ಒಣಪ್ರತಿಷ್ಠೆ ತೋರಿದ ಸರ್ಕಾರ, ಕಲಾಪ ನುಂಗಿದ ಕಾಶಪ್ಪನವರ
ಪೊಲೀಸರ ಮೇಲೆ ಶಾಸಕ ವಿಜಯಾನಂದ ಕಾಶಪ್ಪನವರ್ ಹಲ್ಲೆ ನಡೆಸಿದ...
ವಿಧಾನಸಭೆ: ಪೊಲೀಸರ ಮೇಲೆ ಶಾಸಕ ವಿಜಯಾನಂದ ಕಾಶಪ್ಪನವರ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಣಪ್ರತಿಷ್ಠೆ ತೋರಿದ ಆಡಳಿತ ಪಕ್ಷ, ಸ್ಪೀಕರ್ ಮಾತಿಗೂ ಬಗ್ಗದೆ ಶುಕ್ರವಾರದ ಕಲಾಪವನ್ನು ಹಾಳು ಮಾಡಿತು. ಉತ್ತರ ನೀಡುತ್ತೇವೆ ಎಂದು ಸಬೂಬು ಹೇಳಿಕೊಂಡು ಸರ್ಕಾರವೇ ಮುಜುಗರಕ್ಕೆ ಒಳಗಾಯಿತು. ಉತ್ತರಕ್ಕೆ ಪಟ್ಟು ಹಿಡಿದ ಬಿಜೆಪಿ ಧರಣಿ ನಡೆಸಿದ್ದರಿಂದ ಶುಕ್ರವಾರ ಕಲಾಪ ನಡೆಯಲಿಲ್ಲ.
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಸ್ಪರ ವಾಗ್ಯುದ್ಧ ಮಾಡಿದರು. ಸದನದ ಬಾಗಿಲು ಮುರಿದದ್ದು, ಸ್ಪೀಕರ್ ಮೇಲೆ ಕುರ್ಚಿ ಎಸೆದದ್ದು, ಶಾಸಕರ ಬ್ಲೂಫಿಲ್ಮ್ ವೀಕ್ಷಣೆ, ಶಾಸಕರ ರೇಪ್ ಪ್ರಕರಣಗಳನ್ನು ಎತ್ತಿಕೊಂಡು ಪರಸ್ಪರ ಟೀಕೆಗೆ ಅಸ್ತ್ರವನ್ನಾಗಿಸಿಕೊಂಡರು.
ಸ್ಪೀಕರ್ ಕಾಗೋಡು ತಿಮ್ಮಪ್ಪ 'ಇದು ನಿನ್ನೆಯ ವಿಷಯ. ಇಂದು ಉತ್ತರ ನೀಡುವುದಾಗಿ ಹೇಳಲಾಗಿತ್ತು. ಉತ್ತರ ಕೊಡಿ. ಪ್ರತಿಷ್ಠೆ ಬೇಡ, ಉತ್ತರ ಕೊಡಲು ತೊಂದರೇನಾ?' ಎಂದು ಗೃಹ ಸಚಿವರಿಗೆ ಸೂಚಿಸಿದರೂ, ಅದನ್ನು ಪಾಲಿಸದೆ ಪ್ರಶ್ನೋತ್ತರ ನಂತರವಷ್ಟೇ ಉತ್ತರ ಎಂದರು. ಇದು ಸ್ಪೀಕರ್‌ರನ್ನು ಮುಜುಗರಕ್ಕೆ ಈಡು ಮಾಡಿತಲ್ಲದೆ, ಸಿಟ್ಟಾಗಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. 'ನಾನು ಉತ್ತರಕ್ಕೆ ಒತ್ತಾಯ ಮಾಡಲಾಗದು' ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಅಲ್ಲದೆ, ಗೃಹ ಸಚಿವ ಟಿ.ಜೆ. ಜಾರ್ಜ್ 'ಇಲ್ಲಿ ಉತ್ತರ ನೀಡಿದರೆ ಶಿಕ್ಷೆ ಕೊಡುತ್ತೀರಾ? ಇದೇನು ಕೋರ್ಟಾ, ಪೊಲೀಸ್ ಸ್ಟೇಷನ್ನಾ?' ಎಂದು ಪ್ರಶ್ನಿಸಿದರು. ಇದರಿಂದ ಬಿಜೆಪಿ ಧರಣಿ ತೀವ್ರಗೊಂಡಿತು. ಉತ್ತರ ಕೊಡದೆ ಸರ್ಕಾರ ಕಲಾಪ ಹಾಳು ಮಾಡುತ್ತಿದೆ ಎಂದು ಶೆಟ್ಟರ್ ದೂರಿದರು. ಸದಸ್ಯರೆಲ್ಲ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕಲಾಪವನ್ನು ಅರ್ಧ ಗಂಟೆ ಮುಂದೂಡಲಾಯಿತು. ಬಳಿಕವೂ ಧರಣಿ ಮುಂದುವರಿದು, ಸಿಎಂ-ಪ್ರತಿಪಕ್ಷ ನಾಯಕರ ನಡುವೆ ವಾಗ್ಯುದ್ಧ. ಸದಸ್ಯರ ಆರೋಪ- ಪ್ರತ್ಯಾರೋಪಗಳು. ಈ ಮಧ್ಯೆ ಪ್ರಶ್ನೋತ್ತರ ಕೈಗೆತ್ತಿಕೊಂಡರೂ 'ಈ ಗಲಾಟೆಯಲ್ಲಿ ಸದಸ್ಯರ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ' ಎಂದು ರಮೇಶ್‌ಕುಮಾರ್ ಆತಂಕ ವ್ಯಕ್ತಪಡಿಸಿದಾಗ, ಸ್ಪೀಕರ್ ಸದನವನ್ನು ಸೋಮವಾರಕ್ಕೆ ಮುಂದೂಡಿದರು. ಕಲಾಪ ಶುಕ್ರವಾರ ಒಂದು ಗಂಟೆ ನಡೆಯಿತಾದರೂ, ಅದೆಲ್ಲವೂ ಧರಣಿ, ಧಿಕ್ಕಾರ, ಆರೋಪ, ಪ್ರತ್ಯಾರೋಪಕ್ಕೇ ಮೀಸಲಾಗಿತ್ತು.
ಪ್ರಕರಣ ಸಿಸಿಬಿಗೆ
ಬೆಂಗಳೂರು: ಶಾಸಕ ಕಾಶಪ್ಪನವರ್‌ರಿಂದ ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣದ ತನಿಖೆಯನ್ನು ಸಿಸಿಬಿ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಆದೇಶಿಸಿದ್ದಾರೆ. ಸಿಸಿಬಿ ಎಸಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಆರಕ್ಷಕರನ್ನೇ ರಕ್ಷಣೆ ಮಾಡಬೇಕಾದ ಪರಿಸ್ಥಿತಿ ಇದೆ. ಕಾಶಪ್ಪನವರಿಂದ ಹಲ್ಲೆ, ಭೈರತಿಯಿಂದ ಕಪಾಳಮೋಕ್ಷ. ನಿರ್ಭೀತ ವಾತಾವರಣ ಎಂದು ಜಾಹೀರಾತು ನೀಡುತ್ತಾರೆ. ಆದರೆ ಹೆಂಗಸರು ಮಾತ್ರವಲ್ಲ, ಪೊಲೀಸರೂ ಒಂಟಿಯಾಗಿ ಓಡಾಡದಂತಾಗಿದೆ.
-ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ (ಸದನದಲ್ಲಿ)
ಇದರಿಂದ ಸರ್ಕಾರಕ್ಕೆ ಮುಜುಗರವಿಲ್ಲ. ಅಂಥ ತಪ್ಪನ್ನು ಸರ್ಕಾರ ಮಾಡಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಸರ್ಕಾರ ಅವರನ್ನು ರಕ್ಷಿಸಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ (ಸುದ್ದಿಗೋಷ್ಠಿಯಲ್ಲಿ)