ರೈತರ ಸಹನೆಯ ಕಟ್ಟೆ ಸ್ಫೋಟ
ಬಿಜಾಪುರದ ಕೂಡಗಿ ಬಳಿ ಸ್ಥಾಪನೆಯಾಗುತ್ತಿರುವ 4,000 ಮೆಗಾ ವ್ಯಾಟ್ ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ...
-ರುದ್ರಪ್ಪ ಆಸಂಗಿ
ಬಿಜಾಪುರ: ಕೂಡಗಿ ಬಳಿ ಸ್ಥಾಪನೆಯಾಗುತ್ತಿರುವ 4,000 ಮೆಗಾ ವ್ಯಾಟ್ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸಂಬಂಧಿಸಿ ಬೂದಿ ಮುಚ್ಚಿದ ಕೆಂಡದಂತಿದ್ದ ರೈತರ ಆಕ್ರೋಶ ಶನಿವಾರ ಸ್ಫೋಟಗೊಂಡಿತು ಅಷ್ಟೆ.
ಈ ಸ್ಥಾವರಕ್ಕೆ ಸಂಬಂಧಿಸಿ ಮೂರು ವರ್ಷಗಳಿಂದ ರೈತರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು. ಆಗಾಗ ಹೋರಾಟ ಮಾಡುತ್ತ ಬಂದಿದ್ದರು. ಆದರೂ ಈ ಬಗ್ಗೆ ಸರ್ಕಾರವಾಗಲಿ, ಎನ್ಟಿಪಿಸಿಯವರಾಗಲಿ ರೈತರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸದೆ ರೈತರ ವಿರೋಧದ ಮಧ್ಯೆ ಸ್ಥಾವರದ ಮೊದಲ ಹಂತದ 2,400 ಮೆ. ವ್ಯಾ. ಸ್ಥಾವರ ಕಾಮಗಾರಿ ಆರಂಭಿಸಿದ್ದರು. ರೈತ ಮುಖಂಡರು ಸ್ಥಳೀಯರು ಇದರ ವಿರುದ್ಧ ಸುಪ್ರೀಂ ಕೋರ್ಟ್ ಹಸಿರುಪೀಠದ ಮೊರೆ ಕೂಡ ಹೋಗಿದ್ದರು. ನ್ಯಾಯಾಲಯ ಈ ಹಿಂದೆ ಘಟಕದ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು. ಬಳಿಕ ತಡೆಯಾಜ್ಞೆ ತೆರವುಗೊಂಡು ಕಾಮಗಾರಿ ಆರಂಭವಾಗಿತ್ತು. ಆದರೂ ರೈತರ ಪ್ರತಿಭಟನೆ, ಸಭೆ, ಹೋರಾಟ ಮುಂದುವರಿದಿದ್ದವು. ಶನಿವಾರ ನಡೆದ ಪ್ರತಿಭಟನೆ ವೇಳೆ ರೈತರ ಸಹನೆ ಕಟ್ಟೆ ಒಡೆದು ಈ ಅವಘಡ ಸಂಭವಿಸಿದೆ.
ಫಲವತ್ತಾದ ಭೂಮಿ ಕಳೆದುಕೊಂಡರು: ಕೂಡಗಿ ಸುತ್ತಮುತ್ತಲ ಮಲಘಾಣ, ಮಸೂತಿ, ತೆಲಗಿ ಗ್ರಾಮಗಳ ರೈತರು ಲಕ್ಷಾಂತರ ಎಕರೆ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯುತ್ತಿದ್ದರು. ಕೂಡಗಿ ವೀಳ್ಯದೆಲೆಗೆ ಬಹಳಷ್ಟು ಪ್ರಸಿದ್ಧಿ ಪಡೆದಿತ್ತು. ಈ ಪ್ರದೇಶದಲ್ಲಿ ವೀಳ್ಯದೆಲೆ ಒಂದೇ ಅಲ್ಲ. ದ್ರಾಕ್ಷಿ, ಈರುಳ್ಳಿ, ಬಾಳೆಹಣ್ಣು ಬೆಳೆಯಲಾಗುತ್ತಿತ್ತು. ಸ್ಥಾವರ ನಿರ್ಮಾಣಕ್ಕೆ 3,200 ಎಕರೆ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಫಲವತ್ತಾದ ಭೂಮಿ ಕಳೆದುಕೊಂಡ ರೈತರು ಒಳಗೊಳಗೆ ಕುದಿಯತೊಡಗಿದ್ದರು. ಈ ಬೇಗುದಿ ಶನಿವಾರ ಜ್ವಾಲಾಮುಖಿಯಂತೆ ಸ್ಫೋಟಿಸಿತು.
ರೈತರ ಕೂಗೇನು?: ಸದ್ಯಕ್ಕೆ ಆರಂಭಗೊಂಡ ಮೊದಲ ಹಂತದ 2,400 ಮೆ. ವ್ಯಾ. ವಿದ್ಯುತ್ ಸ್ಥಾವರಕ್ಕೆ ವಿದ್ಯುತ್ ಉತ್ಪಾದಿಸಲು ಪ್ರತಿದಿನ 34,000 ಟನ್ ಕಲ್ಲಿದ್ದಲು ಬೇಕು.
ಇದರಿಂದ ಪ್ರತಿ ದಿನ 11,000 ಟನ್ ಹಾರು ಬೂದಿ ಬೀಳುತ್ತದೆ. ಈ ಬೂದಿ ಜನ, ಜಾನುವಾರು ಹಾಗೂ ಪರಿಸರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅಂತರ್ಜಲ ವಿಷವಾಗುತ್ತದೆ. ಜನ ಅಸ್ತಮಾ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಇಂಥ ಅಪಾಯಕಾರಿ ಸ್ಥಾವರವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂಬುವುದು ಇಲ್ಲಿನ ರೈತರ ಪ್ರಮುಖ ಬೇಡಿಕೆ.
ಮೂರ್ನಾಲ್ಕು ವರ್ಷಗಳ ಮೊರೆ: ರೈತರ ಈ ಬೇಡಿಕೆ ಇಂದು ನಿನ್ನೆಯದಲ್ಲ. ವಿದ್ಯುತ್ ಸ್ಥಾವರ ಸ್ಥಾಪನೆಗೆ ಯತ್ನಗಳು ಆರಂಭವಾದ ದಿನದಿಂದಲೇ ಅಂದರೆ ಮೂರ್ನಾಲ್ಕು ವರ್ಷಗಳಿಂದಲೇ ವಿರೋಧ ಶುರುವಾಗಿದೆ. ಆದರೆ, ಆಗ ರೈತರ ಪ್ರತಿಭಟನೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡೆದಿರಲಿಲ್ಲ. ಈಗ ರೈತರು ಜೀವ ಹೋದರೂ ಪರವಾಗಿಲ್ಲ. ಜಮೀನು ಮಾತ್ರ ಬಿಟ್ಟು ಕೊಡುವುದಿಲ್ಲ ಎಂಬ ನಿಲುವಿಗೆ ಬಂದಿದ್ದಾರೆ.
ಸರ್ಕಾರದ ಹೊಣೆಗೇಡಿತನ
ನ್ಯಾಶನಲ್ ಗ್ರೀನ್ ಟ್ರಬ್ಯೂನಲ್ ಕೂಡಾ ಎನ್ಟಿಪಿಸಿ ಸ್ಥಾವರಕ್ಕೆ ವಿರೋಧ ಮಾಡಿತ್ತು. ಆದಾಗ್ಯೂ ಇದಕ್ಕೆ ತಡೆಯಾಜ್ಞೆ ತಂದು ಎನ್ಟಿಪಿಸಿ ಕಾಮಗಾರಿ ಮುಂದುವರಿಸಿದೆ. ಕೂಡಲೇ ಕಾಮಗಾರಿ ತಡೆಯಲೇಬೇಕು ಎಂದು ನಿವೃತ್ತ ಅಣು ವಿಜ್ಞಾನಿ ಎಂ.ಪಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ. ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ರೈತರು ಕಳೆದ ಮೂರು ವರ್ಷಗಳಿಂದ ವಿದ್ಯುತ್ ಸ್ಥಾವರ ಸ್ಥಳಾಂತರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ.
ವಿವಾದ ಏನು?
4000 ಮೆ.ವ್ಯಾ. ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸ್ಥಾಪನೆ. ಈಗಾಗಲೇ 2500 ಮೆ.ವ್ಯಾ. ಸಾಮರ್ಥ್ಯದ ಸ್ಥಾವರ ಕಾಮಗಾರಿ ಪ್ರಗತಿಯಲ್ಲಿದೆ.
ಎಲ್ಲಿ?
ಬಿಜಾಪುರ ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದ ಬಸವನ ಬಾಗೇವಾಡಿ ತಾಲೂಕಿನ ಕೂಡಗಿ.
ವಿರೋಧ ಯಾಕೆ?
ರೈತರ ಫಲವತ್ತಾದ ಭೂಮಿ ಸ್ವಾಧೀನ, ಆಲಮಟ್ಟಿ ಅಣೆಕಟ್ಟೆಯಿಂದ ಸ್ಥಾವರಕ್ಕೆ ನೀರು ಪೂರೈಕೆಯಿಂದ ನೀರಾವರಿಗೆ ತೊಂದರೆ ಆಗಬಹುದೆಂಬ ಆತಂಕ. ಹಾರುಬೂದಿಯಿಂದ ಪರಿಸರ, ಆರೋಗ್ಯದ ಮೇಲೆ ಅನಾನುಕೂಲವಾಗುವ ಸಾಧ್ಯತೆ.
ಏನಾಯ್ತು?
ಆರಂಭದಲ್ಲಿ ಸ್ಥಾವರಕ್ಕೆ ನುಗ್ಗಲು ಪ್ರತಿಭಟನಾಕಾರರ ಯತ್ನ, ಪೊಲೀಸರಿಂದ ತಡೆ. ಕಲ್ಲು ತೂರಾಟ, ಲಾಠಿ ಪ್ರಹಾರ. ರೊಚ್ಚಿಗೆದ್ದ ಪ್ರತಿಭಟನಾಕಾರರಿಂದ ಕಾರ್ಮಿಕರ ಟೆಂಟ್ಗೆ ಬೆಂಕಿ, ನಾಲ್ಕಾರು ಪೊಲೀಸರ ಬೈಕ್ಗೂ ಬೆಂಕಿ, ಸ್ಥಾವರಕ್ಕೆ ಸಂಬಂಧಿಸಿದ ನಾಲ್ಕು ಟಿಪ್ಪರ್ಗಳಿಗೂ ಅಗ್ನಿಸ್ಪರ್ಶ. ಪೊಲೀಸರಿಂದ ಗೋಲಿಬಾರ್ ನಾಲ್ವರಿಗೆ ಗಾಯ. ಗಾಯಗೊಂಡ ಇಬ್ಬರನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲು ಕಲ್ಲು ತೂರಾಟ, ಲಾಠಿ ಪ್ರಹಾರದಲ್ಲಿ ಪೊಲೀಸರು, ರೈತರಿಗೂ ಗಾಯ, ನಿಷೇಧಾಜ್ಞೆ ಜಾರಿ. ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳು, ಎನ್ಟಿಪಿಸಿ ಅಧಿಕಾರಿಗಳಿಂದ ಸ್ಥಳಕ್ಕೆ ಭೇಟಿ ಪರಿಶೀಲನೆ.
ಕೃಷಿಗೂ ಅಡಚಣೆ
ಆಲಮಟ್ಟಿ ಅಣೆಕಟ್ಟೆಯಿಂದ ಈ ಸ್ಥಾವರಕ್ಕೆ 5.2 ಟಿಎಂಸಿ ನೀರು ಪಡೆಯಲಾಗುತ್ತಿದೆ. ಆಲಮಟ್ಟಿ ಅಣೆಕಟ್ಟೆಯಿಂದ ಸ್ಥಾವರಕ್ಕೆ ನೀರು ಪಡೆಯುವುದರಿಂದ ಈ ಭಾಗದ 52,000 ಎಕರೆ ಪ್ರದೇಶ ನೀರಾವರಿ ಸೌಲಭ್ಯದಿಂದ ವಂಚಿತವಾಗಲಿದೆ. ಮುಳವಾಡ ಏತ ನೀರಾವರಿ ಯೋಜನೆ ಪೂರ್ಣಗೊಂಡಲ್ಲಿ ಈ ಭಾಗದ 2.5 ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಡುತ್ತಿತ್ತು. ಆಗ ಈ ಪ್ರದೇಶದಲ್ಲಿ ಬಂಗಾರ ಬೆಳೆ ಬೆಳೆಯಬಹುದಿತ್ತು ಎಂದು ರೈತರು ಕನಸು ಕಾಣುತ್ತಿದ್ದರು.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಸರ್ಕಾರ, ಏಕಾಏಕಿ ರೈತರ ಮೇಲೆ ಗುಂಡು ಹಾರಿಸಿದ್ದು ಸರ್ವಾಧಿಕಾರಿ ಧೋರಣೆ. ಇದು ಹೊಣೆಗೇಡಿತನದ ಪರಮಾವಧಿ. ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು.
-ಎಂ.ಪಿ. ಪಾಟೀಲ,
ನಿವೃತ್ತ ಅಣು ವಿಜ್ಞಾನಿ
ಲಾಠಿಚಾರ್ಜ್ನಿಂದಾಗಿ ಗಾಯಗೊಂಡ ಮಹಿಳೆ.