ದಿಲ್ಲಿ ತುಘಲಕ್ ದರ್ಬಾರ್ ಅಂತ್ಯ
ವಿಧಾನಸಭೆಯಲ್ಲಿ ಜನಲೋಕಪಾಲ ಮಸೂದೆ ಮಂಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜಿನಾಮೆ ನೀಡಿದ್ದಾರೆ.
ಮುಕೇಶ್ ವಿರುದ್ಧ ಎಫ್‌ಐಆರ್‌ಗೆ ಆದೇಶ ನೀಡಿದ್ದೇ ಈ ಎಲ್ಲ ಬೆಳವಣಿಗೆಗೆ ಕಾರಣ: ಕೇಜ್ರಿ
ಪಿಟಿಐ ನವದೆಹಲಿ ಫೆ.14
ರಾಷ್ಟ್ರ ರಾಜಧಾನಿಯಲ್ಲಿ 49 ದಿನಗಳ ಆಮ್ ಆದ್ಮಿ ಪಕ್ಷ (ಆಪ್) ಸರ್ಕಾರದ ತುಘಲಕ್ ದರ್ಬಾರ್ ಅಂತ್ಯವಾಗಿದೆ. ಶುಕ್ರವಾರ ಸಂಜೆ ವಿಧಾನಸಭೆಯಲ್ಲಿ ಜನಲೋಕಪಾಲ ಮಸೂದೆ ಮಂಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜಿನಾಮೆ ನೀಡಿದ್ದಾರೆ. ದೆಹಲಿ ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗುತ್ತಿದ್ದಂತೆ, ಮುಖ್ಯಮಂತ್ರಿ ಕೇಜ್ರಿವಾಲ್ ಸಚಿವಾಲಯದಲ್ಲಿ ಸಂಪುಟ ಸಭೆ ನಡೆಸಿದರು. ಅಲ್ಲಿ ರಾಜಿನಾಮೆ ನೀಡಲು ನಿರ್ಧರಿಸಲಾಯಿತು.
ಬಳಿಕ ಪಕ್ಷದ ಕಚೇರಿಯಲ್ಲಿ ನೆರೆದಿದ್ದ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ತಮ್ಮ ನಿರ್ಧಾರ ಪ್ರಕಟಿಸಿದರು. ಕೂಡಲೇ ದೆಹಲಿ ವಿಧಾನಸಭೆ ವಿಸರ್ಜಿಸಬೇಕು. ತಕ್ಷಣ ಚುನಾವಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು ಎರಡೂ ಪಕ್ಷಗಳೂ ಜನಲೋಕಪಾಲ ಮಸೂದೆ ಮಂಡಿಸಲು ಅವಕಾಶವೇ ನೀಡಲಿಲ್ಲ ಎಂದು ದೂರಿದರು.
45 ದಿನಗಳಲ್ಲಿ ಭ್ರಷ್ಟಾಚಾರ ತಗ್ಗಿಸಿದೆವು: ಕಾಂಗ್ರೆಸ್ ಮತ್ತು ಬಿಜೆಪಿ 60 ವರ್ಷಗಳ ಭ್ರಷ್ಟಾಚಾರ ತಗ್ಗಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ, ನಾವು ಅಧಿಕಾರಕ್ಕೆ ಬಂದ 45 ದಿನಗಳಲ್ಲಿ ಭ್ರಷ್ಟಾಚಾರವನ್ನು ತಗ್ಗಿಸಿದೆವು ಎಂದರು.
ಶುಕ್ರವಾರ ಸದನದಲ್ಲಿ ಆದ ಬೆಳವಣಿಗೆ ಬಗ್ಗೆ ನನಗೆ ವಿಷಾದ ಇದೆ ಎಂದು ಹೇಳಿಕೊಂಡರು.
ಬೆಂಬಲ ಸಿಗುತ್ತಿತ್ತು: ಸರ್ಕಾರ ಉಳಿಸಲು ಲಂಚ ತೆಗೆದುಕೊಂಡಿದ್ದರೆ ಬೆಂಬಲ ಸಿಗುತ್ತಿತ್ತು ಎಂದು ಹೇಳಿದ ಅವರು ಕೇಂದ್ರ ಸರ್ಕಾರ ಇನ್ನೂ ಬ್ರಿಟಿಷರ ಆಡಳಿತದಲ್ಲಿದ್ದಂತೆ ನಡೆದುಕೊಳ್ಳುತ್ತಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನು ವೈಸ್‌ರಾಯ್ ಎಂದು ತಿಳಿದುಕೊಂಡಿದ್ದಾರೆ ಎಂದು ಕೇಜ್ರಿವಾಲ್ ಕಟಕಿಯಾಡಿದರು. ಜನಲೋಕಪಾಲ ಮಸೂದೆಗಾಗಿ ಮುಖ್ಯಮಂತ್ರಿ ಸ್ಥಾನವನ್ನಲ್ಲ, ಪ್ರಾಣ ತ್ಯಜಿಸಲೂ ಸಿದ್ಧ ಎಂದರು.
ಮೋದಿಗೆ ಅಂಬಾನಿ ದುಡ್ಡು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ದೇಶಾದ್ಯಂತ ರ್ಯಾಲಿ ನಡೆಸಲು ಕೋಟ್ಯಂತರ ರು. ಹಣಕಾಸಿನ ನೆರವನ್ನು ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ನೀಡುತ್ತಿದ್ದಾರೆ. ಜತೆಗೆ, ಕಾಂಗ್ರೆಸ್ ಜತೆಗೂ ಅಂಬಾನಿ ಕೈಜೋಡಿಸಿದ್ದಾರೆ. ಅಂಬಾನಿಯವರೇ ಈ ಹಿಂದೆ ಕಾಂಗ್ರೆಸ್ ಎಂಬ ಅಂಗಡಿಯಿಂದ ಎಲ್ಲವನ್ನೂ ಖರೀದಿಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದರು ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ಭಾರಿ ಗದ್ದಲ: ಇದಕ್ಕೂ ಮುನ್ನ ದೆಹಲಿ ವಿಧಾನಸಭೆಯಲ್ಲಿ ವಿವಾದಿತ ಜನಲೋಕಪಾಲ ಮಸೂದೆ ಮಂಡನೆ ಬೇಕೇ ಬೇಡವೆ ಎಂಬ ಬಗ್ಗೆ ತೀವ್ರ ಕೋಲಾಹಲ ಉಂಟಾಗಿತ್ತು. ಇದರ ಜತೆಗೆ ಕಾನೂನು ಸಚಿವ ಸೋಮ್‌ನಾಥ್ ಭಾರ್ತಿ ನಡೆಸಿದ್ದ ಮಧ್ಯರಾತ್ರಿ ದಾಳಿ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದ್ದರು. ಅವರು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಜತೆಗೆ ಜನಲೊಕಪಾಲ ಮಸೂದೆಯನ್ನು ಮಂಡಿಸಬಾರದು ಎಂಬ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಪತ್ರವನ್ನು ಸ್ಪೀಕರ್ ಪ್ರಸ್ತಾಪಿಸಿದ್ದರು. ಪ್ರತಿಪಕ್ಷ ಬಿಜೆಪಿ ಕೂಡ ಪತ್ರವನ್ನು ಓದಿ ಹೇಳಬೇಕೆಂದು ಒತ್ತಾಯಿಸಿತ್ತು.
ಸ್ಪೀಕರ್ ಎಂ.ಎಸ್.ಧೀರ್ ಕಲಾಪವನ್ನು ಕೆಲ ಕಾಲ ಮುಂದೂಡಿದ್ದರು. ಮಧ್ಯಾಹ್ನ 3 ಗಂಟೆಗೆ ಸದನ ಮತ್ತೆ ಸಮಾವೇಶಗೊಂಡಾಗಲೂ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡಿರಲಿಲ್ಲ. ಲೆ. ಗವರ್ನರ್ ಪತ್ರದ ಬಗ್ಗೆ ಚರ್ಚೆಯಾಗಬೇಕೆಂದು ಆಮ್ ಆದ್ಮಿ ಪಕ್ಷದ ಸದಸ್ಯರು ಒತ್ತಾಯಿಸಿದ್ದರು. ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರು ಕೂಡ ಸೋಮ್‌ನಾಥ್ ಭಾರ್ತಿ ವಿಚಾರದ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದ್ದರು. ಸಂಜೆ 3.40ರ ವರೆಗೆ ಇದೇ ವಿಚಾರಕ್ಕೆ ಗದ್ದಲ ಮುಂದುವರಿದಿತ್ತು.
ಗದ್ದಲದಲ್ಲಿ ಮಂಡನೆ: ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಲೆ.ಗವರ್ನರ್ ಜಂಗ್ ಅವರ ಆದೇಶ ಧಿಕ್ಕರಿಸಿ ಜನಲೋಕಪಾಲ ಮಸೂದೆ ಮಂಡಿಸಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಸ್ಪೀಕರ್ ಕ್ರಮವನ್ನು ಕಟುವಾಗಿ ಟೀಕಿಸಿದ್ದರು. ಸರ್ಕಾರದ ಪರವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದರು. ಸಭಾಧ್ಯಕ್ಷರ ಪೀಠದ ಸುತ್ತ ಸೇರಿ ನಿರ್ಣಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಯಾವುದೇ ಸಾಂವಿಧಾನಿಕ ಕ್ರಮಗಳನ್ನು ಪಾಲಿಸದೆ ಮುಖ್ಯಮಂತ್ರಿ ಮಸೂದೆ ಮಂಡನೆ ಮಾಡಿದ್ದು ತಪ್ಪು ಎಂದು ಆಕ್ರೋಶ ವ್ಯಕ್ತವಾಗಿತ್ತು.
ಮಣಿದ ಸ್ಪೀಕರ್: ಪ್ರತಿಪಕ್ಷಗಳ ಒತ್ತಡ ಹಿನ್ನೆಲೆಯಲ್ಲಿ ಸ್ಪೀಕರ್ ಎಂ.ಎಸ್.ಧೀರ್, ಸದನದಲ್ಲಿ ವಿವಾದಿತ ಮಸೂದೆ ಮಂಡನೆ ಮಾಡಬೇಕೆ ಬೇಡವೆ ಎಂದು ಅಭಿಪ್ರಾಯ ಸಂಗ್ರಹಿಸಿದ್ದರು. ಹಾಜರಿದ್ದ ಒಟ್ಟು ಸದಸ್ಯರ ಪೈಕಿ 42 ಮಂದಿ ಮಸೂದೆ ಮಂಡನೆಗೆ ವಿರುದ್ಧವಾಗಿದ್ದರೆ, 27 ಮಂದಿ ಶಾಸಕರು ಮಸೂದೆ ಮಂಡನೆ ಪರವಾಗಿದ್ದರು. ಈ ಹಿನ್ನೆಲೆಯಲ್ಲಿ ಮಸೂದೆ ಮಂಡನೆ ಆದರೂ ಅದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಸ್ಪೀಕರ್ ರೂಲಿಂಗ್ ನೀಡಿದ್ದರು.
ರಾಜಿನಾಮೆ ಸುಳಿವು ಕೊಟ್ಟರು: ಈ ಎಲ್ಲ ಗದ್ದಲಗಳ ಬಳಿಕ ಮಾತನಾಡಿದ ಕೇಜ್ರಿವಾಲ್ 'ಇದು ಆಮ್ ಆದ್ಮಿ ಪಕ್ಷ ಸರ್ಕಾರದ ಕೊನೆಯ ಅಧಿವೇಶನ' ಎಂದರು. 'ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಲು ಸಾವಿರ ಬಾರಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಿದ್ಧನಿದ್ದೇನೆ' ಎಂದರು. ರಿಲಯನ್ಸ್ ಅನಿಲ ಹಗರಣದಲ್ಲಿ ಮುಕೇಶ್ ಅಂಬಾನಿ ವಿರುದ್ದ ಎಫ್‌ಐಆರ್ ದಾಖಲಿಸಲು ಅನುಮತಿ ನೀಡಿದ್ದೇ ಈ ಎಲ್ಲ ಬೆಳವಣಿಗೆಗೆ ಕಾರಣ. ಹೀಗಾಗಿಯೇ ಕಾಂಗ್ರೆಸ್ ಮತ್ತು ಬಿಜೆಪಿ ಜನಲೋಕಪಾಲ ಮಸೂದೆಯನ್ನು ಸದನದಲ್ಲಿ ಮಂಡಿಸದಂತೆ ಕೈಜೋಡಿಸಿವೆ ಎಂದು ಗಂಭೀರ ಆರೋಪ ಮಾಡಿದರು.
ದಿಲ್ಲಿಯಲ್ಲಿ ಮುಂದೇನು?
- ಯಾವ ಪಕ್ಷವೂ ಸರ್ಕಾರ ರಚಿಸಲು ಮುಂದೆ ಬರದ ಕಾರಣ ರಾಷ್ಟ್ರಪತಿ ಆಳ್ವಿಕೆ ಜಾರಿ ಸಂಭವ
- ಕೇಜ್ರಿವಾಲ್ ಸರ್ಕಾರ ವಿಧಾನಸಭೆ ವಿಸರ್ಜಿಸಿ ಹೊಸ ಚುನಾವಣೆ ನಡೆಸಲು ಶಿಫಾರಸು ಮಾಡಿದೆ. ಅದನ್ನು ಲೆಫ್ಟಿನೆಂಟ್ ಗವರ್ನರ್ ಒಪ್ಪಿಕೊಂಡು ರಾಷ್ಟ್ರಪತಿ ಅಂಗೀಕಾರಕ್ಕೆ ಕಳುಹಿಸಬಹುದು.
- ಕೇಜ್ರಿವಾಲ್ ಅವರನ್ನು ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚಿಸಬಹುದು. ಜತೆಗೆ ಸಾಂವಿಧಾನಿಕ ಬಿಕ್ಕಟ್ಟು ಪರಿಹಾರಕ್ಕೆ ರಾಷ್ಟ್ರಪತಿ ಅವರಿಗೆ ಲೆ.ಗವರ್ನರ್ ಮನವಿ ಮಾಡಬಹುದು.
ಕೇಜ್ರಿವಾಲ್ ಸುಳ್ಳುಗಾರ
ಕಲಾಪ ಮುಂದೂಡಿದ ಬಳಿಕ ಮಾತನಾಡಿದ ದೆಹಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಡಾ.ಹರ್ಷವರ್ಧನ್, ಕೇಜ್ರಿವಾಲ್ ಒಬ್ಬ ಸುಳ್ಳುಗಾರ ಎಂದು ಆರೋಪಿಸಿದರು. ಇದರ ಜತೆಗೆ ಮುಖ್ಯಮಂತ್ರಿ ಸದನದಲ್ಲಿ ವಿವಾದಿತ ಮಸೂದೆ ಮಂಡಿಸಬಾರದು ಎಂದು ಲೆಫ್ಟಿನೆಂಟ್ ಗವರ್ನರ್ ಸೂಚ್ಯವಾಗಿ ತಿಳಿಸಿದ್ದರೂ ಅವರು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಬಿಜೆಪಿ ಜನಲೋಕಪಾಲ ಮಸೂದೆಗೆ ವಿರೋಧಿ ಅಲ್ಲ. ಆದರೆ ಅದನ್ನು ಸಾಂವಿಧಾನಿಕವಾಗಿ ಮಂಡಿಸಲು ವಿಫಲವಾಯಿತು ಎಂದರು. ಮತ್ತೊಂದೆಡೆ ಮಾತನಾಡಿದ ಕಾಂಗ್ರೆಸ್ ನಾಯಕ ಅರವಿಂದ ಸಿಂಗ್ ಲವ್ಲಿ, 'ಸಂವಿಧಾನಕ್ಕೆ ಅನುಸಾರವಾಗಿ ಮಸೂದೆ ಮಂಡನೆ ಆಗಲಿ ಎಂದು ಕಾಂಗ್ರೆಸ್ ಬಯಸಿತ್ತು. ಆದರೆ ಅದನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಯಿತು. ಸದನದಲ್ಲಿ ಲೆಫ್ಟಿನೆಂಟ್ ಗವರ್ನರ್ ನೀಡಿದ್ದ ಸಂದೇಶದ ಪರವಾಗಿ ಮತ ಹಾಕಿದೆವು' ಎಂದರು.