ಮಳೆ ಜೋರು, ಬಯಲೇ ಸೂರು
ಬೈನಾ ಬೀಚ್‌ನಲ್ಲಿ ಸೂರು ಕಳೆದುಕೊಂಡ ಕನ್ನಡಿಗರು ಪಟ್ಟು ಬಿಡದೆ ಸುರಿಯುತ್ತಿರುವ ಮಳೆಯಲ್ಲೇ...
-ವಸಂತಕುಮಾರ್ ಕತಗಾಲ/ಪ್ರಕಾಶ ಭಟ್
ಬೈನಾ(ಗೋವಾ): ಬೈನಾ ಬೀಚ್‌ನಲ್ಲಿ ಸೂರು ಕಳೆದುಕೊಂಡ ಕನ್ನಡಿಗರು ಪಟ್ಟು ಬಿಡದೆ ಸುರಿಯುತ್ತಿರುವ ಮಳೆಯಲ್ಲೇ ಕುಳಿತಿದ್ದಾರೆ. ಕಾಯಂ ಪುನರ್ವಸತಿ ಕಲ್ಪಿಸುವ ತನಕ ಬಯಲಲ್ಲೇ ಇರುವುದಾಗಿ ಘೋಷಿಸಿದ್ದಾರೆ. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, 500ಕ್ಕೂ ಹೆಚ್ಚು ಪೊಲೀಸರು, ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದ್ದಾರೆ.
ಬೈನಾ ಬೀಚ್‌ನಲ್ಲಿದ್ದ 75 ಮನೆಗಳನ್ನು ಧ್ವಂಸಗೊಳಿಸಿದ ಗೋವಾ ಅಧಿಕಾರಿಗಳು ನಿರಾಶ್ರಿತರಿಗೆ ಕೊಟ್ಟಳ್ಳಿ ಮತ್ತು ಚಿಕಲಿಯಲ್ಲಿರುವ ಅಕ್ಕಿ ಮತ್ತಿತರ ಧಾನ್ಯಗಳನ್ನು ತುಂಬಿಡುವ ಹರುಕು ಮುರುಕು ಗೋದಾಮಿಗೆ ತೆರಳುವಂತೆ ಒತ್ತಡ ಹೇರುತ್ತಿದ್ದಾರೆ. ಇದು ಎಂಟು ದಿನಗಳವರೆಗಿನ ತಾತ್ಕಾಲಿಕ ವ್ಯವಸ್ಥೆ. ಆ ಬಳಿಕ ಮುಂದೇನು ಎನ್ನುವುದು ಬೀದಿಗೆ ಬಿದ್ದ ಕುಟುಂಬಗಳ ಪ್ರಶ್ನೆ. ಹಾಗಾಗಿ ಕಾಯಂ ಪುನರ್ವಸತಿ ಕಲ್ಪಿಸಿ, ತರುವಾಯವಷ್ಟೇ ಸ್ಥಳದಿಂದ ಕದಲುತ್ತೇವೆ ಎನ್ನುವ ಪಟ್ಟು ಅವರದು. ಶನಿವಾರ ಮಧ್ಯಾಹ್ನ ಸ್ಥಳಕ್ಕೆ ದಕ್ಷಿಣ ಗೋವಾದ ಮಾಮಲೇದಾರ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು. ನಿರ್ಗತಿಕರಿಗೆ ತಾತ್ಕಾಲಿಕವಾಗಿ ಗೋದಾಮಿನಲ್ಲಿ ವಾಸ್ತವ್ಯ ಮಾಡುವಂತೆ ವಿನಂತಿಸಿದರು. ಆದರೆ, ಇದನ್ನು ಕನ್ನಡಿಗರು ತಿರಸ್ಕರಿಸಿದ್ದಾರೆ.
-ಸಿದ್ದಣ್ಣ ಮೇಟಿ ಆಕ್ರೋಶ
ಸ್ಥಳಕ್ಕೆ ಭೇಟಿ ನೀಡಿದ ಗೋವಾ ಕನ್ನಡಿಗರ ಮುಖಂಡ ಸಿದ್ದಣ್ಣ ಮೇಟಿ ಮನೆಗಳನ್ನು ಧ್ವಂಸಗೊಳಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗೋವಾದ ಎಲ್ಲ ಕಡಲತೀರದಲ್ಲಿ ಹೊಟೇಲ್, ರೆಸಾರ್ಟ್‌ಗಳಿವೆ. ಅಲ್ಲಿ ಸಿಆರ್‌ಝಡ್ ನಿಯಮ ಅನ್ವಯ ಆಗಲಾರದೆ ಎಂದು ಪ್ರಶ್ನಿಸಿದ್ದಾರೆ. ಈ ದೌರ್ಜನ್ಯದ ಬಗ್ಗೆ ಕರ್ನಾಟಕ ಹಾಗೂ ಕೇಂದ್ರ ಸರ್ಕಾರಗಳ ಗಮನ ಸೆಳೆಯುವುದಾಗಿಯೂ ಹೇಳಿದ್ದಾರೆ.
ರಾಜ್ಯಪಾಲರು ನೆರವಿಗೆ ಬಂದಾರೆಯೇ?: ಗೋವಾ ರಾಜ್ಯಪಾಲರಾಗಿ ಕನ್ನಡಿಗರಾದ ಮಾರ್ಗರೆಟ್ ಆಳ್ವ ನೇಮಕಗೊಂಡಿದ್ದಾರೆ.ಸಂಕಷ್ಟಕ್ಕೊಳಗಾದ ಕನ್ನಡಿಗರಿಗೆ ಆಳ್ವ ಅಭಯ ನೀಡಬಹುದು ಎನ್ನುವ ನಿರೀಕ್ಷೆ ಇಲ್ಲಿನ ಕನ್ನಡಿಗರಲ್ಲಿದೆ. ಅವರಿಗೆ ಮನವಿ ನೀಡಲು ಸೂರು ಕಳೆದುಕೊಂಡವರು ಸಿದ್ಧರಾಗಿದ್ದಾರೆ.
ಕರವೇ ಖಂಡನೆ: ಕನ್ನಡಿಗರ ಮನೆ ತೆರವುಗೊಳಿಸುತ್ತಿರುವ ಗೋವಾ ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಗೋವಾ ಸರ್ಕಾರ ಶೀಘ್ರ ನಿರಾಶ್ರಿತ ಕನ್ನಡಿಗರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ತಪ್ಪಿದಲ್ಲಿ ಕರವೇ ಕಾರ್ಯಕರ್ತರು ಗೋವಾದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಿದ್ದಾರೆ ಎಂದು ಕರವೇ ಗೋಕಾಕ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದ್ದಾರೆ.
ಹಸುಗೂಸು ಹಿಡಿದು ಬಯಲಲ್ಲೇ ಕುಳಿತಳು: 10 ದಿನಗಳ ಹಸುಗೂಸು ಹಿಡಿದು ಇಳಕಲ್ ಮೂಲದ ಯುವತಿ ಬಯಲಿನಲ್ಲೇ ಕುಳಿತಿದ್ದಾಳೆ. ಮನೆ ನೆಲಸಮವಾಗಿದೆ. ಬಯಲಿನಲ್ಲಿ, ಮಳೆಯ ನಡುವೆ ಮಗುವನ್ನು ಹಿಡಿದು ರೋದಿಸುತ್ತಿದ್ದಾಳೆ. ಬಾಗಲಕೋಟೆಯ ಯಲ್ಲವ್ವ ಬಟ್ಟೆ ಮತ್ತಿತರ ಅಳಿದುಳಿದ ಪರಿಕರಗಳನ್ನು ಬೈನಾ ಬೀಚ್‌ನಲ್ಲಿ ಜೋಡಿಸಿಡುತ್ತಿದ್ದಾಳೆ. ವಿವಾಹದ ಸಂಭ್ರಮದಲ್ಲಿದ್ದ ಮೌನೇಶ್‌ಗೆ ಮಾತೇ ಬಾರದಂತಾಗಿದೆ.
ಖಾಲಿ ಇರುವ ಮನೆ ನೀಡಿ
ವಾಸ್ಕೊ ಪರಿಸರದಲ್ಲಿ 164ಕ್ಕೂ ಹೆಚ್ಚು ಹೌಸಿಂಗ್ ಬೋರ್ಡ್ ಮನೆಗಳು ಖಾಲಿ ಇವೆ. ಸರ್ಕಾರ ಬೈನಾ ನಿರಾಶ್ರಿತರಿಗೆ ಈ ಮನೆಗಳನ್ನು ನೀಡಿ ಶಾಶ್ವತ ಪುನರ್ವಸತಿ ಕಲ್ಪಿಸಿ ಕೊಡಲಿ ಎಂಬುದು ಬೈನಾ ಕನ್ನಡಿಗರ ಆಗ್ರಹ.