ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪೊಲೀಸ್ ಇಲಾಖೆಗೆ ಬೇಕು ನಿರಂತರ ನೇಮಕ

ಪೊಲೀಸ್ ನೇಮಕಕ್ಕೆ ಕೂಡಲೇ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ಆರಂಭಿಸಿದರೂ ಸರ್ಕಾರ ಘೋಷಿಸಿರುವ 8500 ಪೊಲೀಸ್ ಹುದ್ದೆ ಭರ್ತಿಗೆ ಕನಿಷ್ಠ ನಾಲ್ಕು ವರ್ಷ ಬೇಕು...!

Srinivasa Murthy VN
Updated On : 16 Feb 2014, 11:04 am

-ಮಂಜುನಾಥ ನಾಗಲೀಕರ್
ಕನ್ನಡಪ್ರಭ ವಾರ್ತೆ ಬೆಂಗಳೂರು ಫೆ.16

7 ರಾಜ್ಯದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಗಳು
9 ತಿಂಗಳು ತರಬೇತಿ ಅವಧಿ
3 ವರ್ಷ 7,350 ಪೊಲೀಸರು ಸೇವೆಗೆ ಲಭ್ಯವಾಗಲು ಬೇಕಾಗುವ ಸಮಯ
ಪೊಲೀಸ್ ನೇಮಕಕ್ಕೆ ಕೂಡಲೇ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ಆರಂಭಿಸಿದರೂ ಸರ್ಕಾರ ಘೋಷಿಸಿರುವ 8500 ಪೊಲೀಸ್ ಹುದ್ದೆ ಭರ್ತಿಗೆ ಕನಿಷ್ಠ ನಾಲ್ಕು ವರ್ಷ ಬೇಕು...!
ಮೈಸೂರು ಹಾಗೂ ಗುಲ್ಬರ್ಗ ಸಬ್ ಇನ್ಸ್‌ಪೆಕ್ಟರ್ ತರಬೇತಿ ಕೇಂದ್ರ ಸೇರಿ ರಾಜ್ಯದಲ್ಲಿ 7 ಪೊಲೀಸ್ ತರಬೇತಿ ಕೇಂದ್ರಗಳಿದ್ದು, ಒಂದು ಕೇಂದ್ರದಲ್ಲಿ 350 ಅಭ್ಯರ್ಥಿಗಳಿಗೆ ತರಬೇತಿ ನೀಡಿದರೂ ಪ್ರತಿ ಬ್ಯಾಚ್‌ಗೆ 2450 ಪೊಲೀಸರು ಸೇವೆಗೆ ಲಭ್ಯವಾಗುತ್ತಾರೆ.
ಪೊಲೀಸ್ ಕಾನ್ಸ್‌ಟೇಬಲ್‌ಗಳ ತರಬೇತಿ 9 ತಿಂಗಳದ್ದು. 3 ಬ್ಯಾಚ್‌ಗಳಲ್ಲಿ ತರಬೇತಿ ಮುಗಿಸಿದ 7350 ಪೊಲೀಸರು ಸೇವೆಗೆ ಲಭ್ಯವಾಗಲು 3 ವರ್ಷ ಬೇಕು. ಉಳಿದ 1150 ಪೊಲೀಸ್ ಸಿಬ್ಬಂದಿಗೆ ಮತ್ತೊಂದು ಬ್ಯಾಚ್‌ನಲ್ಲಿ ತರಬೇತಿ ನೀಡಲು ಮತ್ತೆ 9 ತಿಂಗಳು. ಹೀಗೆ ಒಟ್ಟಾರೆಯಾಗಿ 8500 ಪೊಲೀಸರು ಸೇವೆಗೆ ಲಭ್ಯವಾಗಲು 4 ವರ್ಷಗಳೇ ಹಿಡಿಯುತ್ತವೆ. ಅಷ್ಟರಲ್ಲೇ ಮತ್ತೆ ಸಾವಿರಕ್ಕೂ ಅಧಿಕ ಕಾನ್ಸ್‌ಟೇಬಲ್‌ಗಳು ನಿವೃತ್ತರಾಗಿರುತ್ತಾರೆ!
ಮೇಲಿನ ಅಂಕಿ-ಅಂಶಗಳು ಆಯ್ಕೆಯಾದ ಬಳಿಕ ತರಬೇತಿ ಅವಧಿಯದ್ದು ಮಾತ್ರ. ಇನ್ನು ಅಧಿಸೂಚನೆ ಹೊರಡಿಸುವುದು, ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮುಗಿಸಿ, ಯಾವುದೇ ಅಡೆ ತಡೆಗಳು ಇಲ್ಲದೇ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕನಿಷ್ಠ 3 ತಿಂಗಳು ಬೇಕು. ಹೀಗೆ ನಾಲ್ಕು ಹಂತದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು 1 ವರ್ಷವೆಂದು ಲೆಕ್ಕ ಹಾಕಿದರೂ, ಒಟ್ಟಾರೆಯಾಗಿ 8500 ಹುದ್ದೆಗಳನ್ನು ತುಂಬಿಕೊಳ್ಳಲು 5 ವರ್ಷಗಳೇ ಬೇಕಾಗಬಹುದು.
ಪುಸ್ತಕಕ್ಕೆ ಸೀಮಿತ: ಸಿಬ್ಬಂದಿ ಕೊರತೆಯಿಂದ ನರಳುತ್ತಿರುವ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 10 ಸಾವಿರಕ್ಕೂ ಅಧಿಕ ಹುದ್ದೆಗಳ ಪೈಕಿ 8, 500 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ 2013-14ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ ಮುಖ್ಯಮಂತ್ರಿಭರವಸೆ, ಗೃಹ ಸಚಿವರ ಘೋಷಣೆ ಬರೀ ಹೇಳಿಕೆಯಾಗಿಯೇ ಉಳಿದಿವೆ. ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಭರವಸೆ ಈಡೇರಿಸಲು ಸಾಧ್ಯವಾಗದ ಕಾರಣ ಈ ಬಜೆಟ್‌ನಲ್ಲಿ ನೇಮಕದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ.
4 ವರ್ಷಗಳ ಹಿಂದೆ: ಪಿಎಸ್‌ಐ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು 2009ರಲ್ಲಿ. ಅದೇ ಕೊನೆ. ಸಾಮಾನ್ಯ ವರ್ಗದ ಅಭ್ಯರ್ಥಿ ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಲು 21ರಿಂದ 26 ವಯೋವಾನ ನಿಗದಿಪಡಿಸಲಾಗಿದೆ. 2009ರಲ್ಲಿ 21 ವಯೋವಾನದ ಆಕಾಂಕ್ಷಿಗೆ 2014ರಲ್ಲಿ 26 ವರ್ಷಗಳು.

ಪಿಎಸ್‌ಐ ಹುದ್ದೆಯ ಸಾವಿರಾರು ಆಕಾಂಕ್ಷಿಗಳು ಜೀವಮಾನದಲ್ಲಿ ಒಂದು ಸಲವಾದರೂ ಪಿಎಸ್‌ಐ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಸುಮಾರು ನಾಲ್ಕು ವರ್ಷಗಳಿಂದ ರಾಜ್ಯದ ಹಲವೆಡೆ ಪಿಎಸ್‌ಐ ಹುದ್ದೆ ಆಕಾಂಕ್ಷಿಗಳು ಕೋಚಿಂಗ್ ಪಡೆಯುತ್ತಿದ್ದಾರೆ. ಸರ್ಕಾರ ಅರ್ಜಿ ಆಹ್ವಾನಿಸುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರದಿಂದ ನೇಮಕದ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಕೋಚಿಂಗ್ ಬಿಟ್ಟು ಅನಿವಾರ್ಯವಾಗಿ ಬೇರೆ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ.
ಕಾನ್ಸ್‌ಟೇಬಲ್ ಹುದ್ದೆ 2010ರಲ್ಲೇ ಕೊನೆ: ಇನ್ನು ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ತಳ ಮಟ್ಟದಲ್ಲಿ ಕೆಲಸ ಮಾಡುವ ಕಾನ್ಸ್‌ಟೇಬಲ್ ಹುದ್ದೆಗಳಿಗೆ 2010ರಲ್ಲಿ ಕಡೆಯ ಬಾರಿ ಅರ್ಜಿ ಆಹ್ವಾನಿಸಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರ ನೇಮಕ ಮಾಡಿಕೊಳ್ಳುವ ಭರವಸೆ ನೀಡಿವೆ ಹೊರತು ಅದನ್ನು ಕಾರ್ಯ ರೂಪಕ್ಕೆ ಬಂದಿಲ್ಲ. ಹೀಗಾಗಿ ಸಾವಿರಾರು ಅಭ್ಯರ್ಥಿಗಳು ವಯೋವಾನ ಮೀರುತ್ತಿರುವುದರಿಂದ ಬೇಸತ್ತು ಹೋಗಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆ ವಿಧಾನಸೌಧ ಮುಂದೆ ಪೊಲೀಸ್ ಹುದ್ದೆ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಹೇಳಿದ್ದರು.
ಲೋಕಸಭಾ ಚುನಾವಣೆ ಭಯ: ಇನ್ನು ಎರಡೂವರೆ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಒಂದು ವೇಳೆ ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ನೇಮಕ ಪ್ರಕ್ರಿಯೆಗಳಿಗೆ ಅವಕಾಶವೇ ಇರುವುದಿಲ್ಲ. ನೀತಿ ಸಂಹಿತೆ, ಚುನಾವಣೆ ಫಲಿತಾಂಶ ಮುಂತಾದ ಬೆಳವಣಿಗೆಗಳು ಆರಂಭವಾದರೆ ಮತ್ತೆ ಮೂರು ತಿಂಗಳು ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲು ಸಾಧ್ಯವಾಗುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement