ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಾಲೆ, ಕೆರೆಗಳಿಗೆ ಅನುದಾನದ ಹೊಳೆ

Srinivasa Murthy VN
Updated On : 15 Feb 2014, 12:19 pm

ಬಜೆಟ್‌ನಲ್ಲಿ ಅನುದಾನ ನಿಗದಿಯಲ್ಲಿ ನೀರಾವರಿ ಇಲಾಖೆ ಮೂರನೇ ಸ್ಥಾನದಲ್ಲಿದ್ದು, ಜಲಸಂಪನ್ಮೂಲ ಇಲಾಖೆಯಲ್ಲಿ ಪ್ರಗತಿಯಲ್ಲಿರುವ ಯೋಜನೆಗಳನ್ನು ಐದು ವರ್ಷದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ- 3ಕ್ಕೆ ಪ್ರಾಮುಖ್ಯ ನೀಡಲಾಗಿದ್ದು, ನಾಲಾ ಕಾಮಗಾರಿಗಳು, ಕೆರೆ ಅಭಿವೃದ್ಧಿ, ಏತ ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಡಲಾಗಿದೆ.
ಕೃಷ್ಣಾ ನ್ಯಾಯಾಧಿಕರಣದ ಅಂತಿಮ ತೀರ್ಪನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲು, ಪಾಲಿನ ನೀರು ಪಡೆಯಲು ಕ್ರಮ. ಪರಮಶಿವಯ್ಯ ಯೋಜನೆಯ ಪ್ರಾಥಮಿಕ ವರದಿಯ ಮೂಲಕ ಪಶ್ಚಿಮಘಟ್ಟಗಳಿಂದ ನೀರು ಪಡೆಯುವ ಪರ್ಯಾಯ ಮಾರ್ಗಗಳನ್ನು ಪರಿಶೀಲಿಸುವ, ಮಹದಾಯಿ ನ್ಯಾಯಾಧಿಕರಣದಲ್ಲಿ ರಾಜ್ಯದ ಪಾಲಿನ ನೀರು ಪಡೆಯಲು ಹೋರಾಟ ಮುಂದುವರಿಸುವ ಭರವಸೆಯನ್ನೂ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಇಲಾಖೆಗೆ 11,349 ಕೋಟಿ ಹಣ ಒದಗಿಸಿದ್ದಾರೆ.
ರಾಜ್ಯದಲ್ಲಿ 1.2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೊಲಗಾಲುವೆ ನಿರ್ಮಾಣ. ಒಂದು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬಸಿಗಾಲುವೆ ನಿರ್ಮಾಣ, 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸವಳು- ಜವಳು ಭೂಮಿ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಲ್ಲಿ ಕೊಪ್ಪಳ ಏತ ನೀರಾವರಿ, ತುಂಗಭದ್ರಾ ಯೋಜನೆಯಲ್ಲಿ ನೀರಿನ ಬಳಕೆ ಕ್ಷಮತೆ ಹೆಚ್ಚಿಸಲು ಆಯ್ದ ಕ್ಷೇತ್ರದಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿವರ್ತಿಸಲು ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಲು ನಿರ್ಧರಿಸಲಾಗಿದೆ.

ಏತ ನೀರಾವರಿ
ಜಮಖಂಡಿ ತಾಲೂಕಿನ ವೆಂಕಟೇಶ್ವರ, ಅಥಣಿ ತಾಲೂಕಿನ ಹಿಪ್ಪರಗಿ ಹಿನ್ನೀರಿನಿಂದ ಐನಾಪುರ ಹತ್ತಿರ ಕೆಂಪವಾಡ, ಸಾಸ್ವೇಹಳ್ಳಿ ಹತ್ತಿರ ತುಂಗಭದ್ರಾ ನದಿಯಿಂದ ಚನ್ನಗಿರಿ ಕಸಬಾ ಹೋಬಳಿ ಕೆರೆಗಳಿಗೆ, ಸಂತೆಬೆನ್ನೂರು ಹೋಬಳಿ ಕೆರೆಗಳಿಗೆ ಮತ್ತು ಶಾಂತಿಸಾಗರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ. ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ ನದಿಯಿಂದ ವೀರಭದ್ರೇಶ್ವರ ಏತ ನೀರಾವರಿ ಯೋಜನೆ. ಧಾರವಾಡ ಜಿಲ್ಲೆಯ ಬೇಡ್ತಿ ನದಿಯಿಂದ ಕೆರೆ ತುಂಬಿಸುವ ಯೋಜನೆ. ಗೊಂದಿ, ಭದ್ರಾ, ತುಂಗಾ ಮೇಲ್ದಂಡೆ, ಸಿಂಗಟಾಲೂರು, ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳಲ್ಲಿ ನೀರು ಹರಿವು ಅಳೆಯಲು ಹಾಗೂ ಮಾಹಿತಿ ಕೇಂದ್ರೀಕರಿಸಲು ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ಸಹಯೋಗದೊಂದಿಗೆ ಆಧುನಿಕ ಟೆಲಿಮೆಟ್ರಿಕ್ ತಂತ್ರಜ್ಞಾನ ಅಳವಡಿಕೆ.

ನಾಲಾ ಅಭಿವೃದ್ಧಿ
ಧರ್ಮ ಯೋಜನೆಗಳ ಕಾಲುವೆಗಳು, ಕಣ್ವ ಜಲಾಶಯದ ನಾಲೆಗಳು, ನುಗು ಯೋಜನೆ ಮೇಲ್ದಂಡೆ ನಾಲೆ, ಸುವರ್ಣಾವತಿ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳು, ಚಿಕ್ಕಹೊಳೆ ಜಲಾಶಯ ಎಡದಂಡೆ- ಬಲದಂಡೆ ಕಾಲುವೆಗಳು, ಹುಣಸೂರು ತಾಲೂಕಿನ ಹನಗೊಡು ನಾಲಾ ಜಾಲ, ರಾಮಪುರ ಅಣೆಕಟ್ಟು ನಾಲೆಗಳು, ಹೇಮಾವತಿ ಜಲಾಶಯದ ನಾಲಾ ಆಧುನೀಕರಣ. ತಾರಕಾ ಯೋಜನೆ ಎಡದಂಡೆ ನಾಲೆ, ಹಾರಂಗಿ ಬಲದಂಡೆ- ಎಡದಂಡೆ, ಕಬಿನಿ ಬಲದಂಡೆ ನಾಲಾ ವಿತರಣೆ 45, 46, 55 ಲೈನಿಂಗ್ ಕಾಮಗಾರಿ. ವಿಶ್ವೇಶ್ವರಯ್ಯ ನಾಲಾ ಜಾಲದ 2ನೇ ಹಂತ, ಹೊನ್ನೂರು ವಿತರಣಾ ನಾಲೆ, ಕಬಿನಿ ಬಲದಂಡೆ, ಸಂತೇಮರಹಳ್ಳಿ, ಬಂಗಾರದೊಡ್ಡಿ ಅಣೆಕಟ್ಟು ಅಭಿವೃದ್ಧಿ.
-ನೀರಾವರಿ ಪ್ರದೇಶದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ವಿದ್ಯುತ್ ಉತ್ಪಾದಿಸುವ ಪೈಲಟ್ ಆಧಾರದ ಕಾಮಗಾರಿ.
-ಸಾತನೂರು ಕೈಲಾಂಚ ಕುಡಿಯುವ ನೀರಿನ ಯೋಜನೆ.

ಸಣ್ಣ ನೀರಾವರಿ
ಸಣ್ಣ ನೀರಾವರಿ ಇಲಾಖೆಯಲ್ಲಿ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಕೆರೆಯ ಸಮಗ್ರ ಅಭಿವೃದ್ಧಿಗೆ 'ಕೆರೆ ಅಭಿವೃದ್ಧಿ- ನಾಡಿಯ ಶ್ರೇಯೋಭಿವೃದ್ಧಿ' ಕಾರ್ಯಕ್ರಮ ರೂಪಿಸಲಾಗಿದೆ. ಅಂತರ್ಜಲ ಕುಸಿದಿರುವ ಜಿಲ್ಲೆಗಳಲ್ಲಿ ವಿಶೇಷವಾಗಿ ಗದಗ, ಬಿಜಾಪುರ, ಕೊಪ್ಪಳ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೈಸರ್ಗಿಕ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿಯಲ್ಲಿ ಪಿಕಪ್ ನಿರ್ಮಿಸಲು ಉದ್ದೇಶಿಸಲಾಗಿದೆ. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳಡಿ ಸಮುದಾಯ ಏತ ನೀರಾವರಿ ಯೋಜನೆಗಳಿಗೆ ಪ್ರಾಯೋಗಿಕವಾಗಿ 'ಸೂರ್ಯಜ್ಯೋತಿ- ರೈತರ ಬಾಳಿನ ಪರಂಜ್ಯೋತಿ' ಕಾರ್ಯಕ್ರಮ. ಈ ಮೂಲಕ ಸೌರಶಕ್ತಿ ಚಾಲಿತ ಪಂಪುಗಳನ್ನು ಅಳವಡಿಸಲಾಗುತ್ತದೆ. ಹಾಸನ, ಮೈಸೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಚಾಮರಾಜನಗರದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement