ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎಂಜಿನಿಯರಿಂಗ್ ಪ್ರಾಧ್ಯಾಪಕರಿಂದಲೂ ಮೋಜಿನ ಯಾತ್ರೆ!

ಮಧುಚಂದ್ರಕ್ಕೆ ಹೇಳಿಮಾಡಿಸಿದಂತಿರುವ ದೇಶ-ವಿದೇಶದ ಐಷಾರಾಮಿ ರೆಸಾರ್ಟ್‌ಗಳಲ್ಲಿ ರಾಜ್ಯದ ತಾಂತ್ರಿಕ ಕಾಲೇಜುಗಳ ಪ್ರಾಧ್ಯಾಪಕರಿಗೆ ತರಬೇತಿ!

Srinivasa Murthy VN
Updated On : 13 Jul 2014, 10:39 am

-ರಾಜೀವ ಹೆಗಡೆ
ಟೆಕ್ವಿಪ್ ಯೋಜನೆ ನೆಪದಲ್ಲಿ ದೇಶ -  ವಿದೇಶದ ಐಷಾರಾಮಿ ರೆಸಾರ್ಟ್‌ಗಳಲ್ಲಿ ತರಬೇತಿ
ವಿದೇಶ ಯಾತ್ರೆಗೆ ಖರ್ಚಾಗಿದ್ದು 3.32 ಕೋಟಿ


ಬೆಂಗಳೂರು: ಮಧುಚಂದ್ರಕ್ಕೆ ಹೇಳಿಮಾಡಿಸಿದಂತಿರುವ ದೇಶ-ವಿದೇಶದ ಐಷಾರಾಮಿ ರೆಸಾರ್ಟ್‌ಗಳಲ್ಲಿ ರಾಜ್ಯದ ತಾಂತ್ರಿಕ ಕಾಲೇಜುಗಳ ಪ್ರಾಧ್ಯಾಪಕರಿಗೆ ತರಬೇತಿ!
ವಿದೇಶ ಹಾಗೂ ರೆಸಾರ್ಟ್ ಯಾತ್ರೆ ಶಾಸಕರಿಗೆ ಸೀಮಿತವಲ್ಲ, ತೆರಿಗೆದಾರರ ಹಣದಲ್ಲಿ ಎಂಜಿನಿಯರಿಂಗ್ ಕಾಲೇಜುಗಳ 838 ಪ್ರಾಧ್ಯಾಪಕರು ಮೋಜಿನ ಯಾತ್ರೆ ಮಾಡಿದ್ದಾರೆ. ಟೆಕ್ವಿಪ್ ಯೋಜನೆ ನೆಪದಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾ, ಮಲೇಷ್ಯಾ, ಅಮೆರಿಕ, ನೇಪಾಳ, ಭಾರತದ ಗೋವಾ, ಮುನ್ನಾರ್ ಸೇರಿದಂತೆ ವಿವಿಧ  ರೆಸಾರ್ಟ್‌ಗಳಲ್ಲಿ ವಾಸ್ತವ್ಯಕ್ಕೆ ಕೋಟ್ಯಂತರ ಮೊತ್ತ ಸುರಿದಿದ್ದಾರೆ. ಆದರೆ ಇತ್ತ  ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರದ ಬಳಿ ಹಣವೇ ಇಲ್ಲ. ಟೆಕ್ವಿಪ್ ಎಂಬ ಹಣ ನುಂಗುವ ಯೋಜನೆ ಮೂಲಕ ಕಾರ್ಯಾಗಾರ ನಡೆಸಲು ಒಟ್ಟು 14 ಖಾಸಗಿ ಏಜೆನ್ಸಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ. ಈ ಸಂಸ್ಥೆಗಳ ಮೂಲಕ ದೇಶ-ವಿದೇಶಗಳಲ್ಲಿ ಐಷಾರಾಮಿ ರೆಸಾರ್ಟ್ ಯಾನ ಮಾಡಲಾಗಿದೆ. ರಾಜ್ಯದ ಪ್ರಾಧ್ಯಾಪಕರು, ರಾಜ್ಯದ ಸಂಪನ್ಮೂಲ ವ್ಯಕ್ತಿಗಳನ್ನು ಕರೆದುಕೊಂಡು ಹೋಗಿ ವಿದೇಶಗಳಲ್ಲಿ ಕಾರ್ಯಾಗಾರ ನಡೆಸಿದ್ದಾರೆ. ಹಣ ಲೂಟಿಗೆಂದೆ ಯೋಜನೆ ರೂಪಿಸಿರುವ ತಾಂತ್ರಿಕ ಶಿಕ್ಷಣ ಇಲಾಖೆ, ಎಂಜಿನಿಯರಿಂಗ್ ಶಿಕ್ಷಣದ ಗುಣಮಟ್ಟ ವೃದ್ಧಿಸುವ ನೆಪದಲ್ಲಿ ಪ್ರಾಧ್ಯಾಪಕರಿಗೆ ಜಾಲಿ ಟ್ರಿಪ್ ಮಾಡಿಸುತ್ತಿದೆ. ಎಂಜಿನಿಯರಿಂಗ್ ಕಾಲೇಜುಗಳ ಗುಣಮಟ್ಟ ಸುಧಾರಣೆಗೆ ಮಾನವ ಸಂಪನ್ಮೂಲ ಇಲಾಖೆ ಪ್ರತಿ ರಾಜ್ಯಕ್ಕೆ ಟೆಕ್ವಿಪ್ ಯೋಜನೆ ಮೂಲಕ ಹತ್ತಾರು ಕೋಟಿ ರುಪಾಯಿ ಅನುದಾನ ನೀಡುತ್ತದೆ. ಟೆಕ್ವಿಪ್ ಎರಡನೇ ಹಂತದಲ್ಲಿ ರಾಜ್ಯಕ್ಕೆ 79.06 ಕೋಟಿ ಅನುದಾನ ಬಂದಿದೆ. ಇದರಲ್ಲಿ ಈಗಾಗಲೇ 48.06 ಕೋಟಿ ಹಣವನ್ನು ಕಾಲೇಜಿಗೆ ನೀಡಲಾಗಿದೆ. ಇದರಲ್ಲಿ ಪ್ರಾಧ್ಯಾಪಕರ ವಿದೇಶಿ ಮೋಜಿನ ಯಾತ್ರೆಗೆ ಖರ್ಚು ಮಾಡಿದ್ದು ಬರೋಬ್ಬರಿ 3.32 ಕೋಟಿ. ಇನ್ನು ಭಾರತದ ರೆಸಾರ್ಟ್‌ಗಳಿಗೆ ಪ್ರದಕ್ಷಿಣೆ ಹಾಕಿರುವುದರ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಸರಿಯಾಗಿ ಲೆಕ್ಕ ಕೊಡುತ್ತಿಲ್ಲ.

