ನಕ್ಸಲ್ ಶರಣಾಗತಿ?
ಪಶ್ಚಿಮಘಟ್ಟದ ಇಬ್ಬರು ಪ್ರಮುಖ ನಕ್ಸಲ್ ನಾಯಕರ ಶರಣಾಗತಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು...
ಬೆಂಗಳೂರು: ಪಶ್ಚಿಮಘಟ್ಟದ ಇಬ್ಬರು ಪ್ರಮುಖ ನಕ್ಸಲ್ ನಾಯಕರ ಶರಣಾಗತಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಬುದ್ಧಿಜೀವಿಗಳ ಸಂಧಾನದ ಆಧಾರದ ಮೇಲೆ ಮೃಧು ಧೋರಣೆ ಪ್ರಕಟಿಸಿದೆ.
ರಾಜ್ಯ ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಇವರಿಬ್ಬರ ಶರಣಾಗತಿಗೆ ಈಗ ದಿನಗಣನೆ ಆರಂಭವಾಗಿದ್ದು, ಪ್ರಕರಣ ವಾಪಾಸ್ ಪಡೆಯುವುದಕ್ಕೆ ಕೇಂದ್ರ ಸರ್ಕಾರದ ಅಭಿಪ್ರಾಯ ಪಡೆಯಲು ನಿರ್ಧರಿಸಿದೆ.
ಪಶ್ಚಿಮಘಟ್ಟದಲ್ಲಿ ನಕ್ಸಲ್ ನಾಯಕತ್ವ ವಹಿಸಿದ್ದ ಸಿರಿಮನೆ ನಾಗರಾಜ್ ಹಾಗೂ ನೂರ್ ಜುಲ್ಫೀಕರ್ ಅಹ್ಮದ್ ಮೇಲಿನ ಪ್ರಕರಣಗಳನ್ನು ಕೈ ಬಿಡುವಂತೆ ಆಗ್ರಹಿಸಿ ನಾಡಿನ ಬುದ್ಧಿಜೀವಿ ವರ್ಗ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.
ಇವರಿಬ್ಬರ ಶರಣಾಗತಿ ಸಂಬಂಧ ಬುದ್ಧಿಜೀವಿಗಳಾದ ಬರಗೂರು ರಾಮಚಂದ್ರಪ್ಪ, ಎ.ಕೆ.ಸುಬ್ಬಯ್ಯ, ದೇವನೂರು ಮಹಾದೇವ, ಇಂಧೂದರ್ ಹೊನ್ನಾಪುರ, ಗೌರಿ ಲಂಕೇಶ್, ನಗರಿ ಬಾಬಯ್ಯ, ವಿ.ಎಸ್.ಶ್ರೀಧರ್, ಶಿವಸುಂದರ, ಪಾರ್ವತೇಶ್ ನೇತೃತ್ವದ ನಿಯೋಗ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿತ್ತು. ಇವರಿಬ್ಬರ ಮೇಲಿರುವ ಪ್ರಕರಣಗಳನ್ನು ಕೈ ಬಿಡುವುದಕ್ಕೆ ಕೇಂದ್ರ ಸರ್ಕಾರದ ಅಭಿಪ್ರಾಯ ಪಡೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭೇಟಿ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
2006ರಿಂದ ಇಬ್ಬರು ನಕ್ಸಲ್ ಚಟುವಟಿಕೆಯಿಂದ ದೂರವಿದ್ದು, ನಾಗರಿಕ ಜೀವನ ನಡೆಸಲು ಇಚ್ಛಿಸಿದ್ದಾರೆ. ಹೀಗಾಗಿ ಸರ್ಕಾರ ಇದಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಕ್ಸಲ್ ಶರಣಾಗತಿಗೆ ರಾಜ್ಯ ಸರ್ಕಾರ ಮಾರ್ಗಸೂಚಿ ರಚಿಸಿದೆ. ಅದರ ಪ್ರಕಾರ ಶರಣಾದರೆ ಅಗತ್ಯ ಸೌಲಭ್ಯ ನೀಡಲಾಗುವುದು. ಆದರೆ ಪ್ರಕರಣಗಳು ಈಗ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಅವುಗಳನ್ನು ಕೈ ಬಿಡಬೇಕಾದರೆ ಕೇಂದ್ರದ ಒಪ್ಪಿಗೆ ಬೇಕಾಗುತ್ತದೆ. ಈ ಸಂಬಂಧ ಕೇಂದ್ರದ ಅಭಿಪ್ರಾಯ ಪಡೆಯುವಂತೆ ಅಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದ್ದಾರೆ.