ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಶ್ರಯ ಮನೆ ಸಾಲ, ಬಡ್ಡಿ ಮನ್ನಾ

Srinivasa Murthy VN
Updated On : 15 Feb 2014, 12:21 pm

ಆಶ್ರಯ ಮನೆ ಯೋಜನೆಯ 10.84 ಲಕ್ಷ ಫಲಾನುಭವಿಗಳ ಬಡ್ಡಿ ಹಾಗೂ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಮುಖ್ಯಮಂತ್ರಿ ಘೋಷಿಸಿದ್ದಾರೆ.
ಸರ್ಕಾರವು ಆಶ್ರಯ ಯೋಜನೆಯಲ್ಲಿ 10.84 ಲಕ್ಷ ಫಲಾನುಭವಿಗಳಿಗೆ 1498 ಕೋಟಿ ಸಾಲ ನೀಡಿದೆ. 'ನನ್ನ ಸ್ವತ್ತು ಯೋಜನೆ' ಜಾರಿಯಾದ ಮೇಲೆ ಈವರೆಗೆ 39 ಕೋಟಿ ಸಾಲ ವಸೂಲಾಗಿದೆ. ಇನ್ನೂ 1458 ಕೋಟಿ ಅಸಲು ಹಾಗೂ 1030 ಕೋಟಿ ಬಡ್ಡಿ ಬಾಕಿ ಇದೆ. ಸಾಲ ಮರುಪಾವತಿ ಅಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಸಾಲ ಹಾಗೂ ಬಡ್ಡಿ ಮನ್ನಾ ಮಾಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
3 ಲಕ್ಷ ಮನೆ ನಿರ್ಮಾಣ: 2014- 15ನೇ ಸಾಲಿನಲ್ಲಿ ಗೃಹಮಂಡಳಿ ವತಿಯಿಂದ 10,750 ಎಕರೆ ಭೂಸ್ವಾಧೀನಕ್ಕೆ ಉದ್ದೇಶಿಸಿದ್ದು, ನಿವೇಶನ ರಹಿತರಿಗೆ 20 ಸಾವಿರ ನಿವೇಶನ ಹಂಚುವ ಗುರಿ ಹಾಗೂ ವಸತಿ ಯೋಜನೆಯಲ್ಲಿ 3 ಲಕ್ಷ ಮನೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ವಸತಿ ಇಲಾಖೆಗೆ ಒಟ್ಟು ರು. 2457 ಕೋಟಿ ಮೀಸಲಿಡಲಾಗಿದೆ.
ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದಿಂದ 2015ರ ಜನವರಿ ಅಂತ್ಯದವರೆಗೆ 8833 ನಿವೇಶನಗಳ ಹಂಚಿಕೆ. 2.5 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ.
ರಾಜ್ಯ ಮಟ್ಟದಲ್ಲೇ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆ ತೆರೆಯುವಿಕೆ ಹಾಗೂ ಜಿಪಿಎಸ್ ಆಧಾರಿತ ಪ್ರಗತಿಗೆ ಅನುಗುಣವಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಬಿಡುಗಡೆಗೊಳಿಸಲಾಗುತ್ತದೆ. ಎಸ್‌ಎಂಎಸ್ ಮೂಲಕ ಅನುಮೋದನೆ, ಪ್ರಗತಿ, ಹಣ ಬಿಡುಗಡೆ ಬಗ್ಗೆ ಫಲಾನುಭವಿಗೆ ಮಾಹಿತಿ ನೀಡುವ ವಿನೂತನ ವಿಧಾನಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಸಮಗ್ರ ವಸತಿ ಮತ್ತು ಕೊಳಚೆ ಪ್ರದೇಶ ಅಭಿವೃದ್ಧಿ(ಐಎಚ್‌ಎಸ್‌ಡಿಪಿ) ಯೋಜನೆಯಲ್ಲಿ ರಾಜ್ಯದ 32 ನಗರ/ ಪಟ್ಟಣಗಳಲ್ಲಿ ಇರುವ 135 ಕೊಳಚೆ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ 411 ಕೋಟಿ ವೆಚ್ಚದಲ್ಲಿ 17,23 ಮನೆಗಳ ನಿರ್ಮಾಣ ಪೂರ್ಣಗೊಳಿಸುವ ಭರವಸೆ ದೊರಕಿದೆ. ಅದಕ್ಕಾಗಿ 348 ಕೋಟಿ ವೆಚ್ಚವಾಗಲಿದೆ.
20,396 ಮನೆಗಳು ಪೂರ್ಣ: ನಗರ ಬಡಜನರ ಮೂಲಭೂತ ಸೌಕರ್ಯ(ಬಿಎಸ್‌ಯುಪಿ) ಯೋಜನೆಯಲ್ಲಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಇರುವ 125 ಕೊಳಚೆ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯದೊಂದಿಗೆ 728 ಕೋಟಿ ವೆಚ್ಚದಲ್ಲಿ 24,508 ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಜನವರಿ ಅಂತ್ಯಕ್ಕೆ 20,396 ಮನೆಗಳು ಪೂರ್ಣಗೊಳ್ಳಲಿವೆ. ಇದಕ್ಕೆ ಒಟ್ಟು ರು. 546.96 ಕೋಟಿ ವೆಚ್ಚವಾಗಲಿದೆ.
2014- 15ನೇ ಸಾಲಿನಲ್ಲಿ ವಿಶೇಷ ವರ್ಗದವರಿಗಾಗಿ ಅಂದರೆ, ಕುಷ್ಠರೋಗದಿಂದ ಗುಣಮುಖರಾದವರು, ಎಚ್‌ಐವಿ ಸೋಂಕಿಗೆ ಒಳಗಾದವರು, ದೇವದಾಸಿಯರು, ಅಲೆಮಾರಿ ಜನಾಂಗದವರು, ಮತೀಯ ಗಲಭೆ ಹಾಗೂ ಚಳವಳಿಗಳಿಂದ ಹಾನಿಗೊಳಗಾದವರು, ದೌರ್ಜನ್ಯಕ್ಕೆ ಒಳಗಾದವರು, ಜೀತದಿಂದ ಮುಕ್ತರಾದವರು, ವಿಧವೆಯರು ಇತ್ಯಾದಿಯವರಿಗೆ 10 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 1983 ರಿಂದ 2005ರ ಅವಧಿಯಲ್ಲಿ ಹುಡ್ಕೋ ಹಾಗೂ ವಾಂಬೆ ಯೋಜನೆಯಲ್ಲಿ ನಿರ್ಮಿಸಲಾದ 57,801 ಮನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳು ಪಾವತಿಸಬೇಕಾದ ಸಾಲ (153 ಕೋಟಿ) ಮತ್ತು ಬಡ್ಡಿ (77 ಕೋಟಿ) ಸೇರಿ ಒಟ್ಟು ರು. 230 ಕೋಟಿ ಬಾಕಿ ಇದೆ.
ಕರ್ನಾಟಕ ಗೃಹ ಮಂಡಳಿಯು 2014-15ನೇ ಸಾಲಿನಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಸುಮಾರು 10,750 ಎಕರೆ ಜಮೀನನ್ನು ಭೂಸ್ವಾಧೀನ ಖರೀದಿ ಮುಖಾಂತರ ಪಡೆಯಲು ಉದ್ದೇಶಿಸಿದ್ದು, ಈ ಜಮೀನಿನಲ್ಲಿ ಸುಮಾರು 1.7 ಲಕ್ಷ ಸ್ವತ್ತುಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಸ್ವಸಹಾಯ ಗುಂಪು, ಸಂಘ ಸಾಲ, ಬಡ್ಡಿಗೂ...
ಸ್ವಸಹಾಯ ಗುಂಪು ಹಾಗೂ ಸಂಘಗಳ ಮೇಲೆ ಕೃಪಾದೃಷ್ಟಿ ಬೀರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಸಲು-ಬಡ್ಡಿ ಸೇರಿದಂತೆ ಸಾಲ ಮನ್ನಾ ಮಾಡಿದ್ದಾರೆ. ಅಲ್ಲದೆ, ಮಹಿಳೆಯರಿಗೆ ಒಂದೇ ಸೂರಿನಡಿ ಸಕಲ ಸೌಲಭ್ಯ ಸಿಗುವ ಕೇಂದ್ರಗಳನ್ನೂ ಆರಂಭಿಸಲು ನಿರ್ಧರಿಸಿದ್ದಾರೆ. ಮಹಿಳಾ ಅಭಿವೃದ್ಧಿ ನಿಗಮದಿಂದ ಸ್ವಸಹಾಯ, ಗುಂಪು, ಸಂಘಗಳಿಗೆ ನೀಡಿದ ಸಾಲ ಮಾರ್ಚ್ 2013ರವರೆಗೆ ಮರುಪಾವತಿಯಾಗದಿದ್ದರೆ ಆ ಸಾಲದ ಅಸಲು, ಬಡ್ಡಿ ಮೊತ್ತವನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತರ ಗೌರವಧನ, ಸಹಾಯಕರ ಮಾಸಿಕ ಗೌರವಧನದಲ್ಲಿ ಕ್ರಮವಾಗಿ 500, 250 ಹೆಚ್ಚಿಸಲಾಗಿದ್ದು, ಸ್ತ್ರೀಶಕ್ತಿ ಗುಂಪು, ಒಕ್ಕೂಟಗಳ ಮೂಲಕ 50 ತಾಲೂಕುಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಕಾ ಘಟಕಗಳ ಸ್ಥಾಪನೆ, ಪ್ರತಿ ಘಟಕಕ್ಕೆ 1 ವರ್ಷಕ್ಕೆ 6 ಲಕ್ಷಗಳಂತೆ ಒಟ್ಟು 3 ಕೋಟಿ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗಕ್ಕೆ 3671 ಕೋಟಿ ಲೆಕ್ಕಾಚಾರದ ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಮಂಡಿಸಿದ್ದಾರೆ. ರಾಜ್ಯದ 30 ಜಿಲ್ಲಾ ಆಸ್ಪತ್ರೆಗಳಲ್ಲಿ 35 ಮಹಿಳಾ ವಿಶೇಷ ಚಿಕಿತ್ಸಾ ಘಟಕಗಳ ಸ್ಥಾಪಿಸಿ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯ ಚಿಕಿತ್ಸೆ, ಪೊಲೀಸ್, ಕಾನೂನು ನೆರವು ಹೀಗೆ ಎಲ್ಲಾ ಸೌಲಭ್ಯ ಒಂದೇ ಸೂರಿನಡಿ ದೊರಕುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಸವಲತ್ತು ಪಡೆಯಲು, ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲು ಅನುಕೂಲವಾಗುವಂತೆ ವಿಶೇಷ ಗ್ರಾಮಸಭೆ ನಡೆಸಲಾಗುತ್ತದೆ. ಸರ್ಕಾರದ ಬಾಲಮಂದಿರಗಳಲ್ಲಿ ಅನಾಥ, ನಿರ್ಗತಿಕ ಮಕ್ಕಳಿಗೆ ವಿಮಾ ಸೌಲಭ್ಯ, ಜೀವನ ಭದ್ರತೆಗೆ 2.5 ಕೋಟಿ ಮೀಸಲಿಡಲಾಗಿದೆ.

ಹಿಂಜರಿತ ಕಾಣುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಮೇಲೆಕ್ಕೆತ್ತುವ ಯಾವುದೇ ರಚನಾತ್ಮಕ ಪ್ರಸ್ತಾವನೆಗಳು ಬಜೆಟ್‌ನಲ್ಲಿ ಇಲ್ಲ. ಇದೊಂದು ಅರ್ಥಹೀನ ಬಜೆಟ್. ರು. 1,38,008 ಕೋಟಿಗಳ ಬೃಹತ್ ಗಾತ್ರ ಒಂದೇ ಈ ಬಜೆಟ್ ಹೆಗ್ಗಳಿಕೆ.
-ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ

ಬಜೆಟ್‌ನಿಂದ ಕೃಷಿ ಕ್ಷೇತ್ರಕ್ಕೆ ನಿರಾಸೆಯಾಗಿದೆ. ಕೃಷಿ ಬೆಲೆ ಆಯೋಗ ರಚನೆಯನ್ನು ಕಳೆದ ಬಾರಿಯೇ ಘೋಷಣೆ ಮಾಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದು ಚುನಾವಣಾ ಬಜೆಟ್ ಅಲ್ಲ ಅಥವಾ ರೈತ ಪರ ಬಜೆಟ್ ಅಲ್ಲ.
-ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement