ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಸಚಿವ ರಾಮದಾಸ್

ಮಹಿಳೆಯೊಬ್ಬರು ತಮ್ಮ ವಿರುದ್ಧ ಮಾಡಿದ...

Srinivasa Murthy VN
Updated On : 12 Feb 2014, 1:35 am

ಮೈಸೂರು: ಮಹಿಳೆಯೊಬ್ಬರು ತಮ್ಮ ವಿರುದ್ಧ ಮಾಡಿದ ಆರೋಪದಿಂದ ಮನನೊಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ಅವರ ಮನೆಯಲ್ಲಿ ಸಂಭವಿಸಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರೇಮಕುಮಾರಿ ಎಂಬುವರು ರಾಮದಾಸ್ ತಮಗೆ 5 ವರ್ಷಗಳಿಂದ ಪರಿಚಿತರಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ತಮ್ಮನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ.  ಬುಧವಾರ ಸುದ್ದಿಗೋಷ್ಠಿ ನಡೆಸಲು ಪ್ರೇಮಕುಮಾರಿ ಪತ್ರಕರ್ತರ ಭವನದಲ್ಲಿ ಕಾಲಾವಕಾಶ ಪಡೆಯಲು ಮಂಗಳವಾರ ಬಂದಿದ್ದರು. ಈ ವೇಳೆ ವಿಷಯ ಪತ್ರಕರ್ತರಿಗೆ ಬಹಿರಂಗವಾಗಿದೆ. ಆಗ ಸಂಪೂರ್ಣ ವಿವರವನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸುವುದಾಗಿ ಪ್ರೇಮ ಹೇಳಿದ್ದಾರೆ. ಈ ವಿಷಯ ಕೆಲವು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮನನೊಂದ ರಾಮದಾಸ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಯಾರು ಈ ಪ್ರೇಮಾಕುಮಾರಿ?: ಪ್ರೇಮಾಕುಮಾರಿ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರಾಗಿ ಸರ್ಕಾರಿ ನೌಕರಿ ಸಿಕ್ಕಿತ್ತು. ಅವರಿಗೆ 5 ವರ್ಷಗಳ ಹಿಂದೆ ಮೈಸೂರಿಗೆ ವರ್ಗಾವಣೆ ಬಯಸಿದಾಗ ರಾಮದಾಸ್ ಅವರ ಪರಿಚಯವಾಗಿತ್ತು. ಪ್ರೇಮಾಕುಮಾರಿ ಅವರು ಹೇಳುವ ಪ್ರಕಾರ, ಈ ಪರಿಚಯ ಪ್ರೇಮಕ್ಕೆ ತಿರುಗಿ ಅಂದಿನಿಂದಲೂ ತಮ್ಮನ್ನು ಅನಧಿಕೃತವಾಗಿ ಪತ್ನಿಯನ್ನಾಗಿ ಸ್ವೀಕರಿಸಿದ್ದರು. ಅಲ್ಲದೇ ನಾಲ್ಕು ತಿಂಗಳ ಹಿಂದೆ ಮೈಸೂರಿನ ಗೋಕುಲಂನಲ್ಲಿರುವ ರಾಮದಾಸ್ ಅವರ ಮನೆಯಲ್ಲಿ ಸಿಂಧೂರ ಇಟ್ಟು ವಿವಾಹವಾಗಿದ್ದರು. ಜತೆಗೆ ಈ ವಿಷಯವನ್ನು ಗೌಪ್ಯವಾಗಿಡುವಂತೆ ಅವರು ಕೇಳಿಕೊಂಡಿದ್ದರು ಎಂದು ಹೇಳಿದ್ದಾರೆ. ಈ ನಡುವೆ ನನಗೆ ತುಮಕೂರಿಗೆ ವರ್ಗವಾಗಿತ್ತು. ಇದಕ್ಕೆ ರಾಮದಾಸ್ ಅವರೇ ಕಾರಣ. ಆದರೆ ನನಗೆ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಅಲ್ಲಿಗೆ ಹೋಗಲು ಆಗಲಿಲ್ಲ. ಈಗ ನ್ಯಾಯ ಪಡೆಯಲು ಮಾಧ್ಯಮದ ಮುಂದೆ ಬರಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಮಾಧ್ಯಮದ ಮುಂದೆ ಬರುವ ವಿಚಾರ ತಿಳಿದ ಕೂಡಲೇ ರಾಮದಾಸ್ ಅವರು ಪ್ರೇಮಾಕುಮಾರಿ ಅವರ ಮೊಬೈಲ್‌ಗೆ ಕರೆ ಮಾಡಿದ್ದರು. ಆಗ ಪ್ರೇಮಾಕುಮಾರಿ ತಮ್ಮ ಸಂಬಂಧದ ಬಗ್ಗೆ ಆಡಿಯೋ, ವಿಡಿಯೋ ಮತ್ತು ಫೋಟೋಗಳ ದಾಖಲೆಗಳಿವೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಪ್ರೇಮಾಕುಮಾರಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೂ ಈ ವಿಷಯ ಬಹಿರಂಗವಾಗಿ ತಮ್ಮ ವರ್ಚಸ್ಸಿಗೆ ದಕ್ಕೆ ಬೀಳಲಿದೆ ಎಂಬ ಅಂಜಿಕೆಯಿಂದ ಮಾಜಿ ಸಚಿವ ರಾಮದಾಸ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement