ಅಹಿಂದ ಕನ್ನಡಿಯಲ್ಲಿ ಜನಪ್ರಿಯ ಬಜೆಟ್ ಬಿಂಬ
ಸರ್ವರ ಓಲೈಕೆಯೇ ಬಜೆಟ್ ಮೂಲ ಧರ್ಮ ಎಂಬ ನಿಲುವಿಗಂಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜದ ಎಲ್ಲರನ್ನೂ ಸಮಾಧಾನ..
ಸರ್ವರ ಓಲೈಕೆಯೇ ಬಜೆಟ್ ಮೂಲ ಧರ್ಮ ಎಂಬ ನಿಲುವಿಗಂಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜದ ಎಲ್ಲರನ್ನೂ ಸಮಾಧಾನ ಪಡಿಸಿದ್ದಾರೆ. ಆಶ್ರಯ ಯೋಜನೆಯ 1.4 ಲಕ್ಷ ಫಲಾನುಭವಿಗಳ 2480 ಕೋಟಿ ಸಾಲ ಮನ್ನಾ. ಕೃಷಿಕರಿಗೆ 3 ಲಕ್ಷದ ವರೆಗೆ ಬಡ್ಡಿ ಇಲ್ಲದೇ ಸಾಲ ಸೌಲಭ್ಯ.
ಕನ್ನಡಪ್ರಭ ವಾರ್ತೆ ಬೆಂಗಳೂರು ಫೆ.14
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ ಬ್ಯಾಂಕ್ ಓಲೈಕೆ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿತ್ತೀಯ ಕೊರತೆಯೆಂಬ 'ಹರಕಲು ಬಲೆಯಲ್ಲಿ ಹೆಚ್ಚು ಮತಗಳ ಮೀನು ಹಿಡಿಯುವ' ಪ್ರಯತ್ನ ನಡೆಸಿದ್ದಾರೆ. 1,38,008 ಕೋಟಿ ಅಂದಾಜು ವೆಚ್ಚದಲ್ಲಿ, ರು. 25042 ಕೋಟಿ ಸಾಲ ನಿರೀಕ್ಷೆಯೊಂದಿಗೆ ಸಿದ್ದರಾಮಯ್ಯನವರು ಮಂಡಿಸಿದ ತಮ್ಮ 9ನೇ ಬಜೆಟ್ನಲ್ಲಿ ಎಲ್ಲ ವರ್ಗದವರನ್ನು ತೃಪ್ತಿ ಪಡಿಸುವ ಪ್ರಯತ್ನ ನಡೆಸಿದ್ದಾರೆ. ಹಾಗೆಯೇ ಕಾಂಗ್ರೆಸ್ನ ಸಾಂಪ್ರದಾಯಿಕ ಮತ ಬ್ಯಾಂಕ್ಗಳಾದ, ಅಹಿಂದ ವರ್ಗಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ಅಷ್ಟು ಮಾತ್ರವಲ್ಲ ರೈತರು ಮತ್ತು ಮಹಿಳೆಯರ ಮನ ಗೆಲ್ಲುವುದಕ್ಕೆ ಸರ್ಕಸ್ ನಡೆಸಿದ್ದಾರೆ. ಇದರ ಜತೆಗೆ ಮಾನವಿಯ ಮೌಲ್ಯಗಳ ಕುರಿತು ಕಾಳಜಿ ಇರುವ ವೃದ್ಧರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ, ವಿಕಲಚೇತನ ಮಕ್ಕಳಿಗೆ ವಿವಿಧ ಯೋಜನೆಗಳನ್ನು ಕೂಡ ಘೋಷಿಸಿ, ಬಜೆಟ್ಗೆ ಭಾವನಾತ್ಮಕ ಸ್ಪರ್ಶ ನೀಡಿದ್ದಾರೆ.
ರಾಜ್ಯದ 53 ಲಕ್ಷ ರೈತರ ಮನಗೆಲ್ಲುವುದಕ್ಕಾಗಿ 'ಕೃಷಿ ಭಾಗ್ಯ' ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದು, ಇದಕ್ಕಾಗಿ ಆಯವ್ಯಯದಲ್ಲಿ ರು. 500 ಕೋಟಿ ನಿಗದಿ ಮಾಡಿದ್ದಾರೆ. ಸುಸ್ಥಿರ ಕೃಷಿ ಪದ್ದತಿ ಅಭಿವೃದ್ಧಿ ಪಡಿಸುವುದಕ್ಕಾಗಿ ರಾಜ್ಯದ 23 ಜಿಲ್ಲೆಗಳಲ್ಲಿ ಇದನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಜತೆಗೆ ಆಹಾರ ಉತ್ಪಾದನೆ ಪ್ರಮಾಣವನ್ನು 135 ಲಕ್ಷ ಮೆಟ್ರಿಕ್ ಟನ್ಗೆ ಹೆಚ್ಚಿಸುವ ಗುರಿಯೊಂದಿಗೆ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಕ್ಕೆ 5397 ಕೋಟಿ ಹಣ ನಿಗದಿ ಮಾಡಿದ್ದಾರೆ. ಜತೆಗೆ ರೈತರ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮೊತ್ತವನ್ನು 2 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಿದ್ದಾರೆ.
ಅಹಿಂದಕ್ಕೆ ಜೈ: ನಿರೀಕ್ಷೆಯಂತೆ ಈ ಬಾರಿಯೂ ಅಹಿಂದ ವರ್ಗಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಣ ನಿಗದಿ ಮಾಡುವ ವಿಚಾರದಲ್ಲಿ ಔದಾರ್ಯ ಮೆರೆದಿದ್ದಾರೆ. ಹೋಬಳಿ ಮಟ್ಟದಲ್ಲಿ ಪರಿಶಿಷ್ಟ ಜಾತಿ- ವರ್ಗದವರಿಗೆ 100 ವಸತಿ ನಿಲಯ, ಆ ವರ್ಗದ ಹೆಣ್ಣು ಮಕ್ಕಳನ್ನು ಮದುವೆಯಾಗುವ ಇತರೆ ಸಮುದಾಯದವರಿಗೆ ನೀಡುವ ಪ್ರೋತ್ಸಾಹ ಧನದಲ್ಲಿ ಹೆಚ್ಚಳ, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ, ಪರಿಶಿಷ್ಟ ಜಾತಿ ಮತ್ತು ವರ್ಗದ ಅಭಿವೃದ್ಧಿ ನಿಧಿಯಿಂದ ಪಡೆಯುವ ಸಹಾಯಧನ ಮಿತಿ ಹೆಚ್ಚಳ ಸೇರಿದಂತೆ ಈ ವರ್ಗಕ್ಕಾಗಿ 22 ವಿಶೇಷ ಯೋಜನೆ ಮತ್ತು ಸೌಲಭ್ಯವನ್ನು ಘೋಷಿಸಿದ್ದಾರೆ. ಮಾತ್ರವಲ್ಲ ಸಮಾಜ ಕಲ್ಯಾಣ ಇಲಾಖೆ ವಿವಿಧ ಯೋಜನೆಗಳಿಗಾಗಿ ರು. 4241 ಕೋಟಿಯನ್ನು ಬಜೆಟ್ನಲ್ಲಿ ಮೀಸಲಿಟ್ಟಿದ್ದಾರೆ. ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ 1445 ಕೋಟಿಯನ್ನು ಬಜೆಟ್ನಲ್ಲಿ ಒದಗಿಸಲಾಗಿದ್ದು, 7 ಜಿಲ್ಲಾ ಕೇಂದ್ರಗಳು ಮತ್ತು 50 ತಾಲೂಕು ಕೇಂದ್ರಗಳಲ್ಲಿ ಮಾಜಿ ಸಿಎಂ ದಿ.ದೇವರಾಜ ಅರಸು ಭವನ ನಿರ್ಮಿಸಲು ಮುಂದಾಗಿದ್ದಾರೆ.
ಹಿಂದುಳಿದ ವರ್ಗದವರಿಗೆ ವಿದ್ಯಾಸಿರಿ ಯೋಜನೆ ವಿಸ್ತರಿಸುವುದಕ್ಕೆ 75 ಕೋಟಿ, ದೋಭಿ, ಸವಿತ, ತಿಗಳ ಸಮುದಾಯಕ್ಕೆ ಸೇರಿದ ಜನರ ಕೌಶಲ್ಯಾಭಿವೃದ್ಧಿಗೆ ಶೇ.2ರ ಬಡ್ಡಿದರಲ್ಲಿ 2 ಲಕ್ಷದವರೆಗೆ ಸಾಲ, ರಾಷ್ಟ್ರೀಯ ನಿಗಮಗಳಿಂದ ಪಡೆದ ಸಾಲದ ಕಂತುಗಳ ಪರುಪಾವತಿಗೆ ಕ್ರಮ, ಸಹಕಾರಿ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲು ಸೌಲಭ್ಯಕ್ಕೆ ಅನುವಾಗುವ ರೀತಿಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡುವಂಥ ಮಹತ್ವದ ಉದ್ದೇಶಗಳು ಇಲ್ಲಿವೆ. ಇದರ ಜತೆಗೆ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಒಟ್ಟಾರೆಯಾಗಿ 800 ಕೋಟಿ ನಿಗದಿ ಮಾಡಲಾಗಿದ್ದು, ಕ್ರೈಸ್ತರ ಅಭಿವೃದ್ಧಿಗಾಗಿ 125 ಕೋಟಿ ತೆಗೆದಿಟ್ಟಿದ್ದಾರೆ.
ಕಲ್ಯಾಣ ಯೋಜನೆ: ಸಮಾಜದ ಮನ ಗೆಲ್ಲುವುದಕ್ಕಾಗಿ ಹಲವು ಯೋಜನೆಗಳನ್ನೂ ಪ್ರಕಟಿಸಿದ್ದಾರೆ. ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಸಂಘಗಳಿಗೆ ನೀಡಿದ್ದ ಸಾಲ ಮನ್ನಾ, ವಿಕಲ ಚೇತನರಿಗೆ ವೈದ್ಯ ವೆಚ್ಚ ಭರಿಸುವ 'ನಿರಾಮಯ' ಯೋಜನೆ, ವಿಕಲಚೇತನರ ಮಾಸಿಕ ಭತ್ಯೆ ಯೋಜನೆ, ಆಸ್ಪತ್ರೆ ನೈರ್ಮಲ್ಯ ಯೋಜನೆ, ಅಪಘಾತ ತುರ್ತು ಚಿಕಿತ್ಸಾ ವೆಚ್ಚ ಭರಿಸುವ 'ಸಾಂತ್ವನ' ಯೋಜನೆ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಉಪಯೋಜನೆ ಅಡಿ 'ಸೂರ್ಯಜ್ಯೋತಿ-ಪರಂಜ್ಯೋತಿ' ಯೋಜನೆ, ಕೆರೆ ಅಭಿವೃದ್ಧಿ ನಾಡಿನ ಶ್ರೇಯೋಭಿವೃದ್ಧಿ ಯೋಜನೆ, ವಿದೇಶದಲ್ಲಿ ನೆಲೆಸಿರುವ ಸಂಶೋಧಕರನ್ನು ಸೆಳೆಯಲು 'ಸ್ವದೇಶಕ್ಕೆ ಸ್ವಾಗತ', ನನ್ನ ಮನೆ ನನ್ನ ಸ್ವತ್ತು ಯೋಜನೆ ಅಡಿ 10.84 ಲಕ್ಷ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲು ರು. 2488 ಕೋಟಿ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳಿವೆ.
ವೆಚ್ಚ
ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಶೇ.20, ಶಿಕ್ಷಣಕ್ಕೆ ಶೇ.15, ಸಾಲ ತೀರಿಕೆಗೆ ಶೇ.11, ಸಮಾಜ ಕಲ್ಯಾಣಕ್ಕೆ ಶೇ.8, ಆರೋಗ್ಯಕ್ಕೆ ಶೇ.4, ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕೆ ಶೇ.2, ಸಾಮಾನ್ಯ ಸೇವೆಗೆ ಶೇ.21, ಇತರೆ ಆರ್ಥಿಕ ಸೇವೆಗೆ ಶೇ.14, ಇತರೆ ಸಾಮಾಜಿಕ ಸೇವೆಗೆ ಶೇ.5 ರ ಪ್ರಮಾಣದಲ್ಲಿ ಯೋಜನಾ ಮತ್ತು ಯೋಜನೇತರ ವೆಚ್ಚ ನಿಗದಿಗೊಳಿಸಿದ್ದಾರೆ.
ತೆರಿಗೆ ಭಾರವಿಲ್ಲ
ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚಿನ ವಲಯದ ಮೇಲೆ ತೆರಿಗೆ ಭಾರ ಹೇರುವುದಕ್ಕೆ ಸಿದ್ದರಾಮಯ್ಯನವರು ಮುಂದಾಗಿಲ್ಲ. ಅಬಕಾರಿ ಇಲಾಖೆಯಿಂದ 14,400 ಕೋಟಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ 7450 ಕೋಟಿ ವಿವಿಧ ವಾಣಿಜ್ಯ ತೆರಿಗೆ ಮೂಲಗಳಿಂದ 42000 ಕೋಟಿ ರಾಜಸ್ವ ಸಂಗ್ರಹದ ಗುರಿ ಹೊಂದಿದ್ದಾರೆ.
ಅಂದಾಜು ಮೊತ್ತ
1,38,008 ಕೋಟಿ ಅಂದಾಜು ಮೊತ್ತದ ಬಜೆಟ್ನಲ್ಲಿ 1,11,039 ಕೋಟಿ ರಾಜಸ್ವ ಜಮೆ, ರು. 25042 ಸಾಲ, 25210 ಕೋಟಿ ಬಂಡವಾಳ ಜಮೆ ಸೇರಿದಂತೆ ಒಟ್ಟು 1,36,249 ಕೋಟಿ ಅಂದಾಜು ಜಮೆ ನಿರೀಕ್ಷಿಸಲಾಗಿದೆ. 20,041 ಕೋಟಿ ವಿತ್ತೀಯ ಕೊರತೆ ನಿರೀಕ್ಷಿಸಲಾಗಿದ್ದು ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ.2.92ರಷ್ಟಾಗಿರುತ್ತದೆ. 1,57,681 ಕೋಟಿ ಆರ್ಥಿಕ ಹೊಣೆಗಾರಿಕೆಯು ರಾಜ್ಯದ ಆಂತರಿಕ ಉತ್ಪನ್ನದ ಶೇ.23.01ರಷ್ಟಿದ್ದು, ಇದು ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಿತಿಯಲ್ಲೇ ಇದೆ ಎಂದು ಸಿದ್ದರಾಮಯ್ಯನವರು ಸಮರ್ಥಿಸಿಕೊಂಡಿದ್ದಾರೆ.
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಂಡಿಸಿರುವ ಬಜೆಟ್ ಇದು. ಲೋಕಸಭೆ ಚುನಾವಣೆಗೂ ಬಜೆಟ್ಗೂ ಸಂಬಂಧವಿಲ್ಲ. ರಾಜ್ಯದ ಅಭಿವೃದ್ಧಿಯ ಜತೆಗೆ ಸಾಮಾಜಿಕ ನ್ಯಾಯ ಒದಗಿಸಿದ್ದೇನೆ. ಜನಸಾಮಾನ್ಯರಿಗೆ ಹೊರೆಯಾಗುವ ಯಾವುದೆ ತೆರಿಗೆಯ ಹೆಚ್ಚಳ ಮಾಡಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಿದ್ದರಾಮಯ್ಯ ಉತ್ತಮ ಬಜೆಟ್ ನೀಡುತ್ತಾರೆ ಎಂಬ ಜನತೆಯ ಆಶಯವನ್ನು ಹುಸಿಗೊಳಿಸಿದ್ದಾರೆ. ಕೃಷಿ, ಕೈಗಾರಿಕೆ, ವಿದ್ಯುತ್, ನೀರಾವರಿ, ಬರಗಾಲದ ತಾಲೂಕುಗಳಿಗೆ ಅನುದಾನ, ಡಾ. ನಂಜುಂಡಪ್ಪ ವರದಿ, ನೂತನ ತಾಲೂಕು ರಚನೆ ಘೋಷಣೆ ಮಾಡುವಲ್ಲಿ ವಿಫಲವಾಗಿರುವ ಸಿದ್ದರಾಮಯ್ಯ, ರಾಜಕೀಯ ಒತ್ತಡಕ್ಕೆ ಸಿಲುಕಿ, ಜನತೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಈ ಬಜೆಟ್ನಲ್ಲಿ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ.
-ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