವೀರಭದ್ರಪ್ಪ ಅವರು ಹೈದರಾಬಾದ್ ಕರ್ನಾಟಕದ ಅತ್ಯುತ್ತಮ ಗದ್ಯ ಸಾಹಿತಿಯಾಗಿದ್ದಾರೆ. ಈ ಭಾಗದ ಗದ್ಯ ಸಾಹಿತಿಗಳ ಕೊರತೆಯನ್ನು ಅವರು ನೀಗಿಸಿದ್ದಾರೆ. ಅವರು ಸಾಹಿತ್ಯದ ಮೂಲಕ ಶೋಷಿತರ ಪರ ಧ್ವನಿ ಎತ್ತಿದ್ದಾರೆ. ಇಂಥವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗುವಂತಾಗಲಿ ಎಂದು ಈ ಮೂಲಕ ಹಾರೈಸುತ್ತೇನೆ' ಎಂದು ಹೇಳಿದರು. ಆದರೆ, ಡಾ.ರಡ್ಡೇರ್ ಅವರ ಈ ಹೇಳಿಕೆ ಕುಂವೀ ಅವರನ್ನು ಕೆರಳಿಸುವಂತೆ ಮಾಡಿ, ಜ್ಞಾನಪೀಠ ಪ್ರಶಸ್ತಿ ವಿರುದ್ಧವೇ ಹರಿಹಾಯುವಂತಾಯಿತು.
ಕುಂವೀ ಟೀಕೆಗೆ ನೋ ಆ್ಯಕ್ಷನ್ ಮತ್ತು ರಿಯಾಕ್ಷನ್. ನೋ ಆ್ಯಕ್ಷನ್ ಏಕೆಂದರೆ ದೇಹದಲ್ಲಿ ಅವರು ಬಲವಾಗಿದ್ದಾರೆ. ನೋ ರಿಯಾಕ್ಷನ್ ಏಕೆಂದರೆ ಟೀಕೆಯಲ್ಲಿ ಹುರುಳಿಲ್ಲ. ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೇ ಶ್ರೇಷ್ಠ ಎಂದಿದ್ದು ಸಂತೋಷದ ವಿಚಾರ.
-ಡಾ.ಯು.ಆರ್.ಅನಂತಮೂರ್ತಿ, ಜ್ಞಾನಪೀಠ ಪುರಸ್ಕೃತ ಸಾಹಿತಿ
ಪ್ರಶಸ್ತಿ ಶ್ರೇಷ್ಠ, ಕನಿಷ್ಠ ಎಂಬುದು ಸರಿಯಲ್ಲ. ಅಂತಿಮವಾಗಿ ಪ್ರಶಸ್ತಿಗೆ ಗೌರವ ಬರುವುದು ಯಾರು ಆ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಎಂಬುದರ ಮೇಲೆಯೇ ಹೊರತು ಅದರ ಹೆಸರು ಅಥವಾ ಪ್ರಶಸ್ತಿಯ ಮೊತ್ತದಿಂದಲ್ಲ. ಸಂವೇದನಾಶೀಲ ಓದುಗರು ಯಾರನ್ನು ದೊಡ್ಡವರು ಅಂದುಕೊಂಡಿದ್ದಾರೋ ಅವರೆಲ್ಲ ದೊಡ್ಡವರೇ, ಅದಕ್ಕೆ ಪ್ರಶಸ್ತಿಯೇ ಬರಬೇಕೆಂದಿಲ್ಲ.
-ಕೆ.ಮರುಳಸಿದ್ದಪ್ಪ, ಸಾಹಿತಿ
ಪ್ರಶಸ್ತಿಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ. ಪ್ರತಿ ಪ್ರಶಸ್ತಿಗೂ ಅದರದ್ದೇ ಆದ ಘನತೆಯಿದೆ. ಇದುವರೆಗೂ ಜ್ಞಾನಪೀಠ ಪ್ರಶಸ್ತಿ ಬಂದಿರುವ ಎಲ್ಲರೂ ಆ ಪ್ರಶಸ್ತಿಗೂ ಮಿಗಿಲಾದವರಾಗಿದ್ದಾರೆ. ಅನಂತಮೂರ್ತಿ, ಕಂಬಾರ, ಕಾರ್ನಾಡ್ ಕನ್ನಡಕ್ಕೆ ನೀಡಿರುವ ಕೊಡುಗೆ ದೊಡ್ಡದು.
-ಬಿ.ಆರ್.ಲಕ್ಷ್ಮಣರಾವ್, ಕವಿ.