ಇಂದು, ನಾಳೆ ಬ್ಯಾಂಕಿಲ್ಲ
ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರ್ವಜನಿಕ ರಂಗದ ಎಲ್ಲ ಬ್ಯಾಂಕ್‌ಗಳ ನೌಕರರು ದೇಶಾದ್ಯಂತ ಫೆ.10 ಮತ್ತು 11ರಂದು ಮುಷ್ಕರ ನಡೆಸಲಿದ್ದಾರೆ.
ನವದೆಹಲಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರ್ವಜನಿಕ ರಂಗದ ಎಲ್ಲ ಬ್ಯಾಂಕ್‌ಗಳ ನೌಕರರು ದೇಶಾದ್ಯಂತ ಫೆ.10 ಮತ್ತು 11ರಂದು ಮುಷ್ಕರ ನಡೆಸಲಿದ್ದಾರೆ.
ವೇತನವನ್ನು ಶೇ.10ಕ್ಕಿಂತ ಹೆಚ್ಚಳ ಮಾಡುವ ಸಂಬಂಧ ಮುಖ್ಯ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಬ್ಯಾಂಕ್ ಅಸೋಸಿಯೇಷನ್ ಹಾಗೂ ನೌಕರರ ಒಕ್ಕೂಟದ ಪ್ರತಿನಿಧಿಗಳ ನಡುವೆ ಫೆ. 6ರಂದು ನಡೆದ ಸಂಧಾನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಬ್ಯಾಂಕ್ ನೌಕರರ ಒಕ್ಕೂಟಗಳು ಮುಷ್ಕರಕ್ಕಿಳಿಯುವ ನಿರ್ಧಾರಕ್ಕೆ ಬಂದಿವೆ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್‌ಬಿಯು) ಸಂಚಾಲಕ ಎಂ.ವಿ. ಮುರಳಿ ಮಾಹಿತಿ ನೀಡಿದ್ದಾರೆ.
ಈ ಎರಡು ದಿನ ಸರ್ಕಾರಿ ಬ್ಯಾಂಕ್‌ಗಳಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ. ಈ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಪೂರ್ವಭಾವಿಯಾಗಿಯೇ ಮಾಹಿತಿ ನೀಡಿದೆ. ಆದರೆ, ಐಸಿಐಸಿಐ, ಎಚ್‌ಡಿಎಫ್‌ಸಿಯಂಥ ಖಾಸಗಿ ರಂಗದ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಡಿ.18ರಂದೂ...: ವೇತನ ಪರಿಷ್ಕರಣೆಗೆ ಸಂಬಂಧಿಸಿ ಸಾರ್ವಜನಿಕ ರಂಗದ ಬ್ಯಾಂಕ್ ನೌಕರರು ಡಿ.18 ರಂದೂ ಒಂದು ದಿನದ ಮುಷ್ಕರಕ್ಕಿಳಿದಿದ್ದರು. ಸಾರ್ವಜನಿಕ ರಂಗದ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆ ವಿಚಾರ ನ.2012ರಿಂದ ಇತ್ಯರ್ಥವಾಗದೆ ಉಳಿದಿದೆ. ದೇಶದಲ್ಲಿ ಒಟ್ಟು 27 ಸರ್ಕಾರಿ ಬ್ಯಾಂಕ್‌ಗಳಿದ್ದು, ಇದರಲ್ಲಿ 8 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಕನ್ನಡಪ್ರಭ ಟಿಪ್ಸ್
ಎಲ್ಲರೂ ಎಟಿಎಂನಿಂದಲೇ ಹಣ ವಿತ್‌ಡ್ರಾ ಮಾಡಲು ಮುಂದಾದರೆ ಅಲ್ಲಿ ಹಣದ ಅಭಾವ ಕಾಣಿಸಿಕೊಳ್ಳಬಹುದು. ಹೀಗಾಗಿ ಎಷ್ಟು ಬೇಕೋ ಅಷ್ಟು ಮೊತ್ತವನ್ನು ಮಾತ್ರ ಪಡೆದುಕೊಳ್ಳಿ.
ತೀರಾ ಅನಿವಾರ್ಯವಾದರೆ ಮಾತ್ರ ಸೋಮವಾರ, ಮಂಗಳವಾರ ಹಣಕಾಸಿನ ವಹಿವಾಟು ಇಟ್ಟುಕೊಳ್ಳಿ. ಇಲ್ಲದಿದ್ದರೆ ಬುಧವಾರಕ್ಕೆ ಮುಂದೂಡಿ.
ಅನಿವಾರ್ಯದ ಹಣಕಾಸಿನ ವಹಿವಾಟಿಗೆ ಆನ್‌ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಬಳಕೆ ಮಾಡಿ.
ಶಾಪಿಂಗ್ ಮಾಡುವಾಗ ಮತ್ತು ಸಾಧ್ಯವಿರುವ ಎಲ್ಲ ಕಡೆ ನಗದಿನ ಬದಲು ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ
ಹೆಚ್ಚುವರಿ ಹಣ ಹಾಕಿದ್ದೇವೆ
ಮುಷ್ಕರದ ನಿರ್ಧಾರ ಮೊದಲೇ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶನಿವಾರವೇ ಎಲ್ಲ ಬ್ಯಾಂಕ್‌ಗಳು ಎಟಿಎಂಗಳಿಗೆ ಹೆಚ್ಚುವರಿ ಹಣ ಹಾಕಿವೆ. ಹೀಗಾಗಿ ಸೋಮವಾರ ಗ್ರಾಹಕರಿಗೆ ಹಣದ ಸಮಸ್ಯೆಯಾಗುವ ಸಾಧ್ಯತೆ ಕಡಿಮೆ. ಆದರೆ, ಮಂಗಳವಾರ ಕೆಲವೆಡೆ ಎಟಿಎಂ ಕೇಂದ್ರಗಳಲ್ಲಿ ಹಣದ ಅಭಾವ ಕಾಣಿಸಿಕೊಳ್ಳಬಹುದು ಎಂದು ಬ್ಯಾಂಕ್‌ಗಳು ತಿಳಿಸಿವೆ.
ಏನೇನು ಬಂದ್
27 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು
50 000 ಕ್ಕೂ ಅಧಿಕ ಶಾಖೆಗಳು
ಭಾಗವಹಿಸಲಿರುವ ನೌಕರರ ಸಂಖ್ಯೆ
1 ಲಕ್ಷಕ್ಕೂ ಅಧಿಕ
ಏನೇನು ತೊಂದರೆ ಆಗಲಿದೆ
ಚೆಕ್ ಕ್ಲಿಯರೆನ್ಸ್
ಸೇವಿಂಗ್ಸ್ ಖಾತೆ ಸೇರಿದಂತೆ ಎಲ್ಲ ಹಣಕಾಸು ಸೇವೆಗಳಲ್ಲಿ ವ್ಯತ್ಯಯ
ವಿದೇಶಿ ವಿನಿಮಯಕ್ಕೆ ಅಡಚಣೆ
ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್‌ಗೆ ಅಡ್ಡಿ ಆದರೂ ಆಗಬಹುದು
ಬ್ಯಾಂಕಿಂಗ್ ಕ್ಷೇತ್ರಕ್ಕೆ ನಷ್ಟವೆಷ್ಟು?
ರು. 5 ಲಕ್ಷ ಕೋಟಿ (ಅಂದಾಜು)
ಬೇಡಿಕೆ ಏನು?
ವೇತನ ಪರಿಷ್ಕರಣೆ
ಅನುಕಂಪ ಆಧಾರಿತ ಉದ್ಯೋಗ ನೀಡಿಕೆ
ವಾರದಲ್ಲಿ ಐದು ದಿನಗಳ ಕೆಲಸ
ಬ್ಯಾಂಕ್‌ಗಳ ವಿಲೀನ ಬೇಡ
ಹೊಸ ಬ್ಯಾಂಕ್‌ಗಳು ವಿಶೇಷವಾಗಿ ವಿದೇಶಿ ಬ್ಯಾಂಕ್‌ಗಳ ಸ್ಥಾಪನೆಗೆ ವಿರೋಧ
ದಿನೇ ದಿನೆ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಹೋಲಿಸಿದರೆ ಬ್ಯಾಂಕ್ ಮ್ಯಾನೇಜ್‌ಮೆಂಟ್ ಮುಂದಿಟ್ಟಿರುವ ವೇತನ ಹೆಚ್ಚಳದ ಪ್ರಸ್ತಾವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಮುಷ್ಕರಕ್ಕಿಳಿಯುವುದು ಅನಿವಾರ್ಯವಾಯಿತು.
-ಅಶ್ವಿನಿ ರಾಣಾ, ಬ್ಯಾಂಕ್ ನೌಕರರ ರಾಷ್ಟ್ರೀಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ
ಕಾರ್ಯನಿರ್ವಹಿಸಲಿರುವ ಖಾಸಗಿ ಬ್ಯಾಂಕ್
ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್