ರೈತರ ಸಾಲಪಾವತಿಗೆ ಪೀಡಿಸದಿರಿ: ಸಿಎಂ
ರಾಜ್ಯದಲ್ಲಿ ತೀವ್ರ ಬರಗಾಲ ಇಲ್ಲ. ಆದರೂ ರೈತರ ಸಂಕಷ್ಟ ಕಡಿಮೆ ಮಾಡುವ ಉದ್ದೇಶದಿಂದ ರೈತರ ಸಾಲ ವಸೂಲಿ ಮುಂದೂಡಲಾಗಿದೆ.
ವಿಧಾನಸಭೆ: ರಾಜ್ಯದಲ್ಲಿ ತೀವ್ರ ಬರಗಾಲ ಇಲ್ಲ. ಆದರೂ ರೈತರ ಸಂಕಷ್ಟ ಕಡಿಮೆ ಮಾಡುವ ಉದ್ದೇಶದಿಂದ ರೈತರ ಸಾಲ ವಸೂಲಿ ಮುಂದೂಡಲಾಗಿದೆ. ಅಲ್ಪಾವಧಿ ಸಾಲವನ್ನು ದೀರ್ಘಾವಧಿಗೆ ಪರಿವರ್ತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಸಕಾಲದಲ್ಲಿ ಮಳೆ ಬಾರದೆ ಹಲವು ಜಿಲ್ಲೆಗಳಲ್ಲಿ ಬರ ಆವರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಾರ್ವಜನಿಕ ಮಹತ್ವದ ಜರೂರು ವಿಷಯವಾಗಿ ನಿಯಮ 69ರಲ್ಲಿ ಬಿಜೆಪಿ ನಡೆಸಿದ ಚರ್ಚೆಗೆ ಅವರು ಉತ್ತರಿಸಿದರು. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹೇಳಿದ್ದಿಷ್ಟು ಬರ ನಿರ್ವಹಣೆಗಾಗಿ ಎಂಥದೇ ಕ್ರಮಕ್ಕೆ ಸರ್ಕಾರ ಸಜ್ಜಾಗಿದೆ. ಎಷ್ಟೇ ಖರ್ಚಾದರೂ ತೊಂದರೆ ಇಲ್ಲ, ಅಗತ್ಯವಿದ್ದಲ್ಲೆಲ್ಲ ಗೋಶಾಲೆ ತೆರೆಯಲಾಗುತ್ತದೆ. ಕುಡಿಯುವ ನೀರು ಕೊಡಬೇಕು. ಹೊಸದಾಗಿ ಬೋರ್ವೆಲ್ ಕೊರೆಯಬೇಕು. ನೀರು ಇಲ್ಲದ ಕಡೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಈ ಎಲ್ಲ ಸೂಚನೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ನೀಡಿದ್ದೇನೆ. ಪ್ರತಿಪಕ್ಷಗಳು ನೀಡುವ ಎಲ್ಲ ಸಲಹೆಗಳನ್ನೂ ಅನುಷ್ಠಾನಗೊಳಿಸಲಾಗುತ್ತದೆ.
ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೂ ಸಜ್ಜಾಗಲು ಸೂಚಿಸಲಾಗಿದೆ. ಬರ ಎದುರಿಸಲು ಬಿಜೆಪಿ ಸದಸ್ಯರು ನೀಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಅದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕೆ ಬೇಕಾದಾಗಲೆಲ್ಲ ಹಣ ಬಿಡುಗಡೆ ಮಾಡಲಾಗುತ್ತದೆ. ಪಿಡಿ ಖಾತೆಯಲ್ಲಿ 564 ಕೋಟಿ ಹಣವಿದ್ದು, 176 ಕೋಟಿ ವೆಚ್ಚವಾಗಿದೆ. ಶಾಸಕರ ಕಾರ್ಯಪಡೆ ಸಮಿತಿ ನೀಡಿದ ಕಾಮಗಾರಿಗಳಿಗೆ ತಕ್ಷಣವೇ ಅನುಮೋದನೆ ನೀಡುತ್ತೇನೆ. ಅಧಿವೇಶನ ಮುಗಿದ ಕೂಡಲೇ ಜಿಲ್ಲಾಧಿಕಾರಿ-ಸಿಇಓಗಳ ಸಭೆ ಕರೆದು ಚರ್ಚಿಸಲಾಗುತ್ತದೆ.
ಶೆಟ್ಟರ್ ಸಭಾತ್ಯಾಗ
ಬರಕ್ಕೆ ಸಂಬಂಧಿಸಿ ಸರ್ಕಾರ ರೆಡಿಮೇಡ್ ಉತ್ತರ ನೀಡುತ್ತಿದೆ. ಗಂಭೀರತೆಯೇ ಇಲ್ಲ ಎಂದು ಆರೋಪಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಭಾತ್ಯಾಗ ಮಾಡಿದರು. ನಿಮ್ಮ ಎಲ್ಲ ಬೇಡಿಕೆಗಳಿಗೆ ಸಿದ್ಧವಿದ್ದರೂ ರಾಜಕೀಯಕ್ಕಾಗಿಯೇ ಸಭಾತ್ಯಾಗ ಮಾಡಬೇಕೆಂದಿದ್ದರೆ ಮಾಡಿ' ಎಂದು ಸಿದ್ದರಾಮಯ್ಯ ಕಟುವಾಗಿ ನುಡಿದರು. ಜೆಡಿಎಸ್ ಸದಸ್ಯರು ಏನೂ ಮಾತನಾಡದೆ ನಾಯಕರಾದಿಯಾಗಿ ಎಲ್ಲರೂ ಆಸೀನರಾಗಿದ್ದರು.
52 ವರ್ಷದಲ್ಲೇ ಕಡಿಮೆ ಮಳೆ!
ರಾಜ್ಯದಲ್ಲಿ ಜೂನ್ ತಿಂಗಳಲ್ಲಿ 1165 ಮಿಮೀ ಮಳೆಯಾಗಿದ್ದು, ಇದು 52 ವರ್ಷಗಳಲ್ಲೇ ಜೂನ್ನಲ್ಲಿ ಆಗಿರುವ ಕಡಿಮೆ ಮಳೆಯಾಗಿದೆ. ಅಲ್ಲದೆ, 100 ವರ್ಷದಲ್ಲಿ ಇಂತಹ ಪರಿಸ್ಥಿತಿ ಬಂದಿರುವುದು 3 ಅಥವಾ 4ನೇ ಬಾರಿಯಾಗಿದೆ. ಈ ವರ್ಷದ ಮಾರ್ಚ್ನಲ್ಲಿ ವಾಡಿಕೆಯ 6.9 ಮಿಮೀಗೆ ಬದಲು 20.9 ಮಿಮೀ ಮಳೆಯಾಗಿದೆ. ಏಪ್ರಿಲ್ನಲ್ಲಿ 34.8 ಮಿಮೀಗೆ ಬದಲು 33.6 ಮಿಮೀ ಮಳೆಯಾಗಿದೆ. ಮೇನಲ್ಲಿ 83.2 ಮಿಮೀಗೆ ಬದಲು 112.9 ಮಿಮೀ ಮಳೆ ಆಗಿದೆ.
ರಾಜ್ಯದ 125 ತಾಲೂಕುಗಳಲ್ಲಿ ಬರ
ವಿಧಾನಸಭೆ: ರಾಜ್ಯದ 125 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 1062 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ.
18.92ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ
ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್ನಲ್ಲಿ ಕೃಷಿ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಜೂನ್ ಅಂತ್ಯದ ವೇಳೆಗೆ 18.92 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ವಾಡಿಕೆ ಪ್ರಕಾರ 25.36 ಲಕ್ಷ ಹೆಕ್ಟೇರ್ನಲ್ಲಿ ಆಗಬೇಕಿತ್ತು.
8 ಕೆರೆ ಮಾತ್ರ ಭರ್ತಿ
ರಾಜ್ಯದಲ್ಲಿ ಈಗ ಭರ್ತಿಯಾಗಿರುವ ಕೆರೆಗಳ ಸಂಖ್ಯೆ 8. ರಾಜ್ಯದಲ್ಲಿರುವ 3554 ನೀರಾವರಿ ಕೆರೆಗಳಲ್ಲಿ 8 ತುಂಬಿದ್ದು, 45 ಕೆರೆಗಳು ಶೇ.50ರಿಂದ 90ರಷ್ಟು ತುಂಬಿವೆ. 114 ಕೆರೆಗಳು ಶೇ.30-50ರಷ್ಟು ತುಂಬಿದ್ದು, 1062 ಕೆರೆಗಳು ಶೇ.30ರಷ್ಟು ತುಂಬಿವೆ. 2328 ಕೆರೆಗಳಲ್ಲಿ ನೀರಿಲ್ಲ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ 16 ವರ್ಷಗಳ ಸರಾಸರಿಗೆ ಹೋಲಿಸಿದರೆ ಈ ವರ್ಷ ನೀರಿನ ಮಟ್ಟ ಕಡಿಮೆ ಇದೆ. ವಿದ್ಯುಚ್ಛಕ್ತಿ ಉತ್ಪಾದಿಸುವ ಜಲಾಶಯಗಳ ಗರಿಷ್ಠ ನೀರಿನ ಸಾಮರ್ಥ್ಯ 328 ಟಿಎಂಸಿ ಇದ್ದು, 50 ಟಿಎಂಸಿ ನೀರು ಮಾತ್ರ ಲಭ್ಯವಿದೆ.
ಖಾತ್ರಿ ಅಕ್ರಮ ಲೋಕಾ ತನಿಖೆಗೆ
ವಿಧಾನಪರಿಷತ್ತು: ಉದ್ಯೋಗ ಖಾತ್ರಿಯಲ್ಲಿ ನಡೆದಿರುವ 1771 ಕೋಟಿ ಮೊತ್ತದ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
2010ರಿಂದ 2013ರವರೆಗೂ ರಾಜ್ಯದಲ್ಲಿ ಉದ್ಯೋಗ ಖಾತ್ರಿಯಲ್ಲಿ ಅಕ್ರಮಗಳು ನಡೆದಿವೆ. ಈ ಮೂಲಕ 1771ಕೋಟಿ ಮೊತ್ತದ ಅವ್ಯವಹಾರ ನಡೆದಿರುವ ಶಂಕೆ ಇದೆ. ಆದ್ದರಿಂದ ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿ, ವರದಿ ಬಂದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ವೀರಣ್ಣ ಮತ್ತಿಕಟ್ಟಿ ಪ್ರಶ್ನೆಗೆ ಉತ್ತರಿಸಿದರು.
ಉದ್ಯೋಗ ಖಾತ್ರಿಯ ಬಿಲ್ ಪಾವತಿಯಲ್ಲಿ ಮತ್ತು ಕಾಮಗಾರಿಗಳನ್ನು ಕೈಗೊಳ್ಳುವುದರಲ್ಲಿ ಸತ್ಯ ಮರೆಮಾಚಿ ಅಕ್ರಮ ನಡೆಸಲಾಗಿದೆ. ಕಳೆದ ಮಾರ್ಚ್ ಒಂದೇ ತಿಂಗಳಲ್ಲಿ ಸುಮಾರು 824 ಕೋಟಿ ಅಕ್ರಮ ನಡೆದಿರುವ ಅನುಮಾನವಿದೆ. ಇದೆಲ್ಲವೂ ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖವಾಗಿವೆ. ಅಕ್ರಮವನ್ನು ಸದ್ಯದಲ್ಲೇ ಲೋಕಾಯುಕ್ತ ತನಿಖೆಗೆ ಒಪ್ಪಿಸಲಾಗುವುದು ಎಂದು ಪಾಟೀಲ್ ವಿವರಿಸಿದರು.
ಅಕ್ರಮಗಳಿಗೆ ಸಂಬಂಧಿಸಿದಂತೆ ಈಗಾಗಲೇ 185 ಪ್ರಕರಣಗಳ ಬಗ್ಗೆ ಇಲಾಖೆ ವಿಚಾರಣೆ ನಡೆಸಲಾಗಿದೆ. 196 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 991 ಮಂದಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜತೆಗೆ 802 ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದೂ ಹೇಳಿದರು.