ನೇಪಾಳದ ರೆಸಾರ್ಟ್‌ನಲ್ಲಿ ಕಾರ್ಯಾಗಾರ
ಎಜುಮ್ಯಾಟಿಕ್ ಸೊಲ್ಯೂಷನ್ ಎಂಬ ಸಂಸ್ಥೆಯು 2013ರ ನವೆಂಬರ್ 21ರಿಂದ 24ರವರೆಗೆ ನೇಪಾಳದ ಕಠ್ಮಂಡುವಿನ ಪಾರ್ಕ್ ವಿಲೇಜ್ ರೆಸಾರ್ಟ್‌ನಲ್ಲಿ 3 ದಿನದ ಕಾರ್ಯಾಗಾರ ಆಯೋಜಿಸಿತ್ತು. ರಾಜ್ಯದ ನಾನಾ ಎಂಜಿನಿಯರಿಂಗ್ ಕಾಲೇಜುಗಳ 17 ಪ್ರಾಧ್ಯಾಪಕರು ಹಾಗೂ ಹಾಸನದ ಒಂದು ಕಾಲೇಜಿನ ಉಪಾಧ್ಯಕ್ಷ, ಖಜಾಂಚಿ ಕೂಡ ಸಾಥ್ ನೀಡಿದ್ದಾರೆ. ಈ ಕಾರ್ಯಾಗಾರದಲ್ಲಿ ಒಟ್ಟು ಆರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದು, ಇವರಲ್ಲಿ ನಾಲ್ವರು ಬೆಂಗಳೂರಿನ ಪ್ರಾಧ್ಯಾಪಕರು ಅಥವಾ ಉದ್ಯಮಿಗಳಾಗಿದ್ದಾರೆ. ಮದ್ರಾಸ್ ಐಐಟಿಯ ಒಬ್ಬ ಪ್ರಾಧ್ಯಾಪಕರ ಜತೆಗೆ ನೇಪಾಳದಲ್ಲಿ ಕಾರ್ಯಾಗಾರ ಮಾಡಿರುವುದರಿಂದ ನೆಪಕ್ಕಾಗಿ ಅಲ್ಲಿಯ ಒಬ್ಬ ಶಿಕ್ಷಣ ತಜ್ಞರನ್ನು ಕಾರ್ಯಾಗಾರಕ್ಕೆ ಆಹ್ವಾನಿಸಲಾಗಿದೆ.
ಕಾರ್ಯಾಗಾರದಲ್ಲಿ ಭಾಗವಹಿಸಿದ ಙ19 ಪ್ರಾಧ್ಯಾಪಕರಿಗಾಗಿ ತಾಂತ್ರಿಕ ಶಿಕ್ಷಣ ಇಲಾಖೆ 16 ಲಕ್ಷ ವ್ಯಯಿಸಿದೆ. ಟೆಕ್ವಿಪ್ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿರುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಎಲ್ಲ ಪ್ರಾಧ್ಯಾಪಕರು ಹಾಗೂ ಬಹುತೇಕ ಸಂಪನ್ಮೂಲ ವ್ಯಕ್ತಿಗಳು ರಾಜ್ಯದವರಾಗಿದ್ದಾರೆ. ಆದರೆ ಹಣ ಖರ್ಚು ಮಾಡಬೇಕೆಂಬ ನೆಪಕ್ಕಾಗಿ ಕಠ್ಮಂಡುವಿನಲ್ಲಿ ಕಾರ್ಯಾಗಾರ ನಡೆಸಲಾಗಿದೆ. ಇದಕ್ಕೆ ಸಮಜಾಯಿಷಿ ನೀಡಲು ಅಲ್ಲಿಯ ತಜ್ಞರೊಬ್ಬರನ್ನು ಕಾರ್ಯಾಗಾರಕ್ಕೆ ಆಹ್ವಾನಿಸಲಾಗಿದೆ. ಅವರನ್ನೇ ಇಲ್ಲಿಗೆ ಕರೆಸಿ ಬೆಂಗಳೂರಿನಲ್ಲಿ ಕಾರ್ಯಾಗಾರ ನಡೆಸಿದ್ದರೆ ವಸತಿ ಹಾಗೂ ಸಾರಿಗೆಗೆ ಖರ್ಚು ಮಾಡಿದ್ದ 16 ಲಕ್ಷ ಹಣ ಉಳಿಸಬಹುದಿತ್ತು. ಇದು ನೇಪಾಳಕ್ಕೆ ಸೀಮಿತವಾಗಿಲ್ಲ. ಮಲೇಷ್ಯಾ, ಅಮೆರಿಕ, ಬ್ರಿಟಿಷ್ ಕೊಲಂಬಿಯಾಕ್ಕೂ ಇದೇ ರೀತಿ ಅಧ್ಯಯನ ಪ್ರವಾಸ ಮಾಡಿದ್ದಾರೆ. ಇದಕ್ಕಾಗಿ 15.98 ಲಕ್ಷ ಪೋಲು ಮಾಡಲಾಗಿದೆ. ಇದರಲ್ಲಿ ಭಾಗವಹಿಸಿದವರೆಲ್ಲರೂ ರಾಜ್ಯದ ಎಂಜಿನಿಯರಿಂಗ್ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರಂತೆ. ಆದರೆ ಇದು ಕೇವಲ ತಾಂತ್ರಿಕ ಶಿಕ್ಷಣ ಇಲಾಖೆಯ ದಾಖಲೆಯಲ್ಲಿದೆ, ಬದಲಾಗಿ ಯಾವುದೇ ವಿದ್ಯಾರ್ಥಿಗಳಿಗೆ ಇದರಿಂದ ಲಾಭವಾಗಿಲ್ಲ.

ಮುನ್ನಾರ್, ಪಣಜಿಯಲ್ಲೂ ತರಬೇತಿ!
ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ತರಬೇತಿ, ಕಾರ್ಯಾಗಾರ ನಡೆಯುವುದನ್ನು ಕೇಳಿರುತ್ತೀರಿ. ಆದರೆ ನಮ್ಮ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರು ಮುನ್ನಾರ್, ಪಣಜಿ ಹಾಗೂ ರಾಜ್ಯದ ನಾನಾ ರೆಸಾರ್ಟ್‌ಗಳಲ್ಲಿ ತರಬೇತಿ ಪಡೆದಿದ್ದಾರೆ. ಈ ಮೇಲಿನ ಊರುಗಳ ಹೆಸರು ಕೇಳಿದಾಗ ಮಧುಚಂದ್ರದ ನೆನಪಾಗುತ್ತದೆ. ಆದರೆ ಕೇಂದ್ರ ಸರ್ಕಾರ ನೀಡಿದ ಕೋಟ್ಯಂತರ ಹಣವನ್ನು ಹಾಳು ಮಾಡಲು ಇಲ್ಲಿನ ರೆಸಾರ್ಟ್‌ಗಳಿಗೆ ಸುರಿಯಲಾಗಿದೆ. ಈ ರೆಸಾರ್ಟ್ ಯಾತ್ರೆ ಬೆಂಗಳೂರು, ಕೋಲಾರ, ಮೈಸೂರು, ಕೊಡಗಿನ ಸುತ್ತಲಿಗೂ ವಿಸ್ತರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement