ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸುವರ್ಣಗ್ರಾಮಕ್ಕೆ ಕೈಕೊಟ್ಟ ಕಾಂಚಾಣ

ಮಹತ್ವಾಕಾಂಕ್ಷಿ 'ಸುವರ್ಣ ಗ್ರಾಮೋದಯ' ಯೋಜನೆ ಕಾಮಗಾರಿಗಳು ಕಾಸಿಲ್ಲದೆ ಕುಂಟುತ್ತಿವೆ. ಸರ್ಕಾರ ಹಣ ಬಿಡುಗಡೆ ಮಾಡದ್ದರಿಂದ ಕಾಮಗಾರಿಗಳು ಅರ್ಧಕ್ಕೇ ನಿಂತುಹೋಗಿವೆ.

Srinivasa Murthy VN
Updated On : 9 Feb 2014, 11:04 am

ಮೊದಲ ಹಂತದ ಕಾಮಗಾರಿ ಮಾತ್ರ ತ್ವರಿತವಾಗಿ ನಡೆದು, 2,3ನೇ ಹಂತಕ್ಕೆ ಹಣವಿಲ್ಲ
-ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು:
ಮಹತ್ವಾಕಾಂಕ್ಷಿ 'ಸುವರ್ಣ ಗ್ರಾಮೋದಯ' ಯೋಜನೆ ಕಾಮಗಾರಿಗಳು ಕಾಸಿಲ್ಲದೆ ಕುಂಟುತ್ತಿವೆ. ಸರ್ಕಾರ ಹಣ ಬಿಡುಗಡೆ ಮಾಡದ್ದರಿಂದ ಕಾಮಗಾರಿಗಳು ಅರ್ಧಕ್ಕೇ ನಿಂತುಹೋಗಿವೆ.
ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ಗ್ರಾಮಗಳ ಸಂಖ್ಯೆಯೇ ಹೆಚ್ಚಾಗುತ್ತಿದ್ದು, ಅನುದಾನ ಬಿಡುಗಡೆ  ಆಗದ್ದರಿಂದ ದಿನದಿನಕ್ಕೂ ಯೋಜನೆ ಅಶಕ್ತವಾಗುತ್ತಿದೆ. ಪರಿಣಾಮವಾಗಿ ಹಳ್ಳಿಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹಳ್ಳ ಹಿಡಿಯುತ್ತಿವೆ. ಬಿಲ್ ಪಾವತಿಯಾಗುತ್ತಿಲ್ಲ ಎಂದು ಗುತ್ತಿಗೆದಾರರು ರಸ್ತೆ, ಚರಂಡಿ ಕೆಲಸಗಳನ್ನು ಅರ್ಧಕ್ಕೇ ನಿಲ್ಲಿಸಿ 'ಅನಾಥ'ಗೊಳಿಸಿದ್ದಾರೆ.
ಸರ್ಕಾರ ಈವರೆಗೆ ಬಿಡುಗಡೆ ಮಾಡಿರುವ ಅನುದಾನದಲ್ಲಿ 1ನೇ ಹಂತ ಮಾತ್ರ ತ್ವರಿತವಾಗಿ ನಡೆಸಲಾಗುತ್ತಿದೆ. ಉಳಿದಂತೆ 2ರಿಂದ 5ನೇ ಹಂತಕ್ಕೆ ನಿರೀಕ್ಷಿತ ಹಣವಿಲ್ಲ. ಈ ಕಾಮಗಾರಿಗಳು ಅನುದಾನವಿಲ್ಲದೆ ಪ್ರಾರಂಭವಾಗಿ ನಿಂತುಹೋಗಿವೆ. 2 ಮತ್ತು 4ನೇ ಹಂತಕ್ಕೆ ಒಂದೆರಡು ಪ್ರಭಾವಿ ಜಿಲ್ಲೆಗಳನ್ನು ಬಿಟ್ಟು ಉಳಿದೆಡೆ ಕೆಲಸವೇ ಆಗಿಲ್ಲ.

ಒಟ್ಟಾರೆ ಸುವರ್ಣ ಗ್ರಾಮೋದಯ ಯೋಜನೆಯ ಎಲ್ಲಾ ಹಂತಗಳ ಅನುಷ್ಠಾನಕ್ಕೆ ಇನ್ನೂ 870 ಕೋಟಿ ಅನುದಾನ ಅಗತ್ಯವಿದ್ದು, ಇದನ್ನು ಒದಗಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ.
ಎಡವಿದ್ದು ಎಲ್ಲಿ?: ವಾಸ್ತವದಲ್ಲಿ ಈ ಯೋಜನೆಗೆ ಹಳ್ಳಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲೇ ಸರ್ಕಾರ ಎಡವಿದೆ. ಅದೇ ತಪ್ಪು ಈಗಲೂ ನಡೆಯುತ್ತಿದೆ. ಅಂದರೆ, 4000 ಜನಸಂಖ್ಯೆ ಇರುವ ಪ್ರತಿ ಗ್ರಾಮಕ್ಕೆ 1ಕೋಟಿ ಸಿಗುವಂತೆ ಗ್ರಾಮ ಆಯ್ಕೆ ಮಾಡಬೇಕಿತ್ತು. ಆದರೆ ಗ್ರಾಮಗಳ ಆಯ್ಕೆ ಸ್ಥಳೀಯ ಶಾಸಕರ ಶಿಫಾರಸಿನ ಮೇರೆಗೆ ನಡೆಯುತ್ತಿದೆ. ಇತ್ತೀಚಿಗೆ, ಹಿಂದಿನ ಶಾಸಕರು ಮಾಡಿದ ಆಯ್ಕೆಗಳನ್ನೇ ರದ್ದುಗೊಳಿಸಿ, ಹೊಸ ಗ್ರಾಮ ಸೇರಿಸಲಾಗಿದೆ.
ಹೀಗೆ ಗ್ರಾಮಗಳ ಆಯ್ಕೆ ಅವೈಜ್ಞಾನಕವಾಗಿದ್ದು ಯೋಜನೆ ದಿಕ್ಕುಕಾಣದಂತಾಗಿದೆ. ಇದರಿಂದಾಗಿ ಪ್ರತಿ ವರ್ಷ ಯೋಜನೆಗೆ ಸೇರುವ ಗ್ರಾಮಗಳು ಹೆಚ್ಚಾಯಿತೇ ವಿನಃ ಅದಕ್ಕೆ ಸಿಗುವ ಅನುದಾನ ಹೆಚ್ಚಾಗಲಿಲ್ಲ. ಸಹಜವಾಗಿಯೇ ಹಣದ ಕೊರತೆ ಶುರುವಾಗಿ ಸೊರಗಲಾರಂಭಿಸಿತು.
ಕೈ ಕೊಟ್ಟು ಇಲಾಖೆಗಳು: ಗ್ರಾಮೊಛದಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನವಾಗಿ ಅನುದಾನ ನೀಡಬೇಕು. ಹಾಗೆಯೇ ಉಳಿದ ಎಲ್ಲಾ ಇಲಾಖೆಗಳು ಗ್ರಾಮೋದಯಕ್ಕೆ ಪೂರಕ ಅನುದಾನ ಒದಗಿಸಬೇಕು.
ಅಂದರೆ, ಶಾಲೆ ಅಭಿವೃದ್ಧಿಗೆ ಶಿಕ್ಷಣ ಇಲಾಖೆ, ರಸ್ತೆಗೆ ಲೋಕೋಪಯೋಗಿ ಇಲಾಖೆ, ಆಸ್ಪತ್ರೆಗೆ ಆರೋಗ್ಯ ಇಲಾಖೆಯಂತೆ ಎಲ್ಲಾ ಇಲಾಖೆಗಳು ಅನುದಾನ ಒದಗಿಸಬೇಕು. ಆಗಷ್ಟೆ ಗ್ರಾಮ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ. ಇದೇ ಸುವರ್ಣ ಗ್ರಾಮೋದಯದ ಜೀವಾಳ ಕೂಡ.
ಆದರೆ ಈ ಯೋಜನೆ ಆ ನಿಟ್ಟಿನಲ್ಲಿ ಹೋಗುತ್ತಲೇ ಇಲ್ಲ. ಪ್ರತಿ ವರ್ಷ ಸುವರ್ಣ ಗ್ರಾಮೋದಯ ಎಂದೊಡನೆ ಆರ್‌ಡಿಪಿಆರ್ ಬಿಟ್ಟರೆ ಉಳಿದ ಇಲಾಖೆಗಳು ಯೋಜನೆಗೆ ಅನುದಾನ ನೀಡುತ್ತಿಲ್ಲ. ಯೋಜನೆಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಇತರ ಇಲಾಖೆಗಳು ಭಾವಿಸಿವೆ.  ಹೀಗಾಗಿ ಯೋಜನೆ ವ್ಯಾಪ್ತಿಯಲ್ಲಿ ಗ್ರಾಮಕ್ಕೆ ಸಿಗುತ್ತಿರುವ ಅನುದಾನಗಳು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿ ಗ್ರಾಮಗಳಲ್ಲಿ ರಸ್ತೆ, ಮೋರಿ ಬಿಟ್ಟರೆ ಬೇರೆ ಯಾವ ಕೆಲಸವೂ ಆಗಿಲ್ಲ.
ಯೋಜನೆ ಪ್ರಗತಿಗೆ ಪರಿಹಾರವೇನು ?: ರಾಜ್ಯಾದ್ಯಂತ 5555 ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದ್ದರೂ, ಬಜೆಟ್‌ನಲ್ಲಿ ನಿಗದಿ ಮಾಡಿದ್ದು ಮಾತ್ರ 3,434ಕೋಟಿ. ಆದರೆ ಅದರಲ್ಲೂ 2,592 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಉಳಿದ ಅನುದಾನ ಇನ್ನೂ ಲಭ್ಯವಾಗಿಲ್ಲ.
ಬೆಳಗಾವಿ ಅಧಿವೇಶನದಲ್ಲಿ ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದ ಸರ್ಕಾರ 100ಕೋಟಿ ಬಿಡುಗಡೆ ಮಾಡಿತು. ಈಗ ಬಜೆಟ್‌ನಲ್ಲಿ ಮತ್ತೆ 150ಕೋಟಿ ಮಂಜೂರು ಮಾಡುವ ಆಲೋಚನೆ ಮಾಡಿದೆ. ಆದರೆ ವಾಸ್ತವದಲ್ಲಿ ಯೋಜನೆಗೆ ಬೇಕಿರುವುದು 870ಕೋಟಿಗಳಿಗೂ ಅಧಿಕ. ಇದು ಸಿಕ್ಕರೆ ಮಾತ್ರ ಏನಾದರೂ ಸಾಧಿಸಬಹುದು ಎನ್ನುತ್ತಾರೆ ಯೋಜನೆ ಅನುಷ್ಠಾನ ಅಧಿಕಾರಿಗಳು.

ಹಂತ    ಆಯ್ಕೆಯಾದ     ನಿಗದಿಯಾದ     ಬಿಡುಗಡೆ
    ಗ್ರಾಮಗಳು    ಅನುದಾನ    ಆಗಿದ್ದು

1    1204    1000    950
2    222    208    190
3    1574    1012    960
4    381    214    192
5    2174    1000    299

ಹಣವಿಲ್ಲದೆ ಅನೇಕ ಕಡೆ ಕಾಮಗಾರಿಗಳು ನಿಂತಿವೆ. ಬಜೆಟ್‌ನಲ್ಲಿ 1500 ಕೋಟಿ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ.
-ಬಸವರಾಜ ರಾಯರೆಡ್ಡಿ, ಕಾಂಗ್ರೆಸ್ ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement