ಅಬ್ಬಾ, ಇನ್ನೆಂದೂ ಇರಾಕ್ಗೆ ಹೋಗಲ್ಲ
'ಮತ್ತೆ ನಾವು ಇರಾಕ್ಗೆ ಹೋಗಲ್ಲ. ನಮ್ಮ ಜೀವವನ್ನು ಅಪಾಯಕ್ಕೆ ಒಡ್ಡಲು ಬಯಸಲ್ಲ.'
ಕೊಚ್ಚಿ: 'ಮತ್ತೆ ನಾವು ಇರಾಕ್ಗೆ ಹೋಗಲ್ಲ. ನಮ್ಮ ಜೀವವನ್ನು ಅಪಾಯಕ್ಕೆ ಒಡ್ಡಲು ಬಯಸಲ್ಲ.'
ಯುದ್ಧಪೀಡಿತ ಇರಾಕ್ನಲ್ಲಿ ಒಂದು ತಿಂಗಳು ಇದ್ದ ಕೇರಳದ ನರ್ಸ್ಗಳ ಮನದಾಳದ ಮಾತಿದು. ಸ್ವದೇಶಕ್ಕೆ ಶನಿವಾರ ಮರಳಿದ ನರ್ಸ್ಗಳು, ಇನ್ನೆಂದೂ ಅಲ್ಲಿಗೆ ಹೋಗೋ ಪ್ರಶ್ನೆ ಇಲ್ಲ ಎಂದಿದ್ದಾರೆ.
ಇಸಿಸ್ ಉಗ್ರರ ವಶದಲ್ಲಿದ್ದ 46 ನರ್ಸ್ಗಳು ಸೇರಿದಂತೆ 183 ಮಂದಿ ತಾಯ್ನಾಡಿಗೆ ಶನಿವಾರ ಸುರಕ್ಷಿತವಾಗಿ ಮರಳಿದರು. ಎರ್ಬಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಏರ್ಇಂಡಿಯಾದ ವಿಶೇಷ ವಿಮಾನ ಶನಿವಾರ ಬೆಳಗ್ಗೆ 11.57ಕ್ಕೆ ಕೊಚ್ಚಿ ತಲುಪಿತು. ವಿಮಾನ ಕೊಚ್ಚಿ ಯಲ್ಲಿ ಭೂಸ್ಪರ್ಶ ಮಾಡುತ್ತಿದ್ದಂತೆ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜತೆಗೆ, ಭಾರತೀಯರ ಸುರಕ್ಷತೆಗಾಗಿ ಶ್ರಮಿಸಿದ ವಿದೇಶಾಂಗ ಸಚಿವಾಲಯ ಹಾಗೂ ಕೇರಳ ಸರ್ಕಾರವೂ ನಿರಾಳಗೊಂಡವು.
ಥ್ಯಾಂಕ್ಯೂ: ಶನಿವಾರ ವಾಪಸಾದ 46 ದಾದಿಯರಲ್ಲಿ 45 ಮಂದಿ ಕೇರಳಿಗರಾದರೆ, ಒಬ್ಬರು ತಮಿಳುನಾಡಿನವರು. ಜತೆಗೆ ಇತರೆ 137 ಭಾರತೀಯರೂ ಸ್ವದೇಶಕ್ಕೆ ಮರಳಿದರು. ಇವರನ್ನು ಸ್ವಾಗತಿಸಲು ಸ್ವತಃ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಏರ್ಪೋರ್ಟ್ಗೆ ಆಗಮಿಸಿದ್ದರು. ಚಾಂಡಿಯವರನ್ನು ನೋಡುತ್ತಿದ್ದಂತೆ ಎಲ್ಲ ನರ್ಸ್ಗಳೂ 'ಥ್ಯಾಂಕ್ಯೂ' ಎನ್ನುತ್ತಾ ವಂದಿಸಿದರು. ಏತನ್ಮಧ್ಯೆ, ಇರಾಕ್ನಲ್ಲಿರುವ ಇನ್ನೂ 600 ಭಾರತೀಯರು ಸೋಮವಾರ ವಾಪಸಾಗಲಿದ್ದಾರೆನ್ನಲಾಗಿದೆ.
ಕೇರಳದ ಜನತೆಯ ಆತಂಕ, ನೋವನ್ನು ಅರ್ಥಮಾಡಿಕೊಂಡ ಮೋದಿ ಸರ್ಕಾರ ನರ್ಸ್ಗಳ ಬಿಡುಗಡೆಗೆ ಅವಿರತವಾಗಿ ಶ್ರಮಿಸಿತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಇರಾಕ್ನ ಭಾರತೀಯ ರಾಯಭಾರ ಕಚೇರಿ, ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದಗಳು.
-ಉಮ್ಮನ್ ಚಾಂಡಿ, ಕೇರಳ ಸಿಎಂ