ದೆಹಲಿಗೆ 6 ತಿಂಗಳ ರಾಷ್ಟ್ರಪತಿ ಆಳ್ವಿಕೆ
ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಆಪ್) ಸರ್ಕಾರದ ರಾಜಿನಾಮೆಯೊಂದಿಗೆ ಅತಂತ್ರ ಸ್ಥಿತಿಗೆ ಸಿಲುಕಿದ್ದ ದೆಹಲಿ ಇನ್ನು ಮುಂದೆ..
ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಆಪ್) ಸರ್ಕಾರದ ರಾಜಿನಾಮೆಯೊಂದಿಗೆ ಅತಂತ್ರ ಸ್ಥಿತಿಗೆ ಸಿಲುಕಿದ್ದ ದೆಹಲಿ ಇನ್ನು ಮುಂದೆ ರಾಷ್ಟ್ರಪತಿ ಆಳ್ವಿಕೆಗೆ ಒಳಪಡಲಿದೆ.
ದೆಹಲಿ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಲೆ. ಗವರ್ನರ್ ನಜೀಬ್ ಜಂಗ್ ಮಾಡಿದ್ದ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಶನಿವಾರ ರಾತ್ರಿ ಪ್ರಧಾನಿ ಮನಮೋಹನ ಸಿಂಗ್ ನಿವಾಸದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಸರ್ಕಾರ ಭಾನುವಾರ ನೋಟಿಫಿಕೇಷನ್ ಹೊರಡಿಸಲಿದೆ. ಇದಕ್ಕೆ ಪ್ರಣಬ್ ಮುಖರ್ಜಿ ಅವರ ಅಂಕಿತ ಬೀಳುತ್ತಿದ್ದಂತೆ ದೆಹಲಿಯಲ್ಲಿ ರಾಷ್ಟ್ರಪತಿ ದರ್ಬಾರ್ ಶುರುವಾಗಲಿದೆ.
ಸಲಹೆ ತಿರಸ್ಕಾರ
ಇದಕ್ಕೂ ಮುನ್ನ ತಮ್ಮ ಸ್ಥಾನಕ್ಕೆ ಶುಕ್ರವಾರ ರಾತ್ರಿ ರಾಜಿನಾಮೆ ನೀಡಿದ್ದ ಕೇಜ್ರಿವಾಲ್, ವಿಧಾನಸಭೆ ವಿಸರ್ಜಿಸುವಂತೆ ಲೆ.ಗವರ್ನರ್ ಜಂಗ್ ಅವರಿಗೆ ಶಿಫಾರಸು ಮಾಡಿದ್ದರು. ಈ ಶಿಫಾರಸನ್ನು ತಿರಸ್ಕರಿಸಿದ್ದ ಜಂಗ್ ರಾಷ್ಟ್ರಪತಿ ಆಳ್ವಿಕೆಗೆ ಒಲವು ತೋರಿದ್ದರು.
ನಿಯಮ ಉಲ್ಲಂಘನೆ
ದೆಹಲಿ ವಿಧಾನಸಭೆಯನ್ನು ವಿಸರ್ಜಿಸಬೇಕೆನ್ನುವ ಶಿಫಾರಸನ್ನು ತಿರಸ್ಕರಿಸಿದ ಲೆ.ಗವರ್ನರ್ ನಜೀಬ್ ಜಂಗ್ ನಿಲುವಿಗೆ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹುಮತದ ಸರ್ಕಾರವೊಂದು ತೆಗೆದುಕೊಂಡ ನಿರ್ಧಾರವನ್ನು ಲೆ. ಗವರ್ನರ್ ಬಹಿರಂಗವಾಗಿ ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರದ ಅನೇಕ ನಿರ್ಧಾರಗಳನ್ನು ಲೆ.ಗವರ್ನರ್ ಈ ಹಿಂದೆಯೂ ತಿರಸ್ಕರಿಸಿದ್ದರು. ನಮ್ಮ ಸಚಿವ ಸಂಪುಟ ಸದನದ ಹೊರಗೆ ಕಲಾಪ ನಡೆಸಲು ನಿರ್ಧರಿಸಿತ್ತು. ಅದಕ್ಕೂ ಅವರು ಅವಕಾಶ ನೀಡಿರಲಿಲ್ಲ. ಜಂಗ್ ಬಹಿರಂಗವಾಗಿ ಸಂವಿಧಾನವನ್ನು ಗಾಳಿಗೆ ತೂರಿದ್ದಾರೆ. ವಿಧಾನಸಭೆ ವಿಸರ್ಜಿಸುವ ತೀರ್ಮಾನ ಕೈಬಿಡುವ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಕಾಂಗ್ರೆಸ್ಗೆ ಹೊಸದಾಗಿ ಚುನಾವಣೆ ನಡೆಯುವುದು ಬೇಕಿಲ್ಲ ಎಂದು ಕೇಜ್ರಿವಾಲ್ ದೂರಿದ್ದಾರೆ.
ಆಪ್ಗೆ ತರಾಟೆ
ಹಿರಿಯ ಕಾನೂನು ತಜ್ಞರ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ಹೇಳಿಕೆ ನೀಡುತ್ತಿದ್ದ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎನ್. ಭಟ್ ಬೆನ್ನಲ್ಲೇ ಈಗ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಆಮ್ ಆದ್ಮಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಪ್ರತಿಯೊಂದು ನಿರ್ಧಾರಕ್ಕೂ ನನ್ನ ಅಭಿಪ್ರಾಯವನ್ನು ಉಲ್ಲೇಖಿಸಬೇಡಿ. ಪ್ರತಿಯೊಂದಕ್ಕೂ ನನ್ನ ಹೆಸರು ಪ್ರಸ್ತಾಪಿಸಬೇಡಿ. ನಿಯಮದಂತೆ ನಡೆದುಕೊಳ್ಳಿ ಎಂದು ಅವರು ಕಿಡಿಕಾರಿದ್ದಾರೆ. ಜತೆಗೆ ಜನಲೋಕಪಾಲ ಮಸೂದೆ ವಿಚಾರವಾಗಿ ಲೆ. ಗವರ್ನರ್ ನಜೀಬ್ ಜಂಗ್ ತೆಗೆದುಕೊಂಡ ನಿರ್ಧಾರವನ್ನೂ ಸೊರಾಬ್ಜಿ ಬೆಂಬಲಿಸಿದ್ದಾರೆ.