ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬ್ರಿಕ್ಸ್ ಶೃಂಗಸಭೆ: ಬ್ರೆಜಿಲ್‌’ಗೆ ತೆರಳಿದ ಮೋದಿ

ಬ್ರೆಜಿಲ್‌ನಲ್ಲಿ ಜು.14 ಮತ್ತು 15ರಂದು ನಡೆಯುವ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್‌’ಗೆ ತೆರಳಿದ್ದಾರೆ.

Srinivasa Murthy VN
Updated On : 13 Jul 2014, 2:54 am

ನವದೆಹಲಿ: ಬ್ರೆಜಿಲ್‌ನಲ್ಲಿ ಜು.14 ಮತ್ತು 15ರಂದು ನಡೆಯುವ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್‌’ಗೆ ತೆರಳಿದ್ದಾರೆ.

ಬ್ರೆಜಿಲ್‌ಗೆ ತೆರಳುವ ಮುನ್ನ ಇಂದಿರಾ ಗಾಂದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಆರ್ಥಿಕತೆ ಮತ್ತು ಭದ್ರತೆ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಪ್ರಾದೇಶಿಕವಾಗಿ ಭದ್ರತೆಗೆ ಉಂಟಾಗಿರುವ ಧಕ್ಕೆ ಹಾಗೂ ಬಿಕ್ಕಟ್ಟುಗಳನ್ನು ಕುರಿತಂತೆ ಚರ್ಚಿಸುವ ಜೊತೆಗೆ ಶಾಂತಿ ಸ್ಥಾಪನೆ ಹಾಗೂ ಜಾಗತಿಕ ಆರ್ಥಿಕ ಸ್ಥಿರತೆಗಳ ಬಗ್ಗೆಯೂ ಬ್ರಿಕ್ಸ್ ಶೃಂಗದಲ್ಲಿ ಮಾತುಕತೆ ನಡೆಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ.

ದಕ್ಷಿಣ ಅಮೆರಿಕ ನಾಯಕರೊಂದಿಗೆ ಚರ್ಚೆ
ದಕ್ಷಿಣ ಅಮೆರಿಕದ ನಾಯಕರಾದ ಅರ್ಜೆಂಟೀನಾ, ಬೊಲಿವಿಯಾ, ಚಿಲಿ, ಕೊಲಂಬಿಯಾ, ಈಕ್ವೆಡಾರ್, ಗಯಾನಾ, ಪೆರು, ಉರುಗ್ವೆ ಮತ್ತಿತರ ಲ್ಯಾಟಿನ್ ಅಮೆರಿಕ ಪ್ರದೇಶದ ನಾಯಕರನ್ನು ಭೇಟಿಯಾಗುವ ಅವಕಾಶ.

ಫುಟ್ಬಾಲ್ ಫೈನಲ್ ನೋಡಲ್ಲ

ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸುವಂತೆ ಬ್ರೆಜಿಲ್ ಸರ್ಕಾರ ಪ್ರಧಾನಿ ಮೋದಿಗೆ ಆಹ್ವಾನ ನೀಡಿತ್ತಾದರೂ ಅವರು ಪಂದ್ಯ ವೀಕ್ಷಿಸಲ್ಲ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ, ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್ ಮತ್ತು ಮೋದಿ ಭೇಟಿಯೂ ರದ್ದಾಗಿದೆ. ಇವರ ಭೇಟಿಯು ಈ ಮೊದಲೇ ನಿರ್ಧಾರವಾಗಿತ್ತು. ಆದರೆ ಜರ್ಮನಿಯು ಫಿಫಾ ವಿಶ್ವಕಪ್ ಫೈನಲ್ ಪ್ರವೇಶಿಸಿರುವ ಕಾರಣ ಮರ್ಕೆಲ್ ಅಲ್ಲಿಗೆ ತೆರಳುತ್ತಿದ್ದಾರೆ. ಹಾಗಾಗಿ  ಭೇಟಿ ರದ್ದಾಗಿದೆ.

ಪ್ರಯಾಣ ಹೇಗೆ
ಭಾನುವಾರ ರಾತ್ರಿ ಬರ್ಲಿನ್‌ನಲ್ಲಿ ಇಳಿಯಲಿರುವ ಪ್ರಧಾನಿ ಮೋದಿ, ನಂತರ ಅಲ್ಲಿಂದ ಬ್ರೆಜಿಲ್‌ನ ಈಶಾನ್ಯ ಕರಾವಳಿಯ ನಗರವಾದ ಫೋರ್ಟಲೇಜಾಗೆ ಪ್ರಯಾಣ ಬೆಳೆಸಲಿದ್ದಾರೆ. ಸೋಮವಾರ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ಶೃಂಗಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ವಾಪಸ್ ಬರುವಾಗ ಪ್ರಧಾನಿ ಮೋದಿ ಫ್ರಾಂಕ್‌ಫರ್ಟ್‌ನಲ್ಲಿ ಅಲ್ಪಕಾಲ ತಂಗಲಿದ್ದು, ಜು.17ರ ರಾತ್ರಿ ಸ್ವದೇಶಕ್ಕೆ ಮರಳಲಿದ್ದಾರೆ.

ಬ್ರಿಕ್ಸ್‌ನಲ್ಲಿ ನಡೆಯಲಿದೆ ಚರ್ಚೆ
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ
ವಿಶ್ವಬ್ಯಾಂಕ್, ಐಎಂಎಫ್‌ಗಳ ಸುಧಾರಣೆಯ ಅಗತ್ಯತೆ
ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಬಗ್ಗೆ ನಿರ್ಧಾರ
ಬ್ಯಾಂಕ್‌ಗೆ ಸದಸ್ಯರ ರಾಷ್ಟ್ರಗಳು ಎಷ್ಟೆಷ್ಟು ಕೊಡುಗೆ?
ನವದೆಹಲಿ ಅಥವಾ ಶಾಂಘೈನಲ್ಲಿ ಪ್ರಧಾನ ಕಚೇರಿ ಸ್ಥಾಪನೆ ಬಗ್ಗೆ ನಿರ್ಧಾರ
 ಅಭಿವೃದ್ಧಿ ಬ್ಯಾಂಕ್ ಸ್ಥಾಪನೆಯಾದ್ರೆ ಬ್ರಿಕ್ಸ್ ಸದಸ್ಯರಿಗೆ ರಿಯಾಯ್ತಿ ದರದಲ್ಲಿ ಸಾಲ

ನಿಯೋಗದಲ್ಲಿ ಯಾರ್ಯಾರು?
ನಿರ್ಮಲಾ ಸೀತಾರಾಮನ್ ವಿತ್ತ ಖಾತೆ ಸಹಾಯಕ ಸಚಿವೆ
ಎ.ಕೆ. ದೋವಲ್
ರಾಷ್ಟ್ರೀಯ ಭದ್ರತಾ ಸಲಹೆಗಾರ
ಸುಜಾತಾ ಸಿಂಗ್
ವಿದೇಶಾಂಗ ಕಾರ್ಯದರ್ಶಿ
ಅರವಿಂದ್ ಮಾಯಾರಾಂ
ಹಣಕಾಸು ಕಾರ್ಯದರ್ಶಿ

ಭಾಷಣಕ್ಕೆ ಅಮೆರಿಕದಲ್ಲಿ ಹೆಚ್ಚಿದ ಒತ್ತಡ
ವಾಷಿಂಗ್ಟನ್:
ಕಾಲ ಹೇಗೆ ಬದಲಾಗುತ್ತೆ ನೋಡಿ. ಒಂದೊಮ್ಮೆ ಮೋದಿಗೆ ವೀಸಾ ನಿರಾಕರಿಸಿ ಸುದ್ದಿ ಮಾಡಿದ್ದ ಅಮೆರಿಕ ಈಗ ಮೋದಿ ಬಗೆಗಿನ ಒಲವಿಗೆ ಸುದ್ದಿಯಾಗುತ್ತಿದೆ. ಒಬಾಮ, ಮೋದಿ ಅವರಿಗೆ ಆಹ್ವಾನ ನೀಡಿದ ಬೆನ್ನಲ್ಲೇ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಮೋದಿ ಅವರಿಗೆ ಅವಕಾಶ ಕೊಡಬೇಕು ಎಂಬ ಒತ್ತಾಯ ತೀವ್ರವಾಗತೊಡಗಿದೆ. 36 ಸಂಸದರು ಭಾಷಣಕ್ಕೆ ಒತ್ತಾಯಿಸಿದ್ದಾರೆ.

ವಿಶ್ವನಾಯಕರೊಂದಿಗೆ
ಮೋದಿ ಭೇಟಿ ಮಾಡಲಿರುವ ನಾಯಕರು
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement