ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮತಾಂತರ ಜಾಲ
ಅಕ್ರಮ ಶಸ್ತ್ರಾಸ್ತ್ರ ರವಾನೆಗೆ ಅನ ಧಿಕೃತ ರಹದಾರಿಯಾಗಿದ್ದ ಬೆಳಗಾವಿ ಹಿಂಡಲಗಾ ಜೈಲಿಗೆ ಕೈದಿಗಳ..
ರಾಘವೇಂದ್ರ ಭಟ್
ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ ರವಾನೆಗೆ ಅನ ಧಿಕೃತ ರಹದಾರಿಯಾಗಿದ್ದ ಬೆಳಗಾವಿ ಹಿಂಡಲಗಾ ಜೈಲಿಗೆ ಕೈದಿಗಳ ಮತಾಂತರಜಾಲ ನುಸುಳಿದೆ.
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಸದ್ಬಳಕೆ ಮಾಡಿಕೊಂಡ ಈ ಜಾಲ, ಅಕ್ರಮ ಶಸ್ತ್ರಾಸ್ತ್ರ ಹಾಗೂ ಖೋಟಾ ನೋಟು ಚಲಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಹುಬ್ಬಳ್ಳಿ ಮೂಲದ ಕೈದಿಯನ್ನು ಕಾರಾಗೃಹದಲ್ಲೇ ಇಸ್ಲಾಂಗೆ ಮತಾಂತರಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಇದು ಕಾರಾಗೃಹ ನಿಯಮಗಳ ಸ್ಪಷ್ಟ ಉಲ್ಲಂಘನೆ. ಮತಾಂತರಗೊಂಡ ವ್ಯಕ್ತಿಯನ್ನು ಮುಸ್ಲಿಂ ಹೆಸರಿನಲ್ಲೇ ಈಗ ಕರೆಯಲಾಗುತ್ತಿದ್ದು, ಈ ವಿಚಾರದಲ್ಲಿ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಆದರೆ ಕೆಲಸಕ್ಕೆ ಸಂಚಕಾರ ಬಂದೀತೆಂಬ ಭಯದಲ್ಲಿ ಕಿರಿಯ ಅಧಿಕಾರಿಗಳೇ ಈ ವಿಚಾರ ಬಹಿರಂಗಗೊಳಿಸಿದ್ದಾರೆ.
ಆದದ್ದೇನು? ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಖೋಟಾನೋಟು ಚಲಾವಣೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಹುಬ್ಬಳ್ಳಿಯ ವಿಶ್ವನಾಥ್ ಮಲ್ಲಪ್ಪ ಕರಡಿಗುಡ್ಡ ಎಂಬಾತನ್ನು ಹಿಂಡಲಗಾಕ್ಕೆ ಕಳುಹಿಸಲಾಗಿತ್ತು. ಈತ ವೀರಶೈವ ಸಮುದಾಯಕ್ಕೆ ಸೇರಿದವರಾಗಿದ್ದು, ವಿಚಾರಣಾಧೀನ ಕೈದಿ.
ಜೈಲಿನಿಂದ ಹೊರ ಬರಲು, ಪ್ರಕರಣದಿಂದ ತಪ್ಪಿಸಿಕೊಳ್ಳಲು ನೆರವು ನೀಡುವ ಆಮಿಷ ಒಡ್ಡಿ ಭೂಗತ ಪಾತಕಿ ರಷೀದ್ ಮಲಬಾರಿ ಸಹಚರಹವಲ್ದಾರ್ ರಫೀಕ್ ನೇತೃತ್ವದಲ್ಲಿ ಮತಾಂತರ ಮಾಡಲಾಗಿದೆ.
ವಿಶ್ವನಾಥ್ ಹೆಸರನ್ನು ರೆಹಮಾನ್ ಖಾನ್ ಎಂದು ಬದಲಿಸಿದ್ದಲ್ಲದೇ, ಮತಾಂತರ ಪ್ರಕ್ರಿಯೆ ಸಂದರ್ಭದಲ್ಲಿ ಆತನ ಜನನಾಂಗ ಕತ್ತರಿಸಲಾಗಿದೆ. ಹದಿನೈದು ದಿನಗಳ ಹಿಂದೆಯೇ ಈ ಪ್ರಕ್ರಿಯೆ ನಡೆದಿದೆ. ಇದರಿಂದ ಕೈದಿಯ ಕಾಲು ಹಾಗೂ ದೇಹದ ಇತರೆ ಭಾಗ ಊದಿಕೊಂಡಿದ್ದು, ನಡೆದಾಡದ ಪರಿಸ್ಥಿತಿಯಲ್ಲಿದ್ದಾನೆ. ಆದರೂ ಕೈದಿಯನ್ನು ಆಸ್ಪತ್ರೆಗೂ ಸೇರಿಸಿಲ್ಲ.
ಯಾರ್ಯಾರು ಭಾಗಿ? ಹಿಂಡಲಗಾ ಜೈಲಿನಲ್ಲಿ ಮುಸ್ಲಿಂ ಸಮುದಾಯದ 200ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಹವಾಲ್ದಾರ್ ರಫೀಕ್ ಇವರ ನಾಯಕ. ಜತೆಗೆ ಜೈಲಿಗೆ ಆಗಾಗ ಭೇಟಿಕೊಡುವ ಕೆಲ ಮೌಲ್ವಿಗಳು ಸೇರಿಕೊಂಡಿದ್ದಾರೆ. ಹಿಂದೆಯೂ ಇಂಥ ಬೆಳವಣಿಗೆ ಜೈಲಲ್ಲಿ ನಡೆದಿದ್ದರಿಂದ ಜೈಲಿಗೆ ಮೌಲ್ವಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಕಳೆದ ಆರು ತಿಂಗಳಿಂದ ಮತ್ತೆ ಪ್ರವೇಶ ನೀಡಲಾಗಿದೆ.
ಅಪರಾಧ: ಕಾರಾಗೃಹ ನಿಯಮ ಪ್ರಕಾರ ಜೈಲಿನಲ್ಲಿರುವ ಪ್ರತಿಯೊಬ್ಬ ಕೈದಿಯೂ ಸರ್ಕಾರದ ಸ್ವಾಧೀನದಲ್ಲಿರುತ್ತಾನೆ. ಆತ ಕಾರಾಗೃಹ ಪ್ರವೇಶಿಸುವಾಗಲೇ ಆತನ ಬಳಿಯಿದ್ದ ಸ್ವತ್ತುಗಳೇನು? ಮೈ ಮೇಲೆ ಎಷ್ಟು ಮಚ್ಚೆಗಳಿವೆ? ಅಂಗಾಂಗ ಊನವಾಗಿದೆಯೇ? ಇತ್ಯಾದಿ ಮಾಹಿತಿ ಪಡೆದೇ ಜೈಲಿನಲ್ಲಿ ಇಡಲಾಗುತ್ತದೆ. ಮಾತ್ರವಲ್ಲ ಕಾರಾಗೃಹದಲ್ಲಿದ್ದಾಗ ಬಂಧಿಗೆ ಏನಾದರೂ ತೊಂದರೆಯಾದರೆ ಅದರ ಸಂಪೂರ್ಣ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ. ಆದರೆ ಕಾರಾಗೃಹದಲ್ಲಿ ಇಂಥದೊಂದು ಪ್ರಕರಣ ನಡೆದರೂ ಇದುವರೆಗೆ ಮೇಲಧಿಕಾರಿಗಳಿಗೆ ವರದಿ ನೀಡಿಲ್ಲ. ಬಲವಂತದ ಅಥವಾ ಆಮಿಷದ ಮತಾಂತರ ಅಪರಾಧವಾದರೂ ಅವನ ಕುಟುಂಬ ವರ್ಗಕ್ಕೆ ಮಾಹಿತಿ ನೀಡಿಲ್ಲ.
ಹೀಗೆ ಆಗಿತ್ತು: ಜೈಲಿನಲ್ಲಿ ಕಾನೂನು ಬಾಹಿರ ಚಟುವಟಿಕೆ ಮತ್ತು ಮತಾಂತರಕ್ಕೆ ಪ್ರೇರಣೆ ನೀಡಲಾಗುತ್ತದೆ ಎಂಬ ಕಾರಣಕ್ಕೆ ಮಂಗಳೂರು ಕೇಂದ್ರ ಕಾರಾಗೃಹದಲ್ಲೂ ಗಲಾಟೆಯಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಕೈದಿಗಳ ಸ್ಥಳಾಂತರಕ್ಕೆ ಮುಂದಾದಾಗ ಅವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು. ಅಷ್ಟು ಮಾತ್ರವಲ್ಲ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೂ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದು 'ಕನ್ನಡಪ್ರಭ' ಈ ಹಿಂದೆ ವರದಿ ಪ್ರಕಟಿಸಿತ್ತು. ಆದರೆ ಸರ್ಕಾರ ಇದುವರೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಕಾರಾಗೃಹ ಎಂಬುದು ಕೈದಿಗಳು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವ ಹಾಗೂ ಮನಃ ಪರಿವರ್ತನೆಗೊಳ್ಳುವ ಕೇಂದ್ರ. ಇಲ್ಲಿ ಜಾತಿ-ಧರ್ಮ ಸುಳಿಯುವುದಕ್ಕೆ ಅವಕಾಶವಿಲ್ಲ. ಈ ಕೈದಿಗಳನ್ನು ಕಾಯುವುದಕ್ಕೆ ಸರ್ಕಾರ ಅಧಿಕಾರಿಗಳನ್ನು ನಿಯೋಜಿಸಿದ್ದರೂ, ಅವರ ಕಣ್ಣೆದುರೇ ಇಂಥ ಘಟನೆ ನಡೆದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.