ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಳೆಯಾಶ್ರಿತರಿಗೆ ಖುಷಿಯ ಭಾಗ್ಯ

Srinivasa Murthy VN
Updated On : 15 Feb 2014, 12:19 pm

ಕೃಷಿ ಯಂತ್ರೋಪಕರಣಗಳು ರೈತರಿಗೆ ಬಾಡಿಗೆ ಆಧಾರದಲ್ಲಿ ಲಭ್ಯವಾಗಲು ಸೇವಾಕೇಂದ್ರ ಆರಂಭ
ಮಳೆಯಾಶ್ರಿತ ರೈತ ಸಮುದಾಯದ ಸುಧಾರಿತ ಜೀವನೋಪಾಯಕ್ಕಾಗಿ 'ಕೃಷಿ ಭಾಗ್ಯ' ಯೋಜನೆಯನ್ನು ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದೇಶಿಸಿದ್ದು, ಈ ಮೂಲಕ ಕೃಷಿಯಲ್ಲಿ ಸುಸ್ಥಿರ ಅಭಿವೃದ್ಧಿಯ ಆಶಯ ಹೊಂದಿದ್ದಾರೆ. ಅಲ್ಲದೆ, ಕೃಷಿ ಯಂತ್ರೋಪಕರಣಗಳು ರೈತರಿಗೆ ಬಾಡಿಗೆ ಆಧಾರದಲ್ಲಿ ಲಭ್ಯವಾಗಲು ಸೇವಾಕೇಂದ್ರಗಳನ್ನು ತೆರೆಯಲೂ ಯೋಜಿಸಿದ್ದಾರೆ.
ರಾಜ್ಯದಲ್ಲಿರುವ 53 ಲಕ್ಷ ರೈತ ಕುಟುಂಬಗಳಿಗೆ 'ಕೃಷಿ ಭಾಗ್ಯ' ಯೋಜನೆಯಿಂದ ಪ್ರಯೋಜನ ಕಲ್ಪಿಸುವ ಜತೆಗೆ ರೈತರು ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಕೃಷಿ ವಿವಿಗಳ ಡಿಪ್ಲೊಮಾ, ಬಿಎಸ್ಸಿ ಕೃಷಿ ಹಾಗೂ ತತ್ಸಮಾನ ಪದವಿಗಳಲ್ಲಿ ಮೀಸಲು ಪ್ರಮಾಣವನ್ನು ಶೇ.40ಕ್ಕೆ ಹೆಚ್ಚಿಸಲಾಗುತ್ತದೆ. ಒಟ್ಟಾರೆ ಕೃಷಿ ಇಲಾಖೆ ಕಾರ್ಯಕ್ರಮಗಳಿಗೆ 3759 ಕೋಟಿ ಒದಗಿಸಲಾಗಿದೆ.
ರಾಜ್ಯದಲ್ಲಿರುವ ಶೇ.70ರಷ್ಟು ಸಾಗುವಳಿ ಪ್ರದೇಶ ಮಳೆ ಆಶ್ರಿತವಾಗಿರುವುದರಿಂದ, ಶೇ.55ರಷ್ಟು ಆಹಾರ ಧಾನ್ಯಗಳು ಹಾಗೂ ಶೇ.75ರಷ್ಟು ಎಣ್ಣೆಕಾಳುಗಳ ಉತ್ಪಾದನೆ ಈ ಪ್ರದೇಶದಲ್ಲೇ ಆಗುತ್ತದೆ. ಉತ್ಕೃಷ್ಟ ಸ್ವಾಭಾವಿಕ ಸಂಪನ್ಮೂಲವಾದ ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದನೆ, ರೈತ-ಕೃಷಿ ಕಾರ್ಮಿಕರ ಆದಾಯ ಮಟ್ಟ ಹೆಚ್ಚಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆಯನ್ನು ಮೊದಲನೆ ಹಂತದಲ್ಲಿ 5 ಮುಖ್ಯ ಒಣಭೂಮಿ ವಲಯಗಳ 45 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿದಲ್ಲಿ 23 ಜಿಲ್ಲೆಗಳಲ್ಲಿ ಜಾರಿಗೆ ತರಲಾಗುತ್ತದೆ. ಬದುಗಳ ಮೂಲಕ ಮಳೆ ನೀರಿನ ಸಂರಕ್ಷಣೆ, ಸಂಗ್ರಹ ಹಾಗೂ ಉಪಯುಕ್ತ ಬಳಕೆ, ಲಾಭದಾಯಕ ಬೆಳೆಗಳ ಪದ್ಧತಿ ಅಳವಡಿಕೆ, ಉತ್ತಮ ಆದಾಯ ತರುವ ತೋಟಗಾರಿಕೆ ಬೆಳೆಗಳು, ಪಶು ಸಂಗೋಪನಾ ಚಟುವಟಿಕೆಗಳು, ಸಂಸ್ಕರಣಾ ಉದ್ದಿಮೆ, ಕೃಷಿ ವಲಯಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಅಭಿವೃದ್ಧಿಗೆ ಪ್ರೋತ್ಸಾಹದ ಮೂಲಕ ಕೃಷಿಯಲ್ಲಿ ಸುಸ್ಥಿರ ಅಭಿವೃದ್ಧಿಯ ಆಶಯ ಕೃಷಿ ಭಾಗ್ಯದ್ದಾಗಿದೆ. ಈ ಯೋಜನೆ 53 ಲಕ್ಷ ರೈತ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು, 'ಕೃಷಿ ಭಾಗ್ಯ' ಅನುಷ್ಠಾನವನ್ನು ಮಿಷನ್ ಮೋಡ್ ಮಾದರಿಯಲ್ಲಿ ಹಂತಹಂತವಾಗಿ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಯಲ್ಲಿ 2014-15ನೇ ಸಾಲಿನಲ್ಲಿ 9 ಲಕ್ಷ ಹೆಕ್ಟೇರ್‌ಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಿದ್ದು, ಇದಕ್ಕಾಗಿ 500 ಕೋಟಿ ಅನುದಾನ ಒದಗಿಸಲಾಗಿದೆ. ಬೀಜ ಸಂಸ್ಕರಣೆ, ಗೋದಾಮು ನಿರ್ಮಾಣ, ಒಕ್ಕಣೆ ಕಣ ನಿರ್ಮಾಣ, ಬೀಜ ಸಂಸ್ಕರಣೆಗೆ ಬೇಕಾದ ಉಪಕರಣಗಳನ್ನು ನೀಡುವ ಜತೆಗೆ ಬೀಜೋತ್ಪಾದನೆ ಕೈಗೊಳ್ಳುವ ರೈತರಿಗೆ ಬೀಜ ಪ್ರಮಾಣೀಕರಣ ಶುಲ್ಕದಲ್ಲಿ ರಿಯಾಯಿತಿ ಹಾಗೂ ಬೀಜ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಪ್ರಸ್ತಾಪಿಸಲಾಗಿದೆ.

135 ಲಕ್ಷ ಟನ್ ಆಹಾರ ಉತ್ಪಾದನೆ ಗುರಿ
- 2014-15ನೇ ಸಾಲಿನಲ್ಲಿ 135 ಲಕ್ಷ ಟನ್ ಆಹಾರ ಉತ್ಪಾದನೆ ಗುರಿ ಹೊಂದಲಾಗಿದೆ. ಇದು ಈ ಬಾರಿಗಿಂತ 4 ಲಕ್ಷ ಟನ್ ಹೆಚ್ಚು.
- ರಾಗಿ, ಜೋಳ ಬೆಳೆಗಳ ಉತ್ಪಾದನೆ ಹೆಚ್ಚಿಸಲು ನೂತನ ತಾಂತ್ರಿಕತೆ ಅಳವಡಿಕೆಗೆ ವಿಶೇಷ ಪ್ಯಾಕೇಜ್.
- ನೋಂದಾಯಿತ ಚಾರಿಟೇಬಲ್ ಟ್ರಸ್ಟ್, ಸಂಘ-ಸಂಸ್ಥೆಗಳು, ಸ್ವಸಹಾಯ ಗುಂಪು, ಸರ್ಕಾರೇತರ ಸಂಸ್ಥೆಗಳ ಮೂಲಕ ರೈತರಿಗೆ ಕೃಷಿ ಯಂತ್ರೋಪಕರಣಗಳು ಬಾಡಿಗೆ ಆಧಾರದಲ್ಲಿ ನೀಡುವ ಸೇವಾ ಕೇಂದ್ರಗಳ ಸ್ಥಾಪನೆ.
- ಸಂಕಷ್ಟದಲ್ಲಿರುವ ರೈತರು ಹತಾಶೆಯಿಂದ ಹೊರಬರಲು, ಕೃಷಿ ತಜ್ಞರ ಜತೆಗೆ ಆರೋಗ್ಯ ಮತ್ತು ಮಾನಸಿಕ ತಜ್ಞರ ಮೂಲಕ ಆತ್ಮಸ್ಥೈರ್ಯ ತುಂಬಲು ಸಹಾಯವಾಣಿ.
- ರಿಯಾಯಿತಿ ಬೀಜ-ಗೊಬ್ಬರ, ಸಾಲಸೌಲಭ್ಯ, ಸಹಾಯಧನ, ಪಶುಸಂಗೋಪನೆ, ರೇಷ್ಮೆ ಕೃಷಿಯಲ್ಲಿ ಮಹಿಳಾ ಕೃಷಿಕರಿಗೆ ಆದ್ಯತೆ.
- ಕೃಷಿ ಉತ್ಪನ್ನಗಳ ಬೆಲೆ ನಿಗದಿಗೆ ರಾಜ್ಯಮಟ್ಟದ 'ಕೃಷಿ ಬೆಲೆ ಆಯೋಗ' ರಚನೆಗೆ ಆದೇಶ.
- ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರ ಸ್ಥಾಪನೆ.

ರೈತರ ಬವಣೆ ನೀಗಿಸುವುದು ಸರ್ಕಾರದ ಪ್ರಥಮ ಆದ್ಯತೆ. ರೈತರ ಬದುಕು ಹಸನಾಗದ ಹೊರತು ಸಮಾಜದ ಸ್ವಾಸ್ಥ್ಯ ಸುಧಾರಿಸುವುದಿಲ್ಲ. ಅಲ್ಪ ಬಡ್ಡಿ ದರದಲ್ಲಿ ಕೃಷಿ ಸಾಲ, ಸಹಾಯಧನಯುಕ್ತ ಬೀಜ, ರಸಗೊಬ್ಬರ, ಪೋಷಕಾಂಶ, ಕೃಷಿ ಉಪಕರಣಗಳು, ಭೂಸಂರಕ್ಷಣೆ, ಮಾರುಕಟ್ಟೆ ಸುಧಾರಣೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ ಕಾರ್ಯಕ್ರಮಗಳಿಂದ ರೈತರ ನೆರವಿಗೆ ಸರ್ಕಾರ ಎಲ್ಲ ಹಂತದಲ್ಲೂ ಧಾವಿಸುತ್ತದೆ. ಅನ್ನದಾತ ಹತಾಶನಾಗಬಾರದು, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯನ್ನು ಮತ್ತೊಮ್ಮೆ ನೀಡುತ್ತೇನೆ.
-ಸಿದ್ದರಾಮಯ್ಯ, ಸಿಎಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement