ಎಲ್‌ಪಿಜಿ ರು.250, ರು.4 ಸೀಮೆಎಣ್ಣೆ ದರ ಹೆಚ್ಚಳ ಸಾಧ್ಯತೆ?
ಸದ್ಯದಲ್ಲೇ ಮತ್ತೊಂದು ದರ ಏರಿಕೆಯ ಬರಸಿಡಿಲು...
ನವದೆಹಲಿ: ಸದ್ಯದಲ್ಲೇ ಮತ್ತೊಂದು ದರ ಏರಿಕೆಯ ಬರಸಿಡಿಲು ಬಡಿಯುವ ಎಲ್ಲಾ ಸಾಧ್ಯತೆಗಳೂ ಗೋಚರಿಸುತ್ತಿವೆ. ಎಲ್‌ಪಿಜಿ, ಡೀಸೆಲ್, ಸೀಮೆಎಣ್ಣೆ ದರ ಇನ್ನಷ್ಟು ಹೆಚ್ಚಳವಾಗುವ ಕಾಲ ಸನ್ನಿಹಿತವಾಗಿದೆ. ಜತೆಗೆ ಡೀಸೆಲ್ ದರವೂ ಸರ್ಕಾರದ ನಿಯಂತ್ರಣದಿಂದ ಮುಕ್ತವಾಗುವ ಸಾಧ್ಯತೆಯಿದೆ.
ಅಡುಗೆ ಅನಿಲ ಸಿಲಿಂಡರ್ ದರ 250 ಹಾಗೂ ಸೀಮೆಎಣ್ಣೆ ಪ್ರತಿ ಲೀಟರ್‌ಗೆ 4 ಹೆಚ್ಚಳ ಸಂಬಂಧ ರಾಜಕೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ಸಂಪುಟ ಟಿಪ್ಪಣಿ ಸಿದ್ಧಪಡಿಸುತ್ತಿದೆ. ಡೀಸೆಲ್, ಸೀಮೆಎಣ್ಣೆ ಮತ್ತು ಎಲ್‌ಪಿಜಿ ದರ ಹೆಚ್ಚಳ ಕುರಿತು ಈ ಸಮಿತಿ ಪರಿಶೀಲನೆ ನಡೆಸುತ್ತಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿದ್ದಂತೆ ಡೀಸೆಲ್ ದರವನ್ನು ಪ್ರತಿ ತಿಂಗಳು 40-50 ಪೈಸೆ ಏರಿಕೆ ಮಾಡುವ ಕ್ರಮ ಮುಂದುವರಿಯಲಿದೆ. ಪ್ರಸ್ತುತ ಇಂಧನದಲ್ಲಾಗುತ್ತಿರುವ ಲೀಟರ್‌ಗೆ 3.40ರಷ್ಟು ನಷ್ಟವು ತುಂಬುವವರೆಗೂ ದರ ಏರಿಕೆ ಪ್ರಕ್ರಿಯೆ ಯಥಾಸ್ಥಿತಿ ಮುಂದುವರಿಯಲಿ ಎಂಬ ಪ್ರಸ್ತಾಪವನ್ನು ತೈಲ ಸಚಿವಾಲಯ ಸಲ್ಲಿಸುವ ಸಾಧ್ಯತೆಯಿದೆ. ಜತೆಗೆ, ಡೀಸೆಲ್ ಸಬ್ಸಿಡಿ ರದ್ದುಪಡಿಸಿದ ಬಳಿಕ, ಡೀಸೆಲ್ ಅನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ.
ಸಮಿತಿ ವರದಿ ಪರಿಶೀಲನೆ: ಎಲ್‌ಪಿಜಿ, ಡೀಸೆಲ್, ಸೀಮೆಎಣ್ಣೆ ದರ ಏರಿಕೆ ವಿಚಾರದಲ್ಲಿ ಯೋಜನಾ ಆಯೋಗದ ಮಾಜಿ ಸದಸ್ಯ ಕಿರೀಟ್ ಎಸ್. ಪಾರಿಖ್ ನೇತೃತ್ವದ ತಜ್ಞರ ಸಮಿತಿಯ ಶಿಫಾರಸನ್ನು ಪರಿಶೀಲಿಸುವಂತೆ ಸಂಪುಟ ಸಮಿತಿಗೆ ತೈಲ ಸಚಿವಾಲಯ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಅಕ್ಟೋಬರ್‌ನಲ್ಲಿ ವರದಿ ಸಲ್ಲಿಸಿದ್ದ ಪಾರಿಖ್ ಸಮಿತಿ, ಇಂಧನ ಸಬ್ಸಿಡಿ ಬಿಲ್ ಅನ್ನು 72 ಸಾವಿರ ಕೋಟಿಯಷ್ಟು ಕಡಿಮೆ ಮಾಡಬೇಕೆಂದರೆ ಡೀಸೆಲ್ ದರವನ್ನು ಲೀ.ಗೆ 5, ಸೀಮೆಎಣ್ಣೆ ಲೀ.ಗೆ 4 ಮತ್ತು ಅಡುಗೆ ಅನಿಲ ದರವನ್ನು ಸಿಲಿಂಡರ್‌ಗೆ 250ರಷ್ಟು ಏರಿಕೆ ಮಾಡಲೇಬೇಕು ಎಂದಿತ್ತು.
ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್, ಸೀಮೆ ಎಣ್ಣೆ, ಡೀಸೆಲ್ ದರ ಹೆಚ್ಚಿಸುವ ಪ್ರಸ್ತಾಪ ಕೇಂದ್ರದ ಮುಂದಿಲ್ಲ. ಸಿಸಿಪಿಎ ಮುಂದೆ ನನ್ನ ಸಚಿವಾಲಯ ಯಾವುದೇ ರೀತಿಯ ಟಿಪ್ಪಣಿ ಸಿದ್ಧಪಡಿಸಿ ಕಳುಹಿಸಿಲ್ಲ. ಹೊಸತಾಗಿ ದರ ಪರಿಷ್ಕರಣೆ ಪ್ರಸ್ತಾಪವೂ ಸರ್ಕಾರದ ಇರಾದೆಯಲ್ಲಿಲ್ಲ.
-ಧರ್ಮೇಂದ್ರ ಪ್ರಧಾನ್, ಪೆಟ್ರೋಲಿಯಂ ಸಚಿವ