ಬಿಯರ್ ಇನ್ನು ಹಾಟ್ ಹಾಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಾಯ ಸಂಗ್ರಹದ ಮೂಲವಾದ ಅಬಕಾರಿ ಇಲಾಖೆ ಮೇಲೆ ಹೆಚ್ಚಿನ ನೋಟ ಹರಿಸಿರುವ ಪರಿಣಾಮ, ಮದ್ಯ ಪ್ರಿಯರ ಜೇಬಿಗೆ ನೇರವಾಗಿ ಕೈಹಾಕಿದ್ದಾರೆ.
ಪರಿಣಾಮವಾಗಿ ಚಿಲ್ಡ್ ಬಿಯರ್ ಪ್ರಿಯರಿಗೆ 'ಹಾಟ್ ಬಿಯರ್' ಆಗಲಿದೆ. ಇನ್ನು ಚಿಲ್ಲರೆ ಮಾರಾಟ ಅಂಗಡಿಗಳ ಲೈಸೆನ್ಸ್ ಶುಲ್ಕ ಎರಡು ಪಟ್ಟು ಹೆಚ್ಚಾಗಿದೆ.
ರಾಜ್ಯ ಖಜಾನೆ ತುಂಬುವ ಪ್ರಮುಖ ಇಲಾಖೆಯಾಗಿರುವ ಅಬಕಾರಿ ಇಲಾಖೆಗೆ ಕಳೆದ ವರ್ಷಕ್ಕಿಂತ 1800 ಕೋಟಿಯಷ್ಟು ಹೆಚ್ಚಿನ ಗುರಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಯರ್ ಮೇಲಿನ ಅಬಕಾರಿ ಶುಲ್ಕವನ್ನು ಶೇ.122ರಿಂದ 135ಕ್ಕೆ ಹೆಚ್ಚಿಸಿದ್ದಾರೆ. ಪ್ರಾಥಮಿಕ ಡಿಸ್ಟಿಲರಿ, ಭಾರತೀಯ ಮದ್ಯ ತಯಾರಿಸುವ ಡಿಸ್ಟಿಲರಿ ಮತ್ತು ಬ್ರಿವರಿಗಳ ಸನ್ನದು ಶುಲ್ಕ ಶೇ.50ರಷ್ಟು ಹೆಚ್ಚಳ ಮಾಡಿದ್ದಾರೆ. ಎಂಎಸ್ಐಎಲ್ ಚಿಲ್ಲರೆ ಮದ್ಯ ಮಾರಾಟ ಅಂಗಡಿಗಳ ಸನ್ನದು ಶುಲ್ಕ 1ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಂಗಡಿಗಳನ್ನು ಸ್ಥಳಾಂತರಿಸುವಾಗ ವಿಧಿಸಲಾಗುವ ಸನ್ನದು ಶುಲ್ಕವನ್ನು ಶೇ.25ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ. ಈ ಎಲ್ಲ ಹೆಚ್ಚಳಗಳ ಜತೆಗೆ 2014-15ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 14,400 ಕೋಟಿ ಆದಾಯ ಸಂಗ್ರಹಣೆಯ ಗುರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.